ಇಂಡಿಯಾ ಮೈತ್ರಿಕೂಟಕ್ಕೆ ಮತ್ತೊಂದು ಮರ್ಮಾಘಾತ; ಕ್ಷೇತ್ರ ಮರುವಿಂಗಡಣೆ ಮಸೂದೆಗೆ ಹೇಮಂತ್ ಸೊರೆನ್‌ನ ಜೆಎಂಎಂ ಬೆಂಬಲ
JMM: ಕೇಂದ್ರ ಸರ್ಕಾರ ಮಂಡಿಸಲು ಉದ್ದೇಶಿಸಿರುವ ಕ್ಷೇತ್ರ ಮರುವಿಂಗಡಣೆ ಮತ್ತು ಮಹಿಳಾ ಮೀಸಲಾತಿ ಸಂವಿಧಾನ ತಿದ್ದುಪಡೆ ಮಸೂದೆಗೆ ಬೆಂಬಲ ನೀಡಲು ಹೇಮಂತ್ ಸೊರೆನ್ ನೇತೃತ್ವದ ಜೆಎಂಎಂ ನಿರ್ಧರಿಸಿದೆ. ಇದರೊಂದಿಎ ವಿಪಕ್ಷಗಳ ಇಂಡಿ ಒಕ್ಕೂಟ ಒಡೆದು ನುಚ್ಚು ನೂರಾಗಿದೆ.
ಹೇಮಂತ್ ಸೊರೆನ್ (ಸಂಗ್ರಹ ಚಿತ್ರ) -
ದೆಹಲಿ, ನ. 29: ಕೇಂದ್ರ ಸರ್ಕಾರ ಮಂಡಿಸಲು ಉದ್ದೇಶಿಸಿರುವ ಕ್ಷೇತ್ರ ಮರುವಿಂಗಡಣೆ ಮತ್ತು ಮಹಿಳಾ ಮೀಸಲಾತಿ ಸಂವಿಧಾನ ತಿದ್ದುಪಡೆ ಮಸೂದೆ ಸದ್ಯ ಕಾಂಗ್ರೆಸ್ ನೇತೃತ್ವದ ವಿಪಕ್ಷಗಳ ಇಂಡಿ ಮೈತ್ರಿಕೂಟದ ಬಲವನ್ನೇ ಅಲುಗಾಡಿಸಿದೆ. ಎಸ್‌ಸಿಪಿ ಶರದ್ ಬಣ ಮತ್ತು ಡಿಎಂಕೆ ಮಸೂದೆಗೆ ಬೆಂಬಲ ನೀಡಿದ ಬೆನ್ನಲ್ಲೇ ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್ (Hemant Soren) ನಾಯಕತ್ವದ ಜೆಎಂಎಂ (JMM) ಕೇಂದ್ರದ ಪರವಾಗಿ ಮತ ಚಲಾಯಿಸಲು ಚಿಂತನೆ ನಡೆಸಿದೆ. ಕಾಂಗ್ರೆಸ್ ನಾಯಕರು ತಮಿಳುನಾಡಿನಲ್ಲಿ ಡಿಎಂಕೆ ಮುಖಂಡ ಸ್ಟಾಲಿನ್ ಅವರನ್ನು ಭೇಟಿಯಾಗಲು ತೆರಳುತ್ತಿದ್ದಂತೆ ಮತ್ತೊಂದು ತಲೆನೋವು ಶುರುವಾಗಿದೆ.
ಕಾಂಗ್ರೆಸ್ ಕೇಂದ್ರದ ವಿರುದ್ದ ವಿಪಕ್ಷಗಳ ನಾಯಕರನ್ನು ಒಗ್ಗೂಡಿಸಲು ಯತ್ನಿಸುತ್ತಿರುವಾಗಲೇ ಒನ್ನೊಬ್ಬರಾಗಿಯೇ ಹಿಡಿತದಿಂದ ಜಾರುತ್ತಿದ್ದಾರೆ. ಇದೀಗ ಜಾರ್ಖಂಡ್ ಮುಕ್ತಿ ಮೋರ್ಚಾ ಕೇಂದ್ರದ ಕ್ಷೇತ್ರ ಮರುವಿಂಗಡಣೆ ಮಸೂದೆಗೆ ಬೆಂಬಲ ನೀಡಲು ಮುಂದಾಗಿದೆ.
ಕ್ಷೇತ್ರ ಮರುವಿಂಗಡಣೆ ಮತ್ತು ಮಹಿಳಾ ಮೀಸಲಾತಿ ಕುರಿತ ಕೇಂದ್ರ ಪ್ರಸ್ತಾವಿತ ಮಸೂದೆ ಬೆಂಬಲಿಸುವ ಬಗ್ಗೆ ಅಥವಾ ವಿರೋಧಿಸುವ ಬಗ್ಗೆ ಜೆಎಂಎಂ ಇದುವರೆಗೆ ತನ್ನ ಅಂತಿಮ ಅಭಿಪ್ರಾಯವನ್ನು ತಿಳಿಸಿಲ್ಲ. ಪಕ್ಷದೊಳಗೆ ಸಮಾಲೋಚನೆ ನಡೆಸಿದ ಬಳಿಕ ನಿರ್ಧಾರ ಪ್ರಕಟಿಸುವುದಾಗಿ ತಿಳಿಸಿದೆ. ಅದಾಗ್ಯೂ ಈಗ ಕೇಂದ್ರಕ್ಕೆ ಬೆಂಬಲ ನೀಡಲು ಮುಂದಾಗಿದೆ ಎನ್ನಲಾಗಿದೆ.
ಜೆಎಂಎಂ ಹೇಳಿದ್ದೇನು?
ಜೆಎಂಎಂ ಅಂತಿಮವಾಗಿ ಕೇಂದ್ರದ ಪ್ರಸ್ತಾವನೆಯನ್ನು ಬೆಂಬಲಿಸಲಿದೆ ಎಂದು ಮೂಲಗಳು ತಿಳಿಸಿವೆ. ವಿಪಕ್ಷಗಳ ಒಕ್ಕೂಟದಲ್ಲಿ ಒಡಕು ಉಂಟಾಗದಂತೆ ತಡೆಯಲು ಕಾಂಗ್ರೆಸ್ ಪ್ರಯತ್ನಿಸುತ್ತಿರುವ ಸಂದರ್ಭದಲ್ಲಿ ಈ ಬೆಳವಣಿಗೆ ಸಂಭವಿಸಿದೆ. ಜೆಎಂಎಂನಲ್ಲಿ ಒಟ್ಟು 6 ಸಂಸದರಿದ್ದಾರೆ. ಇದರಲ್ಲಿ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ತಲಾ ಮೂವರಿದ್ದಾರೆ.
ಜಾರ್ಖಂಡ್‌ನಲ್ಲಿ 14 ಲೋಕಸಭಾ ಕ್ಷೇತ್ರಗಳಿದ್ದು, ಅವುಗಳಲ್ಲಿ 5 ಪರಿಶಿಷ್ಟ ಪಂಗಡಗಳಿಗೆ (ST) ಮೀಸಲು. ಕೇಂದ್ರ ಸರ್ಕಾರವು ಪ್ರಸ್ತಾಪಿಸಿರುವ ಶೇಕಡಾ 50ರಷ್ಟು ಸ್ಥಾನಗಳ ಹೆಚ್ಚಳದೊಂದಿಗೆ ಜಾರ್ಖಂಡ್ ಒಟ್ಟು 21 ಸ್ಥಾನಗಳನ್ನು ಪಡೆಯುವ ಸಾಧ್ಯತೆಯಿದೆ. ಜೆಎಂಎಂ ಮೂಲಗಳ ಪ್ರಕಾರ, ಪರಿಶಿಷ್ಟ ಪಂಗಡಗಳಿಗೆ ಮೀಸಲಾದ ಸ್ಥಾನಗಳ ಸಂಖ್ಯೆಯೂ ಹೆಚ್ಚಾಗಲಿದೆ.
ಕಾಂಗ್ರೆಸ್‌ಗೆ ಆಘಾತ
ಜೆಎಂಎಂ ತೆಗೆದುಕೊಂಡಿರುವ ಈ ನಿರ್ಧಾರವು ಕಾಂಗ್ರೆಸ್‌ಗೆ ಆಘಾತವನ್ನುಂಟು ಮಾಡಿದೆ. ಇತ್ತೀಚೆಗಷ್ಟೇ ಕಾಂಗ್ರೆಸ್‌ನ ಮತ್ತೊಂದು ಮಿತ್ರಪಕ್ಷ ಎನ್‌ಸಿಪಿಯ ಶರದ್ ಪವಾರ್ ಬಣವು ಕ್ಷೇತ್ರ ಮರುವಿಂಗಡಣೆಯ ಪ್ರಕ್ರಿಯೆಯನ್ನು ಬೆಂಬಲಿಸುವುದಾಗಿ ಘೋಷಿಸಿತ್ತು. ಈ ವಿಷಯಕ್ಕೆ ಸಂಬಂಧಿಸಿದಂತೆ ಉಭಯ ಪಕ್ಷಗಳ ನಡುವೆ ಭಿನ್ನಾಭಿಪ್ರಾಯಗಳಿದ್ದರೂ, ಇಂಡಿ ಒಕ್ಕೂಟದ ಪ್ರಮುಖ ಭಾಗವಾಗಿರುವ ಎನ್‌ಸಿಪಿ (ಶರದ್ ಪವಾರ್ ಬಣ) ಜತೆಗಿನ ಸಂಬಂಧವನ್ನು ಸಂಪೂರ್ಣವಾಗಿ ಕಡಿದುಕೊಳ್ಳಲು ಕಾಂಗ್ರೆಸ್ ಮುಂದಾಗಿಲ್ಲ.
ಜೆಎಂಎಂ ನಾಯಕರ ಸಮಾಲೋಚನೆ
ಮಸೂದೆಗಳ ನಿಬಂಧನೆ ಪರಿಶೀಲಿಸಲು ಹೇಮಂತ್ ಸೊರೆನ್ ಅವರ ಅಧಿಕೃತ ನಿವಾಸದಲ್ಲಿ ಶನಿವಾರ (ನವೆಂಬರ್ 28) ಜೆಎಂಎಂ ಸಂಸದರ ಸಭೆ ನಡೆಯಿತು. ಪ್ರಸ್ತಾವಿತ ಬದಲಾವಣೆಗಳು ರಾಜ್ಯದ ಹಿತಾಸಕ್ತಿಗಳನ್ನು, ವಿಶೇಷವಾಗಿ ಸಂಸತ್ತಿನಲ್ಲಿ ರಾಜ್ಯದ ಪ್ರಾತಿನಿಧ್ಯ ಮತ್ತು ಪರಿಶಿಷ್ಟ ಪಂಗಡಗಳಿಗೆ ಮೀಸಲಿಟ್ಟ ಸ್ಥಾನಗಳ ಸಂಖ್ಯೆಯನ್ನು ರಕ್ಷಿಸುತ್ತವೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಪಕ್ಷವು ಬಯಸಿದೆ ಎನ್ನಲಾಗಿದೆ.
ದೇಶದ ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ.