ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಬಿಹಾರದ ಪ್ರವಾಹ ಪೀಡಿತ ಪ್ರದೇಶದಲ್ಲಿ ಪರಿಹಾರ ಕಾರ್ಯಾಚರಣೆ ವೇಳೆ ಅವಘಡ: ಹೆಲಿಕಾಪ್ಟರ್‌ನಿಂದ ಪಡಿತರ ಸಾಮಗ್ರಿ ಬಿದ್ದು ಓರ್ವ ಸಾವು

Flood relief operation: ಬಿಹಾರದ ಪ್ರವಾಹ ಪೀಡಿತ ಪ್ರದೇಶದಲ್ಲಿ ಐಎಎಫ್ ಹೆಲಿಕಾಪ್ಟರ್ ಪರಿಹಾರ ಕಾರ್ಯಾಚರಣೆಯ ವೇಳೆ ವ್ಯಕ್ತಿಯೊಬ್ಬರು ಮೃತಪಟ್ಟಿದ್ದು, ಮಹಿಳೆ ಮತ್ತು ಇಬ್ಬರು ಮಕ್ಕಳು ಗಾಯಗೊಂಡಿದ್ದಾರೆ. ಮೃತ ವ್ಯಕ್ತಿಯನ್ನು ಪರಶುರಾಂಪುರ ಗ್ರಾಮದ ನಿವಾಸಿ ಅನಿಲ್ ಕುಮಾರ್ ಸಿಂಗ್ ಅಲಿಯಾಸ್ ಅಪ್ಪು ಸಿಂಗ್ ಎಂದು ಗುರುತಿಸಲಾಗಿದೆ.

ಪ್ರವಾಹ ಪೀಡಿತ ಪ್ರದೇಶದಲ್ಲಿ ಪರಿಹಾರ ಕಾರ್ಯಾಚರಣೆ ವೇಳೆ ಅವಘಡ

ಸಾಂದರ್ಭಿಕ ಚಿತ್ರ -

Priyanka P
Priyanka P Oct 3, 2026 3:30 PM

ಪಟ್ನಾ, ಅ. 3: ಪ್ರವಾಹ ಪೀಡಿತ ಪ್ರದೇಶದಲ್ಲಿ ಐಎಎಫ್ ಹೆಲಿಕಾಪ್ಟರ್ ಪರಿಹಾರ ಕಾರ್ಯಾಚರಣೆಯ ವೇಳೆ ವ್ಯಕ್ತಿಯೊಬ್ಬರು ಮೃತಪಟ್ಟಿದ್ದು, ಮಹಿಳೆ ಮತ್ತು ಇಬ್ಬರು ಮಕ್ಕಳು ಗಾಯಗೊಂಡಿದ್ದಾರೆ. ಬಿಹಾರದ ಸರನ್ ಜಿಲ್ಲೆಯಲ್ಲಿ ಘಟನೆ ನಡೆದಿದೆ (Bihar floods). ಪ್ರವಾಹದಿಂದ ಸ್ಥಳಾಂತರಗೊಂಡಿದ್ದ 58 ವರ್ಷದ ವ್ಯಕ್ತಿಯೊಬ್ಬರು ಭಾರತೀಯ ವಾಯುಪಡೆಯ (IAF) ಹೆಲಿಕಾಪ್ಟರ್‌ನಿಂದ ಪರಿಹಾರ ಸಾಮಗ್ರಿ ಬಿದ್ದು ಮೃತಪಟ್ಟಿದ್ದಾರೆ. ವೈಮಾನಿಕ ಪರಿಹಾರ ಕಾರ್ಯಾಚರಣೆಯ ಸಮಯದಲ್ಲಿ ನಡೆದ ಪ್ರತ್ಯೇಕ ಘಟನೆಯಲ್ಲಿ ಮಹಿಳೆ ಮತ್ತು ಇಬ್ಬರು ಮಕ್ಕಳು ಗಾಯಗೊಂಡಿದ್ದಾರೆ.

ಪರಶುರಾಂಪುರ ಗ್ರಾಮದಲ್ಲಿ ಪ್ರವಾಹದಿಂದ ತೀವ್ರವಾಗಿ ಬಾಧಿತರಾದ ಸಾವಿರಾರು ಜನರು ತಮ್ಮ ಮನೆಗಳನ್ನು ತೊರೆದು ಒಡ್ಡುಗಳ ಮೇಲೆ ಆಶ್ರಯ ಪಡೆದಿದ್ದಾರೆ. ಮೃತ ವ್ಯಕ್ತಿಯನ್ನು ಪರಶುರಾಂಪುರ ಗ್ರಾಮದ ನಿವಾಸಿ ಅನಿಲ್ ಕುಮಾರ್ ಸಿಂಗ್ ಅಲಿಯಾಸ್ ಅಪ್ಪು ಸಿಂಗ್ ಎಂದು ಗುರುತಿಸಲಾಗಿದೆ. “ಮೃತರ ಕುಟುಂಬಕ್ಕೆ ಅಂತ್ಯಕ್ರಿಯೆ ಮತ್ತು ಇತರ ಅಗತ್ಯ ವಿಧಿವಿಧಾನಗಳಿಗಾಗಿ ಆರಂಭಿಕ ಆರ್ಥಿಕ ನೆರವು ನೀಡಲಾಗಿದೆ” ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ. ಮೃತ ವ್ಯಕ್ತಿ ಯಾವ ಪರಿಸ್ಥಿತಿಯಲ್ಲಿ ಮೃತಪಟ್ಟರು ಎಂಬುದನ್ನು ಪರಿಶೀಲಿಸಲಾಗುತ್ತಿದೆ ಎಂದು ಸರನ್ ಜಿಲ್ಲಾಧಿಕಾರಿ ವೈಭವ ಶ್ರೀವಾಸ್ತವ ಹೇಳಿದ್ದಾರೆ.

ಕುಟುಂಬಸ್ಥರು ಹೇಳಿದ್ದೇನು?

ಗಂಡಕ್ ನದಿಯ ನೀರಿನ ಏರಿಕೆಯಿಂದ ಗ್ರಾಮಸ್ಥರು ಪಡಿತರ ಪ್ಯಾಕೆಟ್‌ಗಳನ್ನು ಪಡೆಯಲು ಪರಿಹಾರ ಶಿಬಿರದ ಬಳಿ ಜಮಾಯಿಸಿದ್ದರು. ಸಿಂಗ್ ಊಟ ಮುಗಿಸಿ ಹೊರಗಿದ್ದಾಗ ಹೆಲಿಕಾಪ್ಟರ್ ಕಡಿಮೆ ಎತ್ತರದಲ್ಲಿ ಹಾರಿತು ಎಂದು ಕುಟುಂಬ ಸದಸ್ಯರು ತಿಳಿಸಿದ್ದಾರೆ. ಈ ವೇಳೆ ಪರಿಹಾರ ಸಾಮಗಗ್ರಿಯ ಮೂಟೆಯೊಂದು ಬಡಿದಿದೆ. ಇನ್ನೊಂದು ಅವರ ಎದೆಯ ಮೇಲೆ ಬಿದ್ದಿದೆ. ಕೂಡಲೇ ಅವರು ಕುಸಿದು ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಪ್ಯಾಕೆಟ್‌ಗಳು ತಲಾ 5 ಕೆಜಿ ತೂಕವಿದ್ದವು ಹೇಳಿದ್ದಾರೆ.

ನೇಪಾಳದಲ್ಲಿ ಭಾರಿ ಮಳೆಯಿಂದಾಗಿ ಪ್ರವಾಹ: ಬಿಹಾರದಲ್ಲಿ ಉಕ್ಕಿ ಹರಿಯುತ್ತಿದೆ ಗಂಡಕ್ ನದಿ

ಘಟನೆಯ ಬಗ್ಗೆ ಗ್ರಾಮಸ್ಥರು ಪೊಲೀಸರಿಗೆ ವ್ಯತಿರಿಕ್ತ ಹೇಳಿಕೆಗಳನ್ನು ನೀಡಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಕೆಲವರು, ಮೂಟೆ ಸಿಂಗ್‌ಗೆ ನೇರವಾಗಿ ತಗುಲಿದವು ಎಂದು ಹೇಳಿದರೆ, ಇನ್ನು ಕೆಲವರು ಸಮೀಪದಲ್ಲಿ ಬಿದ್ದಾಗ ಅವರಿಗೆ ಹೃದಯಾಘಾತವಾಗಿರಬಹುದು ಎಂದು ಹೇಳಿದ್ದಾರೆ ಎಂಬುದಾಗಿ ಹೇಳಿದ್ದಾರೆ. ಮೃತದೇಹದ ಮೇಲೆ ಯಾವುದೇ ಬಾಹ್ಯ ಗಾಯದ ಗುರುತು ಕಂಡುಬಂದಿಲ್ಲ ಎಂದು ವಿವರಿಸಿದ್ದಾರೆ.

ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸದರ್ ಆಸ್ಪತ್ರೆಗೆ ಕಳುಹಿಸಲಾಗಿದ್ದು, ವರದಿ ಬಂದ ಬಳಿಕವಷ್ಟೇ ಸಾವಿನ ನಿಖರ ಕಾರಣ ನಿರ್ಧರಿಸಲು ಸಾಧ್ಯ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿದ್ದು, ತನಿಖೆ ನಡೆಯುತ್ತಿದೆ.

ಇನ್ನು ಗಾಯಗೊಂಡ ಮಹಿಳೆಯನ್ನು ವಿಮಲಾ ದೇವಿ ಎಂದು ಗುರುತಿಸಲಾಗಿದ್ದು, ಸುಮಾರು 45 ವರ್ಷ ವಯಸ್ಸಿನವರಾಗಿದ್ದಾರೆ. ಅವರಿಗೆ ಮೂಳೆ ಮುರಿತವಾಗಿದ್ದು, ಮಕ್ಕಳಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಹೆಲಿಕಾಪ್ಟರ್ ಕಡಿಮೆ ಎತ್ತರದಲ್ಲಿ ಹಾರಿದಾಗ ಅವರು ಚಾವಣಿಯ ಮೇಲೆ ನಿಂತಿದ್ದರು ಎನ್ನಲಾಗಿದೆ. ಅವರಿಗೆ ಸ್ಥಳೀಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಯಿತು.