79 ಎಸೆತಗಳಲ್ಲಿ 188 ರನ್ ಸಿಡಿಸಿ ಕ್ರಿಸ್ ಗೇಲ್ ದಾಖಲೆ ಮುರಿದ ಲುವಾನ್-ಡ್ರೆ ಪ್ರಿಟೋರಿಯಸ್!
ದಕ್ಷಿಣ ಆಫ್ರಿಕಾದ 20ರ ವಯಸ್ಸಿನ ಲುವಾನ್-ಡ್ರೆ ಪ್ರಿಟೋರಿಯಸ್ ಪುರುಷರ ಟಿ20 ಕ್ರಿಕೆಟ್‌ನಲ್ಲಿ ನೂತನ ವಿಶ್ವದಾಖಲೆ ನಿರ್ಮಿಸಿದ್ದಾರೆ. ಕ್ರಿಕೆಟ್ ದಕ್ಷಿಣ ಆಫ್ರಿಕಾ ಟಿ20 ಚಾಲೆಂಜ್‌ನಲ್ಲಿ ನೈಟ್ಸ್ ವಿರುದ್ಧ ಟೈಟನ್ಸ್ ಪರ ಕೇವಲ 79 ಎಸೆತಗಳಲ್ಲಿ ಅಜೇಯ 188 ರನ್ ಸಿಡಿಸಿದರು. ಆ ಮೂಲಕ ಟಿ20 ಕ್ರಿಕೆಟ್‌ನಲ್ಲಿ ಕ್ರಿಸ್ ಗೇಲ್ ಅವರ ವಿಶ್ವ ದಾಖಲೆಯನ್ನು ಮುರಿದಿದ್ದಾರೆ.
ಕ್ರಿಸ್ ಗೇಲ್‌ರ ವಿಶ್ವ ದಾಖಲೆ ಮುರಿದ ಲುವಾಹ್-ಡ್ರೆ ಪ್ರಿಟೋರಿಯಸ್. -
ನವದೆಹಲಿ: ದಕ್ಷಿಣ ಆಫ್ರಿಕಾದ ಯುವ ಎಡಗೈ ಬ್ಯಾಟರ್ ಲುವಾನ್-ಡ್ರೆ ಪ್ರಿಟೋರಿಯಸ್ (Lhuan-dre Pretorius) ಪುರುಷರ ಟಿ20 ಕ್ರಿಕೆಟ್‌ನಲ್ಲಿ ವೈಯಕ್ತಿಕ ಗರಿಷ್ಠ ಸ್ಕೋರ್‌ನ ದಾಖಲೆಯನ್ನು ಮುರಿದಿದ್ದಾರೆ. ದೇಶಿ CSA T20 ಚಾಲೆಂಜ್‌ನಲ್ಲಿ ಟೈಟನ್ಸ್ ಪರ ಆಡಿದ ಪ್ರಿಟೋರಿಯಸ್ ಕೇವಲ 79 ಎಸೆತಗಳಲ್ಲಿ ಅಜೇಯ 188 ರನ್ ಸಿಡಿಸಿದರು. 20ರ ವಯಸ್ಸಿನ ಬ್ಯಾಟರ್ ತಮ್ಮ ಸ್ಫೋಟಕ ಇನಿಂಗ್ಸ್‌ನಲ್ಲಿ 13 ಸಿಕ್ಸರ್ ಹಾಗೂ 15 ಬೌಂಡರಿ ಬಾರಿಸಿದರು. ಟೂರ್ನಿಯ ಮೊದಲ ಪಂದ್ಯದಲ್ಲೇ ಅಬ್ಬರಿಸಿದ ಅವರು, ಈ ಮೂಲಕ 2013ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಪುಣೆ ವಾರಿಯರ್ಸ್ ವಿರುದ್ಧ ಕ್ರಿಸ್ ಗೇಲ್ (Chris Gayle) ಗಳಿಸಿದ್ದ 175 ರನ್‌ಗಳ ದಾಖಲೆಯನ್ನು ಮುರಿದಿದ್ದಾರೆ.
ಪ್ರಿಟೋರಿಯಸ್ ದ್ವಿಶತಕದತ್ತ ವೇಗವಾಗಿ ಸಾಗುತ್ತಿದ್ದರು. ಆದರೆ ಓವರ್‌ಗಳು ಮುಗಿದ ಕಾರಣ 188 ರನ್‌ಗಳಲ್ಲೇ ಅಜೇಯರಾಗಿ ಉಳಿದರು. ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಟೈಟನ್ಸ್ 20 ಓವರ್‌ಗಳಲ್ಲಿ 3 ವಿಕೆಟ್‌ಗೆ 267 ರನ್ ಗಳಿಸಿತು. ಪ್ರಿಟೋರಿಯಸ್ ಹಾಗೂ ಸಿನೆಥೆಂಬಾ ಕ್ವೆಶಿಲೆ ಏಳು ಓವರ್‌ಗಳಿಗಿಂತ ಸ್ವಲ್ಪ ಹೆಚ್ಚು ಅವಧಿಯಲ್ಲಿ 100 ರನ್‌ಗಳ ಜೊತೆಯಾಟ ನಡೆಸಿದರು. ಕ್ವೆಶಿಲೆ 10 ಎಸೆತಗಳಲ್ಲಿ 14 ರನ್ ಗಳಿಸಿ ಔಟಾದ ನಂತರವೂ ಪ್ರಿಟೋರಿಯಸ್ ಅಬ್ಬರ ಮುಂದುವರಿಸಿದರು.
ಏಷ್ಯನ್ ಗೇಮ್ಸ್ ಕ್ರಿಕೆಟ್; ಪಾಕ್ ಸದೆಬಡಿದು ಚಿನ್ನ ಗೆದ್ದ ಟೀಮ್ ಇಂಡಿಯಾ
ಡೆವಾಲ್ಡ್ ಬ್ರೆವಿಸ್ 11 ಎಸೆತಗಳಲ್ಲಿ 7 ಮತ್ತು ಲಿಯಸ್ ಡು ಪ್ಲಾಯ್ 11 ಎಸೆತಗಳಲ್ಲಿ 17 ರನ್ ಗಳಿಸಿದರೆ, ನಾಯಕ ಡೊನೊವನ್ ಫೆರೇರಾ ಅಂತಿಮ ಹಂತದಲ್ಲಿ 11 ಎಸೆತಗಳಲ್ಲಿ ಅಜೇಯ 29 ರನ್ ಸಿಡಿಸಿ ಟೈಟನ್ಸ್ ಮೊತ್ತವನ್ನು 267ಕ್ಕೆ ಕೊಂಡೊಯ್ದರು. ಆದರೆ ಟಿ20 ಕ್ರಿಕೆಟ್‌ನಲ್ಲಿ ತಂಡವೊಂದು ಗಳಿಸಿದ ಗರಿಷ್ಠ ಮೊತ್ತದ ದಾಖಲೆಯಿಂದ ಟೈಟನ್ಸ್ ಇನ್ನೂ ದೂರದಲ್ಲಿದೆ. ಬರೋಡಾ 2024ರಲ್ಲಿ ಸಿಕ್ಕಿಂ ವಿರುದ್ಧ 5 ವಿಕೆಟ್‌ಗೆ 349 ರನ್ ಗಳಿಸಿದ್ದು, ತಂಡದ ಗರಿಷ್ಠ ಟಿ20 ಸ್ಕೋರ್ ದಾಖಲೆಯಾಗಿದೆ.
ಕ್ರಿಸ್ ಗೇಲ್ ದಾಖಲೆ ಮುರಿದ ಪ್ರಿಟೋರಿಯಸ್
ಕ್ರಿಸ್ ಗೇಲ್ ಅವರ ಟಿ20 ವೈಯಕ್ತಿಕ ಮೊತ್ತದ ದಾಖಲೆ 13 ವರ್ಷಕ್ಕೂ ಹೆಚ್ಚು ಕಾಲ ಅಜೇಯವಾಗಿ ಉಳಿದಿತ್ತು. ಆದರೆ, ಇದೀಗ ಅವರ ದಾಖಲೆಯನ್ನು ದಕ್ಷಿಣ ಆಫ್ರಿಕಾದ ಯುವ ಬ್ಯಾಟ್ಸ್‌ಮನ್ ಮುರಿದಿದ್ದಾರೆ. 2013ರ ಐಪಿಎಲ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆಡಿದ್ದ ಗೇಲ್, ಪುಣೆ ವಾರಿಯರ್ಸ್ ವಿರುದ್ಧ 175 ರನ್‌ಗಳನ್ನು ಸಿಡಿಸಿದ್ದರು. ಇದು ಪುರುಷರ ಟಿ20 ಕ್ರಿಕೆಟ್‌ನ ಗರಿಷ್ಠ ವೈಯಕ್ತಿಕ ಸ್ಕೋರ್ ಆಗಿತ್ತು.
🚨 𝐖𝐎𝐑𝐋𝐃 𝐑𝐄𝐂𝐎𝐑𝐃 🚨
— SuperSport 🏆 (@SuperSportTV) October 2, 2026
Lhuan-Dre Pretorius scores the highest-ever individual score in T20 cricket 🤯🏏#SSCricket | #Pro20Cup pic.twitter.com/Thh8hQL5z9
ಲುವಾನ್-ಡ್ರೆ ಪ್ರಿಟೋರಿಯಸ್ ತಮ್ಮ 176ನೇ ರನ್ ಗಳಿಸುವ ಮೂಲಕ ಗೇಲ್ ಅವರ ದಾಖಲೆಯನ್ನು ಹಿಂದಿಕ್ಕಿದರು. ನಂತರವೂ ಆಕ್ರಮಣಕಾರಿ ಬ್ಯಾಟಿಂಗ್ ಮುಂದುವರಿಸಿದ ಅವರು 79 ಎಸೆತಗಳಲ್ಲಿ 15 ಬೌಂಡರಿ ಮತ್ತು 13 ಸಿಕ್ಸರ್‌ನೊಂದಿಗೆ ಅಜೇಯ 188 ರನ್ ಗಳಿಸಿದರು. ಅವರ ಇನಿಂಗ್ಸ್‌ನ ಸ್ಟ್ರೈಕ್ ರೇಟ್ 237.97 ಆಗಿತ್ತು. ಒಟ್ಟು 188 ರನ್‌ಗಳಲ್ಲಿ ಬರೋಬ್ಬರಿ 138 ರನ್‌ಗಳು ಬೌಂಡರಿಗಳ ಮೂಲಕ ಬಂದವು.
ಪುರುಷರ ಟಿ20 ಕ್ರಿಕೆಟ್‌ನ ಗರಿಷ್ಠ ವೈಯಕ್ತಿಕ ಸ್ಕೋರ್
ಲುವಾನ್-ಡ್ರೆ ಪ್ರಿಟೋರಿಯಸ್ – 188*, ಟೈಟನ್ಸ್ vs ನೈಟ್ಸ್, 2026
ಕ್ರಿಸ್ ಗೇಲ್ – 175*, ಆರ್‌ಸಿಬಿ vs ಪಿಡಬ್ಲ್ಯುಐ, 2013
ಆರೋನ್ ಫಿಂಚ್ – 172, ಆಸ್ಟ್ರೇಲಿಯಾ vs ಜಿಂಬಾಬ್ವೆ, 2018
ಹಮ್ಜಾ ಖಾನ್ – 164*, ರುವಾಂಡಾ vs ಐವರಿ ಕೋಸ್ಟ್, 2026
ಕರಣಬೀರ್ ಸಿಂಗ್ – 164, ಆಸ್ಟ್ರಿಯಾ vs ಹಂಗೇರಿ, 2026