ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಭಾರತದಲ್ಲಿ ಮೊದಲ ಬುಲೆಟ್ ರೈಲು ಸಂಚಾರಕ್ಕೆ ಭರದ ಸಿದ್ಧತೆ: ಮಹಾರಾಷ್ಟ್ರದಲ್ಲಿ ಸಾಗುತ್ತಿದೆ ನಿರ್ಮಾಣ ಕಾರ್ಯ; ವಿಡಿಯೊ ನೋಡಿ

First Bullet Train: ಮಹಾರಾಷ್ಟ್ರದ ಮುಂಬೈ–ಗುಜರಾತ್‌ನ ಅಹಮದಾಬಾದ್ ನಡುವಿನ ಹೈಸ್ಪೀಡ್ ರೈಲು ಕಾರಿಡಾರ್ನ ಕಾಮಗಾರಿ ಭರದಿಂದ ಸಾಗುತ್ತಿದೆ. ಮಹಾರಾಷ್ಟ್ರ ವಿಭಾಗದಲ್ಲಿ ನಿರ್ಮಾಣ ಕಾಮಗಾರಿ ಸಮರೋಪಾದಿಯಲ್ಲಿ ನಡೆಯತ್ತಿದೆ. ಥಾಣೆಯಿಂದ ಜರೋಲಿವರೆಗೆ 135.45 ಕಿ.ಮೀ. ಎಲಿವೇಟೆಡ್ ಮಾರ್ಗ, 7 ಪರ್ವತ ಸುರಂಗಗಳು ಹಾಗೂ ಪ್ರಮುಖ ನದಿಗಳ ಮೇಲೆ ಬೃಹತ್ ಸೇತುವೆಗಳು ನಿರ್ಮಾಣವಾಗುತ್ತಿವೆ. ಮೊದಲ ಹಂತದಲ್ಲಿ ಸೂರತ್–ಬಿಲಿಮೋರಾ ವಿಭಾಗ ಕಾರ್ಯಾರಂಭ ಮಾಡುವ ನಿರೀಕ್ಷೆಯಿದ್ದು, ಸಂಪೂರ್ಣ ಕಾರಿಡಾರ್ 2029ರ ವೇಳೆಗೆ ಕಾರ್ಯನಿರ್ವಹಿಸುವ ಸಾಧ್ಯತೆ ಇದೆ.

2027ರಲ್ಲಿ ಭಾರತದಲ್ಲಿ ಮೊದಲ ಬುಲೆಟ್ ರೈಲು ಓಡಾಟ?

ಬುಲೆಟ್ ರೈಲು (ಸಾಂದರ್ಭಿಕ ಚಿತ್ರ) -

Profile
Sushmitha Jain Aug 26, 2026 10:31 PM

ಮುಂಬೈ, ಆ. 26: ಭಾರತದ ಮೊದಲ ಬುಲೆಟ್ ರೈಲು (Bullet Train) ಯೋಜನೆಯಾದ ಮುಂಬೈ–ಅಹಮದಾಬಾದ್ (Mumbai Ahmedabad) ಹೈಸ್ಪೀಡ್ ರೈಲು ಕಾರಿಡಾರ್ ನಿರ್ಮಾಣ ಕಾಮಗಾರಿ ಮಹಾರಾಷ್ಟ್ರದ ಥಾಣೆ ಮತ್ತು ಪಾಲ್ಘರ್ ಜಿಲ್ಲೆಗಳಲ್ಲಿ ಭರದಿಂದ ಸಾಗುತ್ತಿದೆ. ಪರ್ವತಗಳು, ನದಿಗಳು ಹಾಗೂ ಪ್ರಮುಖ ಸಾರಿಗೆ ಮಾರ್ಗಗಳನ್ನು ದಾಟುವ ಈ ಯೋಜನೆಯ ಕಾಮಗಾರಿ ಹಲವು ಹಂತಗಳಲ್ಲಿ ನಡೆಯುತ್ತಿದೆ. ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ ಕಾಮಗಾರಿಯ ವಿಡಿಯೊ ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದು ವೈರಲ್‌ ಅಗಿದೆ.

ಥಾಣೆಯ ಶಿಲ್ಫಾಟಾದಿಂದ ಮಹಾರಾಷ್ಟ್ರ–ಗುಜರಾತ್ ಗಡಿಯ ಸಮೀಪದ ಜರೋಲಿ ಗ್ರಾಮದವರೆಗೆ ಒಟ್ಟು 135.45 ಕಿ.ಮೀ. ಉದ್ದದ ಎಲಿವೇಟೆಡ್ ಮಾರ್ಗ ನಿರ್ಮಿಸಲಾಗುತ್ತಿದೆ. ಇದರಲ್ಲಿ 124.027 ಕಿ.ಮೀ. ಮಾರ್ಗ ವಯಾಡಕ್ಟ್‌ಗಳು ಹಾಗೂ ಸೇತುವೆಗಳನ್ನು ಒಳಗೊಂಡಿರಲಿದೆ.

ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ ಅವರ ಇನ್‌ಸ್ಟಾಗ್ರಾಮ್‌ ಪೋಸ್ಟ್‌:

ಮಹಾರಾಷ್ಟ್ರದಲ್ಲಿ ಥಾಣೆ, ವಿರಾರ್ ಮತ್ತು ಬೋಯಿಸರ್ ಎಂಬ ಮೂರು ಎಲಿವೇಟೆಡ್ ನಿಲ್ದಾಣಗಳು ನಿರ್ಮಾಣವಾಗಲಿವೆ. ಥಾಣೆ ನಿಲ್ದಾಣವು ನೆಲಮಟ್ಟದಿಂದ ಸುಮಾರು 12 ಮೀಟರ್ ಎತ್ತರದಲ್ಲಿ ನಿರ್ಮಾಣಗೊಳ್ಳುತ್ತಿದೆ. ಸುರಂಗಗಳ ಒಳಭಾಗದಲ್ಲಿಯೂ ಡ್ರೈನೇಜ್, ವಾಟರ್‌ಪ್ರೂಫಿಂಗ್ ಹಾಗೂ ಲೈನಿಂಗ್ ಕಾಮಗಾರಿಗಳು ನಡೆಯುತ್ತಿವೆ. ಈ ವಿಭಾಗದಲ್ಲಿ ಈಗಾಗಲೇ 100 ಕಿ.ಮೀ.ಗೂ ಹೆಚ್ಚು ಪಿಯರ್ ನಿರ್ಮಾಣ ಪೂರ್ಣಗೊಂಡಿದ್ದು, ಸುಮಾರು 74 ಕಿ.ಮೀ. ಪಿಯರ್‌ಗಳು ಮುಂದಿನ ಹಂತದ ಕಾಮಗಾರಿಗೆ ಸಿದ್ಧವಾಗಿವೆ.

ಬೆಂಗಳೂರಿನಿಂದ ಮುಂಬಯಿಗೆ ಸೂಪರ್‌ ಫಾಸ್ಟ್‌ ರೈಲು: ಅಶ್ವಿನಿ ವೈಷ್ಣವ್‌, ತೇಜಸ್ವಿ ಸೂರ್ಯ ಘೋಷಣೆ

ಪರ್ವತ, ನದಿಗಳ ಮೂಲಕ ಹಾದುಹೋಗಲಿದೆ ಬುಲೆಟ್ ರೈಲು

ಯೋಜನೆಯ ಮಹಾರಾಷ್ಟ್ರ ವಿಭಾಗದಲ್ಲಿ ಪರ್ವತ ಪ್ರದೇಶಗಳ ಮೂಲಕ 7 ಪರ್ವತ ಸುರಂಗಗಳನ್ನು ನಿರ್ಮಿಸಲಾಗುತ್ತಿದೆ. ಇದರ ಜತೆಗೆ ಹಲವು ಪ್ರಮುಖ ನದಿಗಳ ಮೇಲೆಯೂ ಬೃಹತ್ ಸೇತುವೆಗಳನ್ನು ನಿರ್ಮಿಸಲಾಗುತ್ತಿದ್ದು, ಉಲ್ಹಾಸ್ ನದಿಗೆ 460 ಮೀಟರ್, ವೈತರ್ಣಾ ನದಿಗೆ 2.32 ಕಿ.ಮೀ. ಹಾಗೂ ಜಗಣಿ ನದಿಗೆ 510 ಮೀಟರ್ ಉದ್ದದ ಸೇತುವೆಗಳು ನಿರ್ಮಾಣವಾಗುತ್ತಿವೆ.

ಮಹಾರಾಷ್ಟ್ರ ವಿಭಾಗದಲ್ಲಿ ಒಟ್ಟು 36 ಸೇತುವೆಗಳು ಮತ್ತು ಕ್ರಾಸಿಂಗ್‌ಗಳು ನಿರ್ಮಾಣವಾಗಲಿವೆ. ಇದರಲ್ಲಿ ರೈಲು ಮಾರ್ಗಗಳು, ನದಿಗಳು ಮತ್ತು ಪ್ರಮುಖ ಹೆದ್ದಾರಿಗಳನ್ನು ದಾಟುವ 12 ಉಕ್ಕಿನ ಸೇತುವೆಗಳು ಸೇರಿವೆ.

2027ರ ಆಗಸ್ಟ್ 15ರಂದು ಮೊದಲ ಬುಲೆಟ್ ರೈಲು?

ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಭಾರತದಲ್ಲಿ ಮೊದಲ ಬುಲೆಟ್ ರೈಲು 2027ರ ಆಗಸ್ಟ್ 15ರಂದು ಸಂಚರಿಸುವ ಸಾಧ್ಯತೆಯಿದೆ ಎಂದು ತಿಳಿಸಿದ್ದಾರೆ. ಮುಂಬೈ–ಅಹಮದಾಬಾದ್ ನಡುವಿನ ಈ ಯೋಜನೆಯನ್ನು ಹಂತ ಹಂತವಾಗಿ ಕಾರ್ಯಗತಗೊಳಿಸಲಾಗುತ್ತಿದ್ದು, ಸೂರತ್–ಬಿಲಿಮೋರಾ ವಿಭಾಗ ಮೊದಲಿಗೆ ಕಾರ್ಯಾರಂಭ ಮಾಡುವ ನಿರೀಕ್ಷೆಯಿದೆ. ಬಳಿಕ ವಾಪಿ–ಸೂರತ್ ವಿಭಾಗ ಕಾರ್ಯಾರಂಭ ಮಾಡಲಿದೆ.

ಸಂಪೂರ್ಣ ಮುಂಬೈ–ಅಹಮದಾಬಾದ್ ಕಾರಿಡಾರ್ 2029ರ ವೇಳೆಗೆ ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಿಸುವ ನಿರೀಕ್ಷೆಯಿದೆ. ಗರಿಷ್ಠ ಗಂಟೆಗೆ 320 ಕಿ.ಮೀ. ವೇಗದಲ್ಲಿ ಸಂಚರಿಸಲಿರುವ ರೈಲು, ಸಂಪೂರ್ಣ ಪ್ರಯಾಣವನ್ನು ಸುಮಾರು 1 ಗಂಟೆ 58 ನಿಮಿಷಗಳಲ್ಲಿ ಪೂರ್ಣಗೊಳಿಸುವ ಗುರಿ ಹೊಂದಿದೆ.