Ceasefire : ಭಾರತ ಪಾಕಿಸ್ತಾನ ಕದನ ವಿರಾಮ ವಿಸ್ತರಣೆ- ಮಾತುಕತೆಗೆ ಸಿದ್ದವಾದ ಪಾಕ್ ಅಧಿಕಾರಿಗಳು
India-Pak Ceasefire: ಭಾರತ ಮತ್ತು ಪಾಕಿಸ್ತಾನ ನಡುವಿನ ಕದನ ವಿರಾಮವನ್ನು ಮೇ 18 ರವರೆಗೆ ವಿಸ್ತರಿಸಲಾಗಿರುವುದರಿಂದ ನವದೆಹಲಿ ಮತ್ತು ಇಸ್ಲಾಮಾಬಾದ್‌ನ ಮಿಲಿಟರಿ ಕಾರ್ಯಾಚರಣೆಗಳ ಮಹಾನಿರ್ದೇಶಕರು (DGMO) ಶೀಘ್ರದಲ್ಲೇ ಮಾತುಕತೆ ನಡೆಸಲಿದ್ದಾರೆ. ಎರಡೂ ದೇಶಗಳ ಮಿಲಿಟರಿ ಕಾರ್ಯಾಚರಣೆಗಳ ಮಹಾನಿರ್ದೇಶಕರುಗಳು ಸಭೆಯ ಸಮಯದಲ್ಲಿ ಗಡಿಯಲ್ಲಿನ ಪರಿಸ್ಥಿತಿಯ ಕುರಿತು ಪರಿಶೀಲನೆ ನಡೆಸಲಿದ್ದಾರೆ.


ನವದೆಹಲಿ: ಪಹಲ್ಗಾಮ್ ಭಯೋತ್ಪಾದಕ ದಾಳಿಯ (Pahalgam terror attack) ಬಳಿಕ ಭಾರತೀಯ ಸೇನೆ (Indian army) ನಡೆಸಿದ ಆಪರೇಷನ್ ಸಿಂದೂರ್ (Operation Sindoor) ಕಾರ್ಯಾಚರಣೆಯ ಅನಂತರ ಭಾರತ ಮತ್ತು ಪಾಕಿಸ್ತಾನದ ಗಡಿ ಭಾಗಗಳಲ್ಲಿ ಉದ್ವಿಗ್ನಗೊಂಡಿದ್ದ ಪರಿಸ್ಥಿತಿಯನ್ನು ನಿಯಂತ್ರಿಸಲು ಮೇ 11ರಂದು ಎರಡು ರಾಷ್ಟ್ರಗಳು ಕದನ ವಿರಾಮವನ್ನು ಘೋಷಿಸಿತ್ತು. ಬಳಿಕ ಎರಡು ಬಾರಿ ಪಾಕಿಸ್ತಾನ ಕದನ ವಿರಾಮ ಉಲ್ಲಂಘನೆಯನ್ನು (India-Pak ceasefire) ನಡೆಸಿತ್ತು. ಆದರೆ ಭಾರತ ನೀಡಿದ ಕಠಿಣ ಎಚ್ಚರಿಕೆಯ ಬಳಿಕ ಪಾಕ್ ಸೇನೆ ಕದನ ವಿರಾಮವನ್ನು ಒಪ್ಪಿಕೊಂಡಿತು. ಇದೀಗ ಕದನ ವಿರಾಮವನ್ನು ಮೇ 18 ರವರೆಗೆ ವಿಸ್ತರಿಸಲಾಗಿದ್ದು, ಎರಡು ರಾಷ್ಟ್ರಗಳ ಅಧಿಕಾರಿಗಳು ಮತ್ತೆ ಮಾತುಕತೆ ನಡೆಸಲಿದ್ದಾರೆ.
ಭಾರತ ಮತ್ತು ಪಾಕಿಸ್ತಾನ ನಡುವಿನ ಕದನ ವಿರಾಮವನ್ನು ಮೇ 18 ರವರೆಗೆ ವಿಸ್ತರಿಸಲಾಗಿರುವುದರಿಂದ ನವದೆಹಲಿ ಮತ್ತು ಇಸ್ಲಾಮಾಬಾದ್‌ನ ಮಿಲಿಟರಿ ಕಾರ್ಯಾಚರಣೆಗಳ ಮಹಾನಿರ್ದೇಶಕರು (DGMO) ಶೀಘ್ರದಲ್ಲೇ ಮಾತುಕತೆ ನಡೆಸಲಿದ್ದಾರೆ. ಎರಡೂ ದೇಶಗಳ ಮಿಲಿಟರಿ ಕಾರ್ಯಾಚರಣೆಗಳ ಮಹಾನಿರ್ದೇಶಕರುಗಳು ಸಭೆಯ ಸಮಯದಲ್ಲಿ ಗಡಿಯಲ್ಲಿನ ಪರಿಸ್ಥಿತಿಯ ಕುರಿತು ಪರಿಶೀಲನೆ ನಡೆಸಲಿದ್ದಾರೆ.
ಭಾರತ ಮತ್ತು ಪಾಕಿಸ್ತಾನದ ಗಡಿ ನಿಯಂತ್ರಣ ರೇಖೆ ಮತ್ತು ಗಡಿ ಪ್ರದೇಶಗಳಲ್ಲಿ ಹೆಚ್ಚಿನ ಭದ್ರತೆಯನ್ನು ನಿಧಾನಕ್ಕೆ ಕಡಿಮೆ ಮಾಡಲು ಅಗತ್ಯ ಕ್ರಮಗಳನ್ನು ಮುಂದುವರಿಸಲು ನಿರ್ಧರಿಸಿದ ಬಳಿಕ ಮಿಲಿಟರಿ ಕಾರ್ಯಾಚರಣೆಗಳ ಮಹಾನಿರ್ದೇಶಕರುಗಳು ಸಭೆ ನಡೆಸುವ ನಿರ್ಣಯ ಕೈಗೊಳ್ಳಲಾಗಿದೆ.
ಮೇ 10 ರಂದು ನಡೆಸಿರುವ ಮಾತುಕತೆ ವೇಳೆ ಮಿಲಿಟರಿ ಕಾರ್ಯಾಚರಣೆಗಳ ಮಹಾನಿರ್ದೇಶಕರುಗಳ ನಡುವಿನ ಒಪ್ಪಂದದ ಬಳಿಕ ಎರಡು ರಾಷ್ಟ್ರಗಳು ಭದ್ರತೆ ಮಟ್ಟವನ್ನು ಕಡಿಮೆ ಮಾಡಿ ವಿಶ್ವಾಸ ವರ್ಧನೆಯ ಕ್ರಮಗಳನ್ನು ಮುಂದುವರಿಸಲು ನಿರ್ಧರಿಸಿದ್ದಾರೆ. ಮೇ 7ರಿಂದ 10ರವರೆಗೆ ನಾಲ್ಕು ದಿನಗಳ ಕಾಲ ನಡೆದ ಗಡಿಯಾಚೆಗಿನ ಡ್ರೋನ್ ಮತ್ತು ಕ್ಷಿಪಣಿ ದಾಳಿಯ ಅನಂತರ ಉದ್ವಿಗ್ನಗೊಂಡಿದ್ದ ಸಂಘರ್ಷ ಪರಿಸ್ಥಿತಿಯನ್ನು ಕೊನೆಗೊಳಿಸಲು ಭಾರತ ಮತ್ತು ಪಾಕಿಸ್ತಾನ ಮೇ 10ರಂದು ಒಪ್ಪಂದ ಮಾಡಿಕೊಂಡಿತ್ತು.
ಕಾಶ್ಮೀರದ ಪಹಲ್ಗಾಮ್ ಜಿಲ್ಲೆಯ ಬೈಸರನ್ ಕಣಿವೆಯಲ್ಲಿ ಏಪ್ರಿಲ್ 22 ರಂದು ನಡೆದ ಭಯೋತ್ಪಾದಕ ದಾಳಿಯಲ್ಲಿ 27 ಮಂದಿ ಸಾವನ್ನಪ್ಪಿದ ಬಳಿಕ ಭಾರತೀಯ ಸೇನೆಯು ಉಗ್ರರನ್ನು ಬೇಟೆಯಾಡಲು ಪ್ರಾರಂಭಿಸಿತ್ತು. ಮೇ 7 ಮತ್ತು 8ರಂದು ಮಧ್ಯರಾತ್ರಿ ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿನ ಭಯೋತ್ಪಾದಕ ನೆಲೆಗಳನ್ನು ಗುರಿಯಾಗಿಸಲು ಆಪರೇಷನ್ ಸಿಂದೂರ್ ಕಾರ್ಯಾಚರಣೆಯನ್ನು ನಡೆಸಿತು. ಇದರೊಂದಿಗೆ ಭಾರತವು ಬಲವಾದ ರಾಜತಾಂತ್ರಿಕ ಕ್ರಮಗಳನ್ನು ತೆಗೆದುಕೊಂಡಿತು. ಅದರಲ್ಲಿ ಮುಖ್ಯವಾಗಿ ಪಾಕಿಸ್ತಾನದೊಂದಿಗಿನ ದಶಕಗಳ ಕಾಲದಿಂದ ಇದ್ದ ಸಿಂಧೂ ಜಲ ಒಪ್ಪಂದ ರದ್ದು ಮತ್ತು ಪಾಕಿಸ್ತಾನ ಪ್ರಜೆಗಳ ವೀಸಾ ರದ್ದು ಸೇರಿದೆ.
ಅನಂತರ ಭಯೋತ್ಪಾದಕರಿಗೆ ನೆಲೆಯಾಗಿದ್ದ ಶತ್ರು ರಾಷ್ಟ್ರದೊಳಗಿನ ಪ್ರದೇಶಗಳಿಗೆ ದಾಳಿ ಮಾಡಿದ ಭಾರತೀಯ ಸೇನೆ ಈ ವೇಳೆ ಪಾಕಿಸ್ತಾನದಲ್ಲಿನ ಹಲವಾರು ವಾಯುನೆಲೆ ಮತ್ತು ಪ್ರಮುಖ ಮಿಲಿಟರಿ ನೆಲೆಗಳನ್ನು ಧ್ವಂಸ ಮಾಡಿತ್ತು. ಇದಕ್ಕೆ ಪ್ರತಿಯಾಗಿ ಪಾಕಿಸ್ತಾನದ ಸೇನೆಯು ಕೂಡ ಭಾರತದ ವಿವಿಧ ಭಾಗಗಳ ಮೇಲೆ ಡ್ರೋನ್, ಕ್ಷಿಪಣಿ ಹಾರಿಸುವ ಪ್ರಯತ್ನ ನಡೆಸಿತು. ಆದರೆ ಇದರಲ್ಲಿ ಹೆಚ್ಚಿನದನ್ನು ಭಾರತೀಯ ವಾಯುಪಡೆ ತಡೆಯುವಲ್ಲಿ ಯಶಸ್ವಿಯಾಯಿತು.
ಮೇ 10ರಂದು ಭಾರತ ಮತ್ತು ಪಾಕಿಸ್ತಾನವು ತಕ್ಷಣದಿಂದ ಜಾರಿಗೆ ಬರುವಂತೆ ಎಲ್ಲಾ ಗುಂಡಿನ ದಾಳಿ ಮತ್ತು ಮಿಲಿಟರಿ ಕಾರ್ಯಾಚರಣೆಯನ್ನು ನಿಲ್ಲಿಸುವ ಒಪ್ಪಂದ ಮಾಡಿಕೊಂಡರೂ ಪಾಕಿಸ್ತಾನವು ಒಪ್ಪಂದ ಜಾರಿಯಾದ ಕೆಲವೇ ಗಂಟೆಗಳಲ್ಲಿ ಅದನ್ನು ಉಲ್ಲಂಘಿಸಿತು. ಬಳಿಕ ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಪಾಕಿಸ್ತಾನ ಶಾಂತಿಗಾಗಿ ಮಾತುಕತೆ ನಡೆಸಲು ಸಿದ್ಧವಾಗಿದೆ ಎಂದು ಹೇಳಿದರು.
ಇದನ್ನೂ ಓದಿ: Defence Budget: ನರಭಕ್ಷಕ ಉಗ್ರರ ಬೇಟೆಗಿಳಿದ ಭಾರತೀಯ ಸೇನೆ; ರಕ್ಷಣಾ ಬಜೆಟ್ 50,000 ಕೋಟಿ ರೂ. ಗೆ ಹೆಚ್ಚಳ?
ಅಲ್ಲದೇ ಕೃಷಿ ಮತ್ತು ಕುಡಿಯುವ ಉದ್ದೇಶಕ್ಕಾಗಿ ಸಿಂಧೂ ನದಿ ನೀರಿನ ಮೇಲೆ ಅವಲಂಬಿತವಾಗಿರುವ ಇಸ್ಲಾಮಾಬಾದ್ ಜಲಶಕ್ತಿ ಸಚಿವಾಲಯಕ್ಕೆ ಪತ್ರ ಬರೆದು ಭಾರತವು ಸಿಂಧೂ ನದಿ ನೀರಿನ ಒಪ್ಪಂದವನ್ನು ರದ್ದು ಮಾಡಿರುವ ನಿರ್ಧಾರವನ್ನು ಮರುಪರಿಶೀಲಿಸುವಂತೆ ಕೇಳಿಕೊಂಡಿದೆ. ಅಲ್ಲದೇ ಈ ಒಪ್ಪಂದ ರದ್ದುಗೊಂಡರೆ ದೇಶದೊಳಗೆ ಬಿಕ್ಕಟ್ಟು ಉಂಟಾಗುತ್ತದೆ ಎಂದು ಪಾಕಿಸ್ತಾನ ಸಚಿವಾಲಯ ತಿಳಿಸಿದೆ.
ಆದರೂ ಪಾಕಿಸ್ತಾನವು ಗಡಿಯಾಚೆಗಿನ ಭಯೋತ್ಪಾದನೆಯನ್ನು ನಿಲ್ಲಿಸುವವರೆಗೆ ಸಿಂಧೂ ಜಲ ಒಪ್ಪಂದವನ್ನು ಸ್ಥಗಿತಗೊಳಿಸಲಾಗುವುದು ಎಂದು ಭಾರತ ಹೇಳಿದೆ. ಭಯೋತ್ಪಾದನೆ ಮತ್ತು ಮಾತುಕತೆ ಒಟ್ಟಿಗೆ ನಡೆಯಲು ಸಾಧ್ಯವಿಲ್ಲ ಎಂದು ಪಾಕ್ ಗೆ ಸ್ಪಷ್ಟ ಸಂದೇಶ ನೀಡಿರುವ ಪ್ರಧಾನಿ ನರೇಂದ್ರ ಮೋದಿ, ಭಾರತ ತನ್ನ ಕ್ರಮವನ್ನು ಸ್ವಲ್ಪ ಸಮಯ ನಿಲ್ಲಿಸಿದೆ ಮತ್ತು ಅದರ ಮುಂದಿನ ಕ್ರಮಗಳು ಪಾಕಿಸ್ತಾನದ ಕ್ರಮಗಳ ಮೇಲೆ ಅವಲಂಬಿತವಾಗಿರುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.