ಭಾರತೀಯ ಸೇನೆ ರಾಮ್‌ಜೆಟ್ ಚಾಲಿತ 155 ಮಿ.ಮೀ. ಆರ್ಟಿಲರಿ ಶೆಲ್ ಹೊಂದಿದ ವಿಶ್ವದ ಮೊದಲ ಸಶಸ್ತ್ರ ಪಡೆ; ಶತ್ರುಗಳ ಎದೆಯಲ್ಲಿ ನಡುಕ
Ramjet-powered artillery shells: ಭಾರತೀಯ ಸೇನೆ ರಾಮ್‌ಜೆಟ್ ಚಾಲಿತ 155 ಮಿ.ಮೀ. ಆರ್ಟಿಲರಿ ಶೆಲ್‌ಗಳನ್ನು ಹೊಂದಿರುವ ವಿಶ್ವದ ಮೊದಲ ಸಶಸ್ತ್ರ ಪಡೆ ಆಗಲು ಸಿದ್ಧವಾಗಿದೆ. ಈ ನವೀನ ತಂತ್ರಜ್ಞಾನ ಶೆಲ್‌ಗಳ ವ್ಯಾಪ್ತಿಯನ್ನು ಹೆಚ್ಚಿಸಲು ಮತ್ತು ಯುದ್ಧಭೂಮಿಯಲ್ಲಿ ಇನ್ನಷ್ಟು ಪರಿಣಾಮ ಬೀರಲು ಸಜ್ಜಾಗಿದೆ.
ಸಾಂದರ್ಭಿಕ ಚಿತ್ರ -
ನವದೆಹಲಿ, ಜ. 6: ಮಿಲಿಟರಿ ಸ್ವಾವಲಂಬನೆಯತ್ತ ಒಂದು ಮಹತ್ವದ ಹೆಜ್ಜೆಯಾಗಿ ಭಾರತೀಯ ಸೇನೆಯು ತನ್ನ 155 ಎಂಎಂ ಬಂದೂಕುಗಳಿಗೆ ರಾಮ್‌ಜೆಟ್-ಚಾಲಿತ ಫಿರಂಗಿ ಶೆಲ್‌ಗಳನ್ನು (Ramjet-powered artillery shells) ಬಳಸಲು ಸಜ್ಜಾಗಿದೆ. ಆ ಮೂಲಕ ಈ ತಂತ್ರಜ್ಞಾನ ಬಳಸುವ ವಿಶ್ವದ ಮೊದಲ ಸಶಸ್ತ್ರ ಪಡೆ ಎನಿಸಿಕೊಳ್ಳಲಿದೆ. ಆತ್ಮನಿರ್ಭರತೆ (ಸ್ವಾವಲಂಬನೆ) ಅಭಿಯಾನದ ಭಾಗವಾಗಿರುವ ಈ ಕ್ರಮವನ್ನು ಭಾರತೀಯ ತಂತ್ರಜ್ಞಾನ ಸಂಸ್ಥೆ (IIT) ಮದ್ರಾಸ್‌ನ ಸಹಯೋಗದೊಂದಿಗೆ ಅಭಿವೃದ್ಧಿಪಡಿಸಲಾಗುತ್ತಿದೆ.
ಈ ನವೀನ ತಂತ್ರಜ್ಞಾನವು ಸಾಂಪ್ರದಾಯಿಕ ಆರ್‌ಟಿಲರಿ ಶೆಲ್‌ಗಳ ವ್ಯಾಪ್ತಿಯನ್ನು 30ರಿಂದ 50 ಶೇಕಡಾವರೆಗೆ ಹೆಚ್ಚಿಸುವುದರ ಜತೆಗೆ ಅವುಗಳ ವಿನಾಶಕಾರಿ ಸಾಮರ್ಥ್ಯವನ್ನು ಉಳಿಸಿಕೊಳ್ಳುವ ಭರವಸೆ ನೀಡುತ್ತದೆ. ಇದರಿಂದ ಯುದ್ಧಭೂಮಿ ಸಾಮರ್ಥ್ಯಗಳಲ್ಲಿ ಗಮನಾರ್ಹ ಮುನ್ನಡೆ ಸಾಧ್ಯವಾಗಲಿದೆ. ಆರ್ಟಿಲರಿಯ ಆಧುನೀಕರಣವು ಭಾರತೀಯ ಸೇನೆಗೆ ದೀರ್ಘಕಾಲದಿಂದಲೂ ಪ್ರಮುಖ ಆದ್ಯತೆ ಎನಿಸಿಕೊಂಡಿದೆ.
ಜಮ್ಮು-ಕಾಶ್ಮೀರದಿಂದ ಪಾಕ್, ಪಿಒಕೆಗೆ ವಲಸೆ ಹೋದ 300ಕ್ಕೂ ಹೆಚ್ಚು ಜನರ ಮೇಲೆ ನಿಗಾ
ಆಧುನಿಕ ಯುದ್ಧದ ಅಗತ್ಯಗಳನ್ನು ಪೂರೈಸುವ ಉದ್ದೇಶದಿಂದ ರಾಕೆಟ್‌ಗಳು ಮತ್ತು ಯುದ್ಧಸಾಮಾಗ್ರಿಗಳ ವ್ಯಾಪ್ತಿ ಹಾಗೂ ನಿಖರತೆಯನ್ನು ಹೆಚ್ಚಿಸುವತ್ತ ಗಮನಹರಿಸಲಾಗಿದೆ. ಸಾಂಪ್ರದಾಯಿಕ ಆರ್ಟಿಲರಿ ಶೆಲ್‌ಗಳು ಮಾರಕವಾಗಿದ್ದರೂ, ಮುಂದುವರಿದ ಕ್ಷಿಪಣಿ ವ್ಯವಸ್ಥೆಗಳೊಂದಿಗೆ ಹೋಲಿಸಿದರೆ ಅವುಗಳ ವ್ಯಾಪ್ತಿ ಮತ್ತು ನಿಖರತೆ ಸೀಮಿತವಾಗಿರುತ್ತದೆ.
ರಾಮ್‌ಜೆಟ್ ಚಾಲಿತ ಆರ್ಟಿಲರಿ ಶೆಲ್ ಕುರಿತಾದ ಮಾಹಿತಿ:
🚨𝐁𝐑𝐄𝐀𝐊𝐈𝐍𝐆 : The #IndianArmy is set to become the world’s first force to field ramjet-powered 155mm artillery shells, extending range by 30–50% without any loss of lethality. 🇮🇳🚀💥
— Tanmay Kulkarni 🇮🇳 (@Tanmaycoolkarni) January 2, 2026
The system can be retrofitted to existing ammunition and is under trials with IIT Madras. pic.twitter.com/3xBXrjyznY
155 ಮಿ.ಮೀ. ಶೆಲ್‌ಗಳಿಗೆ ರಾಮ್‌ಜೆಟ್ ತಂತ್ರಜ್ಞಾನವನ್ನು ಅಳವಡಿಸುವ ಮೂಲಕ, ಈ ಅಂತರವನ್ನು ಕಡಿಮೆ ಮಾಡಿ, ಹೆಚ್ಚಿನ ಪರಿಣಾಮಕಾರಿತ್ವದೊಂದಿಗೆ ಇನ್ನೂ ಆಳವಾದ ಗುರಿಗಳನ್ನು ಹೊಡೆಯುವ ಸಾಮರ್ಥ್ಯವನ್ನು ತನ್ನ ಘಟಕಗಳಿಗೆ ನೀಡುವುದೇ ಸೇನೆಯ ಉದ್ದೇಶ. ರಾಮ್‌ಜೆಟ್ ಪ್ರೊಪಲ್ಷನ್ ಹೊಸದಲ್ಲ, ಇದನ್ನು ದಶಕಗಳಿಂದ ಕ್ಷಿಪಣಿಗಳಲ್ಲಿ ಯಶಸ್ವಿಯಾಗಿ ಬಳಸಲಾಗುತ್ತಿದೆ. ಆದರೆ ಇದನ್ನು ಆರ್ಟಿಲರಿ ಶೆಲ್‌ಗಳಿಗೆ ಅನ್ವಯಿಸುವುದು ಹೊಸ ಕಲ್ಪನೆ.
ರಾಮ್‌ಜೆಟ್ ಎನ್ನುವುದು ಗಾಳಿಯನ್ನು ಬಳಸಿಕೊಂಡು ಕಾರ್ಯನಿರ್ವಹಿಸುವ ಎಂಜಿನ್ ಆಗಿದ್ದು, ಇದಕ್ಕೆ ಕಂಪ್ರೆಸರ್ ಅಥವಾ ಟರ್ಬೈನ್ ಅಗತ್ಯವಿಲ್ಲ. ಬದಲಾಗಿ, ಪ್ರಾಜೆಕ್ಟೈಲ್‌ನ ಮುಂದಿನ ಚಲನೆಯಿಂದಲೇ ಒಳಗೆ ಪ್ರವೇಶಿಸುವ ಗಾಳಿಯನ್ನು ಸಂಕುಚಿತಗೊಳಿಸಲಾಗುತ್ತದೆ. ಶೆಲ್ ಸುಮಾರು ಮ್ಯಾಕ್ 2 ಅಥವಾ ಧ್ವನಿಯ ಎರಡು ಪಟ್ಟು ವೇಗವನ್ನು ತಲುಪಿದ ನಂತರ ರಾಮ್‌ಜೆಟ್ ಕಾರ್ಯನಿರ್ವಹಿಸುತ್ತದೆ. ನಂತರ ಸಂಕುಚಿತ ಗಾಳಿಯಲ್ಲಿ ಇಂಧನವನ್ನು ದಹನಗೊಳಿಸಿ, ಇದರಿಂದ ಶೆಲ್‌ನ ಹಾರಾಟ ಮುಂದುವರಿದು ಅದರ ವ್ಯಾಪ್ತಿ ಇನ್ನಷ್ಟು ವಿಸ್ತರಿಸುತ್ತದೆ.
ಈ ಯೋಜನೆಯನ್ನು ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ) ಮದ್ರಾಸ್ ಮತ್ತು ಸೇನಾ ತಂತ್ರಜ್ಞಾನ ಮಂಡಳಿ (Army Technology Board–ATB)ಗಳ ಸಹಭಾಗಿತ್ವದಲ್ಲಿ ಮುನ್ನಡೆಸಲಾಗುತ್ತಿದೆ. ಅಭಿವೃದ್ಧಿ ಹಂತದ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ. ರಾಜಸ್ಥಾನದ ಪೋಖ್ರಾನ್ ಫೀಲ್ಡ್ ಫೈರಿಂಗ್ ರೇಂಜ್‌ಗಳಲ್ಲಿ ಈಗಾಗಲೇ ಯಶಸ್ವಿ ಪರೀಕ್ಷೆಗಳನ್ನು ನಡೆಸಲಾಗಿದೆ.