ಇದು ಭಾರತದ ಎಷ್ಟನೇ ಭಾನುವಾರದ ಬಜೆಟ್?, ಮೊದಲ ಬಜೆಟ್ ಮಂಡನೆ ಆಗಿದ್ದು ಯಾವಾಗ?
Union Budget 2026: ಬಜೆಟ್ ತಯಾರಿ ಪೂರ್ಣಗೊಂಡು, ಪ್ರತಿಗಳ ಮುದ್ರಣ ಆರಂಭದ ಸಂಕೇತವಾಗಿ ಹಲ್ವಾ ಸಮಾರಂಭ ಆಯೋಜಿಸಲಾಗುತ್ತದೆ. ಬಳಿಕ ಬಜೆಟ್ ತಯಾರಿಸಿದ ಅಧಿಕಾರಿಗಳು ಹೊರಜಗತ್ತಿನ ಸಂಪರ್ಕದಿಂದ ದೂರ ಇರುತ್ತಾರೆ. ಅಂತಿಮಗೊಂಡ ಬಜೆಟ್‌ಗೆ ವಿತ್ತಸಚಿವರು ಪ್ರಧಾನಿ ಮತ್ತು ಸಚಿವ ಸಂಪುಟದ ಒಪ್ಪಿಗೆ ಪಡೆಯುತ್ತಾರೆ. ಬಳಿಕ ರಾಷ್ಟ್ರಪತಿಗಳ ಸಹಿ ಬೀಳುತ್ತದೆ. ನಂತರ ಲೋಕಸಭೆಯಲ್ಲಿ ಮಂಡನೆಯಾಗುತ್ತದೆ.
sand sculpture -
ನವದೆಹಲಿ, ಫೆ.1: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಫೆ.1ರ ಭಾನುವಾರ ಬೆಳಗ್ಗೆ 11 ಗಂಟೆಗೆ ಕೇಂದ್ರ ಬಜೆಟ್(Union Budget 2026) ಮಂಡನೆಗೆ ಸಜ್ಜಾಗಿದ್ದಾರೆ. ಈ ಬಾರಿ ರಕ್ಷಣೆ, ಮೂಲಸೌಕರ್ಯ, ರಫ್ತು, ರೈಲ್ವೆ, ಇಂಧನ, ಅಗ್ಗದ ಮನೆಗಳಿಗೆ ನೆರವು, ಬಂಡವಾಳ ವೆಚ್ಚ ಏರಿಕೆಯತ್ತ ಸರ್ಕಾರ ಗಮನ ಹರಿಸುವ ಸಾಧ್ಯತೆ ಇದೆ. ನಿರ್ಮಲಾ ಸೀತಾರಾಮನ್ ಮಂಡಿಸುತ್ತಿರುವ ಸತತ 9ನೇ ಬಜೆಟ್ ಕೂಡಾ ಹೌದು. ಈ ಮೂಲಕ ಅತಿ ಬಜೆಟ್ ಮಂಡಿಸಿದ ಮಹಿಳಾ ಹಣಕಾಸು ಸಚಿವೆ ಎಂಬ ಹಿರಿಮೆ ಅವರಿಗೆ ಸಿಗಲಿದೆ. ಬಜೆಟ್ ಹೇಗೆ ಸಿದ್ಧವಾಗುತ್ತದೆ?, ಈ ಹಿಂದೆ ಭಾನುವಾರ ಬಜೆಟ್ ಮಂಡಿಸಲಾಗಿತ್ತೆ? ಎಂಬ ಕಿರು ಮಾಹಿತಿ ಇಲ್ಲಿದೆ.
ಭಾರತದ ಮೊದಲ ಬಜೆಟ್‌ಅನ್ನು ದೇಶದ ಪಥಮ ವಿತ್ತಸಚಿವರಾಗಿದ್ದ ಆರ್.ಕೆ. ಷಣ್ಮುಗಂ ಚೆಟ್ಟಿ ಅವರು 1947ರ ನ.26ರಂದು ಮಂಡಿಸಿದ್ದರು. ನಂತರದ ವರ್ಷಗಳಲ್ಲಿ ಬಜೆಟ್‌ಅನ್ನು ಫೆಬ್ರವರಿ ತಿಂಗಳ ಕೊನೆಯ ಕೆಲಸದ ದಿನದಂದು(ರಜೆ ಇರದಿದ್ದಲ್ಲಿ 28/29) ಮಂಡಿಸಲಾಗುತ್ತಿತ್ತು. ಆದರೆ ಅರುಣ್ ಜೇಟ್ಲಿ ಅವರು ಹಣಕಾಸು ಸಚಿವರಾಗಿದ್ದ 2017ನೇ ಇಸವಿಯಲ್ಲಿ ಈ ಬ್ರಿಟಿಷ್ ಪದ್ಧತಿಗೆ ವಿದಾಯ ಹೇಳಿ, ಬಜೆಟ್ ಮಂಡನೆಗೆ ಫೆ.1ಅನ್ನು ನಿಗದಿ ಮಾಡಲಾಯಿತು. ಅಂದಿನಿಂದ ಇಂದಿನವರೆಗೂ ಇದನ್ನೇ ಪಾಲಿಸಿಕೊಂಡು ಬರಲಾಗುತ್ತಿದೆ.
ಮೊದಲ ಬಾರಿ
ಬಜೆಟ್ ಭಾನುವಾರ ಮಂಡನೆ ಆಗುತ್ತಿರುವುದು ಸ್ವತಂತ್ರ ಭಾರತದ ಇತಿಹಾಸದಲ್ಲಿ ಇದೇ ಮೊದಲನೆಯ ಬಾರಿ ಆಗಿದೆ. 1999ರ ಫೆಬ್ರುವರಿ 28ರಂದು ಅಂದಿನ ಹಣಕಾಸು ಸಚಿವರಾಗಿದ್ದ ಯಶವಂತ ಸಿನ್ಹಾ ಅವರು ಬಜೆಟ್ ಮಂಡಿಸಬೇಕಿತ್ತು. ಆದರೆ, ಅಂದು ಭಾನುವಾರವಾದ್ದರಿಂದ, ಒಂದು ದಿನ ಮುಂಚಿತವಾಗಿ ಫೆಬ್ರುವರಿ 27ರಂದು ಅವರು ಬಜೆಟ್ ಮಂಡಿಸಿದ್ದರು.
Union Budget 2026: ಕೇಂದ್ರ ಬಜೆಟ್ ಪ್ರತಿ ವರ್ಷ ಫೆಬ್ರವರಿ 1ರಂದೇ ಏಕೆ ಮಂಡಿಸಲಾಗುತ್ತದೆ?
1999 ರ ಬಜೆಟ್ ಕೂಡ ಐತಿಹಾಸಿಕವಾಗಿತ್ತು ಏಕೆಂದರೆ ಅಲ್ಲಿಯವರೆಗೆ ಕೇಂದ್ರ ಬಜೆಟ್ ಅನ್ನು ಸಂಜೆ ಸುಮಾರು ಸಂಜೆ 5 ಗಂಟೆಗೆ ಮಂಡಿಸಲಾಗುತ್ತಿತ್ತು. ಲಂಡನ್‌ನ ಹಗಲಿನ ಸಮಯಕ್ಕೆ ಹೊಂದಿಕೆಯಾಗುವ ಘೋಷಣೆಗಳ ಸಮಯವನ್ನು ಉಪಯುಕ್ತವೆಂದು ಪರಿಗಣಿಸಲಾಗುತ್ತಿದ್ದ ಬ್ರಿಟಿಷ್ ವಸಾಹತುಶಾಹಿ ಪದ್ಧತಿಯಿಂದ ಇದು ಹಿಂದೆ ಸರಿದಿತ್ತು. ಸಿನ್ಹಾ ಅವರ ಪ್ರಸ್ತುತಿಯು ವೇಳಾಪಟ್ಟಿಯನ್ನು ಬೆಳಿಗ್ಗೆ 11 ಗಂಟೆಗೆ ಬದಲಾಯಿಸಿತು. ಅಂದಿನಿಂದ ಭಾರತದಲ್ಲಿ ಬಜೆಟ್ ಘೋಷಣೆಗಳಿಗೆ ಪ್ರಮಾಣಿತ ಸಮಯವಾಗಿದೆ.
ಬಜೆಟ್ ತಯಾರಿ ಹೇಗೆ?
ಬಜೆಟ್‌ನ ತಯಾರಿ ಸುಮಾರು 6 ತಿಂಗಳ(ಆಗಸ್ಟ್-ಸೆಪ್ಟೆಂಬರ್) ಹಿಂದಿನಿಂದಲೇ ಶುರುವಾಗಿರುತ್ತದೆ. ವಿತ್ತ ಸಚಿವಾಲಯವು ಎಲ್ಲಾ ಸಚಿವಾಲಯ, ರಾಜ್ಯ, ಕೇಂದ್ರಾಡಳಿತ ಪ್ರದೇಶ ಮತ್ತು ಸ್ವಾಯತ್ತ ಸಂಸ್ಥೆಗಳಿಂದ ಅವುಗಳ ವೆಚ್ಚದ ಅಂದಾಜು ಕೇಳಿ ಬಜೆಟ್ ಸುತ್ತೋಲೆ ಹೊರಡಿಸುತ್ತದೆ. ಆ ಬಳಿಕ ಎಲ್ಲಾ ಸಚಿವಾಲಯಗಳಿಂದ ಆದಾಯ, ಖರ್ಚುಗಳ ಅಂದಾಜನ್ನು ಸಲ್ಲಿಕೆ. ವಿತ್ತ ಸಚಿವಾಲಯದ ಆರ್ಥಿಕ ವ್ಯವಹಾರ ವಿಭಾಗ ಅದನ್ನು ಪರಿಶೀಲಿಸಿ ಸಭೆ ನಡೆಸಿ ಚರ್ಚಿಸುತ್ತದೆ.
ಮೂರನೇ ಹಂತದಲ್ಲಿ ಸಂಬಂಧಿತರ ಜತೆ ಹಣಕಾಸು ಸಚಿವಾಲಯ ಸಮಾಲೋಚನೆ ನಡೆಸುತ್ತದೆ. ಆದಾಯ ಅಂದಾಜುಗಳು ಅಂತಿಮಗೊಳ್ಳುತ್ತವೆ. ಆದಾಯ-ಖರ್ಚು ನಡುವಿನ ಅಂತರದ ಗುರಿ ನಿಗದಿ ಮಾಡಲಾಗುತ್ತದೆ. ಬಜೆಟ್ ತಯಾರಿ ಪೂರ್ಣಗೊಂಡು, ಪ್ರತಿಗಳ ಮುದ್ರಣ ಆರಂಭದ ಸಂಕೇತವಾಗಿ ಹಲ್ವಾ ಸಮಾರಂಭ ಆಯೋಜಿಸಲಾಗುತ್ತದೆ. ಬಳಿಕ ಬಜೆಟ್ ತಯಾರಿಸಿದ ಅಧಿಕಾರಿಗಳು ಹೊರಜಗತ್ತಿನ ಸಂಪರ್ಕದಿಂದ ದೂರ ಇರುತ್ತಾರೆ.
ಅಂತಿಮಗೊಂಡ ಬಜೆಟ್‌ಗೆ ವಿತ್ತಸಚಿವರು ಪ್ರಧಾನಿ ಮತ್ತು ಸಚಿವ ಸಂಪುಟದ ಒಪ್ಪಿಗೆ ಪಡೆಯುತ್ತಾರೆ. ಬಳಿಕ ರಾಷ್ಟ್ರಪತಿಗಳ ಸಹಿ ಬೀಳುತ್ತದೆ. ನಂತರ ಲೋಕಸಭೆಯಲ್ಲಿ ಮಂಡನೆಯಾಗುತ್ತದೆ.