ಎಲ್‌ಒಸಿ ದಾಟಿ ಅಕ್ರಮವಾಗಿ ಭಾರತದ ಗಡಿಯೊಳಗೆ ಪ್ರವೇಶಿಸಿದ ಪಾಕ್ ಪ್ರಜೆ ಬಂಧನ
ಜಮ್ಮು-ಕಾಶ್ಮೀರದ ಪೂಂಚ್ ಜಿಲ್ಲೆಯ ಬಾಲಾಕೋಟ್ ಸೆಕ್ಟರ್‌ನಲ್ಲಿ ಎಲ್‌ಒಸಿ ದಾಟಿ ಭಾರತಕ್ಕೆ ಅಕ್ರಮವಾಗಿ ಪ್ರವೇಶಿಸಿದ್ದ ಪಾಕಿಸ್ತಾನ ಮೂಲದ 31 ವರ್ಷದ ವ್ಯಕ್ತಿಯನ್ನು ಭಾರತೀಯ ಸೇನೆ ಬಂಧಿಸಿದೆ. ಈ ತಿಂಗಳಲ್ಲಿ ಪೂಂಚ್ ಜಿಲ್ಲೆಯಲ್ಲಿ ನಡೆದ ಮೂರನೇ ಗಡಿ ಉಲ್ಲಂಘನೆ ಇದಾಗಿದ್ದು, ಭದ್ರತಾ ಸಂಸ್ಥೆಗಳು ಆತನನ್ನು ವಿಚಾರಣೆಗೆ ಒಳಪಡಿಸಿವೆ.
ಬಂಧಿತ ರಯೀಸ್ ಖಾನ್ -
ಶ್ರೀನಗರ ಜೂನ್ 29: ಜಮ್ಮು-ಕಾಶ್ಮೀರದ (Jammu & Kashmir) ಪೂಂಚ್ (Poonch) ಜಿಲ್ಲೆಯ ಬಾಲಾಕೋಟ್ ಸೆಕ್ಟರ್‌ನಲ್ಲಿ ನಿಯಂತ್ರಣ ರೇಖೆ (Line of Control) ದಾಟಿ ಭಾರತಕ್ಕೆ ಅಕ್ರಮವಾಗಿ ಪ್ರವೇಶಿಸಿದ್ದ ಪಾಕಿಸ್ತಾನ ಮೂಲದ 31 ವರ್ಷದ ವ್ಯಕ್ತಿಯನ್ನು ಭಾರತೀಯ ಸೇನೆ (Indian Army) ಭಾನುವಾರ ಬಂಧಿಸಿದೆ. ಪೂಂಚ್ ಜಿಲ್ಲೆಯಲ್ಲಿ ಈ ತಿಂಗಳಲ್ಲಿ ನಡೆದ ಮೂರನೇ ಗಡಿ ಉಲ್ಲಂಘನೆ ಇದಾಗಿದ್ದು, ಗಡಿ ಭದ್ರತೆಯ ವ್ಯವಸ್ಥೆ ಕುರಿತು ಚರ್ಚೆ ಶುರುವಾಗಿದೆ.
ಬಂಧಿತನನ್ನು ರಯೀಸ್ ಖಾನ್ (31) ಎಂದು ಗುರುತಿಸಲಾಗಿದ್ದು, ಆತ ಪಾಕ್ ಆಕ್ರಮಿತ ಕಾಶ್ಮೀರದ (PoK) ಹವೇಲಿ ಜಿಲ್ಲೆಯ ಟೆಟ್ರಿನೋಟ್ ತಹಸೀಲಿನ ತರೋಟಿ ಗ್ರಾಮದ ನಿವಾಸಿಯಾಗಿದ್ದಾನೆ. ಗಡಿ ದಾಟಿ ಭಾರತೀಯ ಪ್ರದೇಶಕ್ಕೆ ಪ್ರವೇಶಿಸಿದ ಕೆಲವೇ ಕ್ಷಣಗಳಲ್ಲಿ ಸೇನಾ ಯೋಧರು ಆತನನ್ನು ವಶಕ್ಕೆ ಪಡೆದಿದ್ದಾರೆ.
ಅಧಿಕಾರಿಗಳ ಪ್ರಕಾರ, ಆರಂಭಿಕ ತಪಾಸಣೆಯಲ್ಲಿ ಆತನ ಬಳಿ ಯಾವುದೇ ಶಸ್ತ್ರಾಸ್ತ್ರ, ಸ್ಫೋಟಕ ಅಥವಾ ಅನುಮಾನಾಸ್ಪದ ವಸ್ತುಗಳು ಪತ್ತೆಯಾಗಿಲ್ಲ. ಆದಾಗ್ಯೂ, ಆತ ಯಾವ ಉದ್ದೇಶದಿಂದ ಭಾರತಕ್ಕೆ ನುಗ್ಗಿದ್ದ, ಯಾರೊಂದಿಗಾದರೂ ಸಂಪರ್ಕ ಸಾಧಿಸುವ ಯೋಜನೆ ಇತ್ತೇ ಅಥವಾ ಬೇರೆ ಯಾವುದೇ ಉದ್ದೇಶವಿತ್ತೇ ಎಂಬ ಕುರಿತು ಸೇನೆ, ಗುಪ್ತಚರ ಇಲಾಖೆ ಹಾಗೂ ಇತರ ಭದ್ರತಾ ಸಂಸ್ಥೆಗಳು ತೀವ್ರ ವಿಚಾರಣೆ ನಡೆಸುತ್ತಿವೆ.
ಈ ತಿಂಗಳಲ್ಲಿ ಮೂರನೇ ಗಡಿ ಉಲ್ಲಂಘನೆ
ಪೂಂಚ್ ಜಿಲ್ಲೆಯಲ್ಲಿ ಜೂನ್ ತಿಂಗಳಲ್ಲಿ ಇದು ಮೂರನೇ ಇಂತಹ ಘಟನೆ ಇದಾಗಿದ್ದು, ಜೂನ್ 27ರಂದು, ಪಾಕ್ ಆಕ್ರಮಿತ ಕಾಶ್ಮೀರದ ನಿವಾಸಿ ಮೊಹಮ್ಮದ್ ಸಜಾದ್ (26) ಅವರನ್ನು ಕೃಷ್ಣಾಘಾಟಿ ಸೆಕ್ಟರ್‌ನ ಗುಲ್ಪುರ್ ಪ್ರದೇಶದಲ್ಲಿ ಬಂಧಿಸಲಾಗಿತ್ತು.
ಜೂನ್ 9ರಂದು, 14 ವರ್ಷದ ಜಾವಿದ್ ಅಲಿ ಎಂಬ ಬಾಲಕ ಗಡಿ ದಾಟಿ ಭಾರತೀಯ ಪ್ರದೇಶಕ್ಕೆ ಬಂದಿದ್ದ. ವಿಚಾರಣೆ ಬಳಿಕ ಒಂದು ವಾರದ ನಂತರ ಮಾನವೀಯ ನೆಲೆಯಲ್ಲಿ ಆತನನ್ನು ಪಾಕಿಸ್ತಾನಕ್ಕೆ ಹಸ್ತಾಂತರಿಸಲಾಗಿತ್ತು.
ಸಾಂಬಾ ಗಡಿಯಲ್ಲಿ ಶಂಕಿತ ಪಾಕಿಸ್ತಾನಿ ಡ್ರೋನ್
ಇದೇ ವೇಳೆ, ಜಮ್ಮು-ಕಾಶ್ಮೀರದ ಸಾಂಬಾ ಜಿಲ್ಲೆಯ ಅಂತರರಾಷ್ಟ್ರೀಯ ಗಡಿ (IB) ಸಮೀಪದ ನುಂದ್‌ಪುರ ಗ್ರಾಮದ ಬಳಿ ಭಾನುವಾರ ಮುಂಜಾನೆ ಶಂಕಿತ ಪಾಕಿಸ್ತಾನಿ ಡ್ರೋನ್ ಕಾಣಿಸಿಕೊಂಡಿದೆ.
ಡ್ರೋನ್ ಪತ್ತೆಯಾದ ತಕ್ಷಣ ಬಿಎಸ್‌ಎಫ್ (BSF), ಭಾರತೀಯ ಸೇನೆ ಹಾಗೂ ಜಮ್ಮು-ಕಾಶ್ಮೀರ ಪೊಲೀಸರು ಜಂಟಿಯಾಗಿ ಶೋಧ ಕಾರ್ಯಾಚರಣೆ ಆರಂಭಿಸಿದ್ದಾರೆ. ಗಡಿಯಾಚೆಯಿಂದ ಶಸ್ತ್ರಾಸ್ತ್ರ, ಸ್ಫೋಟಕ ಅಥವಾ ಮಾದಕ ವಸ್ತುಗಳನ್ನು ಡ್ರೋನ್ ಮೂಲಕ ಎಸೆದಿರುವ ಸಾಧ್ಯತೆ ಹಿನ್ನೆಲೆಯಲ್ಲಿ ಪ್ರದೇಶವನ್ನು ತೀವ್ರವಾಗಿ ಶೋಧಿಸಲಾಗುತ್ತಿದೆ. ಇದುವರೆಗೆ ಯಾವುದೇ ಅನುಮಾನಾಸ್ಪದ ವಸ್ತು ಪತ್ತೆಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.