IND vs NZ: ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಗೂ ಮುನ್ನ ಭಾರತ ತಂಡಕ್ಕೆ ಆಘಾತ, ಪ್ರಸಿಧ್ ಕೃಷ್ಣ ಔಟ್!
ತೊಡೆಸ್ನಾಯುವಿನ ಗಾಯದಿಂದ ಚೇತರಿಸಿಕೊಳ್ಳುತ್ತಿರುವ ಪ್ರಸಿಧ್ ಕೃಷ್ಣ ನ್ಯೂಜಿಲೆಂಡ್ ವಿರುದ್ಧದ ಐದು ಪಂದ್ಯಗಳ ಏಕದಿನ ಸರಣಿಯಿಂದ ಹೊರಗುಳಿಯಲಿದ್ದಾರೆ. ಭಾರತ ಎ ತಂಡದ ಪರ ಉತ್ತಮ ಪ್ರದರ್ಶನ ನೀಡಿರುವ ಜಮ್ಮು ಮತ್ತು ಕಾಶ್ಮೀರದ ವೇಗಿ ಆಕಿಬ್ ನಬಿ, ಭಾರತ ತಂಡಕ್ಕೆ ಆಯ್ಕೆಯಾಗುವ ಸ್ಪರ್ಧೆಯಲ್ಲಿದ್ದಾರೆ.
ನ್ಯೂಜಿಲೆಂಡ್ ಏಕದಿನ ಸರಣಿಯಿಂದ ಪ್ರಸಿಧ್ ಕೃಷ್ಣ ಔಟ್. -
ನವದೆಹಲಿ: ಭಾರತ ತಂಡದ ವೇಗದ ಬೌಲರ್ ಪ್ರಸಿಧ್ ಕೃಷ್ಣ (Prasidh Krishna) ಅವರು ತೊಡೆಸ್ನಾಯುವಿನ ಗಾಯದಿಂದ ಸಂಪೂರ್ಣವಾಗಿ ಚೇತರಿಸಿಕೊಳ್ಳದ ಕಾರಣ ನ್ಯೂಜಿಲೆಂಡ್ ವಿರುದ್ಧದ ಮುಂಬರುವ ಐದು ಪಂದ್ಯಗಳ ಏಕದಿನ ಸರಣಿಯಿಂದ (IND vs NZ) ಹೊರಗುಳಿಯಲಿದ್ದಾರೆ. ನವೆಂಬರ್ 4ರಂದು ಆರಂಭವಾಗಲಿರುವ ಈ ಸರಣಿಗೆ ಕನ್ನಡಿಗ ಪ್ರಸಿಧ್ ಲಭ್ಯವಿರುವುದಿಲ್ಲ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಮೂಲವೊಂದು ಬುಧವಾರ ಪಿಟಿಐ ಸುದ್ದಿಸಂಸ್ಥೆಗೆ ತಿಳಿಸಿದೆ.
ಇನ್ನೊಂದೆಡೆ, ಭಾರತ ಎ ತಂಡದ ಪರ ಉತ್ತಮ ಪ್ರದರ್ಶನ ನೀಡಿರುವ ಜಮ್ಮು ಮತ್ತು ಕಾಶ್ಮೀರದ ವೇಗದ ಬೌಲರ್ ಆಕಿಬ್ ನಬಿ ಅವರು ಭಾರತ ತಂಡಕ್ಕೆ ಆಯ್ಕೆಯಾಗುವ ಸಾಧ್ಯತೆಗಳ ಬಗ್ಗೆ ಚರ್ಚೆ ಆರಂಭವಾಗಿದೆ. ಲಿಂಕನ್ನಲ್ಲಿ ಭಾರತ ಎ ಮತ್ತು ನ್ಯೂಜಿಲೆಂಡ್ ಎ ತಂಡಗಳ ನಡುವೆ ನಡೆದ ಮೊದಲ ಅನಧಿಕೃತ ರೆಡ್ ಬಾಲ್ ಪಂದ್ಯದಲ್ಲಿ ಆಕಿಬ್ ತಮ್ಮ ಬೌಲಿಂಗ್ನಲ್ಲಿ ಗಮನ ಸೆಳೆದಿದ್ದಾರೆ.
IND vs NZ: ಟಿ20ಐ ಸರಣಿಯ ಬಳಿಕ ದೇಶಿ ಕ್ರಿಕೆಟ್ಗೆ ಮರಳಲು ಸಿದ್ದ ಎಂದ ಭುವನೇಶ್ವರ್ ಕುಮಾರ್!
ಬೆಂಗಳೂರಿನಲ್ಲಿ ಫಿಟ್ನೆಸ್ ಪರೀಕ್ಷೆ
ಪ್ರಸಿಧ್ ಕೃಷ್ಣ ಗಾಯದಿಂದ ಚೇತರಿಸಿಕೊಳ್ಳುತ್ತಿದ್ದು, ಅವರ ಫಿಟ್ನೆಸ್ ಕುರಿತು ಅಂತಿಮ ನಿರ್ಧಾರ ಕೈಗೊಳ್ಳುವ ಮೊದಲು ಬೆಂಗಳೂರಿನ ಸೆಂಟರ್ ಆಫ್ ಎಕ್ಸಲೆನ್ಸ್ನಲ್ಲಿ ಪರೀಕ್ಷೆಗಳನ್ನು ನಡೆಸಲು ನಿರ್ಧರಿಸಲಾಗಿದೆ. ನವೆಂಬರ್ 1 ಮತ್ತು 2ರಂದು ಅವರು ಪಂದ್ಯ ಸನ್ನಿವೇಶದ ಅಭ್ಯಾಸ (ಮ್ಯಾಚ್ ಸಿಮ್ಯುಲೇಷನ್) ಹಾಗೂ ಫಿಟ್ನೆಸ್ ಪರೀಕ್ಷೆಗೆ ಒಳಗಾಗಲಿದ್ದಾರೆ.
ಈ ಕುರಿತು ಬಿಸಿಸಿಐ ಮೂಲವೊಂದು, “ಪ್ರಸಿಧ್ ಉತ್ತಮವಾಗಿ ಚೇತರಿಸಿಕೊಳ್ಳುತ್ತಿದ್ದಾರೆ. ನವೆಂಬರ್ 1 ಮತ್ತು 2ರಂದು ಬೆಂಗಳೂರಿನ ಸೆಂಟರ್ ಆಫ್ ಎಕ್ಸಲೆನ್ಸ್ನಲ್ಲಿ ಅವರಿಗೆ ಪಂದ್ಯಸನ್ನಿವೇಶದ ಅಭ್ಯಾಸ ಮತ್ತು ಫಿಟ್ನೆಸ್ ಪರೀಕ್ಷೆ ನಿಗದಿಯಾಗಿದೆ,” ಎಂದು ತಿಳಿಸಿದೆ.
ಈ ಪರೀಕ್ಷೆಗಳ ಮೂಲಕ ಪ್ರಸಿಧ್ ಕೃಷ್ಣ ಅವರ ದೈಹಿಕ ಸಾಮರ್ಥ್ಯ ಮತ್ತು ಪಂದ್ಯಗಳಿಗೆ ಮರಳಲು ಅವರು ಎಷ್ಟು ಸಿದ್ಧರಾಗಿದ್ದಾರೆ ಎಂಬುದನ್ನು ಪರಿಶೀಲಿಸಲಾಗುತ್ತದೆ. ಆದರೆ, ಅವರು ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ಆಡುವ ಸಾಧ್ಯತೆ ಇಲ್ಲ ಎನ್ನಲಾಗಿದೆ.
ಟೆಸ್ಟ್ ಸರಣಿಗೆ ಪ್ರಸಿಧ್ ಮೇಲೆ ಹೆಚ್ಚಿನ ನಿರೀಕ್ಷೆ
ಪ್ರಸಿಧ್ ಕೃಷ್ಣ ಅವರನ್ನು ಏಕದಿನ ಪಂದ್ಯಗಳಿಗಿಂತ ಟೆಸ್ಟ್ ಕ್ರಿಕೆಟ್ಗೆ ಹೆಚ್ಚು ಅಗತ್ಯವಿರುವ ಆಟಗಾರ ಎಂದು ತಂಡದ ಆಡಳಿತ ಮಂಡಳಿ ಮತ್ತು ರಾಷ್ಟ್ರೀಯ ಆಯ್ಕೆ ಸಮಿತಿ ಪರಿಗಣಿಸಿದೆ. ಹೀಗಾಗಿ, ಗಾಯದಿಂದ ಸಂಪೂರ್ಣವಾಗಿ ಚೇತರಿಸಿಕೊಂಡ ಬಳಿಕ ಅವರು ಟೆಸ್ಟ್ ಪಂದ್ಯಗಳಿಗೆ ಸಿದ್ಧರಾಗುವಂತೆ ನೋಡಿಕೊಳ್ಳುವುದು ತಂಡದ ಪ್ರಮುಖ ಉದ್ದೇಶವಾಗಿದೆ.
“ಯಾವುದೇ ಸಂದರ್ಭದಲ್ಲಿ, ಪ್ರಸಿಧ್ ಟೆಸ್ಟ್ ಪಂದ್ಯಗಳಿಗೆ ಸಂಪೂರ್ಣವಾಗಿ ಸಿದ್ಧರಾಗಿರಬೇಕು ಎಂಬುದು ತಂಡದ ಆಡಳಿತ ಮಂಡಳಿ ಮತ್ತು ರಾಷ್ಟ್ರೀಯ ಆಯ್ಕೆ ಸಮಿತಿಯ ಅಭಿಪ್ರಾಯವಾಗಿದೆ. ಏಕದಿನ ಪಂದ್ಯಗಳಿಗಿಂತ ಟೆಸ್ಟ್ ಕ್ರಿಕೆಟ್ನಲ್ಲಿ ಅವರ ಅಗತ್ಯ ಹೆಚ್ಚು ಇದೆ,” ಎಂದು ಬಿಸಿಸಿಐ ಮೂಲ ತಿಳಿಸಿದೆ.
ICC T20I rankings: ಅಗ್ರ ಸ್ಥಾನಕ್ಕೆ ಮರಳಿದ ಅಭಿಷೇಕ್ ಶರ್ಮಾ, ಕುಸಿದ ಶ್ರೇಯಸ್ ಅಯ್ಯರ್!
ನ್ಯೂಜಿಲೆಂಡ್ ವಿರುದ್ಧದ ಮೊದಲ ಮೂರು ಏಕದಿನ ಪಂದ್ಯಗಳಿಗೆ ಭಾರತ ತಂಡ
ಶುಭಮನ್ ಗಿಲ್ (ನಾಯಕ), ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್ (ಉಪನಾಯಕ), ಕೆ.ಎಲ್. ರಾಹುಲ್ (ವಿಕೆಟ್ಕೀಪರ್), ನಿತೀಶ್ ಕುಮಾರ್ ರೆಡ್ಡಿ, ಅಕ್ಷರ್ ಪಟೇಲ್, ನಮನ್ ಧೀರ್, ಅಂಶುಲ್ ಕಾಂಬೋಜ್, ಗುರ್ನೂರ್ ಬ್ರಾರ್, ಋತುರಾಜ್ ಗಾಯಕ್ವಾಡ್, ಅರ್ಷದೀಪ್ ಸಿಂಗ್, ಇಶಾನ್ ಕಿಶನ್ (ವಿಕೆಟ್ಕೀಪರ್), ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ*, ಕುಲ್ದೀಪ್ ಯಾದವ್
ನಾಲ್ಕನೇ ಮತ್ತು ಐದನೇ ಏಕದಿನ ಪಂದ್ಯಗಳಿಗೆ ಭಾರತ ತಂಡ
ಶ್ರೇಯಸ್ ಅಯ್ಯರ್ (ನಾಯಕ), ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ತಿಲಕ್ ವರ್ಮಾ, ಇಶಾನ್ ಕಿಶನ್ (ವಿಕೆಟ್ಕೀಪರ್, ಉಪನಾಯಕ), ನಿತೀಶ್ ಕುಮಾರ್ ರೆಡ್ಡಿ, ಅಕ್ಷರ್ ಪಟೇಲ್, ನಮನ್ ಧೀರ್, ಔಕಿಬ್ ನಬಿ, ಗುರ್ನೂರ್ ಬ್ರಾರ್, ಋತುರಾಜ್ ಗಾಯಕ್ವಾಡ್, ಅರ್ಷದೀಪ್ ಸಿಂಗ್, ಕುಮಾರ್ ಕುಶಾಗ್ರ (ವಿಕೆಟ್ಕೀಪರ್), ಮೊಹಮ್ಮದ್ ಸಿರಾಜ್, ಯಶ್ ಠಾಕೂರ್, ಕುಲ್ದೀಪ್ ಯಾದವ್