ದೆಹಲಿ ಆತ್ಮಹತ್ಯಾ ಬಾಂಬ್ ದಾಳಿಗೂ ಮುನ್ನ ಜಮ್ಮು-ಕಾಶ್ಮೀರದಲ್ಲಿ ಸ್ಫೋಟಕಗಳ ಪರೀಕ್ಷೆ; ತನಿಖೆ ವೇಳೆ ಬಯಲಾಯ್ತು ಸತ್ಯ
ದೆಹಲಿಯ ಕೆಂಪು ಕೋಟೆ ಬಳಿಯ ಆತ್ಮಹತ್ಯಾ ಬಾಂಬ್ ದಾಳಿಗೆ ಮುನ್ನ ಜಮ್ಮು-ಕಾಶ್ಮೀರದಲ್ಲಿ ಸ್ಫೋಟಕಗಳನ್ನು ಪರೀಕ್ಷೆ ನಡೆಸಲಾಗಿತ್ತು ಎಂದು ಪ್ರಕರಣದ ತನಿಖೆ ನಡೆಸುತ್ತಿರುವ ಎನ್ಐಎ ಅಧಿಕಾರಿಗಳು ತಿಳಿಸಿದ್ದಾರೆ. ಆರೋಪಿ ಡಾ. ಉಮರ್ ಉನ್ ನಬಿ ಮಟ್ಟನ್ ಪ್ರದೇಶದಲ್ಲಿ ಸ್ಫೋಟಕಗಳ ಪರೀಕ್ಷೆ ನಡೆಸಿದ್ದ ಎನ್ನಲಾಗಿದೆ.
ದೆಹಲಿ ಸ್ಫೋಟ (ಸಂಗ್ರಹ ಚಿತ್ರ) -
ದೆಹಲಿ, ಡಿ. 9: ಕೆಂಪು ಕೋಟೆ ಸ್ಫೋಟ (Delhi Red Fort Blast) ಪ್ರಕರಣಕ್ಕೆ ಸಂಬಂಧಿಸಿದಂತೆ ಜಮ್ಮು-ಕಾಶ್ಮೀರದ (Jammu-Kashmir) ಅನಂತನಾಗ್ ಜಿಲ್ಲೆಯ ಮಟ್ಟನ್ ಅರಣ್ಯ ಪ್ರದೇಶದಲ್ಲಿ ಎನ್ಐಎ (NIA) ತನಿಖಾಧಿಕಾರಿಗಳು ಶೋಧ ಕಾರ್ಯಾಚರಣೆ ನಡೆಸಿದರು. ಪ್ರಕರಣದ ಮುಖ್ಯ ಆರೋಪಿ ಡಾ. ಉಮರ್ ಉನ್ ನಬಿ (Umar Un Nabi) ರಾಜಧಾನಿಯಲ್ಲಿ ದೊಡ್ಡ ಸ್ಫೋಟಕ ದಾಳಿಗೆ ತಯಾರಿ ನಡೆಸುವ ವೇಳೆ, ಇದೇ ಪ್ರದೇಶದಲ್ಲಿ ಸ್ಫೋಟಕಗಳ ಪರೀಕ್ಷೆ ನಡೆಸಿದ್ದಾನೆ ಎಂಬ ಮಾಹಿತಿ ತನಿಖಾಧಿಕಾರಿಗಳಿಗೆ ಲಭ್ಯವಾದ ನಂತರ ಈ ಶೋಧ ನಡೆಸಲಾಗಿದೆ.
ಜಮ್ಮು ಮತ್ತು ಕಾಶ್ಮೀರ ಪೊಲೀಸರು ಮತ್ತು ಸಿಆರ್‌ಪಿಎಫ್ ಸಿಬ್ಬಂದಿಯ ಸಹಾಯದಿಂದ ಎನ್‌ಐಎ ತಂಡಗಳು ಆರೋಪಿಗಳಾದ ಡಾ. ಅದಿಲ್ ರಾಥರ್ ಮತ್ತು ಜಾಸಿರ್ ಬಿಲಾಲ್ ವಾನಿ ಅವರನ್ನು ಮಟ್ಟನ್ ಕಾಡಿಗೆ ಕರೆದೊಯ್ದು ಸ್ಫೋಟಕಗಳ ವಿಚಾರಣೆಗೆ ಬಳಸಲಾದ ಸ್ಥಳಗಳನ್ನು ಮರು ಸೃಷ್ಟಿಸಲು ಮತ್ತು ಗುರುತಿಸಲು ಸಹಾಯ ಮಾಡಿದವು.
109 ಬಾಕ್ಸ್ ಸ್ಫೋಟಕಗಳಿದ್ದ ಟ್ರಕ್ ವಶಕ್ಕೆ; ದೆಹಲಿ ದಾಳಿಯಂತೆ ಸ್ಫೋಟ ನಡೆಸಲು ಇತ್ತಾ ಪ್ಲಾನ್?
ತನಿಖಾಧಿಕಾರಿಗಳು ಒಂದು ಸ್ಥಳದಲ್ಲಿ ಹಾನಿಗೊಳಗಾದ ಗ್ಯಾಸ್ ಸಿಲಿಂಡರ್ ಸೇರಿದಂತೆ ಸ್ಫೋಟಕ್ಕೆ ಸಂಬಂಧಿಸಿದಂತಹ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಕೆಂಪು ಕೋಟೆಯ ಕಾರು ಬಾಂಬ್ ದಾಳಿಗೆ ಸಂಬಂಧಿಸಿದಂತೆ ವೈಟ್-ಕಾಲರ್ ಭಯೋತ್ಪಾದಕ ಮಾಡ್ಯುಲ್ ಬಗ್ಗೆ ವ್ಯಾಪಕ ತನಿಖೆಯ ಭಾಗವಾಗಿ ಈ ಶೋಧ ಕಾರ್ಯಾಚರಣೆಯನ್ನು ನಡೆಸಲಾಗುತ್ತಿದೆ.
ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ಪರೀಕ್ಷೆಯು ದೆಹಲಿಯಲ್ಲಿ ದಾಳಿಯನ್ನು ಸಂಪೂರ್ಣವಾಗಿ ಪೂರ್ವ ನಿಯೋಜಿತವಾಗಿ ನಡೆಸಲಾಗಿಲ್ಲ. ಬದಲಾಗಿ ಬೇರೆಡೆ ಕ್ಷೇತ್ರ ಪ್ರಯೋಗಗಳು ಮತ್ತು ಪ್ರಯೋಗಾಲಯದ ಕೆಲಸಗಳಿಂದ ನಡೆಸಲಾಗಿತ್ತು ಎಂಬುದನ್ನು ಸೂಚಿಸುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ನವೆಂಬರ್ 10ರ ಸಂಜೆ ಕೆಂಪು ಕೋಟೆ ಬಳಿ ಸ್ಫೋಟಗೊಂಡು, 12ಕ್ಕೂ ಹೆಚ್ಚು ಜನರು ಮೃತಪಟ್ಟು, 20ಕ್ಕೂ ಹೆಚ್ಚು ಜನರು ಗಾಯಗೊಂಡ ಸ್ಫೋಟಕ ತುಂಬಿದ ಬಿಳಿ ಹುಂಡೈ i20 ಕಾರನ್ನು ಪುಲ್ವಾಮಾ ಜಿಲ್ಲೆಯ ವೈದ್ಯ ಡಾ. ಉಮರ್ ನಬಿ ಚಾಲನೆ ಮಾಡುತ್ತಿದ್ದ ಎಂದು ವಿಧಿವಿಜ್ಞಾನ ಸಾಕ್ಷ್ಯಗಳು ದೃಢಪಡಿಸಿವೆ. ತನಿಖಾಧಿಕಾರಿಗಳು ಈ ಸ್ಫೋಟವನ್ನು ವಾಹನಗಳಿಂದ ಸಾಗಿಸಲಾದ ಸುಧಾರಿತ ಸ್ಫೋಟಕ ಸಾಧನ (VBIED) ದಾಳಿ ಎಂದು ಹೇಳಿದ್ದಾರೆ.
ನೆಟ್‌ವರ್ಕ್, ಲಾಜಿಸ್ಟಿಕ್ಸ್ ಮತ್ತು ನಿಧಿಸಂಗ್ರಹಣೆ ಪತ್ತೆ
ತನಿಖೆ ವೇಳೆ ವೈಟ್-ಕಾಲರ್ ಟೆರರ್ ಮಾಡ್ಯೂಲ್ ಎಂದು ಕರೆಯುವ ದುಷ್ಕೃತ್ಯ ಎಂದು ತಿಳಿದು ಬಂದಿದೆ. ಇದರಲ್ಲಿ ಹಲವು ವೈದ್ಯರು, ಲಾಜಿಸ್ಟಿಕ್ ಆಪರೇಟಿವ್‌ಗಳು ಮತ್ತು ಫೆಸಿಲಿಟೇಟರ್‌ಗಳು ಭಾಗಿಯಾಗಿದ್ದಾರೆಂದು ಆರೋಪಿಸಲಾಗಿದೆ. ದಾಳಿಯಲ್ಲಿ ಬಳಸಲಾದ i20 ಕಾರನ್ನು ಖರೀದಿಸಲು ಅನುಕೂಲ ಮಾಡಿಕೊಟ್ಟಿದ್ದಕ್ಕಾಗಿ ಮತ್ತು ಲಾಜಿಸ್ಟಿಕಲ್ ಬೆಂಬಲವನ್ನು ಒದಗಿಸಿದ್ದಕ್ಕಾಗಿ ಪ್ಯಾಂಪೋರ್‌ನ ಅಮೀರ್ ರಶೀದ್ ಅಲಿ ಎಂಬ ಶಂಕಿತನನ್ನು ಬಂಧಿಸಲಾಗಿದೆ. ವಶಪಡಿಸಿಕೊಂಡ ವಸ್ತುಗಳಲ್ಲಿ ಫರಿದಾಬಾದ್‌ನ ಗೋದಾಮಿನಿಂದ 2,900 ಕೆಜಿಗೂ ಹೆಚ್ಚು ಸ್ಫೋಟಕಗಳು ಪತ್ತೆಯಾಗಿವೆ.
ಫರಿದಾಬಾದ್ ಅಲ್ ಪಲಾಹ್ ವಿವಿ ಪಕ್ಕದ ಮದ್ರಸಾಕ್ಕೂ ವ್ಯಾಪಿಸಿದ ದೆಹಲಿ ಬಾಂಬ್ ಸ್ಫೋಟದ ತನಿಖೆ
ಆರೋಪಿಗಳು ಜಮ್ಮು ಮತ್ತು ಕಾಶ್ಮೀರದ ಒಳಗೆ ಮತ್ತು ಹೊರಗೆ ಕಾರ್ಯಾಚರಣೆ ನಡೆಸುವ ಪ್ಲ್ಯಾನಿಂಗ್‌ನ ಭಾಗವಾಗಿ ರಾಸಾಯನಿಕಗಳು, ಸಾಮಗ್ರಿಗಳು ಮತ್ತು ಹಣವನ್ನು ಒಟ್ಟುಗೂಡಿಸಲು ವಾರಗಟ್ಟಲೆ ಸಮಯ ಕಳೆದಿದ್ದಾರೆ ಎಂಬುದು ತನಿಖೆ ವೇಳೆ ತಿಳಿದುಬಂದಿದೆ. ಆರೋಪಿಗಳಿಗೆ ಸೇರಿದ ಹಲವು ವಾಹನಗಳನ್ನು ಎನ್‌ಐಎ ವಶಪಡಿಸಿಕೊಂಡಿದೆ. ದಾಖಲೆಗಳು ಮತ್ತು ಸಂದೇಶಗಳನ್ನು ಪರಿಶೀಲಿಸಿದೆ. ಇಲ್ಲಿಯವರೆಗೆ 73 ಸಾಕ್ಷಿಗಳನ್ನು ಪ್ರಶ್ನಿಸಲಾಗಿದೆ ಹಾಗೂ ಜಮ್ಮು ಮತ್ತು ಕಾಶ್ಮೀರ, ಫರಿದಾಬಾದ್ (ಹರಿಯಾಣ), ಉತ್ತರ ಪ್ರದೇಶ ಮತ್ತು ಇತರ ಸ್ಥಳಗಳಲ್ಲಿ ಶೋಧ ಕಾರ್ಯ ನಡೆಯುತ್ತಿದೆ.
ಆರೋಪಿಗಳು ಅರಣ್ಯ ಪ್ರದೇಶದಲ್ಲಿ ಸ್ಫೋಟಕ ಪ್ರಯೋಗ ನಡೆಸಿರುವುದು ಆತಂಕಕಾರಿ. ಸ್ಫೋಟವು ಒಂದು ಕ್ಷಿಪ್ರ ಭಯೋತ್ಪಾದಕ ಕೃತ್ಯವಲ್ಲ, ಬದಲಾಗಿ ಎಚ್ಚರಿಕೆಯಿಂದ ಯೋಜಿಸಲಾದ, ಪೂರ್ವ-ಪರೀಕ್ಷಿತ ಕಾರ್ಯಾಚರಣೆ. ತನಿಖೆ ಇನ್ನೂ ಸಕ್ರಿಯವಾಗಿದೆ ಎಂದು NIA ತಿಳಿಸಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಮಾಹಿತಿ ತಿಳಿದುಬರಲಿದೆ ಎಂದು ಮೂಲಗಳು ತಿಳಿಸಿವೆ.