ಕೋಲ್ಕತ್ತಾ ಕಾಲ್ತುಳಿತ: ಮೃತರ ಅಂಗಾಂಗ ಛಿದ್ರ, ಉಸಿರುಗಟ್ಟಿ ಸಾವು; ಮರಣೋತ್ತರ ಪರೀಕ್ಷಾ ವರದಿಯಲ್ಲಿದೆ ಬೆಚ್ಚಿಬೀಳಿಸುವ ಅಂಶ
Kolkata Stampede: ಕೋಲ್ಕತ್ತಾದ ಚೋರ್ಬಗಾನ್ ದುರ್ಗಾ ಪೂಜಾ ಪೆಂಡಾಲ್ ನಲ್ಲಿ ಅಕ್ಟೋಬರ್ 17ರಂದು ನಡೆದ ಕಾಲ್ತುಳಿತ ಪ್ರಕರಣದಲ್ಲಿ ಸಾವನ್ನಪ್ಪಿದವರ ಶವ ಪರೀಕ್ಷೆ ವರದಿ ಬಹಿರಂಗವಾಗಿದೆ. ಇದರಲ್ಲಿ ಮೃತರ ಅಂಗಗಳು ಛಿದ್ರಗೊಂಡಿದ್ದು, ಹೆಚ್ಚಿನವರು ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ. ಕಾಲ್ತುಳಿತದಲ್ಲಿ 19 ಜನರು ಮೃತಪಟ್ಟಿದ್ದರು.
ಸಂಗ್ರಹ ಚಿತ್ರ -
ಕೋಲ್ಕತ್ತಾ: ದುರ್ಗಾ ಪೂಜಾ (durga puja) ಸ್ಥಳದಲ್ಲಿ ಕಾಲ್ತುಳಿತ (Chorbagan Durga Puja stampede) ಉಂಟಾಗಿ 19 ಮಂದಿ ಸಾವನ್ನಪ್ಪಿದ್ದು, 25 ಮಂದಿ ಗಾಯಗೊಂಡ ಘಟನೆ ಅಕ್ಟೋಬರ್ 17ರಂದು ಶನಿವಾರ ಕೋಲ್ಕತ್ತಾದ (Kolkata stampede) ಚೋರ್ಬಗಾನ್ ನಲ್ಲಿ ನಡೆದಿತ್ತು. ಇದರಲ್ಲಿ ಮೃತಪಟ್ಟವರ ಶವ ಪರೀಕ್ಷೆ ವರದಿ ಬಹಿರಂಗವಾಗಿವೆ. ಮೃತರಲ್ಲಿ ಅನೇಕರಿಗೆ ತೀವ್ರವಾದ ಆಂತರಿಕ ಗಾಯ, ರಕ್ತಸ್ರಾವ ಮತ್ತು ಅಂಗಾಂಗ ಹಾನಿಯುಂಟಾಗಿದೆ. ಹೆಚ್ಚಿನವರು ಉಸಿರುಗಟ್ಟಿ ಮೃತಪಟ್ಟಿದ್ದಾರೆ.
ಗಿರೀಶ್ ಪಾರ್ಕ್ ಪೊಲೀಸ್ ಠಾಣೆ ವ್ಯಾಪ್ತಿಯ ಶಾರದಾ ಪಾರ್ಕ್ನ ಚೋರ್ ಬಗಾನ್ ದುರ್ಗಾ ಪೆಂಡಾಲ್ನಲ್ಲಿ ಶನಿವಾರ ಸಂಜೆ 7.40ರ ಭಾರಿ ಮಳೆ ಸುರಿದಿದೆ. ಈ ಸಂದರ್ಭದಲ್ಲಿ ಪೆಂಡಾಲ್ ನಲ್ಲಿ ಹೆಚ್ಚಿನ ಜನರು ಸೇರಿದ್ದರಿಂದ ಜನರು ಹೊರಗೋಡಲು ಮುಗಿಬಿದ್ದಿದ್ದಾರೆ. ಈ ವೇಳೆ ನೂಕುನುಗ್ಗಲು ಉಂಟಾಗಿ ಕಾಲ್ತುಳಿತ ಸಂಭವಿಸಿತ್ತು.
ಇಮ್ರಾನ್ ಖಾನ್ಗೆ ಭಾರತ ತೊರೆಯುವಂತೆ ಪೊಲೀಸ್ ನೋಟಿಸ್: ಅ.26ರಂದು ಬಾಂಬೆ ಹೈಕೋರ್ಟ್ನಲ್ಲಿ ವಿಚಾರಣೆ
ಕಾಲ್ತುಳಿತದಲ್ಲಿ 19 ಜನರಲ್ಲಿ ಹೆಚ್ಚಿನವರ ಸಾವಿಗೆ ಎದೆಯ ಸಂಕೋಚನದಿಂದ ಉಂಟಾದ ಆಘಾತಕಾರಿ ಉಸಿರುಕಟ್ಟುವಿಕೆ ಕಾರಣವಾಗಿದೆ. ಮೃತರಲ್ಲಿ ಕನಿಷ್ಠ ಆರು ಪ್ರಕರಣಗಳಲ್ಲಿ ಪಕ್ಕೆಲುಬುಗಳು ಮುರಿದು ಬಲಿಪಶುಗಳ ಶ್ವಾಸಕೋಶವನ್ನು ಚುಚ್ಚಿತ್ತು. ಎದೆಯ ಮೇಲಿನ ಭಾರೀ ಮತ್ತು ನಿರಂತರ ಒತ್ತಡದಿಂದ ಅವರಿಗೆ ಉಸಿರಾಡಲು ಕಷ್ಟವಾಯಿತು ಎಂದು ಪ್ರಾಥಮಿಕ ಮರಣೋತ್ತರ ಪರೀಕ್ಷೆ ವರದಿಗಳು ತಿಳಿಸಿವೆ.
ಕೆಲವರಲ್ಲಿ ಆಂತರಿಕ ರಕ್ತಸ್ರಾವ ಉಂಟಾಗಿದೆ. ಶ್ವಾಸಕೋಶ, ಹೊಟ್ಟೆ, ಯಕೃತ್ತು ಮತ್ತು ಮೇದೋಜ್ಜೀರಕ ಗ್ರಂಥಿ ಸೇರಿದಂತೆ ಅಂಗಗಳು ಛಿದ್ರಗೊಂಡಿವೆ. ಕೆಲವರ ತಲೆಗೆ ಹಾನಿಯಾಗಿವೆ. ಮೃತರಲ್ಲಿ ಏಳು ಮಂದಿ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದರು. ಅವರ ಅಂಗಾಂಗಗಳಿಗೆ ಗಾಯಗಳಾಗಿದ್ದವು. ಜನಸಂದಣಿಯಲ್ಲಿ ತೀವ್ರವಾದ ಒತ್ತಡದಿಂದಾಗಿ ಇದು ಉಂಟಾಗಿದೆ ಎಂದು ಶವ ಪರೀಕ್ಷೆಯ ವರದಿಯಲ್ಲಿ ಹೇಳಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈಗ ಬಹಿರಂಗಗೊಂಡಿರುವ ಶವ ಪರೀಕ್ಷೆ ವರದಿಗಳು ಪ್ರಾಥಮಿಕ ತನಿಖೆಯ ಮಾಹಿತಿಯಾಗಿದೆ. ಅಂತಿಮ ಮರಣೋತ್ತರ ಪರೀಕ್ಷೆಯ ವರದಿಗಳು ಬಿಡುಗಡೆಯಾದ ಅನಂತರವೇ ಸಾವಿಗೆ ನಿಖರ ಕಾರಣ ತಿಳಿದುಬರಲಿದೆ ಎಂದು ಹೇಳಿದ್ದಾರೆ.
ಕಾಲ್ತುಳಿತದಲ್ಲಿ ಸಾವನ್ನಪ್ಪಿರುವ 18 ಮಂದಿಯ ಮರಣೋತ್ತರ ಪರೀಕ್ಷೆಗಳನ್ನು ಕಲ್ಕತ್ತಾ ರಾಷ್ಟ್ರೀಯ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ನಡೆಸಲಾಯಿತು. ಇನ್ನೊಬ್ಬರ ಮರಣೋತ್ತರ ಪರೀಕ್ಷೆಯನ್ನು ನೀಲ್ ರತನ್ ಸಿರ್ಕಾರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ನಡೆಸಲಾಯಿತು ಎಂದು ಅವರು ತಿಳಿಸಿದರು.
ಜಂತರ್ ಮಂತರ್ ಪ್ರತಿಭಟನೆ: CJP ನಾಯಕರಾದ ಆಶುತೋಷ್ ರಂಕಾ, ಸೌರವ್ ದಾಸ್ ನ್ಯಾಯಾಂಗ ಬಂಧನ 2 ದಿನ ವಿಸ್ತರಣೆ
ಭಾರೀ ಮಳೆಯಿಂದಾಗಿ ದುರ್ಗಾ ಪೂಜಾ ಪೆಂಡಲ್ ಒಳಗೆ ಜನರು ತುಂಬಿಕೊಂಡು ನೂಕು ನುಗ್ಗಲು ಉಂಟಾಗಿದೆ. ಪ್ರವೇಶ ದ್ವಾರ ಕಿರಿದಾಗಿದ್ದರಿಂದ ಕಾಲ್ತುಳಿತ ಉಂಟಾಗಿದೆ. ಘಟನೆಗೆ ಸಂಬಂಧಿಸಿ ಪೂಜಾ ಆಯೋಜಕ ಸಮಿತಿಯ ಕಾರ್ಯದರ್ಶಿ ಮತ್ತು ಉಪಾಧ್ಯಕ್ಷರು ಸೇರಿದಂತೆ ಏಳು ಮಂದಿಯನ್ನು ಬಂಧಿಸಲಾಗಿದೆ.