Operation Sindoor: ಪಹಲ್ಗಾಮ್ ಹತ್ಯಾಕಾಂಡದಲ್ಲಿ ಪತಿಯನ್ನು ಕಳೆದುಕೊಂಡ ಮಹಿಳೆಯರು ಆಪರೇಷನ್ ಸಿಂಧೂರ್ ಬಗ್ಗೆ ಹೇಳಿದ್ದೇನು?
Operation Sindoor: ಭಾರತವು ಇಂದು ಬೆಳಗ್ಗೆ ಆಪರೇಷನ್ ಸಿಂಧೂರ್ ಆರಂಭಿಸಿ, ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಕನಿಷ್ಠ ಒಂಬತ್ತು "ಭಯೋತ್ಪಾದಕ ಮೂಲಸೌಕರ್ಯ" ಕೇಂದ್ರಗಳ ಮೇಲೆ ದಾಳಿ ನಡೆಸಿದೆ. ಈ ಕಾರ್ಯಾಚರಣೆಗೆ 'ಸಿಂಧೂರ್’ ಎಂದು ಹೆಸರಿಡಲಾಗಿದ್ದು, ಇದು ಹಿಂದೂ ವಿವಾಹಿತ ಮಹಿಳೆಯರು ಧರಿಸುವ ಕೆಂಪು ಕುಂಕುಮವನ್ನು ಸಂಕೇತಿಸುತ್ತದೆ.


ನವದೆಹಲಿ: ಭಾರತವು ಇಂದು ಬೆಳಗ್ಗೆ ಆಪರೇಷನ್ ಸಿಂಧೂರ್ (Operation Sindoor) ಆರಂಭಿಸಿ, ಪಾಕಿಸ್ತಾನ (Pakistan) ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿ (Pakistan-occupied Kashmir) ಕನಿಷ್ಠ ಒಂಬತ್ತು "ಭಯೋತ್ಪಾದಕ ಮೂಲಸೌಕರ್ಯ" ಕೇಂದ್ರಗಳ ಮೇಲೆ ದಾಳಿ ನಡೆಸಿದೆ. ಈ ಕಾರ್ಯಾಚರಣೆಗೆ 'ಸಿಂಧೂರ್’ (Sindoor) ಎಂದು ಹೆಸರಿಡಲಾಗಿದ್ದು, ಇದು ಹಿಂದೂ ವಿವಾಹಿತ ಮಹಿಳೆಯರು ಧರಿಸುವ ಕೆಂಪು ಕುಂಕುಮವನ್ನು ಸಂಕೇತಿಸುತ್ತದೆ. ಈ ದಾಳಿಯು ಏಪ್ರಿಲ್ 22 ರಂದು ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿದೆ. ಆ ದಾಳಿಯಲ್ಲಿ ಭಯೋತ್ಪಾದಕರು ಪುರುಷರನ್ನು ಮಹಿಳೆಯರಿಂದ ಬೇರ್ಪಡಿಸಿ, ಪುರುಷರನ್ನು ಗುಂಡಿಟ್ಟು ಕೊಂದು, ಮಹಿಳೆಯರನ್ನು ಬಿಟ್ಟು, ಘಟನೆಯನ್ನು ಪ್ರಧಾನಮಂತ್ರಿ ನರೇಂದ್ರ ಮೋದಿಗೆ ತಿಳಿಸು ಎಂದಿದ್ದರು.
ಪಹಲ್ಗಾಮ್ ದಾಳಿಯಲ್ಲಿ ತಮ್ಮ ಗಂಡಂದಿರನ್ನು ಕಳೆದುಕೊಂಡ ಮಹಿಳೆಯರು ಭಾರತದ ಕಾರ್ಯಾಚರಣೆಗೆ ಪ್ರತಿಕ್ರಿಯಿಸಿದ್ದಾರೆ. "ಭಯೋತ್ಪಾದಕರು ನಮ್ಮ ಹೆಣ್ಣುಮಕ್ಕಳ ಸಿಂದೂರವನ್ನು ಅಳಿಸಿದ ರೀತಿಗೆ ಇದು ಸೂಕ್ತ ಉತ್ತರವಾಗಿದೆ" ಎಂದು ಮೃತ ಸಂತೋಷ್ ಜಗದಾಳೆಯ ಅವರ ಪತ್ನಿ ಪ್ರಗತಿ ಜಗದಾಳೆ ತಿಳಿಸಿದ್ದಾರೆ. "ಈ ಕಾರ್ಯಾಚರಣೆಯ ಹೆಸರನ್ನು ಕೇಳಿದಾಗ ನನ್ನ ಕಣ್ಣುಗಳು ತುಂಬಿಬಂದವು. ಸರ್ಕಾರಕ್ಕೆ ನಾನು ಹೃತ್ಪೂರ್ವಕ ಧನ್ಯವಾದ ಸಲ್ಲಿಸುತ್ತೇನೆ" ಎಂದು ಅವರು ಹೇಳಿದರು.
ಈ ಸುದ್ದಿಯನ್ನು ಓದಿ: Operation Sindoor: ʼಇದು ಹೆಮ್ಮೆಯ ಕ್ಷಣʼ; ಸೇನಾಪಡೆಗಳಿಗೆ ಅಭಿನಂದನೆ ಸಲ್ಲಿಸಿದ ಮೋದಿ
ಪಹಲ್ಗಾಮ್‌ನಲ್ಲಿ ಗುಂಡಿನ ದಾಳಿಗೆ ಒಳಗಾಗಿ ಮೃತಪಟ್ಟ ಶುಭಂ ದ್ವಿವೇದಿಯ ಪತ್ನಿ ಆಶನ್ಯ ದ್ವಿವೇದಿ ಮಾತನಾಡಿ, "ನನ್ನ ಗಂಡನ ಸಾವಿಗೆ ಸರ್ಕಾರವು ಪ್ರತೀಕಾರ ತೀರಿಸಿದ್ದಕ್ಕೆ ನಾನು ಧನ್ಯವಾದಗಳನ್ನು ಅರ್ಪಿಸುತ್ತೇನೆ. ಇದು ಪ್ರತೀಕಾರದ ಆರಂಭವಾಗಿದೆ. ಮೋದಿ ಅವರು ಭಯೋತ್ಪಾದಕರನ್ನು ಸಂಪೂರ್ಣವಾಗಿ ನಾಶಪಡಿಸುವವರೆಗೆ ನಿಲ್ಲುವುದಿಲ್ಲ ಎಂದು ನನಗೆ ತಿಳಿದಿದೆ. ಎಲ್ಲಾ ಭಯೋತ್ಪಾದಕ ಕೇಂದ್ರಗಳನ್ನು ನಾಶಮಾಡಲಾಗುವುದು ಎಂಬ ನಂಬಿಕೆಯನ್ನು ಅವರು ನಮಗೆ ನೀಡಿದ್ದಾರೆ. ಈ ದಾಳಿಗೆ ‘ಆಪರೇಷನ್ ಸಿಂಧೂರ' ಎಂದು ಹೆಸರಿಡುವ ಮೂಲಕ, ನಾವು ಕೇಳಿಕೊಂಡಿದ್ದ ಪ್ರತೀಕಾರ ತೀರಿಸಲಾಗಿದೆ ಎಂದು ಅವರು ತೋರಿಸಿದ್ದಾರೆ ಎಂದರು.
ಕೌಸ್ತುಭ್ ಗನ್‌ಬೋಟೆಯ ಪತ್ನಿ ಸಂಗೀತಾ ಗನ್‌ಬೋಟೆ, "ಸೇನೆಯಿಂದ ತೆಗೆದುಕೊಂಡ ಕ್ರಮವು ಉತ್ತಮವಾಗಿದೆ. ಆಪರೇಷನ್ ಸಿಂಧೂರ ಎಂದು ಹೆಸರಿಡುವ ಮೂಲಕ ಮಹಿಳೆಯರಿಗೆ ಗೌರವ ಸೂಚಿಸಲಾಗಿದೆ. ಪಿಎಂ ಮೋದಿಯವರ ಇಂತಹ ಕ್ರಮಕ್ಕಾಗಿ ಕಾಯುತ್ತಿದ್ವಿ ಮತ್ತು ಅವರು ಭಯೋತ್ಪಾದಕರಿಗೆ ಸೂಕ್ತ ಉತ್ತರ ನೀಡಿದ್ದಾರೆ. ಭಯೋತ್ಪಾದಕರನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಬೇಕು," ಎಂದರು.
ಮದುವೆ ಬಳಿಕ ಹನಿಮೂನ್‌ಗೆ ತೆರಳಿದ್ದ 24 ವರ್ಷದ ಹಿಮಾಂಶಿ ನರ್ವಾಲ್ ವಿವಾಹವಾದ ಆರು ದಿನಗಳಲ್ಲೇ ನೌಕಾಪಡೆಯ ಅಧಿಕಾರಿಯಾಗಿದ್ದ ಪತಿ ವಿನಯ್ ನರ್ವಾಲ್ ಅವರನ್ನುಕಳೆದುಕೊಂಡರು. ಶೀತಲ್ ಕಲಾಥಿಯಾ ತಮ್ಮ ಇಬ್ಬರು ಮಕ್ಕಳೊಂದಿಗೆ ರಜೆಯಲ್ಲಿದ್ದಾಗ ತಮ್ಮ ಗಂಡ ಶೈಲೇಷ್‌ನನ್ನು ಕಳೆದುಕೊಂಡರು. ಸೊಹಿನಿ ಅಧಿಕಾರಿ ತಮ್ಮ ಮೂರು ವರ್ಷದ ಮಗನ ಮುಂದೆ ತಮ್ಮ ಗಂಡ ಬಿಟನ್ ಗುಂಡಿನ ದಾಳಿಗೆ ಒಳಗಾಗಿದ್ದನ್ನು ಕಂಡರು.