ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಪಾಕಿಸ್ತಾನದಿಂದ ವಲಸೆ ಬಂದ ಹಿಂದೂಗಳಿಗೆ ಬಿಗ್‌ ರಿಲೀಫ್‌: ದಾಖಲೆ ಇಲ್ಲದೆ ಉಳಿಯಲು ಅವಕಾಶ ನೀಡಿದ ಕೇಂದ್ರ

2024ರ ಡಿಸೆಂಬರ್ 31ರೊಳಗೆ ಭಾರತಕ್ಕೆ ಆಗಮಿಸಿದ ಅಫ್ಘಾನಿಸ್ತಾನ, ಬಾಂಗ್ಲಾದೇಶ ಮತ್ತು ಪಾಕಿಸ್ತಾನದ ಅಲ್ಪಸಂಖ್ಯಾತ ಸಮುದಾಯಗಳಾದ ಹಿಂದೂಗಳು, ಸಿಖ್ಖರು, ಬೌದ್ಧರು, ಜೈನರು, ಪಾರ್ಸಿಗಳು ಮತ್ತು ಕ್ರಿಶ್ಚಿಯನ್ನರು ಪಾಸ್‌ಪೋರ್ಟ್ ಇಲ್ಲದೆ ದೇಶದಲ್ಲಿ ಉಳಿಯಲು ಅವಕಾಶ ನೀಡಲಾಗುತ್ತದೆ ಎಂದು ಕೇಂದ್ರ ಗೃಹ ಸಚಿವಾಲಯ ತಿಳಿಸಿದೆ.

ಪಾಸ್‌ಪೋರ್ಟ್‌ ಇಲ್ಲದೆ ಅಲ್ಪ ಸಂಖ್ಯಾತರಿಗೆ ಭಾರತದಲ್ಲಿ ಉಳಿಯಲು ಅವಕಾಶ

-

Ramesh B Ramesh B Sep 3, 2025 3:12 PM

ದೆಹಲಿ: ಧಾರ್ಮಿಕ ಕಿರುಕುಳದಿಂದ ತಪ್ಪಿಸಿಕೊಳ್ಳಲು 2024ರ ಡಿಸೆಂಬರ್ 31ರೊಳಗೆ ಭಾರತಕ್ಕೆ ಆಗಮಿಸಿದ ಅಫ್ಘಾನಿಸ್ತಾನ, ಬಾಂಗ್ಲಾದೇಶ ಮತ್ತು ಪಾಕಿಸ್ತಾನದ ಅಲ್ಪಸಂಖ್ಯಾತ ಸಮುದಾಯಗಳಾದ ಹಿಂದೂಗಳು, ಸಿಖ್ಖರು, ಬೌದ್ಧರು, ಜೈನರು, ಪಾರ್ಸಿಗಳು ಮತ್ತು ಕ್ರಿಶ್ಚಿಯನ್ನರು ಪಾಸ್‌ಪೋರ್ಟ್ ಅಥವಾ ಇತರ ಪ್ರಯಾಣ ದಾಖಲೆಗಳಿಲ್ಲದೆ ದೇಶದಲ್ಲಿ ಉಳಿಯಲು ಅವಕಾಶ ನೀಡಲಾಗುವುದು ಎಂದು ಕೇಂದ್ರ ಗೃಹ ಸಚಿವಾಲಯ (Union Home Ministry) ತಿಳಿಸಿದೆ.

ಕಳೆದ ವರ್ಷ ಜಾರಿಗೆ ಬಂದ ಪೌರತ್ವ (ತಿದ್ದುಪಡಿ) ಕಾಯ್ದೆ (CAA) ಪ್ರಕಾರ, 2014ರ ಡಿಸೆಂಬರ್ 31 ಅಥವಾ ಅದಕ್ಕೂ ಮೊದಲು ಭಾರತಕ್ಕೆ ಬಂದ ಕಿರುಕುಳಕ್ಕೊಳಗಾದ ಅಲ್ಪಸಂಖ್ಯಾತರ ಸದಸ್ಯರಿಗೆ ಭಾರತೀಯ ಪೌರತ್ವ ನೀಡಲಾಗುತ್ತದೆ.

ಇತ್ತೀಚೆಗೆ ಅಂಗೀಕರಿಸಲ್ಪಟ್ಟ ವಲಸೆ ಮತ್ತು ವಿದೇಶಿಯರ ಕಾಯ್ದೆ 2025ಕ್ಕೆ (Immigration and Foreigners Act 2025) ಸಂಬಂಧಿಸಿದಂತೆ ಸಚಿವಾಲಯ ಹೊರಡಿಸಿದ ಹಲವು ಆದೇಶಗಳಲ್ಲಿ ಈ ಅಂಶವೂ ಸೇರಿದೆ. ಈ ಹೊಸ ಆದೇಶ ಸೆಪ್ಟೆಂಬರ್‌ 1ರಿಂದ ಜಾರಿಗೆ ಬಂದಿದೆ. ಈಗ ಜಾರಿಗೆ ಬಂದ ವಲಸೆ ಮತ್ತು ವಿದೇಶಿಯರ ಕಾಯ್ದೆ 2025ರ ಅಡಿಯಲ್ಲಿ ಹೊರಡಿಸಲಾದ ಮಹತ್ವದ ಆದೇಶವು 2014ರ ನಂತರ ಭಾರತಕ್ಕೆ ಆಗಮಿಸಿದ ಬಹುತೇಕ ಮಂದಿಗೆ, ವಿಶೇಷವಾಗಿ ಪಾಕಿಸ್ತಾನದಿಂದ ಬಂದ ಹಿಂದೂಗಳಿಗೆ ರಿಲೀಫ್‌ ಸಿಕ್ಕಂತಾಗುತ್ತದೆ ಎಂದು ಮೂಲಗಳು ತಿಳಿಸಿವೆ.

ಇತ್ತೀಚಿನ ವಲಸೆ ಮತ್ತು ವಿದೇಶಿಯರ ಕಾಯ್ದೆಗೆ ಸಂಬಂಧಿಸಿದ ಆದೇಶವು 2024ರ ಡಿಸೆಂಬರ್ ತನಕ ಭಾರತಕ್ಕೆ ಬಂದವರಿಗೆ ಪಾಸ್‌ಪೋರ್ಟ್ ಇಲ್ಲದೆ ಉಳಿಯಲು ಅವಕಾಶ ನೀಡುತ್ತದೆ. ಆದರೆ ಪೌರತ್ವವನ್ನು ಖಾತರಿಪಡಿಸುವುದಿಲ್ಲ.



ಈ ಸುದ್ದಿಯನ್ನೂ ಓದಿ: GST Council: ಇಂದಿನಿಂದ ಎರಡು ದಿನಗಳ ಜಿಎಸ್‌ಟಿ ಕೌನ್ಸಿಲ್‌ ಸಭೆ; ಯಾವುದೆಲ್ಲಾ ಅಗ್ಗವಾಗುತ್ತೆ ಗೊತ್ತಾ?

ಆದೇಶದಲ್ಲಿ ಏನಿದೆ?

"ಧಾರ್ಮಿಕ ಕಿರುಕುಳದಿಂದ 2024ರ ಡಿಸೆಂಬರ್ 31 ಅಥವಾ ಅದಕ್ಕೂ ಮೊದಲು ಆಗಮಿಸಿ ಸೂಕ್ತ ದಾಖಲೆಗಳಿಲ್ಲದೆ ಅಥವಾ ಅವಧಿ ಮುಗಿದ ದಾಖಲೆಗಳೊಂದಿಗೆ ಭಾರತದಲ್ಲಿ ಆಶ್ರಯ ಪಡೆದ ಅಫ್ಘಾನಿಸ್ತಾನ, ಬಾಂಗ್ಲಾದೇಶ ಮತ್ತು ಪಾಕಿಸ್ತಾನದ ಹಿಂದೂಗಳು, ಸಿಖ್ಖರು, ಬೌದ್ಧರು, ಜೈನರು, ಪಾರ್ಸಿಗಳು ಮತ್ತು ಕ್ರಿಶ್ಚಿಯನ್ನರು ಸೇರಿದಂತೆ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ಜನರು ಈ ಆದೇಶದ ವ್ಯಾಪ್ತಿಗೆ ಬರುತ್ತಾರೆ" ಎಂದು ಆದೇಶದಲ್ಲಿ ವಿವರಿಸಲಾಗಿದೆ.

ಸಿಎಎ ಎಂದರೇನು?

ಭಾರತದಲ್ಲಿ ಪೌರತ್ವವನ್ನು ಯಾರಿಗೆ ನೀಡಬೇಕು ಎಂಬುದಕ್ಕೆ ಪೂರಕವಾಗಿ 1955ರಲ್ಲೇ ಕಾಯ್ದೆಯನ್ನು ಜಾರಿಗೊಳಿಸಲಾಗಿತ್ತು. ಅದರ ಪ್ರಕಾರ, ಭಾರತದಲ್ಲಿ ಹುಟ್ಟಿದವರಿಗೆ, ಭಾರತೀಯ ಸಂಜಾತರಿಗೆ, ಭಾರತದಲ್ಲಿ ಯಾವುದಾದರೂ ಸರ್ಕಾರದಿಂದ ಗುರುತಿಸಲ್ಪಟ್ಟ ಯೋಜನೆಯಲ್ಲಿ ನೋಂದಣಿಯಾದವರಿಗೆ, ಭಾರತಕ್ಕೆ ವಲಸೆ ಬಂದವರಿಗೆ ಅಥವಾ ಭಾರತಕ್ಕೆ ಯಾವುದೇ ಬೇರೆ ದೇಶದ ಭೂಭಾಗವು ಸೇರ್ಪಡೆಯಾದಾಗ ಅಲ್ಲಿರುವ ಜನರಿಗೆ ಭಾರತದ ಪೌರತ್ವ ನೀಡುವುದಾಗಿ ಅದರಲ್ಲಿ ಉಲ್ಲೇಖಿಸಲಾಗಿತ್ತು. ಈ ಕಾಯ್ದೆಗೆ 2019ರಲ್ಲಿ ತಿದ್ದುಪಡಿ ತರಲಾಗಿದೆ. ಪಾಕಿಸ್ತಾನ, ಅಫ್ಘಾನಿಸ್ತಾನ, ಬಾಂಗ್ಲಾದೇಶದಲ್ಲಿ ಧರ್ಮದ ಆಧಾರದಲ್ಲಿ ದಬ್ಬಾಳಿಕೆಗೊಳಗಾಗಿ ಭಾರತಕ್ಕೆ ನಿರಾಶ್ರಿತರಾಗಿ ಬರುವ ಎಲ್ಲಾ ಮುಸ್ಲಿಮೇತರಿಗೆ ಭಾರತೀಯ ಪೌರತ್ವ ನೀಡಲಾಗುತ್ತದೆ. ಈ ಕಾನೂನು ಯಾರೊಬ್ಬರ ಪೌರತ್ವವನ್ನು ಕಸಿದುಕೊಳ್ಳುವುದಿಲ್ಲ ಅಥವಾ ಯಾರಿಗೂ ಪೌರತ್ವವನ್ನು ನೀಡುವುದಿಲ್ಲ. ಈ ಕಾನೂನು ಸ್ವಯಂಚಾಲಿತವಾಗಿ ಅವರಿಗೆ ಪೌರತ್ವವನ್ನು ನೀಡುವುದಿಲ್ಲ. ಅವರು ಐದು ವರ್ಷಗಳ ಕಾಲ ಭಾರತದಲ್ಲಿ ವಾಸಿಸುತ್ತಿದ್ದಾರೆ ಎಂದು ತೋರಿಸಬೇಕಾಗುತ್ತದೆ.