ವಿಮಾನದಲ್ಲಿ ಇಯರ್ ಫೋನ್ ಬಳಸದೆ ಜೋರಾಗಿ ಹಾಡು ಹಾಕಿದ್ರೆ ದಂಡ; ಕೇಂದ್ರದ ಎಚ್ಚರಿಕೆ
Play Loud Music on a Flight: ವಿಮಾನ ಪ್ರಯಾಣದ ವೇಳೆ ಇತರ ಪ್ರಯಾಣಿಕರಿಗೆ ಕಿರಿಕಿರಿ ಉಂಟುಮಾಡುವ ರೀತಿಯ ವರ್ತನೆಗೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿರುವ ಕೇಂದ್ರ ಸರ್ಕಾರ, ಇಯರ್ಫೋನ್ ಬಳಸದೆ ಜೋರಾಗಿ ಹಾಡು ಹಾಕುವಂತಹ ಅಸಭ್ಯ ವರ್ತನೆಗೆ ದಂಡ ವಿಧಿಸಲಾಗುವುದು. ಈಗಿರುವ ವಿಮಾನಯಾನ ನಿಯಮಗಳ ಅಡಿಯಲ್ಲಿ ಇಂತಹ ಅಶಿಸ್ತಿನ ವರ್ತನೆಗೆ ಕ್ರಮ ಕೈಗೊಳ್ಳಬಹುದು ಎಂದು ತಿಳಿಸಿದೆ.
ಸಾಂದರ್ಭಿಕ ಚಿತ್ರ -
ನವದೆಹಲಿ, ಫೆ. 15: ಕೆಲವರಿಗೆ ಎಲ್ಲೆಂದರಲ್ಲಿ ಹಾಡು ಕೇಳುವ ಹುಚ್ಚು. ಇಯರ್ ಫೋನ್ ಇದ್ದರೂ ಅವುಗಳನ್ನು ಬಳಸದೆ ಜೋರಾಗಿ ಹಾಡು ಹಾಕಿ, ಇತರರಿಗೆ ಕಿರಿಕಿರಿಯನ್ನುಂಟು ಮಾಡುತ್ತಾರೆ. ಇದೀಗ ವಿಮಾನದಲ್ಲಿ ಇದೇ ರೀತಿಯ ವರ್ತನೆ ತೋರಿದರೆ ಅಂತಹ ಪ್ರಯಾಣಿಕರಿಗೆ ದಂಡ ವಿಧಿಸಲಾಗುವುದು ಎಂದು ಕೇಂದ್ರ ಸರ್ಕಾರ (Central Government) ಎಚ್ಚರಿಕೆ ನೀಡಿದೆ.
ಅಸಭ್ಯವಾಗಿ ವರ್ತಿಸುವ ವಿಮಾನ ಪ್ರಯಾಣಿಕರ ವಿರುದ್ಧ ಕೈಗೊಂಡ ಕ್ರಮಗಳ ಬಗ್ಗೆ ನಾಮಕ್ಕಲ್ ಸಂಸದ ವಿ.ಎಸ್. ಮಥೇಶ್ವರನ್ ಲೋಕಸಭೆಯಲ್ಲಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ನಾಗರಿಕ ವಿಮಾನಯಾನ ರಾಜ್ಯ ಸಚಿವ ಮುರಳೀಧರ ಮೊಹೋಲ್, ವಿಮಾನದಲ್ಲಿ ಅಸಭ್ಯ ವರ್ತನೆಗೆ ಸಂಬಂಧಿಸಿದಂತೆ ಈಗಾಗಲೇ 1937ರ ವಿಮಾನ ನಿಯಮಗಳ ಅಡಿಯಲ್ಲಿ ಕ್ರಮ ಕೈಗೊಳ್ಳುವ ವ್ಯವಸ್ಥೆಗಳು ಇವೆ ಎಂದು ತಿಳಿಸಿದ್ದಾರೆ. ಈ ಕುರಿತು ಮಹಾನಿರ್ದೇಶಕ ನಾಗರಿಕ ವಿಮಾನಯಾನ (DGCA) ಪ್ರಸ್ತುತ ನಿಯಮಾವಳಿಗಳನ್ನು ಜಾರಿಗೊಳಿಸುತ್ತಿದೆ ಎಂದು ಅವರು ಸ್ಪಷ್ಟಪಡಿಸಿದರು.
ಜೋರಾಗಿ ಹಾಡು ಹಾಕುವುದರ ವಿರುದ್ಧ ಪ್ರತ್ಯೇಕ ಹೊಸ ಕಾನೂನು ಇಲ್ಲದಿದ್ದರೂ, ಅದು ವಿಮಾನಯಾನ ಸುರಕ್ಷತೆಗೆ ಧಕ್ಕೆಯಾಗುವಂತಿದ್ದರೆ ಅಥವಾ ಸಿಬ್ಬಂದಿ ಹಾಗೂ ಇತರ ಪ್ರಯಾಣಿಕರಿಗೆ ಕಿರಿಕಿರಿ ಉಂಟು ಮಾಡಿದರೆ, ಇಂತಹ ವರ್ತನೆಗೆ ಕ್ರಮ ಕೈಗೊಳ್ಳಲು ಅವಕಾಶ ಇದೆ.
ಜನರ ಜೀವದ ಜೊತೆ ಆಟವಾಡ್ತಿದೆಯಾ ಏರ್ ಇಂಡಿಯಾ? ವಿಮಾನ ಯೋಗ್ಯತಾ ಪರವಾನಗಿ ಇಲ್ಲದೆ 8 ಬಾರಿ ಹಾರಾಟ!
ಈ ನಿಯಮಗಳ ಅಡಿಯಲ್ಲಿ ಏನು ಕ್ರಮ ಕೈಗೊಳ್ಳಬಹುದು ಎನ್ನುವ ವಿವರ ಇಲ್ಲಿದೆ:
- ಅಸಭ್ಯ ಅಥವಾ ಅಪಾಯಕಾರಿಯೆಂದು ಪರಿಗಣಿಸಲ್ಪಡುವ ವರ್ತನೆ ತೋರಿದ ಪ್ರಯಾಣಿಕರಿಗೆ ವಿಮಾನಯಾನ ಸಂಸ್ಥೆಗಳು ಪ್ರಯಾಣ ನಿರಾಕರಿಸಬಹುದು ಅಥವಾ ವಿಮಾನದಿಂದ ಇಳಿಸಬಹುದು.
- ವಿಮಾನದಲ್ಲಿನ ಶಿಸ್ತು ಹಾಗೂ ಸುರಕ್ಷತೆಗೆ ಧಕ್ಕೆಯುಂಟು ಮಾಡುವ ರೀತಿಯಲ್ಲಿ ಯಾರಾದರೂ ವರ್ತಿಸಿದರೆ, ಅವರನ್ನು ನಿಯಂತ್ರಣದಲ್ಲಿಡಲು ಪೈಲಟ್-ಇನ್-ಕಮಾಂಡ್‌ಗೆ ಅಧಿಕಾರ ಇರುತ್ತದೆ.
- ವಿಮಾನ ನಿಯಮಗಳ ಉಲ್ಲಂಘನೆಗೆ ದಂಡಗಳು ಅನ್ವಯವಾಗುತ್ತವೆ.
ವಿಮಾನಯಾನ ಸಂಸ್ಥೆಗಳು ವಿಮಾನ ಹತ್ತುವಾಗ ಮತ್ತು ಇಳಿಯುವಾಗ ನುಡಿಸುವ ವಾದ್ಯ ಸಂಗೀತಗಳು ಅಥವಾ ವಿಮಾನದೊಳಗಿನ ಮೊಳಗುವ ಮೃದುವಾದ ಸಂಗೀತಕ್ಕೆ ಈ ನಿಯಮ ಅನ್ವಯವಾಗುವುದಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದರು. ಇಯರ್‌ಫೋನ್ ಬಳಸದೆ ಮೊಬೈಲ್ ಸಾಧನಗಳು ಅಥವಾ ಸ್ಪೀಕರ್‌ಗಳನ್ನು ಹೆಚ್ಚಿನ ಧ್ವನಿಯಲ್ಲಿ ವೈಯಕ್ತಿಕ ಬಳಕೆಗೆ ಬಳಸುವುದನ್ನು ವಿಶೇಷವಾಗಿ ಅಸಭ್ಯ ವರ್ತನೆ ಎಂದು ಪರಿಗಣಿಸಬಹುದು.
ಮುರಳೀಧರ ಮೊಹೋಲ್ ವಿಮಾನದಲ್ಲಿನ ವಿಡಿಯೊ ವ್ಲಾಗಿಂಗ್ ಅಥವಾ ಛಾಯಾಗ್ರಹಣಕ್ಕೆ ಸಂಬಂಧಿಸಿದ ಆತಂಕಗಳನ್ನೂ ಉಲ್ಲೇಖಿಸಿದ್ದಾರೆ. ಪೂರ್ವ ಲಿಖಿತ ಅನುಮತಿಯಿಲ್ಲದೆ ವಿಮಾನ ನಿಲ್ದಾಣಗಳಲ್ಲಿ ಹಾಗೂ ವಿಮಾನ ಹಾರಾಟದ ವೇಳೆ ಛಾಯಾಗ್ರಹಣ ಮಾಡುವುದಕ್ಕೆ ನಿರ್ಬಂಧ ವಿಧಿಸುತ್ತವೆ ಎಂದು ತಿಳಿಸಿದ್ದಾರೆ.
ವಿಮಾನ ಪ್ರಯಾಣದ ವೇಳೆ ಗೌರವಪೂರ್ಣ ವರ್ತನೆ ಇರಬೇಕು ಎಂಬ ಪ್ರಯಾಣಿಕರ ಹೆಚ್ಚುತ್ತಿರುವ ನಿರೀಕ್ಷೆಗಳ ನಡುವೆ ಸರ್ಕಾರದ ಈ ಹೇಳಿಕೆ ಹೊರಬಂದಿದೆ. ಅಸಭ್ಯ ಅಥವಾ ಅಡ್ಡಿಪಡಿಸುವ ರೀತಿಯ ವರ್ತನೆಗಳ ವಿರುದ್ಧ ಈಗಿರುವ ವಿಮಾನಯಾನ ನಿಯಮಾವಳಿಗಳನ್ನೇ ಬಳಸಬಹುದು ಎಂಬುದನ್ನು ಇದು ಪುನರುಚ್ಚರಿಸುತ್ತದೆ.