ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಜಪಾನ್ ಪ್ರಧಾನಿಯನ್ನು ಸಹೋದರಿ ಎಂದು ಕರೆದ ಪ್ರಧಾನಿ ಮೋದಿ: ಉಭಯ ನಾಯಕರ ಆತ್ಮೀಯ ಸಂಭಾಷಣೆ

PM Modi Calls Japan PM His Sister: ಪ್ರಧಾನಿ ನರೇಂದ್ರ ಮೋದಿ ಅವರು ಜಪಾನ್ ಪ್ರಧಾನಿ ಸನಾಯೆ ತಕೈಚಿ ಅವರನ್ನು ಸ್ವಾಗತಿಸುವ ವೇಳೆ, ಅವರನ್ನು ಸಹೋದರಿ ಎಂದು ಕರೆದರು. ಭಾರತದ ಆಪ್ತ ಕಾರ್ಯತಂತ್ರದ ಪಾಲುದಾರ ರಾಷ್ಟ್ರದ ನಾಯಕಿಯಾಗಿ ಮಾತ್ರವಲ್ಲದೆ, ನನ್ನ ಕಿರಿಯ ಸಹೋದರಿ ಎಂದು ಮೋದಿ ಪರಿಚಯಿಸಿದರು.

ಜಪಾನ್ ಪ್ರಧಾನಿಯನ್ನು ಸಹೋದರಿ ಎಂದು ಕರೆದ ಪ್ರಧಾನಿ ಮೋದಿ

ಜಪಾನ್ ಪ್ರಧಾನಿ ಸನಾಯೆ ತಕೈಚಿ, ಪ್ರಧಾನಿ ನರೇಂದ್ರ ಮೋದಿ -

Priyanka P
Priyanka P Jul 2, 2026 4:32 PM

ನವದೆಹಲಿ, ಜು.2: ಸಾಮಾನ್ಯವಾಗಿ ರಾಜತಾಂತ್ರಿಕ ಶೃಂಗಸಭೆಗಳು ಒಪ್ಪಂದಗಳು, ಕಾರ್ಯತಂತ್ರದ ಪಾಲುದಾರಿಕೆಗಳು ಹಾಗೂ ಎಚ್ಚರಿಕೆಯಿಂದ ರೂಪಿಸಲಾದ ಜಂಟಿ ಹೇಳಿಕೆಗಳಿಗೆ ಹೆಸರುವಾಸಿಯಾಗಿರುತ್ತವೆ. ಆದರೆ, ಗುರುವಾರ (ಜು.2) ನವದೆಹಲಿಯಲ್ಲಿ ನಡೆದ ಭಾರತ–ಜಪಾನ್ (India-Japan) ವಾರ್ಷಿಕ ಶೃಂಗಸಭೆಯಲ್ಲಿ, ಉಭಯ ದೇಶಗಳ ನಾಯಕರ ನಡುವಿನ ಆತ್ಮೀಯ ಸಂಭಾಷಣೆ ಮತ್ತು ಸ್ನೇಹಪರ ಕ್ಷಣವೇ ಎಲ್ಲರ ಗಮನ ಸೆಳೆಯಿತು.

ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಜಪಾನ್ ಪ್ರಧಾನಿ ಸನಾಯೆ ತಕೈಚಿ (Sanae Takaichi) ಅವರನ್ನು ಸ್ವಾಗತಿಸುವ ವೇಳೆ, ಅವರನ್ನು ಸಹೋದರಿ ಎಂದು ಕರೆದರು. ಭಾರತದ ಆಪ್ತ ಕಾರ್ಯತಂತ್ರದ ಪಾಲುದಾರ ರಾಷ್ಟ್ರದ ನಾಯಕಿಯಾಗಿ ಮಾತ್ರವಲ್ಲದೆ, ನನ್ನ ಕಿರಿಯ ಸಹೋದರಿ ಎಂದು ಮೋದಿ ಪರಿಚಯಿಸಿದರು. ಈ ಆತ್ಮೀಯ ಮಾತು ಅಲ್ಲಿದ್ದವರ ಮುಖದಲ್ಲಿ ಮಂದಹಾಸ ಮೂಡಿಸಿದ್ದು, ಮಹತ್ವದ ರಾಜತಾಂತ್ರಿಕ ಚರ್ಚೆಗಳ ನಡುವೆಯೂ ಶೃಂಗಸಭೆಗೆ ಸ್ನೇಹಪರ ಮತ್ತು ಆತ್ಮೀಯ ವಾತಾವರಣವನ್ನು ಸೃಷ್ಟಿಸಿತು.

“ಭಾರತ-ಜಪಾನ್ ವಾರ್ಷಿಕ ಶೃಂಗಸಭೆಗಾಗಿ ಮೊದಲ ಬಾರಿಗೆ ಭಾರತಕ್ಕೆ ಭೇಟಿ ನೀಡಿರುವ ನನ್ನ ತಂಗಿ, ಜಪಾನ್ ಪ್ರಧಾನಿ ತಕೈಚಿ ಅವರನ್ನು ನಾನು ಸ್ವಾಗತಿಸುತ್ತೇನೆ. ಅವರು ಜಪಾನ್‌ನ ಮೊದಲ ಮಹಿಳಾ ಪ್ರಧಾನಿ ಮತ್ತು ದೂರದೃಷ್ಟಿಯುಳ್ಳ ಮತ್ತು ಜನಪ್ರಿಯ ನಾಯಕಿ” ಎಂದು ಪ್ರಧಾನಿ ಮೋದಿ ಹೇಳಿದರು.

ಇಲ್ಲಿದೆ ವಿಡಿಯೊ:





ತಕೈಚಿ ಕೂಡ ಅಷ್ಟೇ ಪ್ರೀತಿಯಿಂದ ಈ ಭಾವನೆಯನ್ನು ಸ್ವೀಕರಿಸಿದರು. ತಂಗಿ ಎಂದು ಕರೆದಿದ್ದಕ್ಕಾಗಿ ಪ್ರಧಾನಿ ಮೋದಿಯವರಿಗೆ ಧನ್ಯವಾದ ಹೇಳಿದ ಅವರು, ಈ ಆತ್ಮೀಯ ಬಾಂಧವ್ಯವು ತಮ್ಮ ಖಾಸಗಿ ಚರ್ಚೆಗಳ ಸಮಯದಲ್ಲಿ ಇಬ್ಬರೂ ನಾಯಕರ ಪರಸ್ಪರ ತಿಳುವಳಿಕೆಯನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿದರು.

20 ವರ್ಷಗಳ ಬಳಿಕ ಭಾರತದ ಮಾವಿನ ಹಣ್ಣುಗಳನ್ನು ನಿಷೇಧಿಸಿದ ಜಪಾನ್; ಕಾರಣವೇನು?

ನಾವಿಬ್ಬರೂ ಒಂದೇ ಆಲೋಚನೆಯನ್ನು ಹೊಂದಿದ್ದೇವೆ. ಅಣ್ಣ-ತಂಗಿಯಂತೆ ಈ ಸಂಬಂಧವನ್ನು ಪೋಷಿಸುತ್ತೇವೆ ಎಂದು ಅವರು ಹೇಳಿದರು. ಅಷ್ಟೇ ಅಲ್ಲದೆ, ಜಪಾನ್ ಮತ್ತು ಭಾರತ ದೇಶಗಳು ತಮ್ಮ-ತಮ್ಮ ಸಾಮರ್ಥ್ಯಗಳನ್ನು ಬಳಸಿಕೊಂಡು ಒಟ್ಟಿಗೆ ಇನ್ನಷ್ಟು ಬಲಿಷ್ಠವಾಗಿ ಹಾಗೂ ಹೆಚ್ಚು ಸಮೃದ್ಧವಾಗಿ ಬೆಳೆಯಬೇಕು ಎಂದು ಅವರು ಇದೇ ವೇಳೆ ತಿಳಿಸಿದರು.

ಜಪಾನ್ ಪ್ರಧಾನಿಯಾಗಿ ಭಾರತಕ್ಕೆ ತಮ್ಮ ಮೊದಲ ಭೇಟಿ ನೀಡಿದ ತಕೈಚಿ ಅವರನ್ನು ಸ್ವಾಗತಿಸಿದ ಮೋದಿ, ಇದು ದ್ವಿಪಕ್ಷೀಯ ಸಂಬಂಧಗಳಲ್ಲಿ ಹೊಸ ಅಧ್ಯಾಯದ ಆರಂಭ ಎಂದು ಬಣ್ಣಿಸಿದರು. ಜಪಾನ್‌ನ ಮೊದಲ ಮಹಿಳಾ ಪ್ರಧಾನಿ ಎಂದು ಅವರನ್ನು ಶ್ಲಾಘಿಸಿದ ಅವರು, ಮುಕ್ತ ಮತ್ತು ನಿಯಮ ಆಧಾರಿತ ಇಂಡೋ-ಪೆಸಿಫಿಕ್‌ಗಾಗಿ ಎರಡೂ ದೇಶಗಳು ಸಾಮಾನ್ಯ ದೃಷ್ಟಿಕೋನವನ್ನು ಹಂಚಿಕೊಂಡಿವೆ ಎಂದು ಹೇಳಿದರು.

ವಿದೇಶಾಂಗ ಸಚಿವ ಎಸ್. ಜೈಶಂಕರ್, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಮತ್ತು ಎರಡೂ ದೇಶಗಳ ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ಉಭಯ ನಾಯಕರು ಹೈದರಾಬಾದ್ ಹೌಸ್‌ನಲ್ಲಿ ನಿಯೋಗ ಮಟ್ಟದ ಮಾತುಕತೆ ನಡೆಸಿದರು. ಇದಕ್ಕೂ ಮುನ್ನ ರಾಷ್ಟ್ರಪತಿ ಭವನದಲ್ಲಿ ತಕೈಚಿ ಅವರಿಗೆ ಔಪಚಾರಿಕ ಸ್ವಾಗತ ನೀಡಲಾಯಿತು. ಪ್ರಧಾನಿ ಮೋದಿಯವರ ಆಹ್ವಾನದ ಮೇರೆಗೆ ಅವರು ಜುಲೈ 1 ರಿಂದ 3 ರವರೆಗೆ ಮೂರು ದಿನಗಳ ಅಧಿಕೃತ ಭೇಟಿಗಾಗಿ ಭಾರತಕ್ಕೆ ಆಗಮಿಸಿದ್ದಾರೆ.