BRICS summit 2026: ಮತ್ತಷ್ಟು ಗಟ್ಟಿಯಾಯ್ತು ಭಾರತ–ರಷ್ಯಾ ಬಾಂಧವ್ಯ; ನರೇಂದ್ರ ಮೋದಿ–ವ್ಲಾಡಿಮಿರ್ ಪುಟಿನ್ 4ನೇ ಬಾರಿ ಒಂದೇ ಕಾರಿನಲ್ಲಿ ಪ್ರಯಾಣ
Narendra Modi: ನವದೆಹಲಿಯಲ್ಲಿ ದ್ವಿಪಕ್ಷೀಯ ಮಾತುಕತೆ ನಡೆಸಿದ ಪ್ರಧಾನಿ ನರೇಂದ್ರ ಮೋದಿ ಮತ್ತು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಬಳಿಕ ಭಾರತ್ ಮಂಟಪಂನಲ್ಲಿ ನಡೆಯುತ್ತಿದ್ದ ಇನ್ನೋಪ್ರೊಮ್ ಪ್ರದರ್ಶನಕ್ಕೆ ಒಂದೇ ಕಾರ್‌ನಲ್ಲಿ ಪ್ರಯಾಣಿಸಿದರು. ಇದು ಇಬ್ಬರು ನಾಯಕರ ನಾಲ್ಕನೇ ಜಂಟಿ ಕಾರ್ ಪ್ರಯಾಣ. ಮಾತುಕತೆಯಲ್ಲಿ ವ್ಯಾಪಾರ, ಇಂಧನ, ರಕ್ಷಣಾ ಕ್ಷೇತ್ರ, ಬಾಹ್ಯಾಕಾಶ ಹಾಗೂ ಜಾಗತಿಕ ಬೆಳವಣಿಗೆಗಳ ಕುರಿತು ಚರ್ಚೆ ನಡೆಯಿತು.
ನರೇಂದ್ರ ಮೋದಿ - ವ್ಲಾಡಿಮಿರ್ ಪುಟಿನ್ -
ನವದೆಹಲಿ, ಸೆ. 11: ಸಾಮಾನ್ಯವಾಗಿ ರಾಜತಾಂತ್ರಿಕ ಮಾತುಕತೆಗಳು ಸಭಾಂಗಣಗಳಲ್ಲಿ ನಡೆಯುತ್ತವೆ. ಆದರೆ ಭಾರತ–ರಷ್ಯಾ ಬಾಂಧವ್ಯದ (India-Russia Ties) ಆತ್ಮೀಯತೆಯ ಮತ್ತೊಂದು ಚಿತ್ರಣ ಶುಕ್ರವಾರ (ಸೆಪ್ಟೆಂಬರ್ 11) ನವದೆಹಲಿಯಲ್ಲಿ ಕಂಡುಬಂತು. ಪ್ರಧಾನಿ ನರೇಂದ್ರ ಮೋದಿ (PM Narendra Modi) ಮತ್ತು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Russian President Vladimir Putin) ದ್ವಿಪಕ್ಷೀಯ ಮಾತುಕತೆ ಬಳಿಕ ಒಂದೇ ಕಾರ್‌ನಲ್ಲಿ ಪ್ರಯಾಣಿಸಿ ಗಮನ ಸೆಳೆದರು.
ಬ್ರಿಕ್ಸ್ ಶೃಂಗಸಭೆಗೆ ಒಂದು ದಿನ ಮುನ್ನ ಇಬ್ಬರೂ ನಾಯಕರು ದ್ವಿಪಕ್ಷೀಯ ಮಾತುಕತೆ ನಡೆಸಿದರು. ಬಳಿಕ ನವದೆಹಲಿಯ ಭಾರತ್ ಮಂಟಪಂ ಆವರಣದಲ್ಲಿ ನಡೆಯುತ್ತಿದ್ದ ಇನ್ನೋಪ್ರೊಮ್ (INNOPROM) ಕೈಗಾರಿಕಾ ಪ್ರದರ್ಶನಕ್ಕೆ ಒಟ್ಟಿಗೆ ಕಾರಿನಲ್ಲಿ ತೆರಳಿದರು.
ಒಂದೇ ಕಾರ್‌ನಲ್ಲಿ ತೆರಳಿದ ನರೇಂದ್ರ ಮೋದಿ–ವ್ಲಾಡಿಮಿರ್ ಪುಟಿನ್:
BRICS Summit 2026 | Delhi: After their bilateral meeting, Prime Minister Narendra Modi and Russian President Vladimir Putin share a car to head to the exhibition at Bharat Mandapam.
— ANI (@ANI) September 11, 2026
Leaders' Session of BRICS Business Forum will be held here shortly.
(Pics: DD News) pic.twitter.com/HuSHYUGXkA
ನಾಲ್ಕನೇ ಬಾರಿ ಒಂದೇ ಕಾರಿನಲ್ಲಿ ಪ್ರಯಾಣ
ಪ್ರಧಾನಿ ಮೋದಿ ಮತ್ತು ಪುಟಿನ್ ಇದೇ ಮೊದಲ ಬಾರಿಗೆ ಒಟ್ಟಿಗೆ ಕಾರಿನಲ್ಲಿ ಪ್ರಯಾಣಿಸುತ್ತಿಲ್ಲ. ಕಳೆದ ವರ್ಷ ಚೀನಾದಲ್ಲಿ ನಡೆದ ಶಾಂಘೈ ಸಹಕಾರ ಸಂಘಟನೆ (SCO) ಶೃಂಗಸಭೆ ಸಂದರ್ಭದಲ್ಲಿ ಇಬ್ಬರೂ ಮೊದಲ ಬಾರಿಗೆ ಒಂದೇ ಕಾರಿನಲ್ಲಿ ಪ್ರಯಾಣಿಸಿದ್ದರು. ಆ ಬಳಿಕ ಇನ್ನೂ ಎರಡು ಬಾರಿ ಒಟ್ಟಿಗೆ ಪ್ರಯಾಣಿಸಿದ್ದು, ಶುಕ್ರವಾರದ ಪ್ರಯಾಣವು ಇಬ್ಬರು ನಾಯಕರ ನಾಲ್ಕನೇ ಜಂಟಿ ಕಾರ್ ಪ್ರಯಾಣವಾಗಿದೆ.
ಪುಟಿನ್‌ಗೆ ತಿರುವಳ್ಳುವರ್ ಅವರ ‘ತಿರುಕ್ಕುರಳ್’ ಉಡುಗೊರೆ
ದ್ವಿಪಕ್ಷೀಯ ಮಾತುಕತೆಗೂ ಮುನ್ನ ಪ್ರಧಾನಿ ಮೋದಿ ರಷ್ಯಾ ಅಧ್ಯಕ್ಷ ಪುಟಿನ್ ಅವರಿಗೆ ತಮಿಳಿನ ಪ್ರಸಿದ್ಧ ಶಾಸ್ತ್ರ ಗ್ರಂಥ ‘ತಿರುಕ್ಕುರಳ್’ನ ರಷ್ಯನ್ ಭಾಷೆಯ ಅನುವಾದದ ಪ್ರತಿಯನ್ನು ಉಡುಗೊರೆಯಾಗಿ ನೀಡಿದರು. ತಿರುವಳ್ಳುವರ್ ಸುಮಾರು 2,000 ವರ್ಷಗಳ ಹಿಂದೆ ರಚಿಸಿದ ʼತಿರುಕ್ಕುರಳ್ʼ ಮಾನವ ಜೀವನದ ವಿವಿಧ ಆಯಾಮಗಳನ್ನು ಒಳಗೊಂಡಿದೆ ಎಂದು ಪ್ರಧಾನಿ ಮೋದಿ ಹೇಳಿದರು. ರಷ್ಯನ್ ಭಾಷೆಗೆ ಅನುವಾದವಾಗಿರುವುದರಿಂದ ಭಾರತ–ರಷ್ಯಾ ಜನರ ನಡುವಿನ ಸಂಪರ್ಕ ಮತ್ತಷ್ಟು ಬಲಗೊಳ್ಳಲಿದೆ ಎಂಬ ವಿಶ್ವಾಸವನ್ನೂ ಅವರು ವ್ಯಕ್ತಪಡಿಸಿದರು.
7 ವರ್ಷಗಳ ಬಳಿಕ ಭಾರತಕ್ಕೆ ಚೀನಾ ಅಧ್ಯಕ್ಷ ಭೇಟಿ; ಮೋದಿ-ಕ್ಸಿ ದ್ವಿಪಕ್ಷೀಯ ಸಭೆ
ವ್ಯಾಪಾರ, ಇಂಧನ, ರಕ್ಷಣೆಯ ಬಗ್ಗೆ ಚರ್ಚೆ
ವಿದೇಶಾಂಗ ಸಚಿವಾಲಯದ ಪ್ರಕಾರ, ಮೋದಿ ಮತ್ತು ಪುಟಿನ್ ಭಾರತ–ರಷ್ಯಾ ವಿಶೇಷ ಮತ್ತು ವಿಶೇಷಾಧಿಕಾರ ಹೊಂದಿರುವ ಕಾರ್ಯತಂತ್ರದ ಪಾಲುದಾರಿಕೆಯ ಹಲವು ವಿಚಾರಗಳ ಕುರಿತು ವ್ಯಾಪಕ ಚರ್ಚೆ ನಡೆಸಿದರು. ವ್ಯಾಪಾರ, ಇಂಧನ, ರಕ್ಷಣಾ ಕ್ಷೇತ್ರ, ಬಾಹ್ಯಾಕಾಶ ಹಾಗೂ ಜನರ ನಡುವಿನ ಸಂಪರ್ಕ ಸೇರಿದಂತೆ ದ್ವಿಪಕ್ಷೀಯ ಸಹಕಾರದ ಪ್ರಗತಿಯನ್ನು ನಾಯಕರು ಪರಿಶೀಲಿಸಿದರು.
ಇದರ ಜತೆಗೆ ಪಶ್ಚಿಮ ಏಷ್ಯಾ ಮತ್ತು ಕಪ್ಪು ಸಮುದ್ರ ಪ್ರದೇಶದಲ್ಲಿನ ಸಂಘರ್ಷ ಸೇರಿ ಪ್ರಾದೇಶಿಕ ಮತ್ತು ಜಾಗತಿಕ ಬೆಳವಣಿಗೆಗಳ ಬಗ್ಗೆಯೂ ಅಭಿಪ್ರಾಯ ವಿನಿಮಯ ನಡೆಯಿತು. ಸಂಘರ್ಷಗಳಿಗೆ ಪರಿಹಾರ ಕಂಡುಕೊಳ್ಳಲು ಸಂವಾದ ಮತ್ತು ರಾಜತಾಂತ್ರಿಕತೆಯೇ ಮುಂದಿನ ದಾರಿ ಎಂದು ಪ್ರಧಾನಿ ಮೋದಿ ಪುನರುಚ್ಚರಿಸಿದ್ದು, ಶಾಂತಿ ಪ್ರಯತ್ನಗಳಿಗೆ ಭಾರತ ಅಗತ್ಯ ಸಹಕಾರ ನೀಡಲು ಸಿದ್ಧವಿದೆ ಎಂದು ತಿಳಿಸಿದ್ದಾರೆ.
ರಷ್ಯಾ ಭಾರತದ ಪ್ರಮುಖ ಕಾರ್ಯತಂತ್ರದ ಪಾಲುದಾರ ಹಾಗೂ ಪ್ರಮುಖ ರಕ್ಷಣಾ ಪೂರೈಕೆದಾರ ರಾಷ್ಟ್ರವಾಗಿದ್ದು, ಮೋದಿ–ಪುಟಿನ್ ಭೇಟಿಯು ಉಭಯ ದೇಶಗಳ ನಡುವಿನ ನಿರಂತರ ಬಾಂಧವ್ಯಕ್ಕೆ ಮತ್ತಷ್ಟು ಮಹತ್ವ ನೀಡಿದೆ.