ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Vyomika Singh: ಸೋಫಿಯಾ ಖುರೇಷಿ ಆಯ್ತು...ಈಗ ವ್ಯೋಮಿಕಾ ಸಿಂಗ್ ಬಗ್ಗೆ ವಿವಾದಾತ್ಮಕ ಹೇಳಿಕೆ- ಸಮಾಜವಾದಿ ನಾಯಕ ಹೇಳಿದ್ದೇನು?

ಆಪರೇಷನ್ ಸಿಂದೂರ್ (Operation Sindoor) ಕಾರ್ಯಯೋಜನೆಯಲ್ಲಿ ಎಲ್ಲರ ಗಮನ ಸೆಳೆದಿರುವ ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್ ( Wing Commander Vyomika Singh) ಮತ್ತು ಕರ್ನಲ್ ಸೋಫಿಯಾ ಖುರೇಷಿ (Colonel Sofiya Qureshi) ಅವರ ಜಾತಿ ಈಗ ಹೆಚ್ಚು ಚರ್ಚೆಯಲ್ಲಿದೆ. ಇದಕ್ಕೆ ಕಾರಣ ರಾಜಕೀಯ ನಾಯಕರ ಹೇಳಿಕೆಗಳು. ಖುರೇಷಿ ಅವರ ಬಗ್ಗೆ ಬಿಜೆಪಿ ಸಚಿವ ನೀಡಿದ ಹೇಳಿಕೆ ವಿವಾದ ಸೃಷ್ಟಿಸಿದ ಬಳಿಕ ಇದೀಗ ವ್ಯೋಮಿಕಾ ಸಿಂಗ್ ಜಾತಿಯ ಬಗ್ಗೆ ಮಾತನಾಡಿ ಸಮಾಜವಾದಿ ನಾಯಕ (Samajwadi Party leader) ರಾಮ್ ಗೋಪಾಲ್ (Ramgopal Yadav ) ವಿವಾದ ಉಂಟು ಮಾಡಿದ್ದಾರೆ.

ವ್ಯೋಮಿಕಾ ಸಿಂಗ್ ಬಗ್ಗೆ ನಾಲಿಗೆ ಹರಿಬಿಟ್ಟ ಎಸ್‌ಪಿ ನಾಯಕ

ನವದೆಹಲಿ: ಕಾಶ್ಮೀರದ ಪಹಲ್ಗಾಮ್ (Pahalgam) ಜಿಲ್ಲೆಯ ಬೈಸರನ್ ಕಣಿವೆಯಲ್ಲಿ ಭಯೋತ್ಪಾದಕರು ಪ್ರವಾಸಿಗರ ಮೇಲೆ ನಡೆಸಿದ ದಾಳಿಗೆ (Terror Attack)ಪ್ರತಿಯಾಗಿ ಭಾರತೀಯ ಸೇನೆ ನಡೆಸಿದ ಆಪರೇಷನ್ ಸಿಂದೂರ್ (Operation Sindoor) ಕಾರ್ಯಯೋಜನೆಯಲ್ಲಿ ಎಲ್ಲರ ಗಮನ ಸೆಳೆದಿರುವ ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್ ( Wing Commander Vyomika Singh) ಮತ್ತು ಕರ್ನಲ್ ಸೋಫಿಯಾ ಖುರೇಷಿ (Colonel Sofiya Qureshi) ಅವರ ಜಾತಿ ಈಗ ಹೆಚ್ಚು ಚರ್ಚೆಯಲ್ಲಿದೆ. ಇದಕ್ಕೆ ಕಾರಣ ರಾಜಕೀಯ ನಾಯಕರ ಹೇಳಿಕೆಗಳು. ಖುರೇಷಿ ಅವರ ಬಗ್ಗೆ ಬಿಜೆಪಿ ಸಚಿವ ನೀಡಿದ ಹೇಳಿಕೆ ವಿವಾದ ಸೃಷ್ಟಿಸಿದ ಬಳಿಕ ಇದೀಗ ವ್ಯೋಮಿಕಾ ಸಿಂಗ್ ಜಾತಿಯ ಬಗ್ಗೆ ಮಾತನಾಡಿ ಸಮಾಜವಾದಿ ನಾಯಕ (Samajwadi Party leader) ರಾಮ್ ಗೋಪಾಲ್ ( Ramgopal Yadav ) ವಿವಾದ ಉಂಟು ಮಾಡಿದ್ದಾರೆ.

ಆಪರೇಷನ್‌ ಸಿಂದೂರ್‌ ಬಳಿಕ ಮಾಧ್ಯಮಗೋಷ್ಠಿಯ ನೇತೃತ್ವ ವಹಿಸಿದ್ದ ಭಾರತೀಯ ಸೇನಾಧಿಕಾರಿ ಕರ್ನಲ್ ಸೋಫಿಯಾ ಖುರೇಷಿ ಬಗ್ಗೆ ಮಹೌನಲ್ಲಿ ಆಯೋಜಿಸಲಾಗಿದ್ದ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಬಿಜೆಪಿ ಸಚಿವ ವಿಜಯ್‌ ಶಾ, ಉಗ್ರರು ಭೀಕರ ದಾಳಿ ಮಾಡುವ ಮಾಡುವ ಮೂಲಕ ನಮ್ಮ ಹೆಣ್ಣು ಮಕ್ಕಳ ಕುಂಕುಮ ಅಳಿಸಿದ್ದರು. ನಾವು ಅವರ ಸಹೋದರಿಯನ್ನೇ ಪಾಠ ಕಲಿಸು ಎಂದು ಕಳುಹಿಸಿದೆವು ಎಂದು ಹೇಳಿದ್ದು ವಿವಾದ ಉಂಟು ಮಾಡಿತ್ತು. ಖುರೇಷಿ ಮುಸ್ಲಿಂ ಎಂಬ ಕಾರಣಕ್ಕೆ ಉಳಿಸಿಕೊಂಡಿದ್ದರೆ ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್ ಅವರನ್ನು ರಜಪೂತ್ ಎಂಬ ಕಾರಣಕ್ಕೆ ಉಳಿಸಿಕೊಳ್ಳಲಾಗಿತ್ತು ಎಂದು ಸಮಾಜವಾದಿ ಪಕ್ಷದ ನಾಯಕ ರಾಮ್‌ಗೋಪಾಲ್ ಯಾದವ್ ಹೇಳಿದ್ದು ಇದೀಗ ವಿವಾದಕ್ಕೆ ಕಾರಣವಾಗಿದೆ.

ಮೊರಾದಾಬಾದ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಯಾದವ್ ಅವರು ಮಧ್ಯಪ್ರದೇಶದ ಬಿಜೆಪಿ ಸಚಿವ ವಿಜಯ್ ಶಾ ಅವರ ಹೇಳಿಕೆಯನ್ನು ಉಲ್ಲೇಖಿಸಿ ವ್ಯೋಮಿಕಾ ಸಿಂಗ್ ಬಗ್ಗೆ ವಿವಾದಾತ್ಮಕ ಹೇಳಿಕೆಗಳನ್ನು ನೀಡಿದ್ದಾರೆ. ಬಿಜೆಪಿಯ ಮಂತ್ರಿಗಳಲ್ಲಿ ಒಬ್ಬರು ಕರ್ನಲ್ ಖುರೇಷಿ ಅವರನ್ನು ನಿಂದಿಸಿದ್ದಾರೆ. ಹೈಕೋರ್ಟ್ ಅವರ ವಿರುದ್ಧ ಮತ್ತೆ ಪ್ರಕರಣ ದಾಖಲಿಸಲು ಆದೇಶಿಸಿದೆ. ಆದರೆ ವ್ಯೋಮಿಕಾ ಸಿಂಗ್ ಅಥವಾ ಏರ್ ಮಾರ್ಷಲ್ ಎ.ಕೆ. ಭಾರ್ತಿ ಯಾರೆಂದು ಅವರಿಗೆ ತಿಳಿದಿರಲಿಲ್ಲ. ಇಲ್ಲದಿದ್ದರೆ ಅವರು ಅವರನ್ನೂ ಗುರಿಯಾಗಿಸಿಕೊಳ್ಳುತ್ತಿದ್ದರು ಎಂದು ಹೇಳಿದರು.

ಅನಂತರ ಅವರು ತಮ್ಮ ಮಾತನ್ನು ಮುಂದುವರಿಸುತ್ತಾ, ಸಿಂಗ್ ಮತ್ತು ಭಾರ್ತಿ ಅವರನ್ನು ಜಾತಿಯನ್ನು ಉಲ್ಲೇಖಿಸಿ ಸಿಂಗ್ ಅವರು ಹರಿಯಾಣದ ಜಾಟವ್ ಮತ್ತು ಭಾರ್ತಿ ಅವರು ಪೂರ್ಣಿಯಾದ ಯಾದವ್. ಇವರು ಮೂವರೂ ಪಿಡಿಎ ಅಂದರೆ ಪಿಚ್ಡಾ, ದಲಿತ, ಅಲ್ಪಸಂಖ್ಯಾಕರು. ಇಲ್ಲಿ ಒಬ್ಬರನ್ನು ಮುಸ್ಲಿಂ ಮತ್ತು ಇನ್ನೊಬ್ಬರನ್ನು ರಜಪೂತ್ ಎಂಬ ಕಾರಣಕ್ಕೆ ಉಳಿಸಿಕೊಳ್ಳಲಾಗಿತ್ತು ಎಂದು ರಾಮ್ ಗೋಪಾಲ್ ಹೇಳಿದ್ದಾರೆ.

ಬಿಜೆಪಿ ಸಶಸ್ತ್ರ ಪಡೆಗಳ ಸಾಧನೆಯನ್ನು ಒಪ್ಪಿಕೊಳ್ಳುವುದಕ್ಕಿಂತ ಸ್ವಯಂ ವೈಭವೀಕರಣಕ್ಕೆ ಆದ್ಯತೆ ನೀಡುತ್ತಿದೆ. ಮನಸ್ಥಿತಿ ಕೆಟ್ಟದಾಗಿದ್ದಾಗ ಸೇನೆಯ ಸಾಧನೆಗಳ ಬಗ್ಗೆ ಮಾತನಾಡುವ ಬದಲು ಅವರು ತಮ್ಮ ಕೆಟ್ಟ ಮನಸ್ಥಿತಿಯನ್ನು ಎತ್ತಿ ತೋರಿಸುತ್ತಿದ್ದಾರೆ ಎಂದರು. ಪಹಲ್ಗಾಮ್ ದಾಳಿಗೆ ಪ್ರತಿಕ್ರಿಯೆಯಾಗಿ ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರ (ಪಿಒಕೆ) ದಲ್ಲಿನ ಭಯೋತ್ಪಾದಕ ಶಿಬಿರಗಳ ಮೇಲೆ ಭಾರತ ನಡೆಸಿದ ಆಪರೇಷನ್ ಸಿಂದೂರ್ ಮಾಧ್ಯಮಗೋಷ್ಠಿಯ ನೇತೃತ್ವವನ್ನು ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್, ಕರ್ನಲ್ ಸೋಫಿಯಾ ಖುರೇಷಿ ಮತ್ತು ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ ವಹಿಸಿದ್ದರು. ಇದಾದ ಬಳಿಕ ಈ ಮೂವರ ಜಾತಿ ವಿಚಾರಗಳು ಹೆಚ್ಚು ಚರ್ಚೆಯಲ್ಲಿದೆ.

ಬಿಜೆಪಿಯ ತಿರಂಗಾ ಯಾತ್ರಾ ಅಭಿಯಾನವನ್ನು ಪ್ರಶ್ನಿಸಿರುವ ರಾಮ್ ಗೋಪಾಲ್, ಅವರು ಚುನಾವಣೆಗಾಗಿ ಎಲ್ಲವನ್ನೂ ಮಾಡುತ್ತಾರೆ. ಈಗ ತಿರಂಗಾ ಯಾತ್ರೆಯನ್ನು ಏಕೆ ಮಾಡುತ್ತಿದ್ದಾರೆ. ಆಪರೇಷನ್ ಸಿಂದೂರ್‌ನಲ್ಲಿ ಹೋರಾಡಿದವರು ಬಿಜೆಪಿ ಜನರೇ ಎಂದು ಪ್ರಶ್ನಿಸಿದ್ದಾರೆ.



ಯಾದವ್ ಅವರ ಹೇಳಿಕೆಯನ್ನು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ತೀವ್ರವಾಗಿ ಖಂಡಿಸಿದ್ದು ಇದು ಸಶಸ್ತ್ರ ಪಡೆಗಳಿಗೆ ಮಾಡಿದ ಗಂಭೀರ ಅವಮಾನ ಎಂದು ಹೇಳಿದ್ದಾರೆ. ಸೇನೆಯ ಸಮವಸ್ತ್ರವನ್ನು ಜಾತಿ ಕನ್ನಡಕದ ಮೂಲಕ ನೋಡಲಾಗುವುದಿಲ್ಲ. ಭಾರತೀಯ ಸೇನೆಯ ಪ್ರತಿಯೊಬ್ಬ ಸೈನಿಕ ರಾಷ್ಟ್ರಧರ್ಮವನ್ನು ನಿರ್ವಹಿಸುತ್ತಾನೆ ಮತ್ತು ಯಾವುದೇ ಜಾತಿ ಅಥವಾ ಧರ್ಮದ ಪ್ರತಿನಿಧಿಯಲ್ಲ ಎಂದು ಎಕ್ಸ್ ನಲ್ಲಿ ಆದಿತ್ಯನಾಥ್ ಹೇಳಿದ್ದಾರೆ.

ಉಪಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಅವರು ಕೂಡ ರಾಮ್ ಗೋಪಾಲ್ ಹೇಳಿಕೆಯನ್ನು ಖಂಡಿಸಿದ್ದು, ಸೇನೆಯು ಜಾತಿ ಮತ್ತು ಧರ್ಮವನ್ನು ಮೀರಿದ್ದು. ಸೇನೆಗೆ ದೇಶ ರಕ್ಷಣೆ ಎಂಬ ಒಂದೇ ಒಂದು ಕರ್ತವ್ಯವಿದೆ. ಆದ್ದರಿಂದ, ಸೇನೆಯಲ್ಲಿ ಜಾತಿ ಮತ್ತು ಧರ್ಮವನ್ನು ನೋಡುವುದು ಕೀಳು ಮನಸ್ಥಿತಿ. ಪ್ರಧಾನಿ ನರೇಂದ್ರ ಮೋದಿ ಕೂಡ ಸೇನೆಯಲ್ಲಿ ಮಹಿಳಾ ಸಬಲೀಕರಣಕ್ಕೆ ವಿಶೇಷ ಒತ್ತು ನೀಡಿದ್ದಾರೆ. ಎಲ್ಲರೂ ಅವರನ್ನು ನಂಬಬೇಕು ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: Chaithra Kundapura: ‘ಕುಡುಕ ತಂದೆ’: ತಂದೆಯ ಆರೋಪಕ್ಕೆ ಚೈತ್ರಾ ಕುಂದಾಪುರ ತಿರುಗೇಟು, ವೈರಲ್ ಆಗ್ತಿದೆ ಪೋಸ್ಟ್



ರಾಮ್ ಗೋಪಾಲ್ ಹೇಳಿಕೆಯನ್ನು ಬಹುಜನ ಸಮಾಜ ಪಕ್ಷದ (ಬಿಎಸ್‌ಪಿ) ಮುಖ್ಯಸ್ಥೆ ಮಾಯಾವತಿ ಕೂಡ ಖಂಡಿಸಿದರು, ಯಾದವ್ ಮತ್ತು ಈ ಹಿಂದೆ ಬಿಜೆಪಿ ಸಚಿವರು ಮಾಡಿದ ಹೇಳಿಕೆಗಳು ಒಂದೇ ಆಗಿದೆ. ಜಾತಿ ಅಥವಾ ಧರ್ಮದ ಆಧಾರದ ಮೇಲೆ ಸೇನೆಯನ್ನು ನಿರ್ಣಯಿಸುವುದು ಅಥವಾ ವಿಭಜಿಸುವುದು ಅತ್ಯಂತ ಅನ್ಯಾಯ. ಬಿಜೆಪಿ ಸಚಿವರು ಮಾಡಿದ ತಪ್ಪನ್ನೇ ಈ ಹಿರಿಯ ಎಸ್‌ಪಿ ನಾಯಕ ಕೂಡ ಮಾಡಿದ್ದಾರೆ. ಇದು ನಾಚಿಕೆಗೇಡು ಮತ್ತು ಖಂಡನೀಯ ಎಂದು ಎಕ್ಸ್ ನಲ್ಲಿ ತಿಳಿಸಿದ್ದಾರೆ.