Sonam Wangchuk: ಜೋಧ್‌ಪುರ ಜೈಲಿಗೆ ಸೋನಮ್ ವಾಂಗ್‌ಚುಕ್: ಲೇಹ್‌ನಿಂದ ದೂರ ಕರೆದುಕೊಂಡು ಹೋಗಲು ಕಾರಣವೇನು?
ಲಡಾಖ್‌ನ ಗಲಭೆಗೆ ಸಂಬಂಧಿಸಿ ಬಂಧಿಸಲ್ಪಟ್ಟಿರುವ ಸೋನಮ್ ವಾಂಗ್‌ಚುಕ್ ಅವರನ್ನು ರಾಜಸ್ಥಾನದ ಜೋಧ್‌ಪುರ ಜೈಲಿಗೆ ಕರೆದುಕೊಂಡು ಹೋಗಲಾಗಿದೆ. ಈ ಹಿಂದೆ ಪಂಜಾಬ್ ಗಲಭೆಗೆ ಕಾರಣವಾಗಿದ್ದ ಅಮೃತ್‌ಪಾಲ್ ಸಿಂಗ್ ಅವರನ್ನು ಅಸ್ಸಾಂನ ದಿಬ್ರುಗಢ ಜೈಲಿನಲ್ಲಿ ಬಂಧನದಲ್ಲಿ ಇರಿಸಲಾಗಿತ್ತು. ಗಲಭೆಕೋರರನ್ನು ಈ ರೀತಿ ನೂರಾರು ಕಿಲೋಮೀಟರ್ ದೂರದ ಜೈಲಿನಲ್ಲಿ ಇಡಲು ಕಾರಣ ಏನು ಎಂಬುದರ ಕುರಿತು ಇಲ್ಲಿದೆ ಮಾಹಿತಿ.

-

ಲೇಹ್: ಸಮಾಜದಲ್ಲಿ ಅಶಾಂತಿ ಉಂಟು ಮಾಡುವುದು, ಅದಕ್ಕಾಗಿ ಗುಪ್ತ ಸಂಪನ್ಮೂಲವನ್ನು ಹೊಂದಿರುವುದು ಸೇರಿದಂತೆ ವಿವಿಧ ಆರೋಪಗಳಲ್ಲಿ ಬಂಧಿಯಾಗಿರುವ ಸೋನಮ್ ವಾಂಗ್‌ಚುಕ್ (Sonam Wangchuk) ಅವರನ್ನು ರಾಜಸ್ಥಾನದ ಜೋಧ್‌ಪುರ ಜೈಲಿಗೆ (Jodhpur jail) ಕರೆದುಕೊಂಡು ಹೋಗಲಾಗಿದೆ. ಲಡಾಖ್‌ನ (ladakh) ಗಲಭೆಗೆ ಸಂಬಂಧಿಸಿ ಬಂಧಿಸಲ್ಪಟ್ಟಿರುವ ಇವರನ್ನು ಲೇಹ್ (Leh) ನಿಂದ ಸಾವಿರಾರು ಕಿಲೋ ಮೀಟರ್ ದೂರದ ಜೈಲಿಗೆ ಕರೆದುಕೊಂಡು ಹೋಗಲು ಹಲವು ಪ್ರಮುಖ ಕಾರಣಗಳಿವೆ. ಇವರ ವಿರುದ್ಧ ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ (National Security Act) ಪ್ರಕರಣ ದಾಖಲಿಸಲಾಗಿದ್ದು, ಸುದೀರ್ಘ ಕಾಲ ಬಂಧನದಲ್ಲಿರುವ ಸಾಧ್ಯತೆ ಇದೆ ಎನ್ನುತ್ತಾರೆ ಅಧಿಕಾರಿಗಳು.
ಎರಡು ವರ್ಷಗಳ ಹಿಂದೆ ಬಂಧಿಸಲ್ಪಟ್ಟಿರುವ ಪಂಜಾಬ್ ಗಲಭೆಗೆ ಕಾರಣವಾಗಿದ್ದ ಅಮೃತ್‌ಪಾಲ್ ಸಿಂಗ್ ಬಳಿಕ ಇದೀಗ ಲಡಾಖ್‌ನ ಗಲಭೆಗೆ ಸಂಬಂಧಿಸಿ ಬಂಧಿಸಲ್ಪಟ್ಟಿರುವ ಸೋನಮ್ ವಾಂಗ್‌ಚುಕ್ ಅವರನ್ನು ತಮ್ಮ ಪ್ರದೇಶದಿಂದ ಅತ್ಯಂತ ದೂರವಿರುವ ಜೈಲುಗಳಲ್ಲಿ ಇಡಲಾಗಿದೆ. ಇವರಿಬ್ಬರ ವಿರುದ್ದವೂ ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದ್ದು, ದೀರ್ಘಕಾಲ ಬಂಧನದಲ್ಲಿರುವ ಸಾಧ್ಯತೆ ಇದೆ. ಇವರನ್ನು ಹೀಗೆ ದೂರದ ಜೈಲಿನಲ್ಲಿಡಲು ಮುಖ್ಯ ಕಾರಣ ಸಮಾಜದಲ್ಲಿ ಅಶಾಂತಿ ಉಂಟು ಮಾಡುವ ಹಾಗೂ ಅದಕ್ಕಾಗಿ ಗುಪ್ತ ಸಂಪನ್ಮೂಲಗಳನ್ನು ಪಡೆಯುವ ಸಾಧ್ಯತೆಯನ್ನು ಕಡಿಮೆ ಮಾಡುವುದಾಗಿದೆ ಎಂದು ಸರ್ಕಾರಿ ಉನ್ನತ ಮೂಲಗಳು ತಿಳಿಸಿವೆ.
ಅಮೃತ್‌ಪಾಲ್ ಸಿಂಗ್
ಎರಡು ವರ್ಷಗಳ ಹಿಂದೆ ಪಂಜಾಬ್‌ನ ಅಮೃತ್‌ಪಾಲ್ ಸಿಂಗ್ ಯುವಕರನ್ನು ಪ್ರತ್ಯೇಕತಾವಾದಕ್ಕೆ ಪ್ರಚೋದಿಸುತ್ತಿದ್ದರು. ಐಎಸ್‌ಐ ಜತೆ ಕೈಜೋಡಿಸಿದ್ದ ಇವರು ಪಂಜಾಬ್‌ನಲ್ಲಿ ಉದ್ವಿಗ್ನತೆಗೆ ಕಾರಣವಾಗಿದ್ದರು. ಒಂದು ತಿಂಗಳ ಬಳಿಕ ಬಂಧನಕ್ಕೆ ಒಳಗಾದ ಆತನನ್ನು ಪಂಜಾಬ್‌ನಿಂದ ಸುಮಾರು 3,000 ಕಿ.ಮೀ. ದೂರದಲ್ಲಿರುವ ಅಸ್ಸಾಂನ ದಿಬ್ರುಗಢ ಜೈಲಿನಲ್ಲಿ ಇರಿಸಲು ಸರ್ಕಾರ ನಿರ್ಧರಿಸಿತು. ಕಳೆದ ಎರಡು ವರ್ಷಗಳಿಂದ ಆತ ಇಲ್ಲೇ ಇದ್ದಾನೆ. ಪಂಜಾಬ್‌ನ ಜೈಲಿನಲ್ಲಿರುವ ಇತರ ಕೈದಿಗಳಿಂದ ಅಮೃತ್‌ಪಾಲ್‌ನನ್ನು ದೂರವಿಡುವುದು ಇದರ ಮುಖ್ಯ ಉದ್ದೇಶ.
ಸೋನಮ್ ವಾಂಗ್‌ಚುಕ್
ಇದೀಗ ಸೋನಮ್ ವಾಂಗ್‌ಚುಕ್ ಅವರನ್ನು ಕೂಡ ಲೇಹ್‌ನಿಂದ ಸುಮಾರು 1,500 ಕಿ.ಮೀ. ದೂರದಲ್ಲಿರುವ ರಾಜಸ್ಥಾನದ ಜೋಧ್‌ಪುರ ಜೈಲಿಗೆ ಕರೆದೊಯ್ಯಲಾಗಿದೆ. ಲೇಹ್‌ನಲ್ಲಿ ಹಿಂಸಾಚಾರಕ್ಕೆ ವಾಂಗ್‌ಚುಕ್ ಅವರೇ ಕಾರಣ ಎಂದು ಆರೋಪಿಸಲಾಗಿದೆ. ಅವರ ಹಣಕಾಸಿನ ವ್ಯವಹಾರಗಳು ತನಿಖೆಗೆ ಒಳಪಟ್ಟಿದ್ದು, ಅವರ ಎನ್‌ಜಿಒಗೆ ಎಫ್‌ಸಿಆರ್‌ಎ ಅನುಮತಿಯನ್ನು ರದ್ದುಗೊಳಿಸಲಾಗಿದೆ.
ಕೇಂದ್ರಾಡಳಿತ ಪ್ರದೇಶದಲ್ಲಿ ಶಾಂತಿ ನೆಲೆಸುವಂತೆ ಮಾಡುವುದು ಇದರ ಮುಖ್ಯ ಉದ್ದೇಶ. ಲೇಹ್‌ನಲ್ಲಿ ವಾಂಗ್‌ಚುಕ್ ಅವರ ಉಪಸ್ಥಿತಿಯು ಉದ್ವಿಗ್ನತೆಯನ್ನು ಹೆಚ್ಚಿಸುವ ಸಾಧ್ಯತೆ ಇದೆ. ಲಡಾಖ್ ಚೀನಾ ಗಡಿಯಲ್ಲಿರುವ ಸೂಕ್ಷ್ಮ ವಲಯವಾಗಿರುವುದರಿಂದ ಇಲ್ಲಿ ಯಾವುದೇ ರೀತಿಯ ಅಪಾಯ ಉಂಟಾಗದಂತೆ ತಡೆಯಲು ಈ ರೀತಿ ಕ್ರಮ ಕೈಗೊಳ್ಳಲಾಗಿದೆ.
ರಾಜಸ್ಥಾನದ ಜೋಧ್‌ಪುರ ಜೈಲು ಸುರಕ್ಷಿತ ಜೈಲಾಗಿದ್ದು, ಇಲ್ಲಿ ಈಗಾಗಲೇ ಲಾರೆನ್ಸ್ ಬಿಷ್ಣೋಯ್, ಅಸಾರಾಂ ಮತ್ತು ನಟ ಸಲ್ಮಾನ್ ಖಾನ್ ಅವರಂತಹ ಉನ್ನತ ಮಟ್ಟದ ಕೈದಿಗಳನ್ನು ಇರಿಸಲಾಗಿದೆ. ಎನ್‌ಎಸ್‌ಎ ಅಡಿಯಲ್ಲಿ ಬಂಧನದಲ್ಲಿರುವ ವಾಂಗ್‌ಚುಕ್ ಇಲ್ಲಿ ಹೆಚ್ಚಿನ ಸಮಯ ಕಳೆಯುವ ಸಾಧ್ಯತೆ ಇದೆ.