ಸೂರಜ್‌ಕುಂಡ್ ಜಾತ್ರೆ ದುರಂತ; ಜನರ ಪ್ರಾಣ ಉಳಿಸಲು ಹೋಗಿ ಸಾವನ್ನಪ್ಪಿದ ಪೊಲೀಸ್ ಪದಕ ಪುರಸ್ಕೃತ ಅಧಿಕಾರಿ
ಸೂರಜ್‌ಕುಂಡ್ ಜಾತ್ರೆಯಲ್ಲಿ ನಡೆದ ದುರಂತದ ವೇಳೆ ಜನರ ಪ್ರಾಣಗಳನ್ನು ರಕ್ಷಿಸಲು ಮುಂದಾದ ಪೊಲೀಸ್ ಪದಕ ಪುರಸ್ಕೃತ ಅಧಿಕಾರಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ಸಾವನ್ನಪ್ಪಿದ್ದಾರೆ. ಅವರ ಸಾಹಸ ಮತ್ತು ತ್ಯಾಗಕ್ಕೆ ಸಾರ್ವಜನಿಕರು ಹಾಗೂ ಅಧಿಕಾರಿಗಳು ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.
ಘಟನೆಯ ದೃಶ್ಯ -
ಚಂಡೀಗಢ, ಫೆ. 8: ಹರಿಯಾಣ (Haryana)ದ ಸೂರಜ್‌ಕುಂಡ್ (Surajkund) ಜಾತ್ರೆಯಲ್ಲಿ ಶನಿವಾರ ಸಂಭವಿಸಿದ ಭೀಕರ ಜಾಯ್ ರೈಡ್ ಅಪಘಾತದಲ್ಲಿ, ಜನರ ಪ್ರಾಣ ಉಳಿಸಲು ಹೋಗಿ ಪೊಲೀಸ್ ಅಧಿಕಾರಿಯೊಬ್ಬರು ಮೃತಪಟ್ಟಿದ್ದಾರೆ. ಉತ್ತರ ಪ್ರದೇಶ (Uttar Pradesh)ದ ಮಥುರಾ (Mathura) ನಿವಾಸಿ 57 ವರ್ಷದ ಜಗದೀಶ್ ಪ್ರಸಾದ್ (Jagdish Prasad) ಮೃತ ಪೊಲೀಸ್ ಅಧಿಕಾರಿ. ಇವರು ಹರಿಯಾಣದ ಪಾಲ್ವಾಲ್ (Palwal)ನಲ್ಲಿ ನಿಯೋಜಿತರಾಗಿದ್ದರು. ಜಗದೀಶ್ ಪ್ರಸಾದ್ ಪತ್ನಿ, ಇಬ್ಬರು ಪುತ್ರಿಯರು ಮತ್ತು ಒಬ್ಬ ಪುತ್ರನನ್ನು ಅಗಲಿದ್ದಾರೆ.
ವರದಿಗಳ ಪ್ರಕಾರ ಶನಿವಾರ (ಫೆಬ್ರವರಿ 7) ಮೇಳದಲ್ಲಿ 'ಸುನಾಮಿ' ಎಂಬ ಉಯ್ಯಾಲೆ ಏಕಾಏಕಿ ತುಂಡಾದಿ ಕೆಳಗೆ ಬಿದ್ದಿದ್ದು, ಅದರಲ್ಲಿ ಕುಳಿತಿದ್ದವರು ಕೆಳಗೆ ಬೀಳಲಾರಂಭಿಸಿದ್ದಾರೆ. ಅಲ್ಲಿದ್ದ ಜನರನ್ನು ರಕ್ಷಿಸಲು ಇನ್ಸ್‌ಪೆಕ್ಟರ್ ಜಗದೀಶ್ ಪ್ರಸಾದ್ ಮತ್ತು ಇಬ್ಬರು ಮಹಿಳಾ ಕಾನ್‌ಸ್ಟೇಬಲ್‌ಗಳು ಧಾವಿಸಿದ್ದಾರೆ. ಈ ವೇಳೆ ಜಗದೀಶ್ ಅವರ ತಲೆಗೆ ತೀವ್ರ ಗಾಯಗಳಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ ಎಂದು ವರದಿಗಳು ತಿಳಿಸಿವೆ.
ಅಪಘಾತದ ದೃಶ್ಯ:
A horrifying accident at the Surajkund Fair in Faridabad has once again raised a disturbing question about public safety and official accountability.
— Srijan Pal Singh (@srijanpalsingh) February 8, 2026
The Tsunami swing collapsed mid-air with around 15 people on board. An on-duty police officer, Jagdish Prasad, lost his life… pic.twitter.com/CLUMxwdgsP
ನಿವೃತ್ತಿಯ ಅಂಚಿನಲ್ಲಿದ್ದ ಅಧಿಕಾರಿ
ಜಗದೀಶ್ ಪ್ರಸಾದ್ ಹರಿಯಾಣ ಸಶಸ್ತ್ರ ಪಡೆಯಲ್ಲಿ 1989ರಿಂದ ಸೇವೆ ಸಲ್ಲಿಸುತ್ತಿದ್ದರು. ಅವರು ತಮ್ಮ ಕರ್ತವ್ಯನಿಷ್ಠೆ, ಶಿಸ್ತು ಮತ್ತು ಹೊಣೆಗಾರಿಕೆಗೆ ಹೆಸರುವಾಸಿಯಾಗಿದ್ದರು. ಬರುವ ಮಾರ್ಚ್‌ನಲ್ಲಿ ಜಗದೀಶ್ ಪ್ರಸಾದ್ 36 ವರ್ಷಗಳ ಸುದೀರ್ಘ ಸೇವೆಯ ನಂತರ ನಿವೃತ್ತರಾಗಬೇಕಿತ್ತು. ಅವರ ಕರ್ತವ್ಯ ನಿಷ್ಠೆಯನ್ನು ಗುರುತಿಸಿ 2019-20ರಲ್ಲಿ ಹರಿಯಾಣ ರಾಜ್ಯಪಾಲರು ಅವರಿಗೆ 'ಪೊಲೀಸ್ ಪದಕ' ನೀಡಿ ಗೌರವಿಸಿದ್ದರು.
ಬೆರಳಿನ ತುದಿಯಲ್ಲೇ ಉರಿದ ಗ್ಯಾಸ್ ಸ್ಟೌವ್: ಇದು ಪವಾಡವಲ್ಲ ವಿಜ್ಞಾನ!
1 ಕೋಟಿ ರುಪಾಯಿ ಪರಿಹಾರ ಘೋಷಣೆ
ಘಟನೆಯ ಕುರಿತು ಮಾತನಾಡಿದ ಹರಿಯಾಣ ಪೊಲೀಸ್ ಮಹಾನಿರ್ದೇಶಕ (DGP) ಅಜಯ್ ಸಿಂಘಾಲ್, "ಜನರ ಪ್ರಾಣ ಉಳಿಸಲು ಹೋಗಿ ಸಾವನ್ನಪ್ಪಿದ ಜಗದೀಶ್ ಪ್ರಸಾದ್ ಅವರಿಗೆ 'ಹುತಾತ್ಮ' ಸ್ಥಾನಮಾನ ನೀಡಲಾಗುವುದು. ಅವರ ಕುಟುಂಬಕ್ಕೆ ಸರ್ಕಾರದಿಂದ 1 ಕೋಟಿ ರುಪಾಯಿ ಪರಿಹಾರ ಮತ್ತು ಇತರೆ ಸೌಲಭ್ಯಗಳನ್ನು ನೀಡಲಾಗುವುದು" ಎಂದು ತಿಳಿಸಿದ್ದಾರೆ.
ಇನ್ನು ಈ ಘಟನೆಯಲ್ಲಿ ಸುಮಾರು 11 ಜನರು ಗಾಯಗೊಂಡಿದ್ದು, ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಆ ಉಯ್ಯಾಲೆ ನಡೆಸುವವನ (Vendor) ವಿರುದ್ಧ ಎಫ್‌ಐಆರ್ ದಾಖಲಾಗಿದ್ದು, ಹೆಚ್ಚುವರಿ ಉಪ ಆಯುಕ್ತರ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ. ವಿಶೇಷವೆಂದರೆ, ಅಪಘಾತ ನಡೆದ ಮರುದಿನವೇ ಆ ರೈಡ್ ಅನ್ನು ತೆರವುಗೊಳಿಸಿ ಮತ್ತೊಂದು ಉಯ್ಯಾಲೆಯನ್ನು ಅಲ್ಲಿ ಅಳವಡಿಸಲಾಗಿದೆ.
ಸೂರಜ್‌ಕುಂಡ್ ಜಾತ್ರೆಯಲ್ಲಿ ಈ ಹಿಂದೆಯೂ 2002 ಮತ್ತು 2019ರಲ್ಲಿ ಇಂತಹದ್ದೇ ಅವಘಡಗಳು ಸಂಭವಿಸಿದ್ದು, ಸಾಕಷ್ಟು ಸಾವು-ನೋವುಗಳು ಸಂಭವಿಸಿದ್ದವು ಎಂಬುದು ಗಮನಾರ್ಹ.