ಮಹಾರಾಷ್ಟ್ರದ ಮೊದಲ ಮಹಿಳಾ ಉಪಮುಖ್ಯಮಂತ್ರಿಯಾಗಿ ಸುನೇತ್ರಾ ಪವಾರ್ ಪ್ರಮಾಣ ವಚನ
Sunetra Pawar: ಬುಧವಾರ ನಡೆದ ವಿಮಾನ ಅಪಘಾತದಲ್ಲಿ ಮೃತಪಟ್ಟ ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರ ಪತ್ನಿ ಸುನೇತ್ರಾ ಪವಾರ ನೂತನ ಡಿಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದರು. ಲೋಕ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಿತು.
ಸುನೇತ್ರಾ ಪವಾರ್ (ಸಂಗ್ರಹ ಚಿತ್ರ) -
ಮುಂಬೈ, ಜ. 31: ಪುಣೆ ಜಿಲ್ಲೆಯ ಭಾರಾಮತಿಯಲ್ಲಿ ನಡೆದ ವಿಮಾನ ಅಪಘಾತದಲ್ಲಿ ನಿಧನರಾದ ಮಹಾರಾಷ್ಟ್ರ ಉಪಮುಖ್ಯಮಂತ್ರಿ, ಎನ್‌ಸಿಪಿ (ಅಜಿತ್ ಬಣ) ನಾಯಕ ಅಜಿತ್ ಪವಾರ್ (Ajit Pawar) ಸ್ಥಾನಕ್ಕೆ ಅವರ ಪತ್ನಿ, ರಾಜ್ಯಸಭಾ ಸದ್ಯ ಸುನೇತ್ರಾ ಪವಾರ್ (Sunetra Pawar) ಆಯ್ಕೆಯಾಗಿದ್ದು, ಶನಿವಾರ (ಜನವರಿ 31) ಪ್ರಮಾಣ ವಚನ ಸ್ವೀಕರಿಸಿದರು. ಅಜಿತ್ ಪವಾರ್ ಮೃತಪಟ್ಟ 4ನೇ ದಿನ ಸುನೇತ್ರಾ ಪವಾರ್ ಡಿಸಿಎಂ ಪಟ್ಟಕ್ಕೇರಿದ್ದಾರೆ.
ವಿಶೇಷ ಎಂದರೆ ಮಹಾರಾಷ್ಟ್ರದ ಇತಿಹಾಸದಲ್ಲಿ ಉಪಮುಖ್ಯಮಂತ್ರಿ ಪಟ್ಟಕ್ಕೇರಿದ ಮೊದಲ ಮಹಿಳೆ ಎನ್ನುವ ಹೆಗ್ಗಳಿಕೆಗೆ ಸುನೇತ್ರಾ ಪವಾರ್ ಪಾತ್ರರಾಗಿದ್ದಾರೆ. 62 ವರ್ಷದ ಸುನೇತ್ರಾ ಮುಂಬೈಯ ಲೋಕ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಪ್ರಮಾಣ ವಚನ ಸ್ವೀಕಾರಕ್ಕೂ ಮುನ್ನ ಸುನೇತ್ರಾ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಜತೆ ಚರ್ಚ ನಡೆಸಿದರು. ಅಜಿತ್ ಪವಾರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ನಡೆಸಿ ಅಧಿಕ್ಕಾರಕ್ಕೇರಿದರು.
ಕಾರ್ಯಕ್ರಮದಲ್ಲಿ ರಾಜ್ಯಪಾಲ ಆಚಾರ್ಯ ದೇವ್ರತ್, ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ಉಪಮುಖ್ಯಮಂತ್ರಿ ಏನಕಾಥ ಶಿಂಧೆ ಮತ್ತಿತರರು ಉಪಸ್ಥಿತರಿದ್ದರು.
ಸುನೇತ್ರಾ ಪ್ರಸ್ತುತ ರಾಜ್ಯಸಭೆಯ ಸದಸ್ಯರಾಗಿದ್ದಾರೆ. ಉಪಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ 6 ತಿಂಗಳೊಳಗೆ ಅವರು ವಿಧಾನಸಭೆಗೆ ಆಯ್ಕೆಯಾಗಬೇಕು ಅಥವಾ ವಿಧಾನ ಪರಿಷತ್ತಿಗೆ ನಾಮನಿರ್ದೇಶನಗೊಳ್ಳಬೇಕು. ಅಜಿತ್ ಪವಾರ್ ಅವರ ನಿಧನದೊಂದಿಗೆ ಅವರು ಶಾಸಕಾರಿ ಆಯ್ಕೆಯಾದ ಬಾರಾಮತಿ ಸ್ಥಾನ ಖಾಲಿಯಾಗಿದ್ದು, ಸುನೇತ್ರಾ ಅಲ್ಲಿಂದ ಉಪಚುನಾವಣೆಯಲ್ಲಿ ಸ್ಪರ್ಧಿಸುವ ಸಾಧ್ಯತೆಯಿದೆ.
ಡಿಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ ಸುನೇತ್ರಾ ಪವಾರ್:
#WATCH | Mumbai, Maharashtra: Sunetra Pawar, leader of the NCP legislative party and wife of late Deputy CM Ajit Pawar, takes oath as Deputy CM of Maharashtra at the Lok Bhavan
— ANI (@ANI) January 31, 2026
Maharashtra CM Devendra Fadnavis, Deputy CM Eknath Shinde and other leaders present. pic.twitter.com/qL8IIvNeoR
ಸುನೇತ್ರಾ ಪವಾರ್ ಹಿನ್ನೆಲೆ
ಮಹಾರಾಷ್ಟ್ರ ರಾಜಕೀಯದಲ್ಲಿ ತಮ್ಮದೇ ಛಾಪು ಮೂಡಿಸಿರುವ ಸುನೇತ್ರಾ ಉಪಮುಖ್ಯಮಂತ್ರಿ ಪಟ್ಟಕ್ಕೆ ಸಮರ್ಥ ಆಯ್ಕೆ ಎಂಬ ಮಾತು ಕೆಲವು ದಿನಗಳಿದ ಕೇಳಿ ಬರುತ್ತಲೇ ಇತ್ತು. ಮೂಲತಃ ಮರಾಠವಾಡ ಪ್ರದೇಶದ ಧರಾಶಿವ್ ಮೂಲದ ಸುನೇತ್ರಾ ಕೃಷಿ ಹಿನ್ನೆಲೆಯ ರಾಜಕೀಯ ಕುಟುಂಬದಿಂದ ಬಂದವರು. ಇವರು ರಾಜಕಾರಣಿ ಮಾತ್ರವಲ್ಲ ಸಮಾಜ ಸೇವಕಿ, ಉದ್ಯಮಿ ಮತ್ತು ಶಿಕ್ಷಣ ನಿರ್ವಾಹಕಿಯೂ ಹೌದು. 2024ರಲ್ಲಿ ಲೋಕಸಭಾ ಚುನಾವಣೆಯಲ್ಲಿ ಅವರು ಶರದ್ ಪವಾರ್ ಅವರ ಪುತ್ರಿ ಸುಪ್ರಿಯಾ ಸುಳೆ ವಿರುದ್ಧ ಬಾರಾಮತಿ ಕ್ಷೇತ್ರದಲ್ಲಿ ಸ್ಪರ್ಧಿಸಿ ಸೋತಿದ್ದರು. ಬಳಿಕ ರಾಜ್ಯಸಭೆಗೆ ಆಯ್ಕೆಯಾದರು.
ಅಜಿತ್ ಪವಾರ್ ರಾಜಕೀಯ ಬೆನ್ನೆಲುಬು ಈಕೆ; ಪತ್ನಿ ಸುನೇತ್ರಾ ಪವಾರ್ ಬಗ್ಗೆ ನಿಮಗೆಷ್ಟು ಗೊತ್ತು?
ಸಾಮಾಜಿಕ ಚಟುವಟಿಕೆಯಲ್ಲಿ ಭಾಗಿ
ಸುನೇತ್ರಾ ಬಾರಾಮತಿಯಲ್ಲಿ ಸಾಮಾಜಿಕ ಚಟುವಟಿಕೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಕೆಲವು ವರ್ಷಗಳ ಹಿಂದೆ ಬಾರಾಮತಿ ಬಳಿಯ ಪವಾರ್ ಕುಟುಂಬದ ಪೂರ್ವಜರ ಗ್ರಾಮ ಕಥೇವಾಡಿಯಲ್ಲಿ ನಡೆಸಿದ ನೈರ್ಮಲ್ಯ ಅಭಿಯಾನದ ಮೂಲಕ ಗಮನ ಸೆಳೆದರು. ಅದಾದ ಬಳಿಕ ಕಥೇವಾಡಿ ಸೌರ ಬೀದಿ ದೀಪಗಳು, ಜೈವಿಕ ಅನಿಲ ಸ್ಥಾವರಗಳು, ತ್ಯಾಜ್ಯ ನಿರ್ವಹಣಾ ವ್ಯವಸ್ಥೆಗಳು ಮತ್ತು ಸಾವಯವ ಕೃಷಿ ಪದ್ಧತಿಗಳೊಂದಿಗೆ ಮಾದರಿ ಪರಿಸರ-ಗ್ರಾಮವಾಗಿ ಅಭಿವೃದ್ಧಿ ಹೊಂದಿತು. 2008ರಲ್ಲಿ ಬಾರಾಮತಿ ಹೈಟೆಕ್ ಜವಳಿ ಉದ್ಯಾನವನ ಸ್ಥಾಪನೆಯ ಹಿಂದೆ ಸುನೇತರಾ ಅವರ ಪಾತ್ರ ಮುಖ್ಯವಾಗಿತ್ತು.
ಎನ್‌ಸಿಪಿ 2 ಬಣ ಒಂದಾಗುತ್ತಾ?
ಸದ್ಯ 2 ಹೋಳಾಗಿರುವ ಎನ್‌ಸಿಪಿ ಮತ್ತೆ ಒಂದಾಗುತ್ತ ಎನ್ನುವ ಪ್ರಶ್ನೆ ಉದ್ಭವಿಸಿದೆ. ಎನ್‌ಸಿಪಿಯ 2 ಬಣಗಳ ವಿಲೀನದ ಬಗ್ಗೆ ಊಹಾಪೋಹಗಳ ನಡುವೆಯೇ ಸುನೇತ್ರಾ ಅವರಿಗೆ ಡಿಸಿಎಂ ಪಟ್ಟ ದೊರೆತಿತ್ತು ಕುತೂಹಲ ಮೂಡಿಸಿದೆ. 2023ರಲ್ಲಿ ಅಜಿತ್ ಪವಾರ್ ಮತ್ತು ಅವರ ಚಿಕ್ಕಪ್ಪ, ಅನುಭವಿ ರಾಜಕಾರಣಿ ಶರದ್ ಪವಾರ್ ನೇತೃತ್ವದ ಪಕ್ಷದಿಂದ ಹೊರಬಂದು ಮಹಾರಾಷ್ಟ್ರದಲ್ಲಿ ಬಿಜೆಪಿ-ಶಿವಸೇನೆ ಒಕ್ಕೂಟಕ್ಕೆ ಸೇರಿದಾಗ ಎನ್‌ಸಿಪಿ ವಿಭಜನೆಯಾಯಿತು.