ಅಪಘಾತಕ್ಕೀಡಾದ ಅಜಿತ್ ಪವಾರ್ ಸಂಚರಿಸುತ್ತಿದ್ದ ವಿಮಾನದ ಬ್ಲಾಕ್ ಬಾಕ್ಸ್ ಪತ್ತೆ; ಬಯಲಾಗಲಿದೆ ಸಾವಿನ ರಹಸ್ಯ
Black box found: ಅಜಿತ್ ಪವಾರ್ ಅವರ ಸಾವಿನ ಒಂದು ದಿನದ ಬಳಿಕ ಅಪಘಾತಕ್ಕೀಡಾದ ವಿಮಾನದ ಬ್ಲಾಕ್ ಬಾಕ್ಸ್ ಪತ್ತೆಯಾಗಿದ್ದು, ತನಿಖೆಗೆ ಮಹತ್ವದ ಸುಳಿವು ಸಿಕ್ಕಿದೆ. ಈ ಬ್ಲಾಕ್ ಬಾಕ್ಸ್‌ನಿಂದ ವಿಮಾನದ ತಾಂತ್ರಿಕ ಸ್ಥಿತಿ, ಪೈಲಟ್‌ಗಳ ಸಂವಹನ ಹಾಗೂ ಅಪಘಾತದ ಮುನ್ನದ ಕ್ಷಣಗಳ ಕುರಿತು ಪ್ರಮುಖ ಮಾಹಿತಿಗಳು ಲಭ್ಯವಾಗುವ ನಿರೀಕ್ಷೆಯಿದೆ.
ಅಪಘಾತಕ್ಕೀಡಾದ ವಿಮಾನದ ಬ್ಲಾಕ್ ಬಾಕ್ಸ್ ಪತ್ತೆ -
ನವದೆಹಲಿ, ಜ. 29: ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ (Ajit Pawar) ಮತ್ತು ವಿಮಾನದಲ್ಲಿದ್ದ ಇತರ ನಾಲ್ವರನ್ನು ಬಲಿತೆಗೆದುಕೊಂಡ, ಪತನಗೊಂಡ ಲಿಯರ್‌ಜೆಟ್ ವಿಮಾನದ ಬ್ಲಾಕ್ ಬಾಕ್ಸ್ ಅನ್ನು ತನಿಖಾಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಅಪಘಾತದ (Maharashtra Plane Crash) ನೈಜ ಕಾರಣವನ್ನು ತಿಳಿಯಲು ಫ್ಲೈಟ್ ಡೇಟಾ ರೆಕಾರ್ಡರ್ ಮತ್ತು ಕಾಕ್‌ಪಿಟ್ ವಾಯ್ಸ್ ರೆಕಾರ್ಡರ್ ಅನ್ನು ಒಳಗೊಂಡಿರುವ ಬ್ಲಾಕ್ ಬಾಕ್ಸ್ ಅನ್ನು ವಿಶ್ಲೇಷಿಸಲಾಗುತ್ತದೆ. ಅಪಘಾತದ ಬಗ್ಗೆ ವಿಧಿವಿಜ್ಞಾನ ತನಿಖೆಯನ್ನು ಪ್ರಾರಂಭಿಸಲು ವಿಮಾನ ಅಪಘಾತ ತನಿಖಾ ಬ್ಯೂರೋ (ಎಎಐಬಿ) ವಿಶೇಷ ತಂಡವು ಬುಧವಾರ (ಜನವರಿ 28) ಸಂಜೆ ಅಪಘಾತ ಸ್ಥಳಕ್ಕೆ ಭೇಟಿ ನೀಡಿತು.
ಮಹಾರಾಷ್ಟ್ರದ, ಪುಣೆಯ ಬಾರಾಮತಿ ವಿಮಾನ ನಿಲ್ದಾಣದಲ್ಲಿ ಎರಡನೇ ಬಾರಿ ಲ್ಯಾಂಡಿಂಗ್ ಮಾಡಲು ಪ್ರಯತ್ನಿಸಿದಾಗ ಅಜಿತ್ ಪವಾರ್ ಅವರಿದ್ದ ವಿಮಾನವು ಅಪಘಾತಕ್ಕೀಡಾಯಿತು. ದೆಹಲಿ ಮೂಲದ ಕಂಪನಿ ವಿಎಸ್‌ಆರ್ ವೆಂಚರ್ಸ್ ನಿರ್ವಹಿಸುತ್ತಿದ್ದ ಲಿಯರ್‌ಜೆಟ್ 45 ವಿಮಾನವು ಬೆಳಗ್ಗೆ 8.45ರ ಸುಮಾರಿಗೆ ಪತನಗೊಂಡಿತು. ಪರಿಣಾಮ 66 ವರ್ಷದ ಅಜಿತ್ ಪವಾರ್, ಅವರ ವೈಯಕ್ತಿಕ ಭದ್ರತಾ ಅಧಿಕಾರಿ, ಕಾಕ್‌ಪಿಟ್ ಸಿಬ್ಬಂದಿ, ಪೈಲಟ್-ಇನ್-ಕಮಾಂಡ್ ಸುಮಿತ್ ಕಪೂರ್ ಮತ್ತು ಸಹ ಪೈಲಟ್ ಶಾಂಭವಿ ಪಾಠಕ್ ದುರ್ಮರಣಕ್ಕೀಡಾದರು.
ಅಜಿತ್ ಪವಾರ್ ಪ್ರಯಾಣಿಸುತ್ತಿದ್ದ ವಿಮಾನ ಅಪಘಾತಕ್ಕೀಡಾಗುವ ಮುನ್ನ ಎಡಕ್ಕೆ ವಾಲಿದ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆ
ಅಜಿತ್ ಪವಾರ್ ಬೆಳಗ್ಗೆ 8 ಗಂಟೆ ಸುಮಾರಿಗೆ ಮುಂಬೈಯಿಂದ ಹೊರಟರು. ಸ್ಥಳೀಯ ಸಂಸ್ಥೆ ಚುನಾವಣೆಗೆ ಮುಂಚಿತವಾಗಿ ತಮ್ಮ ಹುಟ್ಟೂರು ಬಾರಾಮತಿಯಲ್ಲಿ ನಾಲ್ಕು ಚುನಾವಣಾ ರ‍್ಯಾಲಿಗಳನ್ನು ಉದ್ದೇಶಿಸಿ ಭಾಷಣ ಮಾಡಲಿದ್ದರು.
ಇನ್ನು ವಿಮಾನ ನೆಲಕ್ಕೆ ಅಪ್ಪಳಿಸಿದಾಗ ಸಿಬ್ಬಂದಿಯ ಕೊನೆ ಮಾತು ''ಹೋ...ಶಿಟ್...'' ಎಂದಾಗಿತ್ತು ಎಂದು ನಾಗರಿಕ ವಿಮಾನಯಾನ ಮಹಾ ನಿರ್ದೇಶನಾಲಯದ (ಡಿಜಿಸಿಎ) ಹಿರಿಯ ಅಧಿಕಾರಿಯೊಬ್ಬರು ಹೇಳಿದರು. ಬಾರಾಮತಿಯಲ್ಲಿ ಎರಡು ಖಾಸಗಿ ವಾಯುಯಾನ ಅಕಾಡೆಮಿಗಳಾದ ರೆಡ್‌ಬರ್ಡ್ ಏವಿಯೇಷನ್ ಮತ್ತು ಕಾರ್ವರ್ ಏವಿಯೇಷನ್‌ನ ಪೈಲಟ್ ಕೆಡೆಟ್‌ಗಳು ಗ್ರೌಂಡ್ ಕಂಟ್ರೋಸ್ ಮಾಡುತ್ತಾರೆ ಎಂದು ಅವರು ಹೇಳಿದರು. ಆದ್ದರಿಂದ ಇದು ಪೈಲಟ್‌ಗಳಿಗೆ ಸಂಪರ್ಕದ ಕೇಂದ್ರವಾಗಿತ್ತು.
ನಾಗರಿಕ ವಿಮಾನಯಾನ ಸಚಿವಾಲಯದ ಹೇಳಿಕೆಯಲ್ಲಿ, ಅಜಿತ್ ಪವಾರ್ ಅವರಿದ್ದ ವಿಮಾನ ಅಪಘಾತಕ್ಕೆ ಕಾರಣಗಳನ್ನು ಅನುಕ್ರಮವಾಗಿ ವಿವರಿಸಿದೆ. ಇದರಲ್ಲಿ ಸಿಬ್ಬಂದಿ ಲ್ಯಾಂಡಿಂಗ್ ಕ್ಲಿಯರೆನ್ಸ್ ಬಗ್ಗೆ ಮರುಪರಿಶೀಲನೆ ಮನವಿ ನೀಡದಿರುವುದು ಆತಂಕಕಾರಿ ಅಂಶ ಎನಿಸಿಕೊಂಡಿದೆ.
ಬೆಳಗ್ಗೆ 8.18ಕ್ಕೆ, VT-SSK ಎಂದು ನೋಂದಾಯಿಸಲಾದ ವಿಮಾನವು ಬಾರಾಮತಿ ವಿಮಾನ ನಿಲ್ದಾಣದೊಂದಿಗೆ ಸಂಪರ್ಕವನ್ನು ಸ್ಥಾಪಿಸಿತು. ಈ ಸಮಯದಲ್ಲಿ, 15,000 ಗಂಟೆಗಳಿಗೂ ಹೆಚ್ಚು ಹಾರಾಟದ ಅನುಭವ ಹೊಂದಿದ್ದ ಪೈಲಟ್ ಕ್ಯಾಪ್ಟನ್ ಸುಮಿತ್ ಕಪೂರ್ ಹಾಗೂ ಸುಮಾರು 1,500 ಗಂಟೆಗಳ ಕಾಲ ಹಾರಾಟ ನಡೆಸಿದ ಸಹ-ಪೈಲಟ್ ಕ್ಯಾಪ್ಟನ್ ಶಾಂಭವಿ ಪಾಠಕ್ ಅವರಿಗೆ ಹವಾಮಾನ ಪರಿಸ್ಥಿತಿಗಳ ಬಗ್ಗೆ ಮಾಹಿತಿ ನೀಡಲಾಯಿತು. ಅವರ ವಿವೇಚನೆಯಿಂದ ಲ್ಯಾಂಡಿಂಗ್ ಮಾಡುವಂತೆ ಸೂಚಿಸಲಾಯಿತು.
ಸಚಿವಾಲಯದ ಅಧಿಕೃತ ಹೇಳಿಕೆಯ ಪ್ರಕಾರ, ಸಿಬ್ಬಂದಿ ಗಾಳಿ ಮತ್ತು ಗೋಚರತೆಯ ಬಗ್ಗೆ ಕೇಳಿದರು. ನಂತರ ಅವರಿಗೆ ಗೋಚರತೆ ಸುಮಾರು 3,000 ಮೀಟರ್ ಎಂದು ತಿಳಿಸಲಾಯಿತು. ನಂತರ ವಿಮಾನವು ರನ್‌ವೇ 11ರ ಬಳಿ ಲ್ಯಾಂಡ್ ಮಾಡಲು ನಿರ್ಧರಿಸಿತು. ಕೆಲವು ಕ್ಷಣಗಳ ನಂತರ, ಪೈಲಟ್ ಲ್ಯಾಂಡಿಂಗ್ ಸ್ಟ್ರಿಪ್ ಸರಿಯಾಗಿ ಕಾಣುತ್ತಿಲ್ಲ ಎಂದು ಹೇಳಿದರು. ಹೀಗಾಗಿ ಮತ್ತೆ ಕೆಲವು ರೌಂಡ್ ಹಾರಾಟ ನಡೆಸುವಂತೆ ಸೂಚಿಸಲಾಯಿತು. ಹಾರಾಟ ನಡೆಸಿದ ನಂತರ, ರನ್‌ವೇ ಈಗ ಸ್ಪಷ್ಟವಾಗಿ ಕಾಣುತ್ತಿದೆಯೇ ಎಂದು ದೃಢೀಕರಣ ಕೇಳಲಾಗಿದೆ. ಅದಕ್ಕೆ ಹೌದು ಎಂದು ಉತ್ತರ ನೀಡಿದ್ದಾರೆ.
ನಂತರ ಬೆಳಗ್ಗೆ 8:43ಕ್ಕೆ ವಿಮಾನವನ್ನು ಇಳಿಸಲು ಅನುಮತಿ ನೀಡಲಾಯಿತು. ಆದರೆ ಲ್ಯಾಂಡಿಂಗ್ ಕ್ಲಿಯರೆನ್ಸ್ ಬಗ್ಗೆ ಯಾವುದೇ ಮರುಪರಿಶೀಲನೆ ಇರಲಿಲ್ಲ. ನಂತರ ಕೆಲವೇ ಹೊತ್ತಿನಲ್ಲಿ ರನ್ ವೇ ಬಳಿ ಬೆಂಕಿಯುಂಟಾಗಿರುವುದನ್ನು ಎಟಿಸಿ (ವಾಯು ಸಂಚಾರ ನಿಯಂತ್ರಣ) ನೋಡಿರುವುದಾಗಿ ಸಚಿವಾಲಯ ತಿಳಿಸಿದೆ.