ನೇರ ವಿಮಾನ ಹಾರಾಟ, ಫೈಟರ್ ಜೆಟ್ ಒಪ್ಪಂದ; ಭಾರತದ ವಿರುದ್ಧ ಪಾಕಿಸ್ತಾನ ಪರ ನಿಂತಿತೇ ಬಾಂಗ್ಲಾದೇಶ?
ಸರಿಸುಮಾರು 14 ವರ್ಷಗಳ ಬಳಿಕ ಪಾಕಿಸ್ತಾನ ಜೊತೆ ಬಾಂಗ್ಲಾದೇಶ ಮೈತ್ರಿಯನ್ನು ಗಾಢ ಗೊಳಿಸುತ್ತಿರುವ ಸುಳಿವು ಸಿಕ್ಕಿದೆ. ಈಗಾಗಲೇ ಬಾಂಗ್ಲಾದೇಶವು ಇಸ್ಲಾಮಾಬಾದ್ ನೊಂದಿಗೆ ನೇರ ವಿಮಾನ ಹಾರಾಟ, ಫೈಟರ್ ಜೆಟ್ ಒಪ್ಪಂದಕ್ಕೆ ಅಣಿಯಾಗಿದೆ. ಮಾಜಿ ಪ್ರಧಾನಿ ಶೇಖ್ ಹಸೀನಾ ಅವರು ಅಧಿಕಾರ ಪತನದ ಬಳಿಕ ಭಾರತಕ್ಕೆ ಬಂದು ನೆಲೆಯಾಗಿದ್ದು, ಇದು ಭಾರತ ಮತ್ತು ಬಾಂಗ್ಲಾದೇಶ ನಡುವಿನ ಸಂಬಂಧ ಹದಗೆಡಲು ಕಾರಣವಾಗಿದೆ.
ಸಂಗ್ರಹ ಚಿತ್ರ -
ನವದೆಹಲಿ: ಭಾರತದೊಂದಿಗೆ ಸಂಬಂಧ ಹದಗೆಟ್ಟ ಬಳಿಕ ಬಾಂಗ್ಲಾದೇಶವು (Bangladesh) ಪಾಕಿಸ್ತಾನಕ್ಕೆ (Pakistan) ಹತ್ತಿರವಾಗುತ್ತಿದೆಯೇ ? ಈ ಒಂದು ಪ್ರಶ್ನೆ ಈಗ ದೇಶದ ರಾಜಕೀಯ ತಜ್ಞರನ್ನು ಕಾಡುತ್ತಿದೆ. ಯಾಕೆಂದರೆ ಸರಿಸುಮಾರು 14 ವರ್ಷಗಳ ಬಳಿಕ ಪಾಕಿಸ್ತಾನ ಜೊತೆ ಬಾಂಗ್ಲಾದೇಶ ಮೈತ್ರಿಯನ್ನು ಗಾಢ ಗೊಳಿಸುತ್ತಿದೆ. ಈಗಾಗಲೇ ಬಾಂಗ್ಲಾದೇಶವು ಇಸ್ಲಾಮಾಬಾದ್ ನೊಂದಿಗೆ ನೇರ ವಿಮಾನ ಹಾರಾಟ (Direct flights), ಫೈಟರ್ ಜೆಟ್ ಒಪ್ಪಂದಕ್ಕೆ (fighter jet deal) ಸಿದ್ಧತೆ ನಡೆಸುತ್ತಿದೆ. ಮಾಜಿ ಪ್ರಧಾನಿ ಶೇಖ್ ಹಸೀನಾ (Sheikh Hasina) ಅವರು ಅಧಿಕಾರ ಪತನದ ಬಳಿಕ ಭಾರತಕ್ಕೆ ಬಂದು ನೆಲೆಯಾಗಿದ್ದು, ಇದು ಭಾರತ ಮತ್ತು ಬಾಂಗ್ಲಾದೇಶ ನಡುವಿನ ಸಂಬಂಧ ಹದಗೆಡಲು ಕಾರಣವಾಗಿದೆ.
2024ರ ಆಗಸ್ಟ್ ತಿಂಗಳಲ್ಲಿ ಬಾಂಗ್ಲಾದೇಶದಲ್ಲಿ ನಡೆದ ವಿದ್ಯಾರ್ಥಿಗಳ ಪ್ರತಿಭಟನೆಯ ಪರಿಣಾಮವಾಗಿ ಪ್ರಧಾನಿ ಶೇಖ್ ಹಸೀನಾ ಅವರು ಅಧಿಕಾರ ಕಳೆದುಕೊಂಡರು. ಅವರ ಸರ್ಕಾರದ ಪತನದ ಬಳಿಕ ನೊಬೆಲ್ ಪ್ರಶಸ್ತಿ ವಿಜೇತ ಮುಹಮ್ಮದ್ ಯೂನಸ್ ಅಧಿಕಾರವಹಿಸಿಕೊಂಡಿದ್ದು, ತಕ್ಷಣವೇ ಢಾಕಾ ಮತ್ತು ಇಸ್ಲಾಮಾಬಾದ್ ನಡುವಿನ ಸಂಬಂಧದಲ್ಲಿ ಸುಧಾರಣೆ ಕಾರ್ಯಗಳು ನಡೆಯಲು ಪ್ರಾರಂಭವಾಯಿತು.
ವೆನೆಜುವೆಲಾ ಜತೆ ಸಂಬಂಧ ಸದೃಢಗೊಳಿಸಲು ಹಂಗಾಮಿ ಅಧ್ಯಕ್ಷರೊಂದಿಗೆ ಪ್ರಧಾನಿ ಮೋದಿ ಮಾತುಕತೆ
ಬಾಂಗ್ಲಾದೇಶ ಮತ್ತು ಪಾಕಿಸ್ತಾನದ ನಡುವಿನ ಸಂಬಂಧವು ದಕ್ಷಿಣ ಏಷ್ಯಾದ ಭೌಗೋಳಿಕ ರಾಜಕೀಯ ಭೂದೃಶ್ಯದಲ್ಲಿ ಬದಲಾವಣೆಯನ್ನು ಉಂಟು ಮಾಡಿದೆ. ಇದರಲ್ಲಿ ಪ್ರಮುಖ ಹೆಜ್ಜೆಯಾಗಿ ಬಾಂಗ್ಲಾದೇಶ ಮತ್ತು ಪಾಕಿಸ್ತಾನ ನಡುವೆ 14 ವರ್ಷಗಳ ಬಳಿಕ ಅಧಿಕೃತವಾಗಿ ನೇರ ವಾಯು ಸಂಪರ್ಕ ಆರಂಭಗೊಂಡಿದೆ. ಪ್ರಯಾಣಿಕ ವಿಮಾನಗಳ ಪುನರಾರಂಭವಾಗುತ್ತಿದ್ದಂತೆ ಬಹು ಮಿಲಿಯನ್ ರಕ್ಷಣಾ ಒಪ್ಪಂದದ ಕುರಿತು ಉನ್ನತ ಮಟ್ಟದ ಮಾತುಕತೆಗಳು ನಡೆಯಲಾರಂಭಿಸಿದೆ.
ಶೇಖ್ ಹಸೀನಾ ಅವರ ಅಧಿಕಾರ ಪತನವಾದ ಬಳಿಕ ಅವರು ಭಾರತಕ್ಕೆ ಬಂದು ನೆಲೆಯಾಗಿದ್ದು, ಅವರಿಗೆ ಬಾಂಗ್ಲಾದೇಶದ ನ್ಯಾಯಾಲಯ ಮರಣದಂಡನೆ ಶಿಕ್ಷೆಗೆ ಗುರಿಯಾಗಿಸಿದೆ. ಅವರನ್ನು ಗಡಿಪಾರು ಮಾಡುವಂತೆ ನವದೆಹಲಿಗೆ ಢಾಕಾ ಮನವಿಯನ್ನು ಕೂಡ ಮಾಡಿದೆ.
ಕರಾಚಿಯಲ್ಲಿ ಸ್ವಾಗತ
ಢಾಕಾದಿಂದ ಬಂದ ಮೊದಲ ಬಿಮನ್ ಬಾಂಗ್ಲಾದೇಶ ಏರ್ ಲೈನ್ಸ್ ವಿಮಾನವನ್ನು ಗುರುವಾರ ಕರಾಚಿಯ ಜಿನ್ನಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಾಂಪ್ರದಾಯಿಕವಾಗಿ ವಾಟರ್ ಸೆಲ್ಯೂಟ್ ಮೂಲಕ ಸ್ವಾಗತಿಸಲಾಯಿತು. ಇದು 2012ರಲ್ಲಿ ಮುಕ್ತಾಯಗೊಂಡಿದ್ದ ನೇರ ವಿಮಾನ ಕಾರ್ಯಾಚರಣೆಯನ್ನು ಪುನರ್ ಆರಂಭಗೊಳಿಸಿತು.
ಈ ಕುರಿತು ಪ್ರತಿಕ್ರಿಯಿಸಿರುವ ಪಾಕಿಸ್ತಾನ ವಿಮಾನ ನಿಲ್ದಾಣ ಪ್ರಾಧಿಕಾರ (ಪಿಎಎ), ಇದು ಪಾಕಿಸ್ತಾನ ಮತ್ತು ಬಾಂಗ್ಲಾದೇಶ ಸ್ನೇಹದಲ್ಲಿ ಹೊಸ ಅಧ್ಯಾಯ ಎಂದು ಹೇಳಿದೆ. ಸದ್ಯ ಬಾಂಗ್ಲಾದೇಶದ ರಾಷ್ಟ್ರೀಯ ವಿಮಾನಯಾನ ಸಂಸ್ಥೆಯು ವಾರದಲ್ಲಿ ಎರಡು ಬಾರಿ ಗುರುವಾರ ಮತ್ತು ಶನಿವಾರ ತಡೆರಹಿತ ವಿಮಾನ ಸಂಪರ್ಕವನ್ನು ಹೊಂದಿದೆ.
ಸದ್ಯ ತಾತ್ಕಾಲಿಕ ಪರವಾನಿಗೆಯಲ್ಲಿ ಕಾರ್ಯನಿರ್ವಹಿಸುವ ಈ ವಿಮಾನಗಳ ಕಾರ್ಯಾಚರಣೆಯು ಮಾರ್ಚ್ 30 ರವರೆಗೆ ಮಾನ್ಯವಾಗಿರುತ್ತದೆ. ಢಾಕಾದಿಂದ ವಿಮಾನವು ಸ್ಥಳೀಯ ಸಮಯ ರಾತ್ರಿ 8 ಗಂಟೆಗೆ ಹೊರಟು ರಾತ್ರಿ 11 ಗಂಟೆಗೆ ಕರಾಚಿ ತಲುಪಲಿದೆ. ಬಳಿಕ ಮಧ್ಯರಾತ್ರಿ ಕರಾಚಿಯಿಂದ ಹೊರಟು ಬೆಳಗ್ಗೆ 4.20ಕ್ಕೆ ಢಾಕಾ ತಲುಪಲಿದೆ.
ಫೈಟರ್ ಜೆಟ್ ಒಪ್ಪಂದ
ಬಾಂಗ್ಲಾದೇಶ ಮತ್ತು ಪಾಕಿಸ್ತಾನದ ನಡುವೆ ಜೆಎಫ್-17 ಥಂಡರ್ ಫೈಟರ್ ಜೆಟ್ ಖರೀದಿ ಸಂಬಂಧ ಔಪಚಾರಿಕ ಮಾತುಕತೆಗಳು ನಡೆಯುತ್ತಿವೆ. ಇತ್ತೀಚೆಗೆ ಈ ಕುರಿತು ನಡೆದ ಸಭೆಯಲ್ಲಿ ಇಸ್ಲಾಮಾಬಾದ್‌ನಲ್ಲಿ ಪಾಕಿಸ್ತಾನದ ಏರ್ ಚೀಫ್ ಮಾರ್ಷಲ್ ಜಹೀರ್ ಅಹ್ಮದ್ ಬಾಬರ್ ಸಿಧು ಮತ್ತು ಬಾಂಗ್ಲಾದೇಶದ ಏರ್ ಚೀಫ್ ಮಾರ್ಷಲ್ ಹಸನ್ ಮಹಮೂದ್ ಖಾನ್ ಪಾಲ್ಗೊಂಡಿದ್ದರು.
ಈ ಸಭೆಯಲ್ಲಿ ಇಸ್ಲಾಮಾಬಾದ್ ಸಮಗ್ರ ತರಬೇತಿ ಮತ್ತು ಪೂರಕ ಪರಿಸರ ವ್ಯವಸ್ಥೆಯೊಂದಿಗೆ ಸೂಪರ್ ಮುಷ್ಶಾಕ್ ತರಬೇತಿ ವಿಮಾನಗಳ ತ್ವರಿತ ವಿತರಣೆ ಮಾಡುವುದಾಗಿ ಢಾಕಾಗೆ ಭರವಸೆ ನೀಡಿದೆ. ಪಾಕಿಸ್ತಾನವು ಇತ್ತೀಚೆಗೆ ಲಿಬಿಯಾ ರಾಷ್ಟ್ರೀಯ ಸೇನೆಯೊಂದಿಗೆ 4 ಬಿಲಿಯನ್ ಡಾಲರ್ ಒಪ್ಪಂದವನ್ನು ಅಂತಿಮಗೊಳಿಸಿತ್ತು.
Trashi-I: ಜಮ್ಮು ಕಾಶ್ಮೀರದ ಕಿಶ್ತ್ವಾರದಲ್ಲಿ ಎನ್‌ಕೌಂಟರ್; ಭಯೋತ್ಪಾದಕರನ್ನು ಸುತ್ತುವರಿದ ಭದ್ರತಾ ಪಡೆ
ಪಾಕಿಸ್ತಾನ ಮತ್ತು ಬಾಂಗ್ಲಾದೇಶ ಹತ್ತಿರವಾಗುತ್ತಿದ್ದರೂ ಭಾರತದೊಂದಿಗೆ ಢಾಕಾ ಸಂಬಂಧ ಮುಂದುವರಿದಿದೆ. ಹೊಸ ಢಾಕಾ- ಕರಾಚಿ ವಿಮಾನ ಮಾರ್ಗವು ವಿವಾದದ ಅಂಶವಾಗಿದ್ದು, ಎರಡು ನಗರಗಳ ನಡುವೆ ಇರುವ ಮಾರ್ಗವು ಕೇಂದ್ರ ಭಾರತೀಯ ವಾಯುಪ್ರದೇಶದ ಮೂಲಕ ಸಾಗುತ್ತದೆ. ಇದಕ್ಕಾಗಿ ಬಿಮಾನ್ ಬಾಂಗ್ಲಾದೇಶ ಏರ್‌ಲೈನ್ಸ್ ನವದೆಹಲಿಯಿಂದ ಅಗತ್ಯವಾದ ಓವರ್‌ಫ್ಲೈಟ್ ಅನುಮತಿಗಳನ್ನು ಪಡೆದುಕೊಂಡಿದೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಪಾಕಿಸ್ತಾನ ನಾಗರಿಕ ವಿಮಾನಯಾನ ಪ್ರಾಧಿಕಾರವು ಬಾಂಗ್ಲಾದೇಶದ ವಿಮಾನಯಾನ ಸಂಸ್ಥೆಗಾಗಿ ಪಾಕಿಸ್ತಾನಿ ವಾಯುಪ್ರದೇಶದೊಳಗೆ ನಿಗದಿತ ವಾಯು ಪ್ರದೇಶವನ್ನು ಬಳಸಲು ಅನುಮೋದನೆ ನೀಡಿದೆ.