ಸ್ವಿಗ್ಗಿ ದಾರಿ ಹಿಡಿದ ಜೊಮ್ಯಾಟೋ: ಗ್ರಾಹಕರಿಗೆ ಹೆಚ್ಚುವರಿ ಪ್ಲಾಟ್‌ಫಾರ್ಮ್ ಶುಲ್ಕದ ಬರೆ!
ಸ್ವಿಗ್ಗಿ ಮತ್ತು ಜೊಮ್ಯಾಟೋ ತಮ್ಮ ಪ್ಲಾಟ್‌ಫಾರ್ಮ್ ಶುಲ್ಕವನ್ನು ಹೆಚ್ಚಿಸಿದ್ದು, ಗ್ರಾಹಕರ ಮೇಲೆ ಹೆಚ್ಚುವರಿ ಭಾರ ಉಂಟುಮಾಡಿದೆ. ಸಣ್ಣ ಏರಿಕೆಯಂತೆ ಕಂಡರೂ, ಹೆಚ್ಚಿನ ಆರ್ಡರ್‌ಗಳ ಹಿನ್ನೆಲೆಯಲ್ಲಿ ಕಂಪನಿಗಳಿಗೆ ಇದು ದೊಡ್ಡ ಲಾಭವನ್ನು ತರುತ್ತಿದೆ. ಈ ಕ್ರಮವು ಆಹಾರ ವಿತರಣೆಯನ್ನು ದುಬಾರಿಯಾಗಿಸುತ್ತಿದೆ ಎಂಬ ಆತಂಕ ವ್ಯಕ್ತವಾಗಿದೆ.
ಸ್ವಿಗ್ಗಿ- ಜೊಮ್ಯಾಟೋ ಎಐ ರಚಿತ ಚಿತ್ರ -
ನವದೆಹಲಿ: ಭಾರತ (India)ದ ಪ್ರಮುಖ ಆಹಾರ ವಿತರಣಾ ಸಂಸ್ಥೆಗಳಾದ ಸ್ವಿಗ್ಗಿ (Swiggy) ಮತ್ತು ಜೊಮ್ಯಾಟೋ (Zomato) ತಮ್ಮ ಪ್ಲಾಟ್‌ಫಾರ್ಮ್ ಶುಲ್ಕ (Platform Fee)ವನ್ನು ಸತತವಾಗಿ ಏರಿಕೆ ಮಾಡುವ ಮೂಲಕ ಗ್ರಾಹಕರಿಗೆ ಶಾಕ್ ನೀಡಿವೆ. ಇತ್ತೀಚಿನ ವರದಿಯ ಪ್ರಕಾರ, ಸ್ವಿಗ್ಗಿ ತನ್ನ ಪ್ಲಾಟ್‌ಫಾರ್ಮ್ ಶುಲ್ಕವನ್ನು 14.99 ರೂಪಾಯಿಯಿಂದ 17.58 ರೂಪಾಯಿಗೆ ಹೆಚ್ಚಿಸಿದೆ. ಕಳೆದ ವಾರವಷ್ಟೇ ಜೊಮ್ಯಾಟೋ ತನ್ನ ಶುಲ್ಕವನ್ನು 14.90 ರೂಪಾಯಿಗೆ ಪರಿಷ್ಕರಿಸಿತ್ತು. ಇದೀಗ ಸ್ವಿಗ್ಗಿ ತನ್ನ ಪ್ರತಿಸ್ಪರ್ಧಿಗಿಂತಲೂ ಒಂದು ಹೆಜ್ಜೆ ಮುಂದೆ ಹೋಗಿ ಸುಮಾರು 18 ರೂಪಾಯಿಗಳವರೆಗೆ ಶುಲ್ಕ ವಿಧಿಸಲು ನಿರ್ಧರಿಸಿದೆ. ಈ ಹಠಾತ್ ಏರಿಕೆಯು ಆನ್‌ಲೈನ್‌ನಲ್ಲಿ ಆಹಾರ ಆರ್ಡರ್ ಮಾಡುವ ಪ್ರತಿಯೊಬ್ಬ ಗ್ರಾಹಕನ ಜೇಬಿಗೆ ನೇರ ಹೊರೆಯಾಗಲಿದ್ದು, ಪ್ರತಿ ಆರ್ಡರ್ ಮೇಲೂ ಈ ಮೊತ್ತವನ್ನು ಕಡ್ಡಾಯವಾಗಿ ಪಾವತಿಸಬೇಕಾಗುತ್ತದೆ.
ಸಾಮಾಜಿಕ ಜಾಲತಾಣಗಳಲ್ಲಿ ಈ ಕುರಿತು ವ್ಯಾಪಕ ಚರ್ಚೆಗಳು ನಡೆಯುತ್ತಿದ್ದು, ಆಹಾರ ವಿತರಣೆಯು ಇನ್ನು ಮುಂದೆ ಸಾಮಾನ್ಯ ಜನರಿಗೆ ಭರಿಸಲಾಗದಷ್ಟು ದುಬಾರಿಯಾಗಲಿದೆ ಎಂಬ ಆತಂಕ ವ್ಯಕ್ತವಾಗಿದೆ. ಅನೇಕ ಬಳಕೆದಾರರು ಇದನ್ನು ಕಂಪನಿಗಳ "ಲಾಭದ ಹಂತ" (Profitability Phase) ಎಂದು ಕರೆದಿದ್ದಾರೆ.
ಆರಂಭದಲ್ಲಿ ಭಾರಿ ರಿಯಾಯಿತಿಗಳನ್ನು ನೀಡಿ ಗ್ರಾಹಕರನ್ನು ಸೆಳೆದಿದ್ದ ಈ ಕಂಪನಿಗಳು, ಈಗ ಸಬ್ಸಿಡಿ ನೀಡುವ ಹಂತವನ್ನು ಕೊನೆಗೊಳಿಸಿ ಲಾಭದ ಕಡೆಗೆ ಮುಖ ಮಾಡಿವೆ. ಮೇಲ್ನೋಟಕ್ಕೆ ಎರಡು ಅಥವಾ ಮೂರು ರೂಪಾಯಿಗಳ ಏರಿಕೆ ಸಣ್ಣದಾಗಿ ಕಂಡರೂ, ದಿನಕ್ಕೆ ಲಕ್ಷಾಂತರ ಆರ್ಡರ್‌ಗಳು ನಡೆಯುವ ಕಾರಣ ಈ ಸಣ್ಣ ಮೊತ್ತವು ಕಂಪನಿಗಳಿಗೆ ಕೋಟಿಗಟ್ಟಲೆ ಲಾಭವನ್ನು ತಂದುಕೊಡುತ್ತದೆ ಎಂದು ಮಾರುಕಟ್ಟೆ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.
ಚಾಟ್ ಅಂಗಡಿಯಲ್ಲಿ ಕಾಲಿನಿಂದ ಆಲೂಗಡ್ಡೆ ಸ್ವಚ್ಛ ಗೊಳಿಸಿದ ಸಿಬ್ಬಂದಿ: ಆಕ್ರೋಶ ಹೊರಹಾಕಿದ ನೆಟ್ಟಿಗರು
ಹೆಚ್ಚುತ್ತಿರುವ ಬೆಲೆಯ ನಡುವೆಯೂ ಜನರಿಗೆ ಆನ್‌ಲೈನ್ ಮೂಲಕ ಆಹಾರ ತರಿಸಿಕೊಳ್ಳುವುದು ಒಂದು "ಚಟ" ಅಥವಾ ಅನಿವಾರ್ಯ ಜೀವನಶೈಲಿಯಾಗಿ ಪರಿಣಮಿಸಿರುವುದರಿಂದ, ಕಂಪನಿಗಳ ವ್ಯವಹಾರದ ಮೇಲೆ ಯಾವುದೇ ದೊಡ್ಡ ನಕಾರಾತ್ಮಕ ಪರಿಣಾಮ ಬೀರುವುದಿಲ್ಲ ಎಂಬ ವಾದವೂ ಕೇಳಿಬರುತ್ತಿದೆ.
"ಒಮ್ಮೆ ಈ ಸೌಕರ್ಯಕ್ಕೆ ಜನರು ಮರುಳಾದ ಮೇಲೆ ಅಥವಾ ಅಭ್ಯಾಸ ಮಾಡಿಕೊಂಡ ಮೇಲೆ, ಕಂಪನಿಗಳು ಅದರ ಸಂಪೂರ್ಣ ಲಾಭ ಪಡೆಯುತ್ತವೆ" ಎಂದು ನೆಟ್ಟಿಗರು ಟೀಕಿಸಿದ್ದಾರೆ. ಕೆಲವು ಗ್ರಾಹಕರು "ಪ್ಲಾಟ್‌ಫಾರ್ಮ್ ಶುಲ್ಕವೇ ಈಗ ಆಹಾರದ ಅಸಲಿ ಬೆಲೆಯಾಗುತ್ತಿದೆ" ಎಂದು ವ್ಯಂಗ್ಯವಾಡಿದ್ದಾರೆ. ಒಟ್ಟಾರೆಯಾಗಿ, ಬದಲಾಗುತ್ತಿರುವ ಜೀವನಶೈಲಿಯಿಂದಾಗಿ ಭಾರತದಲ್ಲಿ ಆನ್‌ಲೈನ್ ಆಹಾರ ವಿತರಣೆಯ ಮೇಲಿನ ಅವಲಂಬನೆ ಹೆಚ್ಚಾಗುತ್ತಿದ್ದು, ಕಂಪನಿಗಳು ಗ್ರಾಹಕರ ಈ ಅನಿವಾರ್ಯತೆಯನ್ನು ಬಂಡವಾಳ ಮಾಡಿಕೊಳ್ಳುತ್ತಿವೆ ಎಂಬುದು ಸ್ಪಷ್ಟವಾಗಿದೆ.