ಜಮ್ಮು-ಕಾಶ್ಮೀರದ ಬಾರಾಮುಲ್ಲಾದಲ್ಲಿ ಭಯೋತ್ಪಾದಕ ಅಡಗುತಾಣ ಪತ್ತೆ; ಮೂವರು ಉಗ್ರರನ್ನು ಸುತ್ತುವರಿದ ಭದ್ರತಾ ಪಡೆ
Security Forces Surround Terrorists: ಜಮ್ಮು ಕಾಶ್ಮೀರದ ಬಾರಾಮುಲ್ಲಾದ ನಿಲ್ಸಾರ್ ಕಾಂಡಿ ಪ್ರದೇಶದಲ್ಲಿ ಜಂಟಿ ಕಾರ್ಯಾಚರಣೆ ನಡೆಸಿರುವ ಭದ್ರತಾ ಪಡೆಗಳು ಭಾರಿ ಪ್ರಮಾಣದ ರಾಕೆಟ್ ಪ್ರೊಪೆಲ್ಡ್ ಗ್ರೆನೇಡ್ ಸ್ಫೋಟಕ ಸಾಮಗ್ರಿಗಳನ್ನು ಪತ್ತೆಹಚ್ಚಿದ್ದಾರೆ. ಈ ಸ್ಫೋಟಕ ಸಾಮಗ್ರಿಗಳನ್ನು ಸಮಯಕ್ಕೆ ಸರಿಯಾಗಿ ವಶಪಡಿಸಿಕೊಂಡಿರುವುದರಿಂದ ಸಂಭವಿಸಬಹುದಾಗಿದ್ದ ದೊಡ್ಡ ಅಪಾಯ ತಪ್ಪಿದೆ ಎಂದು ಮೂಲಗಳು ತಿಳಿಸಿವೆ.
ಜಮ್ಮು ಮತ್ತು ಕಾಶ್ಮೀರದಲ್ಲಿ ಸ್ಫೋಟಕ ಸಾಮಗ್ರಿ ಪತ್ತೆ -
ಶ್ರೀನಗರ, ಮೇ 24: ಉತ್ತರ ಕಾಶ್ಮೀರದಲ್ಲಿ (Jammu and Kashmir) ಭಯೋತ್ಪಾದಕರ ಸಂಚುಗಳಿಗೆ ದೊಡ್ಡ ಹೊಡೆತ ನೀಡಿರುವ ಭದ್ರತಾ ಪಡೆಗಳು ಬಾರಾಮುಲ್ಲಾದ ನಿಲ್ಸಾರ್ ಕಾಂಡಿ ಪ್ರದೇಶದಲ್ಲಿ ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಭಾರಿ ಪ್ರಮಾಣದ ರಾಕೆಟ್ ಪ್ರೊಪೆಲ್ಡ್ ಗ್ರೆನೇಡ್ (RPG) ಸ್ಫೋಟಕ ಸಾಮಗ್ರಿಗಳನ್ನು ಪತ್ತೆಹಚ್ಚಿದ್ದಾರೆ. ಗುಪ್ತಚರ ಮಾಹಿತಿಯ ಮೇರೆಗೆ ಬಾರಾಮುಲ್ಲಾ ಪೊಲೀಸರು, 52 ರಾಷ್ಟ್ರೀಯ ರೈಫಲ್ಸ್ ಮತ್ತು ಸಿಆರ್‌ಪಿಎಫ್‌ನ ಜಂಟಿ ತಂಡವು ಈ ಪ್ರದೇಶದಲ್ಲಿ ಸುತ್ತುವರಿದು ಶೋಧ ಕಾರ್ಯಾಚರಣೆ ನಡೆಸಿ ಭಯೋತ್ಪಾದಕರ ಅಡಗುತಾಣವನ್ನು ಭೇದಿಸಿದೆ.
ಈ ಕಾರ್ಯಾಚರಣೆಯಲ್ಲಿ 14 ಸುತ್ತು OG-7V RPG ಮದ್ದುಗುಂಡುಗಳು ಮತ್ತು ಒಂಬತ್ತು ಸುತ್ತು PG-7P RPG ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಸ್ಫೋಟಕ ಸಾಮಗ್ರಿಗಳನ್ನು ಸಮಯಕ್ಕೆ ಸರಿಯಾಗಿ ವಶಪಡಿಸಿಕೊಂಡಿರುವುದರಿಂದ ಸಂಭವಿಸಬಹುದಾಗಿದ್ದ ದೊಡ್ಡ ಅಪಾಯ ತಪ್ಪಿದೆ ಎಂದು ಮೂಲಗಳು ತಿಳಿಸಿವೆ. ಉತ್ತರ ಕಾಶ್ಮೀರದಲ್ಲಿ ನಿರಂತರವಾಗಿ ನಡೆಯುತ್ತಿರುವ ಉಗ್ರ ವಿರೋಧಿ ಕಾರ್ಯಾಚರಣೆಯಲ್ಲಿ ಇದನ್ನು ಮಹತ್ವದ ಯಶಸ್ಸಾಗಿ ಪರಿಗಣಿಸಲಾಗಿದೆ.
ಜಮ್ಮು ಮತ್ತು ಕಾಶ್ಮೀರದಲ್ಲಿ ಶಸ್ತ್ರಾಸ್ತ್ರ ಪತ್ತೆ:
Major success for security forces in the Nilsar Kandi area of Baramulla. Arms and ammunition recovered. pic.twitter.com/bARCWdZFo0
— Anku Chahar (@anku_chahar) May 24, 2026
ವಶಪಡಿಸಿಕೊಂಡ ಮದ್ದುಗುಂಡುಗಳನ್ನು ವಿಧಿವಿಜ್ಞಾನ ವಿಶ್ಲೇಷಣೆ ಮತ್ತು ಹೆಚ್ಚಿನ ತನಿಖೆಗೆ ಒಳಪಡಿಸಲಾಗುತ್ತದೆ. ಭಯೋತ್ಪಾದಕ ಸಂಪರ್ಕಗಳನ್ನು ಪತ್ತೆಹಚ್ಚಲು ಭದ್ರತಾ ಪಡೆಗಳು ಪಕ್ಕದ ಪ್ರದೇಶಗಳಲ್ಲಿ ಶೋಧ ಕಾರ್ಯಾಚರಣೆಯನ್ನು ವಿಸ್ತರಿಸಿದ್ದರೂ ಸಹ, ಸಂಬಂಧಿತ ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಪೂಂಚ್‌ನಲ್ಲಿ ಒಳನುಸುಳಲು ಯತ್ನಸಿದ ಭಯೋತ್ಪಾದಕರನ್ನು ತಡೆದ ಭಾರತೀಯ ಸೇನೆ
ರಾಜೌರಿ ಗಡಿಭಾಗದ ದಟ್ಟವಾದ ಗಂಭೀರ್ ಮುಘ್ಲಾನ್ ಕಾಡು ಪ್ರದೇಶದಲ್ಲಿ ಮೂವರು ಪಾಕಿಸ್ತಾನಿ ಉಗ್ರರನ್ನು ಸುತ್ತುವರಿದಿರುವ ಭದ್ರತಾ ಪಡೆಗಳು ಕಳೆದ 36 ಗಂಟೆಗಳಿನಿಂದ ನಿರಂತರ ಶೋಧ ಕಾರ್ಯಾಚರಣೆ ನಡೆಸುತ್ತಿವೆ. ಸಿಆರ್‌ಪಿಎಫ್, ವಿಶೇಷ ಕಾರ್ಯಾಚರಣೆ ಗುಂಪು ಮತ್ತು ಜಮ್ಮು ಮತ್ತು ಕಾಶ್ಮೀರ ಪೊಲೀಸರ ಜತೆಗೆ ರೋಮಿಯೋ ಪಡೆಯ ತಂಡಗಳು ಸೇರಿ ಆ ಪ್ರದೇಶವನ್ನು ಸುತ್ತುವರಿದಿವೆ. ಉಗ್ರರು ತಪ್ಪಿಸಿಕೊಳ್ಳದಂತೆ ಡ್ರೋನ್‌ಗಳು ಮತ್ತು ಅತ್ಯಾಧುನಿಕ ನಿಗಾವ್ಯವಸ್ಥೆಗಳನ್ನೂ ಬಳಸಲಾಗುತ್ತಿದೆ.
ಈ ಪ್ರದೇಶದಲ್ಲಿ ಉಗ್ರರ ಇರುವಿಕೆ ಬಗ್ಗೆ ವಿಶ್ವಾಸಾರ್ಹ ಮಾಹಿತಿಯ ನಂತರ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಯಿತು. ಮೂವರು ಭಯೋತ್ಪಾದಕರನ್ನು ನಿಗ್ರಹಿಸಲು ಸೈನಿಕರು ಕಾಡಿನಲ್ಲಿ ಕಾರ್ಯಾಚರಣೆಯನ್ನು ಕೈಗೊಂಡಿದ್ದಾರೆ.
ಭಾರಿ ಸ್ಫೋಟಕ್ಕೆ ಸಂಚು ರೂಪಿಸಿದ್ದ ಇಬ್ಬರು ಉಗ್ರರು ಅರೆಸ್ಟ್
ದೇಶದ ಪ್ರಮುಖ ಸ್ಥಳಗಳಲ್ಲಿ ಭಾರಿ ಸ್ಫೋಟ ನಡೆಸಲು ಸಂಚು ರೂಪಿಸಿದ್ದ ಉಗ್ರ ಜಾಲವನ್ನು ಉತ್ತರ ಪ್ರದೇಶದಲ್ಲಿ ಭೇದಿಸಿದ ಬೆನ್ನಲ್ಲೇ ಏಪ್ರಿಲ್ ಆರಂಭದಲ್ಲಿ ಮುಂಬೈಯಲ್ಲಿ ಕಾರ್ಯಾಚರಣೆ ನಡೆಸಿ ಇಬ್ಬರು ಭಯೋತ್ಪಾದಕರನ್ನು ಸೆರೆ ಹಿಡಿಯಲಾಯಿತು. ಆ ಮೂಲಕ ಮತ್ತೊಂದು ಭಾರಿ ಸ್ಫೋಟದ ಸಂಚು ವಿಫಲವಾಯಿತು. ಬಂಧಿತರನ್ನು ಮೊಸ್ಸಾದ್ ಅಹ್ದಮ್ ಆಲಿಯಾಸ್ ಕಲಂ ಕಲ್ಯಾಣ್ ಮತ್ತು ಮೊಹಮ್ಮದ್ ಹಮದ್ ಕೊಲ್ಲಾರ ಎಂದು ಗುರುತಿಸಲಾಗಿದೆ. ಇವರಿಬ್ಬರೂ ಮುಂಬೈ ನಿವಾಸಿಗಳು.