ಮಹಾರಾಷ್ಟ್ರ ರಾಜಕೀಯದಲ್ಲಿ ಮತ್ತೆ ಬಂಡಾಯದ ಬಿರುಗಾಳಿ? ಉದ್ಧವ್ ಸೇನೆ ಸಂಸದರಿಗೆ 15 ಕೋಟಿ ರೂ. ಆಮಿಷದ ಆರೋಪ
ಮಹಾರಾಷ್ಟ್ರ ರಾಜಕೀಯದಲ್ಲಿ ಮತ್ತೆ ಬಂಡಾಯದ ಭೀತಿ ಎದುರಾಗಿದೆ. ಶಿವಸೇನೆ (ಯುಬಿಟಿ) ಸಂಸದರನ್ನು ಸೆಳೆಯಲು ತಲಾ ₹15 ಕೋಟಿ ಆಮಿಷ ನೀಡಲಾಗುತ್ತಿದೆ ಎಂದು ಸಂಜಯ್ ರಾವತ್ ಆರೋಪಿಸಿದ್ದು, ಕೆಲ ಸಂಸದರು ಏಕನಾಥ್ ಶಿಂಧೆ ಬಣದ ಸಂಪರ್ಕದಲ್ಲಿದ್ದಾರೆ ಎಂಬ ವರದಿಗಳು ರಾಜಕೀಯ ಚರ್ಚೆಗೆ ಕಾರಣವಾಗಿವೆ.
ಉದ್ಧವ್ ಠಾಕ್ರೆ -
ಮುಂಬೈ ಜೂನ್ 17: ಮಹಾರಾಷ್ಟ್ರ ರಾಜಕೀಯದಲ್ಲಿ (Maharashtra Politics) 2022ರಂತೆ ಮತ್ತೊಂದು ಬಂಡಾಯದ ಸಾಧ್ಯತೆಗಳ ಬಗ್ಗೆ ಚರ್ಚೆಗಳು ಜೋರಾಗಿರುವ ನಡುವೆಯೇ, ಉದ್ಧವ್ ಠಾಕ್ರೆ (Uddhav Thackeray) ನೇತೃತ್ವದ ಶಿವಸೇನೆ (Shiv Sena UBT) ನಾಯಕ ಹಾಗೂ ರಾಜ್ಯಸಭಾ ಸಂಸದಸಂಜಯ್ ರಾವತ್ (Sanjay Raut) ಗಂಭೀರ ಆರೋಪ ಮಾಡಿದ್ದಾರೆ.
ಸಂಜಯ್ ರಾವತ್ ಅವರು, ಶಿವಸೇನೆ (ಯುಬಿಟಿ) ಸಂಸದರನ್ನು ಪಕ್ಷದಿಂದ ಬೇರ್ಪಡಿಸಲು ಪ್ರತಿ ಸಂಸದರಿಗೆ 15 ಕೋಟಿ ರೂ. ಮುಂಗಡ ಹಣ ನೀಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣ X ನಲ್ಲಿ ಪೋಸ್ಟ್ ಮಾಡಿರುವ ಅವರು, "ಮಹಾರಾಷ್ಟ್ರದ ಸಂಸದರನ್ನು ಖರೀದಿಸಲು ಇಂದು ರಾತ್ರಿ ತಲಾ 15 ಕೋಟಿ ರೂ ಮುಂಗಡ ನೀಡಲಾಗುತ್ತಿದೆ. ಇದು ಆಘಾತಕಾರಿ ಮತ್ತು ಅಸಹ್ಯಕರ ಬೆಳವಣಿಗೆ" ಎಂದು ಬರೆದಿದ್ದಾರೆ.
ಆದರೆ ಪಕ್ಷಕ್ಕೆ ತಕ್ಷಣದ ಯಾವುದೇ ಅಪಾಯವಿಲ್ಲ ಎಂದು ಸ್ಪಷ್ಟಪಡಿಸಿದ ರಾವತ್, ಬಂಡಾಯಗಾರರಿಗೆ ಅಗತ್ಯ ಸಂಖ್ಯಾಬಲ ಸಿಗುವುದಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. "ಬಿಜೆಪಿ ಹಣದ ಆಮಿಷ ಒಡ್ಡುತ್ತಿದೆ. ಆದರೆ ನಮ್ಮ ನಾಯಕ ಉದ್ಧವ್ ಠಾಕ್ರೆ ಪ್ರತಿಯೊಬ್ಬ ಸಂಸದನಿಗಾಗಿ ಶ್ರಮಿಸಿದ್ದಾರೆ. ನಾವು ಬಾಲಾಸಾಹೇಬ್ ಠಾಕ್ರೆಯವರ ತತ್ವಗಳಿಗೆ ಬದ್ಧರಾಗಿದ್ದೇವೆ" ಎಂದು ಅವರು ಹೇಳಿದ್ದಾರೆ.
नांदेड विमानतळावर एक चार्टड विमान ✈️ उतरते
— Sanjay Raut (@rautsanjay61) June 17, 2026
ऑपरेशन 🐅 नावाखाली दोन खासदारांना उचलून निघून जाते
यांची रिक्षात फिरण्याची औकात नव्हती
खासगी विमानाने फिरण्या एवढी किंमत ठाकरे नामा मुळे वाढली
प्रत्येक गोष्टीचा हिशोब केला जाईल ।
डरपोक कोल्ह्यांच्या पळवा पळविला
🐅 का म्हणता? pic.twitter.com/ft19myQVD2
ಖಾಸಗಿ ವಿಮಾನ ಕಳುಹಿಸಿದ ಆರೋಪ
ಬುಧವಾರ ಬೆಳಗ್ಗೆ ಮತ್ತೊಂದು ಆರೋಪ ಮಾಡಿದ ರಾವತ್, ನಾಂದೇಡ್ ವಿಮಾನ ನಿಲ್ದಾಣದಿಂದ ಇಬ್ಬರು ಸಂಸದರನ್ನು ಕರೆತರಲು ಖಾಸಗಿ ಚಾರ್ಟರ್ಡ್ ವಿಮಾನ ಕಳುಹಿಸಲಾಗಿದೆ ಎಂದು ಹೇಳಿದ್ದಾರೆ. ಬಂಡಾಯ ಸಂಸದರನ್ನು ಟೀಕಿಸಿದ ಅವರು, "ಒಂದು ಕಾಲದಲ್ಲಿ ಆಟೋದಲ್ಲಿ ಪ್ರಯಾಣಿಸಲು ಸಾಧ್ಯವಾಗದವರು, ಇಂದು ಠಾಕ್ರೆ ಹೆಸರಿನಿಂದ ಖಾಸಗಿ ವಿಮಾನದಲ್ಲಿ ಪ್ರಯಾಣಿಸುವ ಮಟ್ಟಕ್ಕೆ ಬಂದಿದ್ದಾರೆ" ಎಂದು ವ್ಯಂಗ್ಯವಾಡಿದರು.
ಬಂಡಾಯ ಸಂಸದರ ವಿರುದ್ಧ ಕ್ರಮಕ್ಕೆ ಸಜ್ಜು
ಈ ಬೆಳವಣಿಗೆಗಳ ನಡುವೆ ಶಿವಸೇನೆ (ಯುಬಿಟಿ) ತನ್ನ ಸಂಸದೀಯ ಪಕ್ಷದ ಸಭೆಯನ್ನು ಬುಧವಾರ ದೆಹಲಿಯಲ್ಲಿ ಕರೆದಿದೆ. ಎಲ್ಲ ಸಂಸದರೂ ಸಭೆಗೆ ಹಾಜರಾಗುವಂತೆ ಸೂಚನೆ ನೀಡಲಾಗಿದ್ದು, ಗೈರುಹಾಜರಾಗುವವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ.
ಇದೇ ವೇಳೆ ಪಕ್ಷ ವಿಭಜನೆಗೆ ಸಂಬಂಧಿಸಿದಂತೆ ಕಾನೂನು ಹೋರಾಟಕ್ಕೂ ಸಿದ್ಧತೆ ನಡೆಸುತ್ತಿದೆ. ಪಕ್ಷ ತೊರೆಯುವ ಸಂಸದರ ವಿರುದ್ಧ ಪಕ್ಷಾಂತರ ನಿಷೇಧ ಕಾಯ್ದೆ ಮತ್ತು ಪಕ್ಷದ ಶಿಸ್ತು ನಿಯಮಗಳ ಅಡಿಯಲ್ಲಿ ಕ್ರಮ ಕೈಗೊಳ್ಳುವ ಕುರಿತು ಕಾನೂನು ತಜ್ಞರೊಂದಿಗೆ ಚರ್ಚೆ ನಡೆಸುತ್ತಿದೆ ಎನ್ನಲಾಗಿದೆ.
ಜಿ7 ಶೃಂಗಸಭೆಯಲ್ಲಿ ಮತ್ತೆ ಸದ್ದು ಮಾಡಿದ ‘ಮೆಲೋಡಿ’ ಜೋಡಿ; "ಇನ್ಸ್ಟಾಗ್ರಾಂ ಫೇವರೆಟ್ ಕಪಲ್" ಎಂದ ಮೆಲೋನಿ!
ಶಿಂಧೆ ಸಂಪರ್ಕದಲ್ಲಿರುವ 6 ಸಂಸದರು?
ಮೂಲಗಳ ಪ್ರಕಾರ, ಶಿವಸೇನೆ (ಯುಬಿಟಿ)ಯ ಆರು ಸಂಸದರು ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ ಸಂಪರ್ಕದಲ್ಲಿದ್ದಾರೆ. ಇವರಲ್ಲಿ ಸಂಜಯ್ ದಿನಾ ಪಾಟೀಲ್, ಸಂಜಯ್ ದೇಶಮುಖ್, ನಾಗೇಶ್ ಪಾಟೀಲ್ ಅಷ್ಟಿಕರ್, ಓಂರಾಜೆ ನಿಂಬಾಳ್ಕರ್, ಭೌಸಾಹೇಬ್ ವಾಕ್ಚೌರೆ ಮತ್ತು ಸಂಜಯ್ ಜಾಧವ್ ಸೇರಿದ್ದಾರೆ ಎಂದು ವರದಿಯಾಗಿದೆ.
ಈ ಸಂಸದರು ಶೀಘ್ರದಲ್ಲೇ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರನ್ನು ಭೇಟಿ ಮಾಡಿ ಪ್ರತ್ಯೇಕ ಗುಂಪು ರಚಿಸುವ ಪತ್ರ ಸಲ್ಲಿಸುವ ಸಾಧ್ಯತೆ ಇದೆ. ಬಳಿಕ ಅವರು ಶಿಂಧೆ ಬಣದೊಂದಿಗೆ ವಿಲೀನವಾಗುವ ಸಾಧ್ಯತೆಯೂ ಇದೆ ಎಂದು ಮೂಲಗಳು ತಿಳಿಸಿವೆ.
2022ರ ಬಂಡಾಯದ ನೆನಪು
2022ರಲ್ಲಿ ಏಕನಾಥ್ ಶಿಂಧೆ ಶಿವಸೇನೆ ಪಕ್ಷದಲ್ಲಿ ಬಂಡಾಯ ಎದ್ದು ಪ್ರತ್ಯೇಕ ಬಣ ರಚಿಸಿದ್ದರು. ಬಳಿಕ ಆ ಬಣವೇ ಶಿವಸೇನೆ ಪಕ್ಷದ ಹೆಸರು ಹಾಗೂ ಚುನಾವಣಾ ಚಿಹ್ನೆಯನ್ನು ತನ್ನದಾಗಿಸಿಕೊಂಡಿತ್ತು. ಇದೀಗ ಮತ್ತೊಮ್ಮೆ ಉದ್ಧವ್ ಠಾಕ್ರೆ ಅವರ ಎದುರು ಅದೇ ರೀತಿಯ ಸವಾಲು ಎದುರಾಗುವ ಸಾಧ್ಯತೆ ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.