ವಿಜಯ್‌ಗಾಗಿ ‘ಕೈ’ ಕೊಟ್ಟ ಪಕ್ಷದ ವಿರುದ್ಧ ಅಸಮಾಧಾನ; ಲೋಕಸಭೆಯಲ್ಲಿ ಕಾಂಗ್ರೆಸ್ ಜತೆ ಕುಳಿತುಕೊಳ್ಳುವುದಿಲ್ಲ ಎಂದ ಡಿಎಂಕೆ
DMK vs Congress: ಕಾಂಗ್ರೆಸ್ ಜತೆಗಿನ ಡಿಎಂಕೆ ಮೈತ್ರಿಯನ್ನು ಅಧಿಕೃತವಾಗಿ ಕೊನೆಗೊಳಿಸುತ್ತ ಡಿಎಂಕೆಯ ಕನಿಮೋಳಿ ಲೋಕಸಭಾ ಸ್ಪೀಕರ್‌ಗೆ ಬರೆದಿರುವ ಪತ್ರ ಗಮನ ಸೆಳೆದಿದೆ. ಪಕ್ಷದ ಸದಸ್ಯರು ತಮ್ಮ ಹಿಂದಿನ ಮಿತ್ರ ಪಕ್ಷ ಕಾಂಗ್ರೆಸ್ ಪಕ್ಕದಲ್ಲಿ ಕುಳಿತುಕೊಳ್ಳಲು ಬಯಸುವುದಿಲ್ಲ, ಆಸನ ವ್ಯವಸ್ಥೆ ಬದಲಾಯಿಸಿಬೇಕೆಂದು ಮನವಿ ಮಾಡಿದ್ದಾರೆ.
ರಾಹುಲ್ ಗಾಂಧಿ ಮತ್ತು ಸ್ಟಾಲಿನ್ (ಸಂಗ್ರಹ ಚಿತ್ರ) -
ಚೆನ್ನೈ, ಮೇ 8: ತಮಿಳುನಾಡಿನಲ್ಲಿ ನಡೆದ ಮಹತ್ವದ ರಾಜಕೀಯ ಬೆಳವಣಿಗೆಯೊಂದರಲ್ಲಿ ವಿಜಯ್ ಅವರ ಟಿವಿಕೆ ಜತೆ ಕಾಂಗ್ರೆಸ್ (Congress) ಮೈತ್ರಿ ಮಾಡಿಕೊಂಡಿರುವುದು ಈ ಹಿಂದಿನ ಮಿತ್ರ ಪಕ್ಷ ಡಿಎಂಕೆಯ (DMK) ಸಿಟ್ಟಿಗೆ ಕಾರಣವಾಗಿದೆ. ಇದೀಗ ಕಾಂಗ್ರೆಸ್ ಜತೆಗಿನ ಡಿಎಂಕೆ ಮೈತ್ರಿಯನ್ನು ಅಧಿಕೃತವಾಗಿ ಕೊನೆಗೊಳಿಸುತ್ತಾ, ಕನಿಮೋಳಿ ಲೋಕಸಭಾ ಸ್ಪೀಕರ್‌ಗೆ ಪತ್ರ ಬರೆದಿದ್ದು, ಪಕ್ಷದ ಸದಸ್ಯರು ತಮ್ಮ ಹಿಂದಿನ ಮಿತ್ರ ಪಕ್ಷದ ಪಕ್ಕದಲ್ಲಿರುವ ಆಸನ ವ್ಯವಸ್ಥೆಯನ್ನು ಬದಲಾಯಿಸಬೇಕೆಂದು ಮನವಿ ಮಾಡಿದ್ದಾರೆ.
22 ಸಂಸದರನ್ನು ಹೊಂದಿರುವ ಡಿಎಂಕೆ, ವಿರೋಧ ಪಕ್ಷದ ʼಇಂಡಿಯಾʼ ಮೈತ್ರಿಕೂಟದ ನಾಲ್ಕನೇ ಅತಿದೊಡ್ಡ ಪಕ್ಷ. ಈಗ ತಮಿಳುನಾಡು ಚುನಾವಣೆಯಲ್ಲಿ ಡಿಎಂಕೆ ನೇತೃತ್ವದ ಮೈತ್ರಿಕೂಟದ ಭಾಗವಾಗಿಯೇ ಸ್ಪರ್ಧಿಸಿದ್ದ ಕಾಂಗ್ರೆಸ್, ಫಲಿತಾಂಶದ ನಂತರ ಸರ್ಕಾರ ರಚಿಸಲು ವಿಜಯ್ ಅವರ ಟಿವಿಕೆ ಪಕ್ಷಕ್ಕೆ ಬೆಂಬಲ ಘೋಷಿಸಿರುವುದು ಈ ಮೈತ್ರಿಯನ್ನು ಕಡಿದುಕೊಳ್ಳುವ ಹಂತಕ್ಕೆ ತಂದಿಟ್ಟಿದೆ.
ಲೋಕಸಭೆಯ ಸ್ಪೀಕರ್ ಆಗಿರುವ ಓಂ ಬಿರ್ಲಾ ಅವರಿಗೆ ಪತ್ರ ಬರೆದ ಕನಿಮೋಳಿ, ಬದಲಾದ ರಾಜಕೀಯ ಸನ್ನಿವೇಶಗಳನ್ನು ಉಲ್ಲೇಖಿಸಿದ್ದಾರೆ ಮತ್ತು ಕಾಂಗ್ರೆಸ್ ಜತೆಗಿನ ಮೈತ್ರಿ ಕೊನೆಗೊಂಡಿದೆ ಎಂದು ಹೇಳಿದ್ದಾರೆ.
30 ವರ್ಷಗಳ ಹಿಂದೆಯೇ ತಮ್ಮ ಪೊಲಿಟಿಕಲ್ ಪವರ್ ತೋರಿಸಿದ್ದ ʻಸೂಪರ್ ಸ್ಟಾರ್ʼ ರಜನಿಕಾಂತ್
ʼʼಲೋಕಸಭೆಯಲ್ಲಿ ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ)ಗೆ ಸೇರಿದ ಸಂಸದರ ಆಸನ ವ್ಯವಸ್ಥೆಯಲ್ಲಿ ಸೂಕ್ತ ಬದಲಾವಣೆಗಳನ್ನು ಮಾಡಲು ಗೌರವಯುತವಾಗಿ ವಿನಂತಿಸಿ ನಾನು ಪತ್ರ ಬರೆಯುತ್ತಿದ್ದೇನೆ. ಬದಲಾದ ರಾಜಕೀಯ ಸನ್ನಿವೇಶಗಳನ್ನು ಗಮನದಲ್ಲಿಟ್ಟುಕೊಂಡು ಮತ್ತು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಜತೆಗಿನ ನಮ್ಮ ಮೈತ್ರಿ ಕೊನೆಗೊಂಡಿರುವುದರಿಂದ ನಮ್ಮ ಸದಸ್ಯರಿಗೆ ಸದನದಲ್ಲಿ ಅವರ ಪಕ್ಕದಲ್ಲಿ ಆಸನ ವ್ಯವಸ್ಥೆಯನ್ನು ಮಾಡುವುದು ಸೂಕ್ತವಲ್ಲʼʼ ಎಂದು ತೂತುಕುಡಿಯ ಡಿಎಂಕೆ ಸಂಸದ ಕನಿಮೋಳಿ ಹೇಳಿದರು.
ʼʼಡಿಎಂಕೆ ಸಂಸದರಿಗೆ ಪ್ರತ್ಯೇಕ ಆಸನಗಳನ್ನು ಹಂಚಿಕೆ ಮಾಡಲು ಅಗತ್ಯವಾದ ವ್ಯವಸ್ಥೆಗಳನ್ನು ಮಾಡುವಂತೆ ನಾನು ನಿಮ್ಮ ಕಚೇರಿಯನ್ನು ವಿನಂತಿಸುತ್ತೇನೆ. ಇದರಿಂದಾಗಿ ಅವರು ಸದನದಲ್ಲಿ ತಮ್ಮ ಜವಾಬ್ದಾರಿಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಸಾಧ್ಯವಾಗುತ್ತದೆ ಎಂದು ಅವರು ವಿನಂತಿಸಿ ಪತ್ರ ಬರೆದಿದ್ದಾರೆ.
ದಶಕಗಳ ಕಾಲ ಮೈತ್ರಿ ಮಾಡಿಕೊಂಡಿದ್ದ ಡಿಎಂಕೆ ಮತ್ತು ಕಾಂಗ್ರೆಸ್, ಕೆಲವು ಭಿನ್ನಾಭಿಪ್ರಾಯಗಳ ನಡುವೆಯೂ 2026ರಲ್ಲಿ ಮತ್ತೆ ಒಂದಾದವು. ಇತ್ತೀಚೆಗೆ ಡಿಎಂಕೆ ನಾಯಕರೊಬ್ಬರು, ಮಿತ್ರಪಕ್ಷವನ್ನು ಬೆನ್ನಿನ ಮೇಲೆ ಇರಿದವರು ಎಂದು ಕಾಂಗ್ರೆಸ್ ಅನ್ನು ವ್ಯಾಖ್ಯಾನಿಸಿದ್ದರು. ಈ ಮೂಲಕ ಡಿಎಂಕೆ, ಕಾಂಗ್ರೆಸ್‌ನಿಂದ ತನಗೆ ಆಗಿರುವ ದ್ರೋಗವನ್ನು ತಿಳಿಸಿತ್ತು.
ಕಾಂಗ್ರೆಸ್ ಐದು ಸ್ಥಾನಗಳನ್ನು ಗೆದ್ದಿರುವುದು ಅದು ಡಿಎಂಕೆ ನೇತೃತ್ವದ ಒಕ್ಕೂಟದಲ್ಲಿರುವುದರಿಂದ ಮಾತ್ರ ಎಂದು ಡಿಎಂಕೆ ವಕ್ತಾರ ಸರವಣನ್ ಅಣ್ಣಾದೊರೈ ಹೇಳಿದ್ದಾರೆ. ಇಲ್ಲದಿದ್ದರೆ, ಇತ್ತೀಚಿನ ಚುನಾವಣೆಯಲ್ಲಿ ಅವರಿಗೆ ಯಾವುದೇ ಸ್ಥಾನ ಸಿಗುತ್ತಿರಲಿಲ್ಲ ಎಂದು ಅವರು ಪ್ರತಿಪಾದಿಸಿದ್ದಾರೆ.
ಕಾಂಗ್ರೆಸ್ ವಾದ
ತಮಿಳುನಾಡಿನ ಜನರ ಜನಾದೇಶವನ್ನು ಗೌರವಿಸಲು ಟಿವಿಕೆಯನ್ನು ಬೆಂಬಲಿಸುತ್ತಿರುವುದಾಗಿ ಕಾಂಗ್ರೆಸ್ ಹೇಳಿದೆ. ಇದು ಜವಾಬ್ದಾರಿಯುತ ಕೆಲಸ ಎಂದೂ ತಿಳಿಸಿದೆ. ಈ ಮಧ್ಯೆ, ತಮ್ಮ ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಸೋತ ಡಿಎಂಕೆ ಮುಖ್ಯಸ್ಥ ಎಂ.ಕೆ. ಸ್ಟಾಲಿನ್ ಮತ್ತು ತೃಣಮೂಲ ಕಾಂಗ್ರೆಸ್ ಅಧ್ಯಕ್ಷೆ ಮಮತಾ ಬ್ಯಾನರ್ಜಿ ಅವರೊಂದಿಗೆ ಇರುವ ಚಿತ್ರಗಳನ್ನು ಪೋಸ್ಟ್ ಮಾಡಿದ ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್, ʼʼನಾವು ಕಷ್ಟದ ಸಮಯದಲ್ಲಿ ಜನರನ್ನು ಕೈಬಿಡುವುದಿಲ್ಲʼʼ ಎಂದು ಹಿಂದಿಯಲ್ಲಿ ಬರೆದಿದ್ದಾರೆ.