ಇರಾನ್ ಮೇಲಿನ ತೈಲ ನಿರ್ಬಂಧ ಸಡಿಲಿಸಿದ ಅಮೆರಿಕ; ಭಾರತಕ್ಕೆ ದೊರೆಯುವುದೇ ಪ್ರಯೋಜನ?
ಇರಾನ್ ಮೇಲಿನ ತೈಲ ನಿರ್ಬಂಧಗಳನ್ನು ಅಮೆರಿಕ ತೆಗೆದು ಹಾಕಿದ ಬೆನ್ನಲ್ಲೇ ಭಾರತಕ್ಕೆ ಇರಾನ್ ತೈಲ ಪೂರೈಕೆಯ ದಾರಿ ತೆರೆದಂತಾಗಿದೆ. ಯುದ್ಧ ಕೊನೆಗೊಳಿಸುವ ಒಪ್ಪಂದದಲ್ಲಿ ಅಮೆರಿಕವು ಇರಾನಿನ ಕಚ್ಚಾ ತೈಲ, ಪೆಟ್ರೋಲಿಯಂ ಉತ್ಪನ್ನಗಳು ಮತ್ತು ಪೆಟ್ರೋಕೆಮಿಕಲ್‌ಗಳನ್ನು ಒಳಗೊಂಡ ವಹಿವಾಟುಗಳನ್ನು ಅನುಮತಿಸುವ ತಾತ್ಕಾಲಿಕ ಸಾಮಾನ್ಯ ಪರವಾನಗಿಯನ್ನು ನೀಡಿದೆ.
ಸಂಗ್ರಹ ಚಿತ್ರ -
ನವದೆಹಲಿ: ಇರಾನಿನ ತೈಲ (Iran oil) ಉದ್ಯಮ ಮತ್ತೆ ಚೇತರಿಸಿಕೊಳ್ಳುವ ಲಕ್ಷಣ ಕಂಡು ಬರುತ್ತಿದೆ. ಕಳೆದ ಫೆಬ್ರವರಿ ತಿಂಗಳಾಂತ್ಯದಲ್ಲಿ ಪ್ರಾರಂಭವಾಗಿರುವ ಯುದ್ಧ ಮುಕ್ತಾಯವಾಗುವ ಲಕ್ಷಣ ಕಂಡು ಬರುತ್ತಿದೆ. ಈ ಕುರಿತು ನಡೆಯುತ್ತಿರುವ ಮಾತುಕತೆ ಒಪ್ಪಂದದಲ್ಲಿ ಅಮೆರಿಕವು (america) ಇರಾನಿನ ಕಚ್ಚಾ ತೈಲ (Iranian crude oil), ಪೆಟ್ರೋಲಿಯಂ ಉತ್ಪನ್ನಗಳು ಮತ್ತು ಪೆಟ್ರೋಕೆಮಿಕಲ್‌ಗಳನ್ನು ಒಳಗೊಂಡ ವಹಿವಾಟುಗಳನ್ನು ಅನುಮತಿಸುವ ತಾತ್ಕಾಲಿಕ ಸಾಮಾನ್ಯ ಪರವಾನಗಿಯನ್ನು ನೀಡಿದೆ. ಇದರಿಂದ ಭಾರತಕ್ಕೆ ಬಹುದೊಡ್ಡ ಕಚ್ಚಾ ತೈಲ ಪೂರೈಕೆದಾರ ಸಿಕ್ಕಂತಾಗುತ್ತದೆ.
ಒಪ್ಪಂದದ ಅಡಿಯಲ್ಲಿ ಅಮೆರಿಕವು ಆಗಸ್ಟ್ 21 ರವರೆಗೆ ಇರಾನಿನ ಕಚ್ಚಾ ತೈಲ ಮತ್ತು ಪೆಟ್ರೋಲಿಯಂ ಉತ್ಪನ್ನಗಳ ಉತ್ಪಾದನೆ, ಮಾರಾಟ, ವಿತರಣೆ ಮತ್ತು ಆಮದು ಮಾಡಿಕೊಳ್ಳಲು ಅವಕಾಶ ನೀಡಿದೆ. ಈ 60 ದಿನಗಳ ವಿನಾಯಿತಿ ಮೂಲಕ ಟೆಹರಾನ್ ನೊಂದಿಗೆ ಶಾಂತಿ ಒಪ್ಪಂದವನ್ನು ಖಚಿತ ಪಡಿಸುವ ಮತ್ತು ಅಂತಾರಾಷ್ಟ್ರೀಯ ಪರಮಾಣು ತಪಾಸಣೆಗೆ ಒಪ್ಪಿಕೊಳ್ಳುವಂತೆ ಮಾಡುವ ಗುರಿಯನ್ನು ಕೂಡ ಹೊಂದಿದೆ.
ಲಖನೌ ಅಗ್ನಿ ದುರಂತ: 2016ರಲ್ಲಿ ದ್ವಂಸ ಆದೇಶ ಪಡೆದಿದ್ದ ಕಟ್ಟಡದಲ್ಲಿ ಅವಘಡ
ಇರಾನ್ ಗೆ ಕಚ್ಚಾ ತೈಲ ವ್ಯಾಪಾರಕ್ಕೆ ಅವಕಾಶ ಸಿಕ್ಕಿರುವುದು ಭಾರತದ ಪಾಲಿಗೆ ಬಹುದೊಡ್ಡ ವರದಾನವಾಗಲಿದೆ. ಯಾಕೆಂದರೆ. ವಿಶ್ವದ ಅತಿದೊಡ್ಡ ಕಚ್ಚಾ ತೈಲ ಆಮದುದಾರರಲ್ಲಿ ಒಂದಾದ ಭಾರತ ಗಣನೀಯ ಪ್ರಮಾಣದ ಕಚ್ಚಾ ತೈಲವನ್ನು ಇರಾನ್ ನಿಂದ ಆಮದು ಮಾಡಿಕೊಳ್ಳಲು ಇದರಿಂದ ಸಾಧ್ಯವಾಗಬಹುದು. ಇರಾನ್ ಮತ್ತು ಯುಎಸ್ ನಡುವಿನ ಸಂಘರ್ಷದ ಪರಿಣಾಮ ವಿಶ್ವದಾದ್ಯಂತ ತೈಲ ಮಾರುಕಟ್ಟೆಯಲ್ಲಿ ತಲ್ಲಣ ಉಂಟಾಗಿದೆ. ಇರಾನ್ ನಿಂದ ಅತ್ಯಧಿಕ ಪ್ರಮಾಣದ ತೈಲ ಜಾಗತಿಕ ಮಾರುಕಟ್ಟೆ ಪ್ರವೇಶಿಸಿದರೆ ಇದು ಸಮಸ್ಯೆಗಳನ್ನು ಕೊಂಚ ಮಟ್ಟಿಗೆ ಪರಿಹರಿಸುವ ಸಾಧ್ಯತೆ ಇದೆ.
ಯುಎಸ್ ಏನು ಹೇಳಿದೆ?
ಇರಾನಿನ ಕಚ್ಚಾ ತೈಲ, ಪೆಟ್ರೋಲಿಯಂ ಉತ್ಪನ್ನಗಳು ಮತ್ತು ಪೆಟ್ರೋಕೆಮಿಕಲ್‌ಗಳ ವಹಿವಾಟುಗಳಿಗೆ ಅವಕಾಶ ನೀಡಿರುವ ಅಮೆರಿಕ ಇದರಲ್ಲಿ ಸಾಗಣೆ, ವಿಮೆ ಮತ್ತು ಬ್ಯಾಂಕಿಂಗ್ ಸಂಬಂಧಿತ ಸೇವೆಗಳನ್ನು ಕೂಡ ಸೇರಿಸಿದೆ. ಆಗಸ್ಟ್ 21ರವರೆಗೆ ಈ ಪರವಾನಿಗೆ ಮಾನ್ಯವಾಗಿರುತ್ತದೆ. ಇರಾನ್ ಅಂತಾರಾಷ್ಟ್ರೀಯ ಪರಮಾಣು ಶಕ್ತಿ ಸಂಸ್ಥೆಯಿಂದ ತಪಾಸಣೆಗೆ ಒಳಪಡಲು ಒಪ್ಪಿಕೊಂಡ ಬಳಿಕ ಈ ನಿರ್ಧಾರವನ್ನು ಪ್ರಕಟಿಸಲಾಗಿದೆ. ಬಳಿಕ ಈ ನಿರ್ಬಂಧಗಳನ್ನು ವಿಶ್ವಾಸ ವೃದ್ಧಿಯ ಕ್ರಮವಾಗಿ ಪರಿಗಣಿಸಲಾಗುತ್ತದೆ.
ಭಾರತಕ್ಕೆ ಏನು ಪ್ರಯೋಜನ ?
ಭಾರತವು ಬಳಸುವ ಒಟ್ಟು ಕಚ್ಚಾ ತೈಲದ ಸುಮಾರು ಶೇಕಡಾ 85ರಷ್ಟನ್ನು ಆಮದು ಮಾಡಿಕೊಳ್ಳುತ್ತದೆ. ಹೀಗಾಗಿ ತೈಲ ಬೆಲೆ ಏರಿಕೆಯು ದೇಶದ ಆರ್ಥಿಕತೆಯ ಮೇಲೆ ಬಹುದೊಡ್ಡ ಪರಿಣಾಮವನ್ನೇ ಬೀರುತ್ತದೆ. ರಷ್ಯಾ ಮತ್ತು ಉಕ್ರೇನ್ ನಡುವೆ ಯುದ್ಧ ಪ್ರಾರಂಭವಾದ ಮೇಲೆ ಭಾರತವು ರಿಯಾಯಿತಿ ದರದಲ್ಲಿ ರಷ್ಯಾದ ಕಚ್ಚಾ ತೈಲವನ್ನು ಅತಿ ದೊಡ್ಡ ಪ್ರಮಾಣದಲ್ಲಿ ಖರೀದಿ ಮಾಡುತ್ತಿದೆ. ಇದರೊಂದಿಗೆ ಭಾರತವು ಸೌದಿ ಅರೇಬಿಯಾ, ಇರಾಕ್ ಮತ್ತು ಯುಎಇ ಸೇರಿದಂತೆ ಗಲ್ಫ್ ರಾಷ್ಟ್ರಗಳಿಂದ ತೈಲ ಆಮದು ಮಾಡಿಕೊಳ್ಳುತ್ತಿದೆ. ಇದೀಗ ಇರಾನ್ ತೈಲ ಮಾರುಕಟ್ಟೆಗೆ ಪ್ರವೇಶಿಸಿರುವುದು ಭಾರತಕ್ಕೆ ಮತ್ತೊಂದು ಪ್ರಮುಖ ಪೂರೈಕೆ ದಾರಿಯಾಗಲಿದೆ.
ಇರಾನ್ ನೊಂದಿಗೆ ಭಾರತದ ಸಂಬಂಧ
2018ರ ಯುಎಸ್ ನಿರ್ಬಂಧಕ್ಕೂ ಮೊದಲು ಭಾರತದ ಪ್ರಮುಖ ತೈಲ ಪೂರೈಕೆದಾರರಲ್ಲಿ ಇರಾನ್ ಕೂಡ ಒಂದಾಗಿತ್ತು. ಆದರೆ ಯುಎಸ್ ನಿರ್ಬಂಧದ ಪರಿಣಾಮ ಇಲ್ಲಿಂದ ಭಾರತಕ್ಕೆ ಆಮದಾಗುವ ತೈಲ ನಿಂತುಹೋಗಿತ್ತು. ಆದರೆ ಇದೀಗ ಮತ್ತೆ ಭಾರತಕ್ಕೆ ತೈಲ ಪೂರೈಕೆ ಮೂಲವೊಂದು ಬಾಗಿಲು ತೆರೆದಿದೆ. ತಕ್ಷಣವೇ ಅಲ್ಲದಿದ್ದರೂ ಮುಂದೆ ಮಾತುಕತೆ ನಡೆದು ದೊಡ್ಡ ಪ್ರಮಾಣದಲ್ಲಿ ಇರಾನ್ ತೈಲ ಭಾರತಕ್ಕೆ ಬರುವ ನೀರಿಕ್ಷೆ ಹೆಚ್ಚಾಗಿದೆ.
ತುರ್ತು ನಿರ್ಗಮನ ಮಾರ್ಗವಿಲ್ಲ, ಒಂದೇ ಮೆಟ್ಟಿಲು; ಮೃತ್ಯು ಕೂಪವಾಗಿದ್ದೇಗೆ ಕೋಚಿಂಗ್ ಸೆಂಟರ್?
ಒಂದು ವೇಳೆ ಇರಾನ್ ನಿಂದ ಹೆಚ್ಚಿನ ಪ್ರಮಾಣದ ತೈಲ ಪೂರೈಕೆಯಾದರೆ ಹೊರ್ಮುಜ್ ಜಲ ಮಾರ್ಗದಲ್ಲಿ ಭಾರತೀಯ ಹಡಗುಗಳಿಗೆ ಅಪಾಯ ಕಡಿಮೆಯಾಗಲಿದೆ ಎನ್ನುತ್ತಾರೆ ವಿಶ್ಲೇಷಕರು.