BBK 12: ಈ ವಾರ ಎಂಟು ಮಂದಿ ನಾಮಿನೇಟ್! ʻಬಿಗ್ ಬಾಸ್ʼ ಮನೆಯಿಂದ ಯಾರಿಗೆ ಸಿಗಲಿದೆ ಗೇಟ್ ಪಾಸ್?
ಬಿಗ್ ಬಾಸ್ ಮನೆಯಲ್ಲಿ ಈ ವಾರ ಬರೋಬ್ಬರಿ 8 ಮಂದಿ ಪ್ರಬಲ ಸ್ಪರ್ಧಿಗಳು ನಾಮಿನೇಟ್ ಆಗಿದ್ದಾರೆ. ಕ್ಯಾಪ್ಟನ್ ಮಾಳು ನಿಪನಾಳ್ ನಾಮಿನೇಟ್ ಮಾಡಿದವರಲ್ಲಿ ಅಶ್ವಿನಿ, ಜಾಹ್ನವಿ, ರಕ್ಷಿತಾ, ರಘು, ರಾಶಿಕಾ, ಕಾಕ್ರೋಚ್ ಸುಧಿ ಮುಂತಾದವರು ಇದ್ದಾರೆ.
-
ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ ಏಳನೇ ವಾರದ ಎಲಿಮಿನೇಷನ್ ಪ್ರಕ್ರಿಯೆಗೆ ಇನ್ನೋಂದೇ ದಿನ ಬಾಕಿ ಇದೆ. ಈ ವಾರ ಒಟ್ಟು 8 ಮಂದಿ ನಾಮಿನೇಟ್ ಆಗಿದ್ದಾರೆ. ಯಾರಿಗೆ ಈ ವಾರ ಮನೆಯಿಂದ ಹೊರಹೋಗಲು ಗೇಟ್ ಪಾಸ್ ಸಿಗಲಿದೆ ಎಂಬ ಬಗ್ಗೆ ಕುತೂಹಲ ಮನೆ ಮಾಡಿದೆ. ಯಾಕೆಂದರೆ, ಈ ವಾರ ನಾಮಿನೇಟ್ ಆಗಿರುವ ಎಂಟೂ ಮಂದಿಯೂ ಕೂಡ ಬಿಗ್ ಬಾಸ್ ಮನೆಯಲ್ಲಿ ಪ್ರಬಲರಾಗಿದ್ದಾರೆ.
ಯಾರೆಲ್ಲಾ ನಾಮಿನೇಟ್ ಆಗಿದ್ದಾರೆ?
ʻಬಿಗ್ ಬಾಸ್ʼ ಮನೆಯಲ್ಲಿ ಈ ವಾರ ಒಟ್ಟು 8 ಮಂದಿ ನಾಮಿನೇಟ್ ಆಗಿದ್ದಾರೆ. ಅಶ್ವಿನಿ ಗೌಡ, ಜಾಹ್ನವಿ, ರಿಷಾ ಗೌಡ, ರಾಶಿಕಾ ಶೆಟ್ಟಿ, ರಘು, ಕಾಕ್ರೋಚ್ ಸುಧಿ, ರಕ್ಷಿತಾ ಶೆಟ್ಟಿ ಹಾಗೂ ಧ್ರುವಂತ್ ಅವರು ಈ ವಾರ ನಾಮಿನೇಟ್ ಆಗಿದ್ದಾರೆ. ಇದರಲ್ಲಿ ಬಹುತೇಕರನ್ನು ನಾಮಿನೇಟ್ ಮಾಡಿರುವುದು ಕ್ಯಾಪ್ಟನ್ ಆಗಿದ್ದ ಮಾಳು ನಿಪನಾಳ್.
ರಿಷಾ ಗೌಡಗೆ ಢವಢವ
ಹೌದು, ಬಿಗ್ ಬಾಸ್ ಮನೆಯಲ್ಲಿ ಹಲ್ಲೆ ಮಾಡುವಂತಿಲ್ಲ ಎಂಬ ನಿಯಮವಿದ್ದರೂ, ರಿಷಾ ಗೌಡ ಅವರು ಗಿಲ್ಲಿ ನಟನ ಮೇಲೆ ಹಲ್ಲೆ ಮಾಡಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿದ್ದ ಕಿಚ್ಚ ಸುದೀಪ್ ಅವರು ಮನೆಯ ಸದಸ್ಯರ ಮೂಲಕ ವೋಟಿಂಗ್ ಮಾಡಿಸಿದ್ದರು. ಸದಸ್ಯರು ವೋಟಿಂಗ್‌ನಲ್ಲಿ ರಿಷಾ ಅವರಿಗೆ ಒಂದು ಚಾನ್ಸ್ ನೀಡಿದ್ದರು. ಎಲಿಮಿನೇಷನ್‌ನಿಂದ ಪಾರು ಮಾಡಿದ್ದರು. ಹಾಗಾಗಿ, ರಿಷಾ ಉಳಿದುಕೊಂಡಿದ್ದರೂ ಕೂಡ ಒಂದು ದಿನ ಜೈಲು ಶಿಕ್ಷೆ ಮತ್ತು ನೇರವಾಗಿ ನಾಮಿನೇಟ್ ಆಗುವ ಶಿಕ್ಷೆಯನ್ನು ಪಡೆದುಕೊಂಡಿದ್ದರು. ಈ ವಾರ ಏನಾದರೂ ಅವರಿಗೆ ವೀಕ್ಷಕರಿಂದ ಉತ್ತಮ ಸಂಖ್ಯೆಯ ವೋಟ್ ಸಿಕ್ಕಿಲ್ಲವೆಂದರೆ, ಎಲಿಮಿನೇಟ್ ಆಗುವುದು ಪಕ್ಕಾ.
ಧ್ರುವಂತ್ ಮೇಲೆ ತೂಗುಗತ್ತಿ!
ಅತ್ತ ಧ್ರುವಂತ್ ಕೂಡ ಈ ವಾರ ಸಾಕಷ್ಟು ನೆಗೆಟಿವ್ ವಿಚಾರಗಳಿಗೆ ಸದ್ದು ಮಾಡಿದ್ದಾರೆ. ಅದರಲ್ಲೂ ಮುಖ್ಯವಾಗಿ ರಕ್ಷಿತಾ ಬಗ್ಗೆ ಕೇವಲವಾಗಿ ಮಾತನಾಡಿದ್ದು, ಧ್ರುವಂತ್ ಅವರು ಉತ್ತಮ - ಕಳಪೆ ಚರ್ಚೆ ವೇಳೆ ಅಭಿಷೇಕ್ ಮಾತನಾಡುವಾಗ ಮಿಡಲ್ ಫಿಂಗರ್ ತೋರಿಸಿ, ಅಸಭ್ಯ ಸನ್ನೆ ಮಾಡಿದ್ರು ಎಂಬ ಆರೋಪ ಕೇಳಿಬಂದಿದೆ. ಅಲ್ಲದೆ, ವೀಕೆಂಡ್‌ನಲ್ಲಿ ತಮಗೆ ಮಾತನಾಡಲು ಅವಕಾಶ ಕೊಡಲ್ಲ ಎಂಬ ಆರೋಪವನ್ನು ಕೂಡ ಧ್ರುವಂತ್ ಮಾಡಿದ್ದು, ಇದು ಕೂಡ ಎಲ್ಲೋ ಒಂದು ಕಡೆ ಅವರಿಗೆ ನೆಗೆಟಿವ್ ಆಗುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ.
ಇನ್ನು, ಅಶ್ವಿನಿ ಗೌಡ, ಜಾಹ್ನವಿ, ರಘು, ರಕ್ಷಿತಾ, ಕಾಕ್ರೋಚ್ ಸುಧಿ, ರಾಶಿಕಾ ಅವರು ಎಲಿಮಿನೇಟ್ ಆಗುವುದು ಕಷ್ಟ ಎನ್ನಲಾಗಿದೆ. ಅದರಲ್ಲೂ ರಘು ಅತ್ಯುತ್ತಮವಾಗಿ ಆಟ ಆಡುತ್ತಿದ್ದು, ಮೂರೇ ವಾರದಲ್ಲಿ ಎರಡು ಬಾರಿ ಅವರು ಕ್ಯಾಪ್ಟನ್ ಆಗಿ ಆಯ್ಕೆ ಆಗಿರುವುದು ವಿಶೇಷ. ಒಟ್ಟಿನಲ್ಲಿ ಈ ವಾರ ಯಾರು ಎಲಿಮಿನೇಟ್ ಆಗಬಹುದು ಎಂಬ ಬಗ್ಗೆ ಬಹಳಷ್ಟು ಕುತೂಹಲ ಮನೆ ಮಾಡಿದೆ.