ಮಹಿಳೆಯರ ಕುಂಕುಮ ಭಾಗ್ಯ ಅಳಿಸಿದ ಉಗ್ರರಿಗೆ ಆಪರೇಷನ್ ಸಿಂದೂರ್ ಮೂಲಕ ದಿಟ್ಟ ಉತ್ತರ; ಕಾರ್ಯಾಚರಣೆಗೆ ಈ ಹೆಸರಿಟ್ಟಿದ್ದು ಯಾರು, ಯಾಕೆ? ಇದರ ಹಿಂದಿನ ರೋಚಕ ಸ್ಟೋರಿ ಇಲ್ಲಿದೆ
One Year Of Operation Sindoor: ಪಾಕಿಸ್ತಾನದ ವಿರುದ್ಧ ಭಾರತೀಯ ಸೇನೆ ನಡೆಸಿದ ಆಪರೇಷನ್ ಸಿಂದೂರ್ ಕಾರ್ಯಾಚರಣಗೆ 1 ವರ್ಷ ತುಂಬಿದೆ. ಭಾರತದ ಹೊಡೆತಕ್ಕೆ ಸಿಲುಕಿ ತತ್ತರಿಸಿದ ಪಾಕಿಸ್ತಾನ ಇನ್ನೂ ಚೇತರಿಸಿಕೊಂಡಿಲ್ಲ. ಹಾಗಾದರೆ ಉಗ್ರರ ವಿರುದ್ಧದ ಕಾರ್ಯಾಚರಣೆಗೆ ಆಪರೇಷನ್ ಸಿಂದೂರ್ ಎಂದು ಹೆಸರಿಟ್ಟಿದ್ದು ಏಕೆ? ಎನ್ನುವ ವಿವರ ಇಲ್ಲಿದೆ.
ಮೆಟಾ ಎಐ ಚಿತ್ರ -
ದೆಹಲಿ, ಮೇ 7: ನಾವಾಗಿ ಯಾರ ಮೇಲೂ ಯುದ್ಧ ಸಾರುವುದಿಲ್ಲ, ನಮ್ಮ ಮೇಲೆ ಯುದ್ಧ ಸಾರಿದವರನ್ನು ಸುಮ್ಮನೆ ಬಿಡುವುದಿಲ್ಲ ಎನ್ನುವುದು ಭಾರತದ ಧ್ಯೇಯ. ಶತಶತಮಾನಗಳಿಂದಲೂ ಈ ನಿಯಮವನ್ನು ಪಾಲಿಸಿಕೊಂಡು ಬರಲಾಗುತ್ತಿದೆ. ಇದು ಮತ್ತೊಮ್ಮೆ ಸಾಬೀತಾಗಿ ಇಂದಿಗೆ 1 ವರ್ಷ (One Year Of Operation Sindoor). ಹೌದು, 2025ರ ಏಪ್ರಿಲ್ 22ರಂದು ಜಮ್ಮು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನೆತ್ತರು ಹರಿಸಿದ ಪಾಕಿಸ್ತಾನ ಪ್ರಾಯೋಜಿತ ಭಯೋತ್ಪಾದಕರಿಗೆ ಭಾರತ ಆಪರೇಷನ್ ಸಿಂದೂರ್ (Operation Sindoor) ಹೆಸರಿನಲ್ಲಿ ದಿಟ್ಟ ಉತ್ತರ ನೀಡಿ, ಪ್ರತೀಕಾರ ತೀರಿಸಿಕೊಂಡು 1 ವರ್ಷ ಕಳೆದಿದೆ. ಭಾರತೀಯ ಸೇನೆ ಹೊಡೆತಕ್ಕೆ ತತ್ತರಿಸಿದ ಉಗ್ರರು, ಪಾಕಿಸ್ತಾನ ಇನ್ನೂ ಚೇತರಿಸಿಕೊಂಡಿಲ್ಲ. ಈ ಕಾರ್ಯಾಚರಣೆಯ ಮೂಲಕ ಭಾರತ ತನ್ನ ತಾಕತ್ತನ್ನು, ಸಾಮರ್ಥ್ಯವನ್ನು ಮತ್ತೊಮ್ಮೆ ಜಗತ್ತಿನೆದುರು ಸಾಬೀತುಪಡಿಸಿದೆ. ಹಾಗಾದರೆ ಉಗ್ರರ ವಿರುದ್ಧದ ಕಾರ್ಯಾಚರಣೆಗೆ ಆಪರೇಷನ್ ಸಿಂದೂರ್ ಎಂದು ಹೆಸರಿಟ್ಟಿದ್ದು ಏಕೆ? ಇದನ್ನೂ ಸನಾತನ ಧರ್ಮಕ್ಕೂ ಇರುವ ನಂಟೇನು? ಈ ಹೆಸರು ಸೂಚಿಸಿದ್ದು ಯಾರು? ಇಲ್ಲಿದ ಎಂದಪೂರ್ಣ ವಿವರ.
ಪಹಲ್ಗಾಮ್ ದಾಳಿ ನಡೆದ ಸರಿಯಾಗಿ 2 ವಾರಗಳ (16) ಬಳಿಕ ಭಾರತೀಯ ಸೇನೆ ಯಾವುದೇ ಸೂಚನೆ ಇಲ್ಲದೆ ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದ (POK) 9 ಸ್ಥಳಗಳನ್ನು ಹೊಡೆದುರುಳಿಸುವ ಮೂಲಕ ಸೇಡು ತೀರಿಸಿಕೊಂಡಿದೆ. ಆಪರೇಷನ್ ಸಿಂದೂರ್ ಹೆಸರಿನಲ್ಲಿ ಕ್ಷಿಪಣಿ ದಾಳಿ ನಡೆಸಿದ ಭಾರತ ಉಗ್ರರ ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದೆ. ಯಾವುದೇ ಸೂಚನೆ ಇಲ್ಲದೆ ಸುಮಾರು 20 ನಿಮಿಷಗಳ ಕಾಲ ನಡೆದ ಈ ದಾಳಿಯಿಂದ ಪಾಕಿಸ್ತಾನ ಪತರುಗುಟ್ಟಿ ಹೋಗಿತ್ತು.
ಉಗ್ರರ ಉಸಿರು ಅಡಗಿಸಿದ ಲೋಟರಿಂಗ್ ಮ್ಯುನಿಷನ್ಸ್ ಡ್ರೋನ್: ಹಾಗಂದ್ರೇನು ಗೊತ್ತ?
ಯಾಕಾಗಿ ಈ ಹೆಸರು?
ಏಪ್ರಿಲ್ 22ರಂದು ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 26 ಮಂದಿ ಮೃತಪಟ್ಟಿದ್ದರು. ಅದರಲ್ಲೂ ಭಯೋತ್ಪಾದಕರು ಪುರುಷರ ಧರ್ಮ ವಿಚಾರಿಸಿ ಮುಸ್ಲಿಮೇತರರನ್ನು ಗುಂಡಿಟ್ಟು ಹತ್ಯೆಗೈದಿದ್ದರು. ಇದರಿಂದ ಅನೇಕ ಮಹಿಳೆಯರು ತಮ್ಮ ಪತಿಯಂದಿರನ್ನು ಕಳೆದುಕೊಂಡರು. ಭಾರತೀಯ ಸಂಸ್ಕೃತಿಯಲ್ಲಿ ವಿವಾಹಿತ ಮಹಿಳೆಯರು ಸಿಂದೂರ (ಕುಂಕುಮ) ಧರಿಸುವುದು ವಾಡಿಕೆ. ಅವರ ಪತಿಯನ್ನು ಹತ್ಯೆ ಮಾಡುವುದು ಎಂದರೆ ಸಿಂದೂರ ಭಾಗ್ಯವನ್ನು ಕಸಿದುಕೊಂಡಂತೆ. ಹೀಗಾಗಿ ವಿಧವೆಯರ ಕಣ್ಣೀರು ಒರೆಸಲು ನಡೆಸಿದ ಕಾರ್ಯಾಚರಣೆಗೆ ಸಿಂದೂರ್ ಎಂಬ ಹೆಸರಿಡಲಾಯಿತು.
ಮಾತ್ರವಲ್ಲ ಯುದ್ಧಕ್ಕೆ ಹೊರಡುವ ಯೋಧರು ಹಣೆಗೆ ಸಿಂದೂರ ತಿಲಕವನ್ನು ಇಡುವುದು ವಾಡಿಕೆ. ಹೀಗಾಗಿ ಈ ಆಪರೇಷನ್‌ಗೆ ಸಿಂದೂರ್ ಎಂದು ನಾಮಕರಣ ಮಾಡಲಾಯಿತು. ಇನ್ನು ಆಪರೇಷನ್ ಸಿಂದೂರ್ ಎಂಬ ಹೆಸರಿನಲ್ಲಿ ಭಾವನಾತ್ಮಕ ಮತ್ತು ವೀರೋಚಿತ ಸಂದೇಶವೂ ಇದೆ.
ಹೆಸರಿಟ್ಟಿದ್ದು ಮೋದಿ
ವಿಶೇಷ ಎಂದರೆ ಈ ಕಾರ್ಯಾಚರಣೆಗೆ ಆಪರೇಷನ್ ಸಿಂದೂರ್ ಎಂದು ಹೆಸರಿಟ್ಟಿದ್ದು ಪ್ರಧಾನಿ ನರೇಂದ್ರ ಮೋದಿ. ಈ ಬಗ್ಗೆ ಮಾತನಾಡಿದ್ದ ರಕ್ಷಣಾ ಸಚಿವ ರಾಜನಾಥ್ ಸಿಂಗ್, ʼʼಪಹಲ್ಗಾಮ್‌ನಲ್ಲಿ ಅಟ್ಟಹಾಸ ಮೆರೆದು ಭಾರತೀಯ ಸಿಂದೂರ ಅಳಿಸಿದರು. ಇದಕ್ಕೆ ಪ್ರತಿಯಾಗಿ ಭಾರತೀಯ ಸೇನೆ ಸರಿಯಾಗಿ ಯೋಜನೆ ರೂಪಿಸಿ ಆಪರೇಷನ್ ಸಿಂದೂರ್ ನಡೆಸಿದ್ದು, ಈ ಹೆಸರು ಸೂಚಿಸಿದ್ದೇ ಪ್ರಧಾನಿ ನರೇಂದ್ರ ಮೋದಿʼʼ ಎಂದು ತಿಳಿಸಿದ್ದರು.
ಆಪರೇಷನ್ ಸಿಂದೂರ್: ಸಾಂಕೇತಿಕತೆಯಿಂದ ಕಾರ್ಯತಂತ್ರದ ಬದಲಾವಣೆಯತ್ತ ಭಾರತದ ಹೊಸ ಹೆಜ್ಜೆ
ದೇಶವನ್ನೇ ಕಣ್ಣೀರಿನಲ್ಲಿ ಮುಳುಗಿಸಿದ ಆ 1 ಭಾವಚಿತ್ರ
ಈ ದಾಳಿಯ ಅತ್ಯಂತ ನೋವಿನ ಸಂಗತಿಯೆಂದರೆ ನೌಕಾಪಡೆಯ ಅಧಿಕಾರಿ ಲೆಫ್ಟಿನೆಂಟ್ ವಿನಯ್ ನರ್ವಾಲ್ ಅವರ ಸಾವು. ಮದುವೆಯಾದ ಕೇವಲ ಒಂದು ವಾರದಲ್ಲೇ ಪಹಲ್ಗಾಮ್‌ಗೆ ಹನಿಮೂನ್‌ಗೆ ಬಂದಿದ್ದ ಈ ದಂಪತಿಯನ್ನು ಉಗ್ರರು ಗುರಿಯಾಗಿಸಿದ್ದರು. ವಿನಯ್ ಅವರ ಶವದ ಪಕ್ಕದಲ್ಲೇ ಕಂಗಾಲಾಗಿ ಕುಳಿತಿದ್ದ ಅವರ ಪತ್ನಿ ಹಿಮಾಂಶಿ ನರ್ವಾಲ್ ಅವರ ಭಾವಚಿತ್ರವು ಇಡೀ ದೇಶದ ಆಕ್ರೋಶ ಮತ್ತು ದುಃಖದ ಸಂಕೇತವಾಗಿತ್ತು. "ನನ್ನ ಪತಿ ಮುಸ್ಲಿಂ ಅಲ್ಲ ಎಂದು ತಿಳಿದ ತಕ್ಷಣ ಉಗ್ರರು ಅವರನ್ನು ಪಾಯಿಂಟ್ ಬ್ಲಾಂಕ್ ರೇಂಜ್‌ನಲ್ಲಿ ಶೂಟ್ ಮಾಡಿದರು" ಎಂದು ಹಿಮಾಂಶಿ ಅಂದು ಕಣ್ಣೀರಿಟ್ಟಿದ್ದರು.
ದೇಶದ ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ.