G20 Summit 2025: ಜಿ20 ಶೃಂಗಸಭೆಯಲ್ಲಿ ಭಾಗವಹಿಸಲು ದಕ್ಷಿಣ ಆಫ್ರಿಕಾಕ್ಕೆ ತೆರಳಿದ ಮೋದಿ
ಆಫ್ರಿಕಾದಲ್ಲಿ ನಡೆಯಲಿರುವ ಮೊದಲ ಜಿ20 ಶೃಂಗಸಭೆಯಲ್ಲಿ (G20 summit) ಭಾಗವಹಿಸಲು ಪ್ರಧಾನಿ ನರೇಂದ್ರ ಮೋದಿ ಅವರು ದಕ್ಷಿಣ ಆಫ್ರಿಕಾದ ಜೋಹಾನ್ಸ್‌ಬರ್ಗ್‌ಗೆ ತೆರಳಿದ್ದಾರೆ. ಈ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಮಾಹಿತಿ ಹಂಚಿಕೊಂಡಿರುವ ಅವರು, ಸಭೆಯ ಕುರಿತಾಗಿ ತಮಗೆ ಇರುವ ಸಾಕಷ್ಟು ಕುತೂಹಲಗಳ ಬಗ್ಗೆ ಹೇಳಿಕೊಂಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ (ಸಂಗ್ರಹ ಚಿತ್ರ) -
ಜೋಹಾನ್ಸ್ ಬರ್ಗ್: ಪ್ರಧಾನಿ ನರೇಂದ್ರ ಮೋದಿ (Prime Minister Narendra Modi) ಅವರು ದಕ್ಷಿಣ ಆಫ್ರಿಕಾದ (south affrica) ಜೋಹಾನ್ಸ್‌ಬರ್ಗ್‌ಗೆ (Johannesburg) ತೆರಳಿದ್ದು, ಇಲ್ಲಿ ನಡೆಯಲಿರುವ ಜಿ20 ಶೃಂಗಸಭೆಯಲ್ಲಿ (20th G20summit) ಭಾಗವಹಿಸಲಿದ್ದಾರೆ. ಈ ಕುರಿತು ಸಾಮಾಜಿಕ ಮಾಧ್ಯಮದ ಮೂಲಕ ಮಾಹಿತಿ ಹಂಚಿಕೊಂಡ ಮೋದಿ, ಆಫ್ರಿಕಾದಲ್ಲಿ ನಡೆಯಲಿರುವ ಮೊದಲ ಜಿ20 ಶೃಂಗಸಭೆಯಾಗಿರುವುದರಿಂದ ಇದು ವಿಶೇಷವಾಗಿದೆ. ವಿವಿಧ ಜಾಗತಿಕ ವಿಷಯಗಳ ಕುರಿತು ಅಲ್ಲಿ ಚರ್ಚಿಸಲಾಗುವುದು. ಶೃಂಗಸಭೆಯ ಸಮಯದಲ್ಲಿ ವಿವಿಧ ವಿಶ್ವ ನಾಯಕರನ್ನು ಭೇಟಿ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ದಕ್ಷಿಣ ಆಫ್ರಿಕಾದ ಅಧ್ಯಕ್ಷತೆಯಲ್ಲಿ ಜೋಹಾನ್ಸ್ ಬರ್ಗ್ ನಲ್ಲಿ ನಡೆಯಲಿರುವ 20ನೇ ಜಿ20 ನಾಯಕರ ಶೃಂಗಸಭೆಯಲ್ಲಿ ಭಾಗವಹಿಸಲು ನಾನು ನವೆಂಬರ್ 21 ರಿಂದ 23ರವರೆಗೆ ದಕ್ಷಿಣ ಆಫ್ರಿಕಾ ಗಣರಾಜ್ಯಕ್ಕೆ ಭೇಟಿ ನೀಡಲಿದ್ದೇನೆ ಎಂದು ಮೋದಿ ತಮ್ಮ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: Trump Jr: ಅಂಬಾನಿ ಕುಟುಂಬದ ಜೊತೆ ದಾಂಡಿಯಾ ನೃತ್ಯ ಮಾಡಿದ ಜೂನಿಯರ್ ಟ್ರಂಪ್- ವಿಡಿಯೊ ವೈರಲ್
ಈ ಬಾರಿ ಆಫ್ರಿಕಾದಲ್ಲಿ ನಡೆಯಲಿರುವ ಮೊದಲ ಜಿ20 ಶೃಂಗಸಭೆಯಾಗಿರುವುದರಿಂದ ಇದು ವಿಶೇಷ ಶೃಂಗಸಭೆಯಾಗಲಿದೆ. 2023ರಲ್ಲಿ ಭಾರತದ ಜಿ20 ಅಧ್ಯಕ್ಷತೆಯ ಸಮಯದಲ್ಲಿ ಆಫ್ರಿಕನ್ ಒಕ್ಕೂಟವು ಜಿ20 ಸದಸ್ಯತ್ವವನ್ನು ಪಡೆದುಕೊಂಡಿತ್ತು ಎಂದು ಅವರು ಹೇಳಿದ್ದಾರೆ.
Will be attending the G20 Summit in Johannesburg, South Africa. This is a particularly special Summit as it is being held in Africa. Various global issues will be discussed there. Will be meeting various world leaders during the Summit. https://t.co/Sn4NFUOzXB
— Narendra Modi (@narendramodi) November 21, 2025
ಶೃಂಗಸಭೆಯು ಪ್ರಮುಖ ಜಾಗತಿಕ ಸಮಸ್ಯೆಗಳನ್ನು ಚರ್ಚಿಸಲು ಒಂದು ಅವಕಾಶವಾಗಿರುತ್ತದೆ. ಈ ವರ್ಷದ ಜಿ20ಯ ವಿಷಯವು 'ಐಕಮತ್ಯ, ಸಮಾನತೆ ಮತ್ತು ಸುಸ್ಥಿರತೆ' ಆಗಿದ್ದು ದಕ್ಷಿಣ ಆಫ್ರಿಕಾವು ಭಾರತದ ನವದೆಹಲಿ ಮತ್ತು ಬ್ರೆಜಿಲ್ ನ ರಿಯೊ ಡಿ ಜನೈರೊದಲ್ಲಿ ನಡೆದ ಹಿಂದಿನ ಶೃಂಗಸಭೆಗಳ ಫಲಿತಾಂಶಗಳ ಮುಂದಿನ ಹೆಜ್ಜೆಯಾಗಿದೆ. 'ವಸುಧೈವ ಕುಟುಂಬಕಂ' ಮತ್ತು 'ಒಂದು ಭೂಮಿ, ಒಂದು ಕುಟುಂಬ ಮತ್ತು ಒಂದು ಭವಿಷ್ಯ' ಎಂಬ ನಮ್ಮ ದೃಷ್ಟಿಕೋನಕ್ಕೆ ಅನುಗುಣವಾಗಿ ಶೃಂಗಸಭೆಯಲ್ಲಿ ಭಾರತದ ದೃಷ್ಟಿಕೋನವನ್ನು ಪ್ರಸ್ತುತಪಡಿಸಲು ನಾನು ಉತ್ಸುಕನಾಗಿದ್ದೇನೆ ಎಂದು ಅವರು ತಿಳಿಸಿದ್ದಾರೆ.
ಜಾಗತಿಕವಾಗಿ ದಕ್ಷಿಣ ರಾಷ್ಟ್ರದಲ್ಲಿ ನಡೆಯಲಿರುವ ಸತತ ನಾಲ್ಕನೇ ಜಿ20 ಶೃಂಗಸಭೆಯಲ್ಲಿ ಪಾಲುದಾರ ರಾಷ್ಟ್ರಗಳ ನಾಯಕರೊಂದಿಗಿನ ನನ್ನ ಸಂವಾದ ಮತ್ತು 6ನೇ ಐಬಿಎಸ್ಎ ಶೃಂಗಸಭೆಯಲ್ಲಿ ಭಾಗವಹಿಸುವುದನ್ನು ನಾನು ಎದುರು ನೋಡುತ್ತಿದ್ದೇನೆ. ಈ ಸಂದರ್ಭದಲ್ಲಿ ದಕ್ಷಿಣ ಆಫ್ರಿಕಾದಲ್ಲಿರುವ ಭಾರತೀಯ ವಲಸಿಗರೊಂದಿಗೂ ಸಂವಾದ ನಡೆಸುವುದಾಗಿ ಅವರು ತಿಳಿಸಿದ್ದಾರೆ.
ದಕ್ಷಿಣ ಆಫ್ರಿಕಾದ ಅಧ್ಯಕ್ಷ ಸಿರಿಲ್ ರಾಮಫೋಸಾ ಆಯೋಜಿಸಿರುವ 20ನೇ ಜಿ20 ನಾಯಕರ ಶೃಂಗಸಭೆಯನ್ನು ಬಹಿಷ್ಕರಿಸುವುದಾಗಿ ಅಮೆರಿಕ ಹೇಳಿದ್ದು, ಇದು ದಕ್ಷಿಣ ಆಫ್ರಿಕಾ ಮತ್ತು ಅಮೆರಿಕ ನಡುವಿನ ರಾಜತಾಂತ್ರಿಕ ಉದ್ವಿಗ್ನತೆಗೆ ಕಾರಣವಾಗಿದೆ. ಈ ಕುರಿತು ಪ್ರತಿಕ್ರಿಯಿಸಿರುವ ದಕ್ಷಿಣ ಆಫ್ರಿಕಾದ ಅಧ್ಯಕ್ಷ ಸಿರಿಲ್ ರಾಮಫೋಸಾ ನಮಗೆ ಅಮೆರಿಕದಿಂದ ಸೂಚನೆ ಬಂದಿದೆ. ಈ ಬಗ್ಗೆ ನಾವು ಅವರೊಂದಿಗೆ ಇನ್ನೂ ಚರ್ಚಿಸುತ್ತಿದ್ದೇವೆ ಎಂದು ಹೇಳಿದರು. ಜಿ20 ನಾಯಕರ ಶೃಂಗಸಭೆಯನ್ನು ಬಹಿಷ್ಕರಿಸುವ ತನ್ನ ನಿರ್ಧಾರದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಶ್ವೇತಭವನ ಹೇಳಿದೆ.