ಕರ್ನಾಟಕ ಬಜೆಟ್​ ಮಹಿಳಾ ದಿನಾಚರಣೆ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

International Women's Day 2025: ವಿಶ್ವ ಮಹಿಳಾ ದಿನಾಚರಣೆ- ಸ್ತ್ರೀಯರಿಗೆ ಅಗತ್ಯವಿರುವ ತಪಾಸಣೆಗಳೇನು?

ಮಹಿಳೆಯರ ದೈಹಿಕ, ಮಾನಸಿಕ ಮತ್ತು ಹಾರ್ಮೋನುಗಳ ವ್ಯತ್ಯಾಸಗಳು ಬದುಕಿನುದ್ದಕ್ಕೂ ಒಂದಿಲ್ಲೊಂದು ರೀತಿಯಲ್ಲಿ ಎದುರಾಗುತ್ತಲೇ ಇರುತ್ತವೆ. ಹಾಗಾಗಿ ಅಂತಾರಾಷ್ಟ್ರೀಯ ಮಹಿಳಾ ದಿನದ ಹೊಸಿಲಲ್ಲಿ, ಮಹಿಳೆಯರ ಬದುಕಿನಲ್ಲಿ ಬೇರೆ ಬೇರೆ ಘಟ್ಟಗಳಲ್ಲಿ ಆರೋಗ್ಯ ನಿರ್ವಹಿಸಲು ಮಾಡಿಸಿ ಕೊಳ್ಳಬೇಕಾದ ತಪಾಸಣೆಗಳೇನು ಎನ್ನುವುದನ್ನು ತಿಳಿಯಿರಿ..

ಮಹಿಳೆಯರು ಆರೋಗ್ಯವಾಗಿರಲು ಈ ತಪಾಸಣೆ ಅಗತ್ಯ!

Profile Pushpa Kumari Mar 8, 2025 6:30 AM

ನವದೆಹಲಿ: ಮಹಿಳೆಯರ ಬದುಕಿನುದ್ದಕ್ಕೂ ದೈಹಿಕ ಸವಾಲುಗಳು ಎದುರಾಗುತ್ತಲೇ ಇರುತ್ತವೆ. ಹದಿಹರೆಯದ ಸವಾಲುಗಳಿಗಿಂತ, ತಾಯ್ತ ನದ ದಿನಗಳ ಸವಾಲುಗಳು ಭಿನ್ನ. ಹಾಗೆಯೇ ನಡುವಯಸ್ಸು, ರಜೋ ನಿವೃತ್ತಿಯ ದಿನಗಳು ಇನ್ನೂ ಕಠಿಣವಾಗಿ ಇರಬಹುದು. ಹೀಗೆ ದೈಹಿಕ, ಮಾನಸಿಕ ಮತ್ತು ಹಾರ್ಮೋನುಗಳ ವ್ಯತ್ಯಾಸಗಳು ಬದುಕಿನುದ್ದಕ್ಕೂ ಒಂದಿಲ್ಲೊಂದು ರೀತಿಯಲ್ಲಿ ಎದುರಾಗುತ್ತಲೇ ಇರುತ್ತವೆ. ಹಾಗಾಗಿ ಅಂತಾರಾಷ್ಟ್ರೀಯ ಮಹಿಳಾ ದಿನದ (Women's Day 2025) ಹೊಸಿಲಲ್ಲಿ, ಮಹಿಳೆಯರ ಬದುಕಿನಲ್ಲಿ ಬೇರೆ ಬೇರೆ ಘಟ್ಟಗಳಲ್ಲಿ ಆರೋಗ್ಯ ನಿರ್ವಹಿಸಲು ಮಾಡಿಸಿಕೊಳ್ಳಬೇಕಾದ ತಪಾಸಣೆಗಳೇನು ಎನ್ನುವುದನ್ನು ತಿಳಿಯೋಣ.

ಹದಿಹರೆಯ: ಆಟವಾಡಿಕೊಂಡಿರುವ ಮಕ್ಕಳು ಇದ್ದಕ್ಕಿದ್ದಂತೆ ಪ್ರೌಢಾವಸ್ಥೆಗೆ ತಿರುಗಿದಾಗ ಎದುರಾಗುವ ಗೊಂದಲಗಳಿಗೆ ತುದಿಮೊದಲೇ ಇರುವುದಿಲ್ಲ. ಇವೆಲ್ಲ ಮಾನಸಿಕವಾಗಿ ತೊಳಲಾಟಕ್ಕೆ ಕಾರಣವಾಗುವುದು ಹೌದಾದರೂ, ದೈಹಿಕವಾಗಿ ಕಾಣುವ ತೊಂದರೆಗಳು ಬೇರೆ ಸ್ವರೂಪದವು. ಅನಿಯಮಿತ ಅಥವಾ ಭಾರೀ ಋತುಸ್ರಾವ, ಅತಿಯಾದ ನೋವಿನ ದಿನಗಳು ಇತ್ಯಾದಿ ಗಳೆಲ್ಲ ಹುಡುಗಿಯರ ದಿನಚರಿಗಳನ್ನೇ ಪೂರ್ಣವಾಗಿ ಬದಲಾಯಿಸಿ ಬಿಡುತ್ತವೆ. ಇತ್ತೀಚಿನ ವರ್ಷಗಳಲ್ಲಿ ಹದಿಹರೆಯದವರಲ್ಲಿ ಕಾಣುತ್ತಿರುವ ಪಿಸಿಒಎಸ್‌/ ಪಿಸಿಒಡಿ ಸಮಸ್ಯೆಗಳು ತೊಂದರೆಗಳನ್ನು ಇನ್ನಷ್ಟು ಜಟಿಲಗೊಳಿಸಿವೆ.

ತಪಾಸಣೆಗಳೇನು?:

  • ಈ ದಿನಗಳಲ್ಲಿ ಅವರ ಪೋಷಕಾಂಶ ಮಟ್ಟ ಅಸಮರ್ಪಕವಾಗಿರುವುದೇ ಹೆಚ್ಚು. ಹಾಗಾಗಿ ಅನೀಮಿಯ ಅಥವಾ ರಕ್ತ ಹೀನತೆ ಉಂಟಾಗುವ ಸಾಧ್ಯತೆಯನ್ನು ತಪ್ಪಿಸಲು ಕಬ್ಬಿಣ ಮತ್ತು ಹಿಮೋಗ್ಲೋಬಿನ್‌ ಪರೀಕ್ಷೆಯನ್ನು ಮಾಡಿಸುವುದು ಸೂಕ್ತ.
  • ಮೂಳೆಗಳ ಆರೋಗ್ಯ ಚೆನ್ನಾಗಿರುವುದು ಸಹ ಅಗತ್ಯವಾದ್ದರಿಂದ, ಯಾವುದೇ ಕೊರತೆಯನ್ನು ಆರಂಭದಲ್ಲೇ ನಿವಾರಿಸುವ ಉದ್ದೇಶದಿಂದ ಕ್ಯಾಲ್ಶಿಯಂ ಮತ್ತು ವಿಟಮಿನ್‌ ಡಿ ಪರೀಕ್ಷೆಗಳು ಬೇಕಾಗಬಹುದು.
  • ಭವಿಷ್ಯದ ಬದುಕಿನಲ್ಲಿ ಸರ್ವೈಕಲ್‌ ಕ್ಯಾನ್ಸರ್‌ ಬಾರದಂತೆ ತಡೆಗಟ್ಟುವುದಕ್ಕೆ ಎಚ್‌ಪಿವಿ ಲಸಿಕೆ ಹಾಕಿಸಬೇಕು.

ತಾಯ್ತನದ ದಿನಗಳು: ಮಹಿಳೆಯ ಬದುಕಿನ ಅತ್ಯಂತ ಸವಾಲಿನ ದಿನಗಳಿವು. ಗರ್ಭಾವಸ್ಥೆ ಮತ್ತು ಮಕ್ಕಳ ಪಾಲನೆಯ ಸಂದರ್ಭಗಳಲ್ಲಿ ಆಕೆ ದೈಹಿಕ ಮತ್ತು ಮಾನಸಿಕವಾಗಿ ಬಹಳ ಸದೃಢವಾಗಿ ಇರಬೇಕಾಗುತ್ತದೆ. ಗರ್ಭಾವಸ್ಥೆಯಲ್ಲಿ ಯಾವುದೇ ಸೋಂಕುಗಳಿಗೆ ಒಳಗಾಗದಂತೆ, ಬಿಪಿ-ಮಧುಮೇಹಗಳಿಂದ ದೂರವಾಗಿ, ಹೆರಿಗೆಯ ನಂತರ ಖಿನ್ನತೆಗೆ ತುತ್ತಾ ಗದಂತೆ ಕಾಪಾಡಿ ಕೊಳ್ಳುವುದು ಮಹತ್ವದ್ದು. ಮುಂದೆ ಮಕ್ಕಳನ್ನು ಬೆಳೆ ಸುವಾಗಂತೂ ತಮ್ಮ ಕಾಳಜಿಯನ್ನು ಮಹಿಳೆಯರು ಸಂಪೂರ್ಣ ಮರೆಯುವುದು ಸಾಮಾನ್ಯ ಎಂಬಂತಾಗಿದೆ.

ತಪಾಸಣೆಗಳೇನು?:

  • ರಕ್ತಹೀನತೆ, ಕೊಲೆಸ್ಟ್ರಾಲ್‌ ಮತ್ತು ಮಧುಮೇಹದ ಸಾಧ್ಯತೆಯನ್ನು ದೂರ ಮಾಡಲು ಸಿಬಿಸಿ, ಲಿಪಿಡ್‌ ಪ್ರೊಫೈಲ್‌ ಮತ್ತು ಮಧುಮೇಹದ ರಕ್ತಪರೀಕ್ಷೆಗಳು
  • ಸರ್ವಿಕಲ್‌ ಕ್ಯಾನ್ಸರ್‌ನ ಪೂರ್ವಭಾವಿ ಪತ್ತೆಗೆ ಪ್ಯಾಪ್‌ ಸ್ಮೇರ್‌
  • ವರ್ಷಕ್ಕೊಮ್ಮೆ ಮೆಮೋಗ್ರಾಮ್‌. ಇದರಿಂದ ಸ್ತನ ಕ್ಯಾನ್ಸರ್‌ ಆರಂಭದಲ್ಲೇ ಪತ್ತೆ ಮಾಡಬಹುದು
  • ಹಾರ್ಮೋನುಗಳ ಆರೋಗ್ಯ ತಿಳಿಯುವಂಥ ಟಿಎಸ್‌ಎಚ್‌, ಎಫ್‌ಎಸ್‌ಎಚ್‌ಗಳು

ರಜೋನಿವೃತ್ತಿ: ಒಮ್ಮೆ ಋತುಬಂಧದ ಸೂಚನೆಗಳು ಕಾಣತೊಡಗಿದರೆ, ಅವೆಲ್ಲ ತಹಬಂದಿಗೆ ಬರುವುದಕ್ಕೆ ಕೆಲವು ವರ್ಷಗಳೇ ಬೇಕಾಗುತ್ತವೆ. ಇಂಥ ದಿನಗಳಲ್ಲಿ ತೂಕ ಹೆಚ್ಚುವುದು, ದೇಹದ ಒಳ-ಹೊರಗೆ ಕೊಬ್ಬು ತುಂಬಿ ಕೊಳ್ಳುವುದು, ಆಸ್ಟಿಯೊಪೊರೋಸಿಸ್‌, ರಕ್ತದೊತ್ತಡ ಮುಂತಾದ ಹಲವು ಬಗೆಯ ಸಮಸ್ಯೆಗಳು ಹತ್ತಿರ ಬರತೊಡಗುತ್ತವೆ. ಒಮ್ಮೆ ಋತುಬಂಧ ಪೂರ್ಣಗೊಂಡ ನಂತರ, ಹೃದಯದ ಸಮಸ್ಯೆಗಳು, ಮಧುಮೇಹದಂಥ ಇನ್ನೂ ಗಂಭೀರ ಸಮಸ್ಯೆಗಳು ಅಮರಿಕೊಳ್ಳಬಹುದು.

ತಪಾಸಣೆಗಳೇನು?

  • ಮೂಳೆಗಳ ಸಾಂದ್ರತೆಯನ್ನು ಪತ್ತೆ ಮಾಡುವ ಡೆಕ್ಸಾ (DEXA Scan) ಈ ದಿನಗಳಲ್ಲಿ ಬೇಕಾಗಬಹುದು.
  • ರಕ್ತದೊತ್ತಡ, ಮಧುಮೇಹ, ಥೈರಾಯ್ಡ್‌ ಮತ್ತು ಕೊಲೆಸ್ಟ್ರಾಲ್‌ ಮಟ್ಟಗಳನ್ನು ನಿರ್ವಹಿಸಲು ಆಯಾ ಪರೀಕ್ಷೆಗಳು ಬೇಕಾಗುತ್ತವೆ.
  • ಕಣ್ಣುಗಳ ತಪಾಸಣೆ

ಋತುಬಂಧದ ನಂತರ:

ಇದರಲದಲಿ ಕಾಡುವಂಥ ತೊಂದರೆಗಳು ಹಲವು ರೀತಿಯವು. ಕೀಲುಗಳ ನೋವು ಅಥವಾ ಆರ್ಥರೈಟಿಸ್‌, ಮೂತ್ರಪಿಂಡಗಳ ಸಮಸ್ಯೆ, ಡಿಮೆನ್ಶಿಯ ಮುಂತಾದವು ಈಗಾಗಲೇ ಇರುವಂಥ ಸಮಸ್ಯೆಗಳ ಸಾಲಿಗೆ ಸೇರಿ ಕೊಳ್ಳುತ್ತವೆ.

ಇದನ್ನು ಓದಿ: International Women's Day 2025: ವುಮೆನ್ಸ್‌ ಡೇ ಸಂಭ್ರಮಕ್ಕೆ ವಿಂಟೇಜ್‌ ಫ್ಯಾಷನ್‌ ಜ್ಯುವೆಲರಿಗಳ ಸಾಥ್‌

ತಪಾಸಣೆ:

  • ಮೆಮೋಗ್ರಫಿ ಮತ್ತು ಪ್ಯಾಪ್‌ ಟೆಸ್ಟ್‌ಗಳನ್ನು ನಿಲ್ಲಿಸುವಂತಿಲ್ಲ. ಜೊತೆಗೆ ಈವರೆಗೆ ಮಾಡಿಸಿಕೊಳ್ಳುತ್ತಿದ್ದ ಹಲವು ರೀತಿಯ ರಕ್ತಪರೀಕ್ಷೆಗಳು ಸಹ ಬೇಕಾಗುತ್ತವೆ.
  • ಮೂತ್ರಪಿಂಡಗಳ ಕ್ಷಮತೆಯನ್ನು ಅರಿಯುವುದಕ್ಕೆ ಕಿಡ್ನಿ ಫಂಕ್ಷನ್‌ ಟೆಸ್ಟ್‌ ಬೇಕಾಗಬಹುದು. ಮೂತ್ರನಾಳಗಳ ಸೋಂಕು ತಪ್ಪಿಸಲು ವೈದ್ಯರಲ್ಲಿ ಸಲಹೆ ಬೇಕಾಗಬಹುದು
  • ಅಲ್‌ಜೈಮರ್ಸ್‌ ಅಥವಾ ಯಾವುದೇ ರೀತಿಯ ಮರೆವಿನ ಖಾಯಿಲೆಯನ್ನು ಆರಂಭದಲ್ಲೇ ಪತ್ತೆ ಹಚ್ಚುವುದಕ್ಕೆ ನರರೋಗ ತಜ್ಞರ ಸಲಹೆ ಬೇಕಾಗಬಹುದು.