Bengaluru’s New Cricket Stadium: ದೇಶದ 2ನೇ ಅತಿದೊಡ್ಡ ಕ್ರಿಕೆಟ್ ಸ್ಟೇಡಿಯಂಗೆ ಆನೇಕಲ್‌ನಲ್ಲಿ ನಾಳೆ ಶಂಕುಸ್ಥಾಪನೆ; ಏನಿದರ ವಿಶೇಷತೆಗಳು?
ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನ ಸೂರ್ಯನಗರ 4ನೇ ಹಂತದ ಕೆಎಚ್‌ಬಿ ಸೂರ್ಯ ಕ್ರೀಡಾ ಗ್ರಾಮದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ ನಿರ್ಮಾಣ ಕಾಮಗಾರಿಯ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. 943 ಕೋಟಿ ವೆಚ್ಚದಲ್ಲಿ ನೂತನ ಕ್ರಿಕೆಟ್ ಕ್ರೀಡಾಂಗಣ ನಿರ್ಮಾಣ ಮಾಡಲಾಗುತ್ತಿದೆ.
-
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಾಳೆ (ಮೇ 23) ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನ ಸೂರ್ಯನಗರ 4ನೇ ಹಂತದ ಕೆಎಚ್‌ಬಿ ಸೂರ್ಯ ಕ್ರೀಡಾ ಗ್ರಾಮದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ ನಿರ್ಮಾಣ (Bengaluru’s New Cricket Stadium) ಕಾಮಗಾರಿಯ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಇದರ ಜತೆಗೆ ಸಿಎಂ ಅವರು, ನಮ್ಮ ಮನೆ ಯೋಜನೆಗೆ ಚಾಲನೆ, ಸೂರ್ಯ ಶೈನ್ ಮತ್ತು ಸೂರ್ಯ ಡಿವೈನ್ ವಸತಿ ಸಮುಚ್ಛಯ ಕಾಮಗಾರಿಗಳಿಗೆ ಶಂಕುಸ್ಥಾಪನೆ, ವಸತಿ ಯೋಜನೆಗೆ ಭೂಮಿ ನೀಡಿದ ಭೂ ಮಾಲೀಕರುಗಳಿಗೆ ಸಾಂಕೇತಿಕ ನಿವೇಶನ ಹಂಚಿಕೆ, ಸಾರ್ವಜನಿಕ ಅರ್ಜಿದಾರರಿಗೆ ನಿವೇಶನ ಹಂಚಿಕೆ ಮಾಡಲಿದ್ದಾರೆ.
ಶನಿವಾರ ಬೆಳಗ್ಗೆ ಇಂಡ್ಲವಾಡಿಯ ಕೆ.ಎಚ್.ಬಿ. ಸೂರ್ಯ ಕ್ರೀಡಾ ಗ್ರಾಮದಲ್ಲಿ 11 ಗಂಟೆಗೆ ಸಿಎಂ ಸಿದ್ದರಾಮಯ್ಯ ಅವರು ಕಾರ್ಯಕ್ರಮ ಉದ್ಘಾಟನೆ ಮಾಡಲಿದ್ದಾರೆ. ಈ ವೇಳೆ ಡಿಸಿಎಂ ಡಿ.ಕೆ. ಶಿವಕುಮಾರ್, ವಸತಿ ಸಚಿವರಾದ ಬಿ.ಝಡ್. ಜಮೀರ್ ಅಹಮದ್ ಖಾನ್, ಕರ್ನಾಟಕ ಗೃಹ ಮಂಡಳಿ ಅಧ್ಯಕ್ಷ ಕೆ.ಎಂ. ಶಿವಲಿಂಗೇಗೌಡ ಹಾಗೂ ಆನೇಕಲ್ ಶಾಸಕ ಬಿ. ಶಿವಣ್ಣ ಮತ್ತಿತರ ಗಣ್ಯರು ಉಪಸ್ಥಿತರಿರಲಿದ್ದಾರೆ.
ನೂತನ ಕ್ರಿಕೆಟ್ ಸ್ಟೇಡಿಯಂ ವಿಶೇಷತೆಗಳೇನು?
- 943 ಕೋಟಿ ವೆಚ್ಚದಲ್ಲಿ ಕ್ರೀಡಾಂಗಣ ನಿರ್ಮಾಣ
- 80,000 ಆಸನ ಸಾಮರ್ಥ್ಯದ ಅಂತಾರಾಷ್ಟ್ರೀಯ ಸ್ಟೇಡಿಯಂ
- ಭಾರತದ 2ನೇ ಅತಿದೊಡ್ಡ ಕ್ರೀಡಾಂಗಣ
- ಮೆಟ್ರೋ ಸಂಪರ್ಕದೊಂದಿಗೆ ವಿಶ್ವಮಟ್ಟದ ಸೌಲಭ್ಯ
- ಚಿನ್ನಸ್ವಾಮಿ ಕ್ರೀಡಾಂಗಣಕ್ಕಿಂತ ಎರಡು ಪಟ್ಟು ದೊಡ್ಡದು
ನೂತನ ಅಂತರರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ ಅನ್ನು ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಸೂರ್ಯನಗರ 4ನೇ ಹಂತದಲ್ಲಿ (ಇಂಡ್ಲವಾಡಿ ಗ್ರಾಮ) ಕರ್ನಾಟಕ ಗೃಹ ಮಂಡಳಿ (KHB) ವತಿಯಿಂದ ‘ಕೆಎಚ್‍ಬಿ ಸೂರ್ಯ ಕ್ರೀಡಾ ಗ್ರಾಮ’ ಯೋಜನೆಯಡಿ ನಿರ್ಮಿಸಲಾಗುತ್ತಿದೆ.
ವಿಶ್ವದರ್ಜೆಯ ಸೌಲಭ್ಯಗಳು
ಕ್ರೀಡಾಂಗಣದಲ್ಲಿ ಆಧುನಿಕ ಸೌಲಭ್ಯಗಳು, ಹಾಸ್ಪಿಟಾಲಿಟಿ ಲೌಂಜ್‌ಗಳು, ವಿಐಪಿ ಬಾಕ್ಸ್‌ಗಳು ಹಾಗೂ ಮೀಡಿಯಾ ಸೌಲಭ್ಯಗಳನ್ನು ಒಳಗೊಂಡಂತೆ ಪ್ರೇಕ್ಷಕರ ಅನುಭವವನ್ನು ಉತ್ತಮಗೊಳಿಸುವ ವ್ಯವಸ್ಥೆಗಳು ಇರಲಿವೆ. ಜತೆಗೆ ಭಾರಿ ಜನಸಂದಣಿ ನಿರ್ವಹಣೆಗೆ ಅಗತ್ಯವಾದ ಸುರಕ್ಷತಾ ವ್ಯವಸ್ಥೆ ಈ ಕ್ರೀಡಾಂಗಣ ಹೊಂದಿರಲಿದೆ.
ಮೊದಲ ಹಂತದಲ್ಲಿ 943 ಕೋಟಿ ವೆಚ್ಚದಲ್ಲಿ ಸ್ಟೇಡಿಯಂ ಮತ್ತು ಅದಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳ ನಿರ್ಮಾಣ, ವಿದ್ಯುತ್ ಸೌಲಭ್ಯ ಇತ್ಯಾದಿಗಳನ್ನು ಕಲ್ಪಿಸಲಾಗುತ್ತದೆ. ಎರಡನೇ ಹಂತದಲ್ಲಿ ಕ್ರೀಡಾ ಸಂಕೀರ್ಣ ನಿರ್ಮಿಸಲಾಗುತ್ತದೆ. ಇದರಲ್ಲಿ ಒಳಾಂಗಣ, ಹೊರಾಂಗಣ ಕ್ರೀಡೆಗಳಿಗೆ ಅವಕಾಶ ಕಲ್ಪಿಸಲಾಗುತ್ತದೆ. ಇದಲ್ಲದೆ ಸಮಾವೇಶ ಕೇಂದ್ರ, ಸುಸಜ್ಜಿತವಾದ ಹೋಟೆಲ್ ಇತ್ಯಾದಿ ಸೌಲಭ್ಯಗಳನ್ನು ಕಲ್ಪಿಸಿಕೊಡಲಾಗುತ್ತದೆ.
75 ಎಕರೆ ಜಾಗದಲ್ಲಿ ನಿರ್ಮಾಣ
ನಗರದ ಹೃದಯಭಾಗದಲ್ಲಿರುವ ಚಿನ್ನಸ್ವಾಮಿ ಕ್ರೀಡಾಂಗಣವು ಕೇವಲ 32 ಸಾವಿರ ಆಸನ ಸಾಮರ್ಥ್ಯ ಹೊಂದಿದ್ದು, ಅಂತಾರಾಷ್ಟ್ರೀಯ ಪಂದ್ಯಗಳು ಹಾಗೂ ಐಪಿಎಲ್ ಪಂದ್ಯಗಳಿಗೆ ಇದು ಸಾಕಾಗುತ್ತಿಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗಿತ್ತು. ಹೀಗಾಗಿ ನೂತನ ಕ್ರೀಡಾಂಗಣವನ್ನು ಬಹಳ ದೊಡ್ಡದಾಗಿ 75 ಎಕರೆ ಜಾಗದಲ್ಲಿ ನಿರ್ಮಿಸಲು ಯೋಜಿಲಾಗಿದ್ದು, ಸ್ಟೇಡಿಯಂನಲ್ಲಿ 80 ಸಾವಿರ ಜನರಿಗೆ ಆಸನ ವ್ಯವಸ್ಥೆ ಇರಲಿದೆ. ಆ ಮೂಲಕ ಇದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣಕ್ಕಿಂತ ಎರಡು ಪಟ್ಟು ದೊಡ್ಡದಾಗಿರಲಿದೆ. ನೂತನ ಕ್ರೀಡಾಂಗಣ ನಿರ್ಮಾಣವು 3 ವರ್ಷಗಳಲ್ಲಿ ಪೂರ್ಣಗೊಳ್ಳುವ ನಿರೀಕ್ಷೆ ಇದೆ.
ಏನೆಲ್ಲಾ ಪ್ರಯೋಜನ?
ಈ ಸ್ಟೇಡಿಯಂ ಅಂತಾರಾಷ್ಟ್ರೀಯ ಪಂದ್ಯಗಳಿಗೆ ಮಾತ್ರವಲ್ಲದೆ ಕರ್ನಾಟಕದಲ್ಲಿ ಕ್ರೀಡೆಗಳ ಉತ್ತೇಜನ ಸಂಬಂಧವೂ ಮಹತ್ವದ ಪಾತ್ರವಹಿಸಲಿದೆ. ಕ್ರಿಕೆಟ್ ತರಬೇತಿ ಕೇಂದ್ರಗಳು, ಯುವಕರ ಕ್ರೀಡಾ ಕಾರ್ಯಕ್ರಮಗಳಿಗೆ ಇದು ವೇದಿಕೆಯಾಗಲಿದೆ. ಶಾಲೆ, ಕಾಲೇಜು ಹಾಗೂ ರಾಜ್ಯ ಮಟ್ಟದ ಕ್ರೀಡಾಕೂಟಗಳಿಗೂ ಅವಕಾಶ ಕಲ್ಪಿಸುವ ಮೂಲಕ ಸ್ಥಳೀಯ ಪ್ರತಿಭೆಗಳನ್ನು ಬೆಳೆಸುವ ಉದ್ದೇಶ ಹೊಂದಲಾಗಿದೆ. ಕ್ರಿಕೆಟ್ ಮಾತ್ರವಲ್ಲದೆ, ಈ ಸ್ಟೇಡಿಯಂನ್ನು ಬಹುಉದ್ದೇಶೀಯ ವೇದಿಕೆಯಾಗಿ ರೂಪಿಸುವ ಯೋಜನೆಯೂ ಇದೆ. ಸಂಗೀತ ಕಾರ್ಯಕ್ರಮಗಳು, ಸಮ್ಮೇಳನಗಳು, ಸಾರ್ವಜನಿಕ ಸಭೆಗಳು, ಕಾರ್ಪೊರೇಟ್ ಕಾರ್ಯಕ್ರಮಗಳು ಹಾಗೂ ಪ್ರದರ್ಶನಗಳಿಗೂ ಇದನ್ನು ಬಳಸುವ ಉದ್ದೇಶವಿದೆ.
ಯುರೋಪ್ ಈಗ ಮತ್ತಷ್ಟು ಹತ್ತಿರ: ಬೆಂಗಳೂರು-ಜ್ಯೂರಿಕ್ ನೇರ ವಿಮಾನ ಅಕ್ಟೋಬರ್‌ನಿಂದ ಆರಂಭ
ಈ ಸ್ಟೇಡಿಯಂ ನಿರ್ಮಾಣವಾಗುತ್ತಿರುವ ಸ್ಥಳವು ಕೆಂಪೇಗೌಡ ಬಸ್ ನಿಲ್ದಾಣದಿಂದ 47.9 ಕಿ.ಮೀ., ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ 72.2 ಕಿ.ಮೀ., ಆನೇಕಲ್ ರೈಲು ನಿಲ್ದಾಣದಿಂದ 11.2 ಕಿ.ಮೀ., ಬೊಮ್ಮಸಂದ್ರ ಮೆಟ್ರೊ ನಿಲ್ದಾಣದಿಂದ 18.4 ಕಿ.ಮೀ. ದೂರದಲ್ಲಿದೆ.