ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Asaduddin Owaisi: ಲೋಕಸಭೆಯಲ್ಲಿ ವಕ್ಫ್‌ ತಿದ್ದುಪಡಿ ಮಸೂದೆ ಪ್ರತಿ ಹರಿದು ಓವೈಸಿ ಆಕ್ರೋಶ

Asaduddin Owaisi: ಎಐಎಂಐಎಂ ಸಂಸದ ಅಸಾದುದ್ದೀನ್‌ ಓವೈಸಿ ಅವರು, ವಕ್ಫ್‌ ಕಾಯ್ದೆ ತಿದ್ದುಪಡಿ ಮಸೂದೆಯನ್ನು ವಿರೋಧಿಸಿ ಲೋಕಸಭೆಯಲ್ಲಿ ಮಸೂದೆಯ ಪ್ರತಿಯನ್ನು ಹರಿದು ಹಾಕಿ ಆಕ್ರೋಶ ವ್ಯಕ್ತಪಡಿಸಿರುವ ಘಟನೆ ನಡೆದಿದೆ. ವಕ್ಫ್‌ ಕಾಯ್ದೆ ತಿದ್ದುಪಡಿ ಮಸೂದೆಗೆ ಲೋಕಸಭೆ ಒಪ್ಪಿಗೆ ನೀಡಿತು. ಮಸೂದೆ ಪರವಾಗಿ 288 ಮತ್ತು ವಿರೋಧವಾಗಿ 232 ಮತಗಳು ಬಿದ್ದವು.

ಸಂಸತ್‌ನಲ್ಲೇ ವಕ್ಫ್‌ ತಿದ್ದುಪಡಿ ಮಸೂದೆ ಪ್ರತಿ ಹರಿದ ಓವೈಸಿ

ಅಸಾದುದ್ದೀನ್ ಓವೈಸಿ

Profile Sushmitha Jain Apr 3, 2025 10:06 AM

ನವದೆಹಲಿ: ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ(BJP-led Central government)ವು ಲೋಕಸಭೆ (Lok Sabha)ಯಲ್ಲಿ ಬುಧವಾರ ವಕ್ಫ್‌ ತಿದ್ದುಪಡಿ ಮಸೂದೆ (Waqf Amendment Bill), 2025 ಅನ್ನು ಮಂಡಿಸಿದ್ದು, ವಿಪಕ್ಷಗಳು ಈ ಮಸೂದೆಯ ವಿರುದ್ಧ ತೀವ್ರ ಪ್ರತಿಭಟನೆ ನಡೆಸಿವೆ. ಆಲ್‌ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ (ಎಐಎಂಐಎಂ) (AIMIM)ಮುಖ್ಯಸ್ಥ ಅಸಾದುದ್ದೀನ್ ಓವೈಸಿ(Asasuddin Owaisi) ಅವರು ಮಸೂದೆ ಕುರಿತ ಚರ್ಚೆಯ ವೇಳೆ ಕೇಂದ್ರ ಸರ್ಕಾರದ ವಿರುದ್ಧ ಹಿಗ್ಗಾಮುಗ್ಗ ವಾಗ್ದಾಳಿ ನಡೆಸಿದರು. ಈ ತಿದ್ದುಪಡಿಯನ್ನು ವಿರೋಧಿಸುವ ಸಂಕೇತವಾಗಿ ಅವರು ಮಸೂದೆಯ ಪ್ರತಿಯನ್ನು ಸದನದ ಒಳಗೆಯೇ ಹರಿದು ಹಾಕಿದ್ದಾರೆ. ವಕ್ಫ್‌ ಕಾಯ್ದೆಯನ್ನು ತಿದ್ದುಪಡಿ ಮಾಡುವ ಈ ಮಸೂದೆಯಿಂದಾಗಿ ಮುಸ್ಲಿಮರಿಗೆ ಅನ್ಯಾಯವಾಗುತ್ತಿದೆ ಎಂದು ಅವರು ಆರೋಪಿಸಿದರು.

ಈ ಮಸೂದೆ ಮುಸ್ಲಿಮರ ಮೇಲಿನ ದಾಳಿ. ಮೋದಿ ಸರ್ಕಾರ ನಮ್ಮ ಸ್ವಾತಂತ್ರ್ಯದ ಮೇಲೆ ಯುದ್ಧವನ್ನೇ ಪ್ರಾರಂಭಿಸಿದೆ. ನಮ್ಮ ಮಸೀದಿಗಳು, ನಮ್ಮ ದರ್ಗಾಗಳು, ನಮ್ಮ ಮದರಸಾಗಳನ್ನು ಗುರಿಯಾಗಿಸಲಾಗಿದೆ. ಮಸೂದೆಯನ್ನು ಮಂಡಿಸುವುದರ ಹಿಂದಿನ ಸತ್ಯವನ್ನು ಈ ಸರ್ಕಾರ ಬಹಿರಂಗಪಡಿಸುತ್ತಿಲ್ಲ. ಸರ್ವರಿಗೂ ಸಮಾನ ರಕ್ಷಣೆ ನೀಡುವ ಸಂವಿಧಾನದ 14ನೇ ವಿಧಿಯನ್ನು ಈ ಮಸೂದೆಯು ಉಲ್ಲಂಘಿಸುತ್ತಿದೆ. ಇದರಲ್ಲಿ ಹಲವು ನಿರ್ಬಂಧಗಳನ್ನು ವಿಧಿಸಲಾಗಿದ್ದು, ವಕ್ಫ್‌ ಅಸ್ತಿ ಅತಿಕ್ರಮಣದಾರರು ಮಾಲೀಕರಾಗುತ್ತಾರೆ, ಮುಸ್ಲಿಮೇತರರು ವಕ್ಫ್‌ ಮಂಡಳಿಯನ್ನು ನಿರ್ವಹಿಸುತ್ತಾರೆ, ಎಲ್ಲದಕ್ಕೂ ಮಿಗಿಲಾಗಿ ಈ ಮಸೂದೆ ಕಾನೂನು ಸಮಾನತೆಯನ್ನು ಸಹ ಉಲ್ಲಂಘಿಸುತ್ತದೆ ಎಂದು ಓವೈಸಿ ಸದನದಲ್ಲಿ ಹೇಳಿದರು.

ಬಿಜೆಪಿಯು ಮಸೀದಿ ಮತ್ತು ದೇವಾಲಯಗಳ ಹೆಸರಿನಲ್ಲಿ ಬಿಜೆಪಿ ದೇಶದಲ್ಲಿ ಸಂಘರ್ಷ ಸೃಷ್ಟಿಸಲು ಬಯಸುತ್ತಿದೆ ಎಂದ ಓವೈಸಿ, ಈ ಮಸೂದೆಯನ್ನು ತಿರಸ್ಕರಿಸುತ್ತಿರುವುದಾಗಿ ಪ್ರತಿಗಳನ್ನು ಹರಿದು ಹಾಕಿದರು. ಈ ಮಸೂದೆಯು ಸಂವಿಧಾನಬಾಹಿರವಾಗಿರುವುದರಿಂದ ನಾನು ಈ ಮಸೂದೆಯನ್ನು ಹರಿದು ಹಾಕುತ್ತಿದ್ದೇನೆ. ಈ ದೇಶದಲ್ಲಿ, ದೇವಾಲಯಗಳು ಮತ್ತು ಮಸೀದಿಗಳ ಹೆಸರಿನಲ್ಲಿ ಸಂಘರ್ಷಗಳನ್ನು ಸೃಷ್ಟಿಸಲು ಬಯಸುವ ಬಿಜೆಪಿಯ ಉದ್ದೇಶವನ್ನು ನಾನು ಇದನ್ನು ಖಂಡಿಸುತ್ತೇನೆ ಎಂದು ಓವೈಸಿ ಹೇಳಿದರು.



ಕೇಂದ್ರಕ್ಕೆ ಹೆಚ್ಚಿನ ಅಧಿಕಾರ ಬೇಡ: ಸಚಿವ ರಿಜಿಜು

ಮಸೂದೆ ಹಿಂದಿನ ಪ್ರಕರಣಗಳಿಗೆ ಅನ್ವಯವಾಗುವುದಿಲ್ಲ ಮತ್ತು ಕೇಂದ್ರವು ಈ ಮಸೂದೆಯ ಮೂಲಕ ಹೆಚ್ಚಿನ ಅಧಿಕಾರ ಪಡೆಯಲು ಬಯಸುತ್ತಿಲ್ಲ ಎಂದು ಸದನದಲ್ಲಿ ಮಸೂದೆಯನ್ನು ಮಂಡಿಸಿದ ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಹೇಳಿದರು. "ನಮ್ಮ ದೇಶವು ವಿಶ್ವದಲ್ಲೇ ಅತಿ ಹೆಚ್ಚು ವಕ್ಫ್ ಆಸ್ತಿಯನ್ನು ಹೊಂದಿದ್ದರೂ, ಅದನ್ನು ಬಡ ಮುಸ್ಲಿಮರ ಶಿಕ್ಷಣ, ವೈದ್ಯಕೀಯ ಚಿಕಿತ್ಸೆ, ಕೌಶಲ್ಯ ಅಭಿವೃದ್ಧಿ ಮತ್ತು ಆದಾಯ ಗಳಿಕೆಗೆ ಏಕೆ ಬಳಸಲಾಗಿಲ್ಲ? ಈ ವಿಷಯದಲ್ಲಿ ಇಲ್ಲಿಯವರೆಗೆ ಯಾವುದೇ ಪ್ರಗತಿ ಏಕೆ ಸಾಧಿಸಲಾಗಿಲ್ಲ?" ಎಂದು ರಿಜಿಜು ವಿಪಕ್ಷಗಳ ಸಂಸದರನ್ನು ಪ್ರಶ್ನಿಸಿದರು.

ಈ ಸುದ್ದಿಯನ್ನು ಓದಿ: Waqf Bill: ವಕ್ಫ್ ಮಸೂದೆ ತಿದ್ದುಪಡಿ: ಚರ್ಚೆ ವೇಳೆ ಶಾ ಬಾನೋ, ಶಾಯರಾ ಬಾನೋ ಬಗ್ಗೆ ಪ್ರಸ್ತಾಪ ಯಾಕೆ?

ವಕ್ಫ್ (ತಿದ್ದುಪಡಿ) ಮಸೂದೆ, 2025ರ ಜೊತೆಗೆ, ರಿಜಿಜು ಅವರು ಮುಸಲ್ಮಾನ್ ವಕ್ಫ್ (ರದ್ದತಿ) ಮಸೂದೆ, 2024 ಅನ್ನು ಕೂಡಾ ಲೋಕಸಭೆಯಲ್ಲಿ ಮಂಡಿಸಿದ್ದಾರೆ. ಈ ಮಸೂದೆಯನ್ನು ಕಳೆದ ವರ್ಷ ಆಗಸ್ಟ್‌ನಲ್ಲಿ ಲೋಕಸಭೆಯಲ್ಲಿ ಪರಿಚಯಿಸಲಾಗಿತ್ತು. ಇದರ ಬಳಿಕ ಬಿಜೆಪಿ ಸದಸ್ಯ ಜಗದಾಂಬಿಕಾ ಪಾಲ್ ನೇತೃತ್ವದ ಜಂಟಿ ಸಂಸದೀಯ ಸಮಿತಿಯು ಇದನ್ನು ಪರಿಶೀಲಿಸಿ ಹಲವು ಶಿಫಾರಸುಗಳನ್ನು ನೀಡಿತ್ತು.

ಈ ಮಸೂದೆಯು 1995ರ ಕಾಯ್ದೆಯನ್ನು ತಿದ್ದುಪಡಿ ಮಾಡುವ ಪ್ರಯತ್ನವಾಗಿದ್ದು, ಭಾರತದಲ್ಲಿ ವಕ್ಫ್ ಆಸ್ತಿಗಳ ಆಡಳಿತ ಮತ್ತು ನಿರ್ವಹಣೆಯನ್ನು ಸುಧಾರಿಸುವ ಗುರಿ ಹೊಂದಿದೆ ಎಂದು ಈ ಹಿಂದೆ ಕೇಂದ್ರ ಸರ್ಕಾರ ಹೇಳಿತ್ತು. ಹಿಂದಿನ ಕಾಯ್ದೆಯಲ್ಲಿರುವ ದೋಷಗಳನ್ನು ನಿವಾರಿಸುವುದು ಮತ್ತು ವಕ್ಫ್ ಮಂಡಳಿಗಳ ದಕ್ಷತೆ ಹೆಚ್ಚಿಸುವುದು, ನೋಂದಣಿ ಪ್ರಕ್ರಿಯೆಯನ್ನು ಸುಧಾರಿಸುವುದು ಮತ್ತು ವಕ್ಫ್ ದಾಖಲೆಗಳನ್ನು ನಿರ್ವಹಿಸುವಲ್ಲಿ ತಂತ್ರಜ್ಞಾನದ ಪಾತ್ರವನ್ನು ಹೆಚ್ಚಿಸುವುದು ಇದರ ಗುರಿಯಾಗಿದೆ.