ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

NICE Road Project: ನೈಸ್ ಈಸ್ ಬಿಗ್ಗೆಸ್ಟ್ ಫ್ರಾಡ್, ನಿವೇಶನಗಳ ಹಂಚಿಕೆ ಹಿಂದೆ ದೊಡ್ಡ ಹುನ್ನಾರವಿದೆ: ಎಚ್‌.ಡಿ. ದೇವೇಗೌಡ ಆರೋಪ

ರೈತರಿಗೆ 1,453 ಸೈಟುಗಳನ್ನು ಕೊಟ್ಟು ಉಳಿದ ಅಷ್ಟು ಭೂಮಿಯನ್ನು ಲಪಟಾಯಿಸುವ ದುರುದ್ದೇಶ ಈ ನಿರ್ಧಾರದ ಹಿಂದೆ ಇದೆ. ಒಂದು ಚದರ ಅಡಿಯ ಭೂಮಿಯ ಬೆಲೆ ₹10,000 ರಿಂದ ₹15,000 ಇದೆ. ಬಂಗಾರಕ್ಕೂ ಮೀರಿದ ಬೆಲೆ ಹೊಂದಿರುವ ಈ ಭೂಮಿಯನ್ನು ಲೂಟಿ ಹೊಡೆಯಲು ಹೊರಟವರು ಯಾರು? ಈ ಅಕ್ರಮದ ಹಿಂದೆ ಯಾರಿದ್ದಾರೆ? ಎಂಬುವುದು ಒಂದಲ್ಲ ಒಂದು ದಿನ ಇದು ಬಯಲಿಗೆ ಬರಲೇಬೇಕಾಗುತ್ತದೆ ಎಂದು ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಅವರು ಕಿಡಿಕಾರಿದ್ದಾರೆ.

ನೈಸ್ ನಿವೇಶನಗಳ ಹಂಚಿಕೆ ಹಿಂದೆ ದೊಡ್ಡ ಹುನ್ನಾರ: ಎಚ್‌.ಡಿ. ದೇವೇಗೌಡ

-

Prabhakara R
Prabhakara R Sep 7, 2026 10:06 PM

ಬೆಂಗಳೂರು, ಸೆಪ್ಟೆಂಬರ್ 7: ಬೆಂಗಳೂರು-ಮೈಸೂರು ಇನ್ಫ್ರಾಸ್ಟ್ರಕ್ಚರ್ ಕಾರಿಡಾರ್ ಯೋಜನೆ (ನೈಸ್-NICE Road Project)ಗಾಗಿ ಭೂಮಿ ಕಳೆದುಕೊಂಡಿರುವ ರೈತರಿಗೆ ನಿವೇಶನಗಳನ್ನು ಹಂಚಿಕೆ ಮಾಡುವುದಾಗಿ ರಾಜ್ಯ ಸಚಿವ ಸಂಪುಟ ನಿರ್ಧಾರ ಮಾಡಿರುವ ಬಗ್ಗೆ ಮಾಜಿ ಪ್ರಧಾನಿಗಳು ಹಾಗೂ ಜೆಡಿಎಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಹೆಚ್.ಡಿ.ದೇವೇಗೌಡರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಮಾಜಿ ಪ್ರಧಾನಿಗಳು ರಾಜ್ಯದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಮೂರು ಪುಟಗಳ ಬಹಿರಂಗ ಪತ್ರ ಬರೆದು ತಮ್ಮ ಅಭಿಪ್ರಾಯಗಳನ್ನು ದಾಖಲಿಸಿದ್ದಾರೆ. ಈ ಬಗ್ಗೆ ಅವರು ಜೆಡಿಎಸ್ ಪಕ್ಷದ ಕೇಂದ್ರ ಕಚೇರಿ ಜೆ.ಪಿ. ಭವನದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ ತಮ್ಮ ಪತ್ರವನ್ನು ಬಿಡುಗಡೆ ಮಾಡಿದರು.

ಬಂಗಾರಕ್ಕೂ ಮೀರಿದ ಬೆಲೆ ಈ ಭೂಮಿಗಿದೆ:

ರೈತರಿಗೆ 1,453 ಸೈಟುಗಳನ್ನು ಕೊಟ್ಟು ಉಳಿದ ಅಷ್ಟು ಭೂಮಿಯನ್ನು ಲಪಟಾಯಿಸುವ ದುರುದ್ದೇಶ ಈ ನಿರ್ಧಾರದ ಹಿಂದೆ ಇದೆ ಎಂದು ಅನುಮಾನ ವ್ಯಕ್ತಪಡಿಸಿದ ದೇವೇಗೌಡರು; ಈ ಭಾಗದಲ್ಲಿ ಒಂದು ಚದರ ಅಡಿಯ ಭೂಮಿಯ ಬೆಲೆ ₹10,000 ರಿಂದ ₹15,000 ಇದೆ. ಬಂಗಾರಕ್ಕೂ ಮೀರಿದ ಬೆಲೆ ಹೊಂದಿರುವ ಈ ಭೂಮಿಯನ್ನು ಲೂಟಿ ಹೊಡೆಯಲು ಹೊರಟವರು ಯಾರು? ಈ ಅಕ್ರಮದ ಹಿಂದೆ ಯಾರಿದ್ದಾರೆ? ಯಾರು ಏನೇ ಮಾಡಿದರೂ ಇದನ್ನು ಮುಚ್ಚಿಡಲು ಸಾಧ್ಯವಿಲ್ಲ. ಒಂದಲ್ಲ ಒಂದು ದಿನ ಇದು ಬಯಲಿಗೆ ಬರಲೇಬೇಕಾಗುತ್ತದೆ ಎಂದು ಕಿಡಿಕಾರಿದರು.

ಕೋರ್ಟ್ ತೀರ್ಪು ಮತ್ತು ಅಭಿಪ್ರಾಯಗಳಿಗೆ ವಿರುದ್ಧ;

ನೈಸ್ ಯೋಜನೆ ಇಡೀ ದೇಶದಲ್ಲಿಯೇ ಅತಿ ದೊಡ್ಡ ಅಕ್ರಮ (Fraud) ಎಂದು ಕರೆದಿರುವ ಮಾಜಿ ಪ್ರಧಾನಮಂತ್ರಿಗಳು; ಭೂಮಿ ಕಳೆದುಕೊಂಡ ರೈತರಿಗೆ 1,453 ನಿವೇಶನಗಳನ್ನು ಹಂಚಿಕೆ ಮಾಡಲು ಸಚಿವ ಸಂಪುಟ ಕೈಗೊಂಡಿರುವ ನಿರ್ಧಾರವು ರಾಜ್ಯ ಹೈಕೋರ್ಟ್ ವ್ಯಕ್ತಪಡಿಸಿರುವ ಅಭಿಪ್ರಾಯಗಳಿಗೆ ಹಾಗೂ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪುಗಳಿಗೆ ಸ್ಪಷ್ಟವಾಗಿ ವಿರುದ್ಧವಾಗಿದೆ ಎಂದು ಹೇಳಿದ್ದಾರೆ.

ಇತ್ತೀಚಿಗೆ ನಡೆದ ಸಚಿವ ಸಂಪುಟ ಸಭೆಯಲ್ಲಿ ನೈಸ್ ಯೋಜನೆಗಾಗಿ ಭೂಮಿ ಪಡೆದುಕೊಂಡ ಅನೇಕ ನೊಂದ ರೈತರಿಗೆ ನಿವೇಶನಗಳನ್ನು ಹಂಚಿಕೆ ಮಾಡುವ ಸಂಬಂಧ ನೈಸ್ ಸಂಸ್ಥೆಗೆ ರಾಜ್ಯ ಸರಕಾರ ಅನುಮತಿ ನೀಡುವ ನಿರ್ಧಾರ ಕೈಗೊಂಡಿದೆ. ನಿರ್ಧಾರಕ್ಕೆ ಸುಪ್ರೀಂ ಕೋರ್ಟ್ ತೀರ್ಪುಗಳ ಸಹಮತವಿದೆ ಎಂದು ಸರಕಾರ ಜನತೆಗೆ ತಪ್ಪು ಮಾಹಿತಿ ನೀಡಿದೆ. ಆದರೆ ಈ ವಾದವನ್ನು ನಾನು ಸಂಪೂರ್ಣವಾಗಿ ತಳ್ಳಿಹಾಕುತ್ತೇನೆ ಎಂದು ದೇವೇಗೌಡರು ಗುಡುಗಿದರು.

ಪ್ರೇಮ್ ವರ್ಕ್ ಅಗ್ರಿಮೆಂಟ್ ಉಲ್ಲಂಘಿಸಲಾಗಿದೆ:

ಎಲ್ಲರೂ ಹೇಳುವಂತೆ ನೈಸ್ ಯೋಜನೆ ಆರಂಭವಾಗಿದ್ದು ನಾನು ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿಯೇ. ಇದನ್ನು ನಾನು ಅಲ್ಲಗಳೆಯುವುದಿಲ್ಲ. ಆದರೆ ನನ್ನ ನಂತರ ಬಂದ ಸರಕಾರಗಳು ಹಾಗೂ ಅಂದಿನ ಅಧಿಕಾರಿಗಳು ನೈಸ್ ಸಂಸ್ಥೆಯ ಜತೆ ಶಾಮೀಲಾಗಿ ನಿರಂತರವಾಗಿ ಅಕ್ರಮಗಳನ್ನು ಎಸಗುತ್ತಾ ಬಂದಿವೆ ಎಂದು ಮಾಜಿ ಪ್ರಧಾನಿಗಳು ನೇರ ಆರೋಪ ಮಾಡಿದರು.

1997ರಲ್ಲಿ ನಾನು ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ನೈಸ್ ಸಂಸ್ಥೆಯೊಂದಿಗೆ ಯೋಜನಾ ಚೌಕಟ್ಟು ಒಪ್ಪಂದ (Frame work agreement) ಮಾಡಿಕೊಳ್ಳಲಾಯಿತು. ಅದರ ಅನ್ವಯ ರಸ್ತೆ ಮತ್ತು ಅದಕ್ಕೆ ಪೂರಕವಾದ ಮೂಲಭೂತ ಸೌಕರ್ಯಗಳನ್ನು ಅಭಿವೃದ್ಧಿಪಡಿಸುವುದಕ್ಕಾಗಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲಾಯಿತು. ಆದರೆ 2016ರಲ್ಲಿ ಡಿ.ಕೆ.ಶಿವಕುಮಾರ್ ಅವರ ಪಕ್ಷದ ಸರಕಾರ ಅಧಿಕಾರದಲ್ಲಿದ್ದಾಗ ಸುಪ್ರೀಂ ಕೋರ್ಟಿಗೆ ಪ್ರಮಾಣಪತ್ರ ಸಲ್ಲಿಸಿ ಆಂತರಿಕ ಬದಲಾವಣೆ (ಇಂಟೆರ್ ಚೇಂಜ್) ಜಾಗಗಳಲ್ಲಿ ನಿವೇಶನ ನಿರ್ಮಾಣ ಮಾಡುವುದು ಒಪ್ಪಂದಕ್ಕೆ ವಿರುದ್ಧ ಮತ್ತು ನ್ಯಾಯಾಲಯದ ಆದೇಶಗಳಿಗೆ ವಿರುದ್ಧವಾಗಿದೆ ಎಂಬುದನ್ನು ಸ್ಪಷ್ಟವಾಗಿ ಹೇಳಿತ್ತು. ಆದರೆ, ಈಗ ಅದೇ ಪಕ್ಷದ ಸರಕಾರ ತನ್ನ ಹಳೆಯ ನಿರ್ಧಾರಕ್ಕೆ ವಿರುದ್ಧವಾಗಿ ತೀರ್ಮಾನಗಳನ್ನು ಕೈಗೊಳ್ಳುತ್ತಿರುವುದು ಒಪ್ಪಲು ಸಾಧ್ಯವಿಲ್ಲ ಎಂದು ಮಾಜಿ ಪ್ರಧಾನಿಗಳು ಹೇಳಿದರು.

ನೈಸ್ ಸಂಸ್ಥೆ ಅಕ್ರಮಗಳ ಆಗರ ಎಂದು ಪುನರುಚ್ಚರಿಸಿದ ಮಾಜಿ ಪ್ರಧಾನಿಗಳು; ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ಗಳು ಹಲವಾರು ಬಾರಿ ನೈಸ್ ಸಂಸ್ಥೆಗೆ ಕಟ್ಟುನಿಟ್ಟಿನ ಎಚ್ಚರಿಕೆಗಳನ್ನು ನೀಡಿವೆ. ಯೋಜನೆಗೆ ಮೀಸಲಿಟ್ಟ ಪ್ರದೇಶಗಳಲ್ಲಿ ನಿವೇಶನಗಳನ್ನು ನಿರ್ಮಿಸುವುದು ಕಾನೂನಿಗೆ ವಿರುದ್ಧ ಮತ್ತು ಯೋಜನಾ ಚೌಕಟ್ಟು ಒಪ್ಪಂದದ ಉಲ್ಲಂಘನೆ ಎಂದು ನ್ಯಾಯಾಲಯಗಳು ಪದೇಪದೇ ಹೇಳಿವೆ. ಆದರೆ ಈಗ ರಾಜ್ಯ ಸರಕಾರ ರೈತರ ಕಣ್ಣೊರಿಸುವ ತಂತ್ರವಾಗಿ ನಿವೇಶನಗಳನ್ನು ಹಂಚಿಕೆ ಮಾಡಲು ಹೊರಟಿರುವುದು ನ್ಯಾಯಾಂಗ ನಿಂದನೆ ಆಗುತ್ತದೆ ಎಂದು ದೇವೇಗೌಡರು ಸ್ಪಷ್ಟ ಎಚ್ಚರಿಕೆ ನೀಡಿದರು.

ರಸ್ತೆ ನಿರ್ಮಾಣಕ್ಕಾಗಿ ಸ್ವಾಧೀನ ಮಾಡಿಕೊಳ್ಳಲಾದ ಜಾಗದಲ್ಲಿ ಅಭಿವೃದ್ಧಿಯ ನೆಪವನ್ನು ಮುಂದೊಡ್ಡಿ ಆ ಜಾಗವನ್ನು ವಾಣಿಜ್ಯ ಉದ್ದೇಶಕ್ಕಾಗಿ ಬಳಕೆ ಮಾಡಿಕೊಳ್ಳುವುದು ಸರಿಯಲ್ಲ. ಈ ನಿಟ್ಟಿನಲ್ಲಿ ಕೋರ್ಟುಗಳು ನೀಡಿರುವ ಆದೇಶಗಳನ್ನು ಉದ್ದೇಶಪೂರ್ವಕವಾಗಿಯೇ ರಾಜ್ಯ ಸರ್ಕಾರ ನಿರ್ಲಕ್ಷ ಮಾಡಿದೆ ಎಂಬ ಗುರುತರ ಅಂಶವನ್ನು ಮಾಜಿ ಪ್ರಧಾನಿಗಳು ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಉದಾಹರಣೆಗೆ ನಿವೇಶನಗಳನ್ನು ಹಂಚಿಕೆ ಮಾಡಲು ಗುರುತಿಸಲಾಗಿರುವ ಮಾದಾವರ, ಕೊಡಿಗೆಹಳ್ಳಿ, ಕೆಂಗೇರಿ, ಕೊಮಘಟ್ಟ, ವರಹಸಂದ್ರ, ಸೋಂಪುರ, ಪಿಳ್ಳಗಾನಹಳ್ಳಿ, ಕೆಮತನಹಳ್ಳಿ, ಯು.ಎಂ.ಕಾವಲ್, ಚಿಕ್ಕತೊಗೂರು, ಪಂಥರಪಾಳ್ಯ, ಕೆ.ಜಿ. ಶ್ರೀಕಂಠಪುರ ಮತ್ತು ಗಂಗೊಂಡನಹಳ್ಳಿ ಗ್ರಾಮಗಳು ರಸ್ತೆ ನಿರ್ಮಾಣದ ಯೋಜನೆಯ ಭಾಗವಾಗಿವೆ ಎಂದಿರುವ ಅವರು; ಆದರೂ, ನಿಮ್ಮ ಸಚಿವ ಸಂಪುಟವು ಭೂಮಿ ಕಳೆದುಕೊಂಡವರಿಗೆ ನಿವೇಶನ ಹಂಚಿಕೆಗೆ ಅನುಮೋದನೆ ನೀಡಿದೆ ಎಂದು ಹೇಳುತ್ತದೆ. ಅದು ಹೇಗೆ ಸಾಧ್ಯವಾಗುತ್ತದೆ ಎಂದು ಅವರು ನೇರವಾಗಿ ಮುಖ್ಯಮಂತ್ರಿಯನ್ನು ಪ್ರಶ್ನಿಸಿದ್ದಾರೆ.

ಹಂಚಿಕೆ ಮಾಡಬೇಕಿರುವ ನಿವೇಶನಗಳನ್ನು ಯಾವಾಗ ರಚಿಸಲಾಯಿತು? ಈ ನಿವೇಶನಗಳ ರಚನೆಗೆ ಅನುಮೋದನೆ ನೀಡಿದವರು ಯಾರು? ಜುಲೈ 2026ರಲ್ಲಿ, ಹೈಕೋರ್ಟ್‌ನ ವಿಭಾಗೀಯ ಪೀಠವು ಕಂಪನಿಯ ಬ್ಯಾಲೆನ್ಸ್ ಶೀಟ್‌ಗಳು ಭೂಮಿ ಮಾರಾಟದ ಮುಂಗಡ ಮತ್ತು ₹36 ಕೋಟಿಯಿಂದ ₹48 ಕೋಟಿ ವರೆಗಿನ ಜಂಟಿ ಅಭಿವೃದ್ಧಿ ಒಪ್ಪಂದಗಳನ್ನು ನಿರಂತರವಾಗಿ ಬಹಿರಂಗಪಡಿಸಿವೆ ಎಂದು ಗಮನಿಸಿದೆ. ಇದು ಹಲವಾರು ಹಣಕಾಸು ವರ್ಷಗಳಲ್ಲಿ ಮುಂದುವರೆದ ವಾಣಿಜ್ಯ ಚಟುವಟಿಕೆಗಳ ಮಾಹಿತಿಯನ್ನು ಪ್ರತಿಬಿಂಬಿಸುತ್ತದೆ. ಇದರಲ್ಲಿ ಅಭಿವೃದ್ಧಿಪಡಿಸಿದ ಭೂಮಿಯ ಮಾರಾಟ, ಜಂಟಿ ಅಭಿವೃದ್ಧಿ ಒಪ್ಪಂದಗಳು ಮತ್ತು ಯೋಜನಾ ಭೂಮಿಯ ಹಣಗಳಿಕೆ ಜೊತೆಗೆ ಅನಧಿಕೃತ ಮತ್ತು ಅತಿಯಾದ ಟೋಲ್ ಸಂಗ್ರಹವು ಗಮನಾರ್ಹ ಆದಾಯದ ಮೂಲಗಳಾಗಿವೆ, ಆದರೆ ಲಿಂಕ್ ರಸ್ತೆ ಮತ್ತು ಪೆರಿಫೆರಲ್ ರಸ್ತೆಯ ಪೂರ್ಣಗೊಂಡ ಭಾಗಗಳನ್ನು ಕಂಪನಿಯ ಹಣಕಾಸು ಹೇಳಿಕೆಗಳಲ್ಲಿ ಆಸ್ತಿಗಳಾಗಿ ಬಂಡವಾಳೀಕರಣ ಮಾಡಲಾಗಿದೆ. ಇದು ಕಾನೂನು ಮತ್ತು ಸಂವಿಧಾನಕ್ಕೆ ಮಾಡಿದ ವಂಚನೆ ಎಂದು ದೇವೇಗೌಡರು ಪತ್ರದಲ್ಲಿ ಉಲ್ಲೇಖಿಸಿ ನೈಸ್ ಕಂಪನಿ ವಿರುದ್ಧ ತೀವ್ರ ಅಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಯೋಜನೆಯು ಯಾವುದೇ ಸಾರ್ವಜನಿಕ ಹಿತಾಸಕ್ತಿ ಅಥವಾ ಸಾರ್ವಜನಿಕ ಉದ್ದೇಶವನ್ನು ಪೂರೈಸಿಲ್ಲ ಮತ್ತು ಯೋಜನೆಯ ಪ್ರವರ್ತಕರ ಖಾಸಗಿ ಹಿತಾಸಕ್ತಿಗಳನ್ನು ಮಾತ್ರ ಪೂರೈಸಿದೆ ಎಂದು ನ್ಯಾಯಾಲಯವು ಸ್ಪಷ್ಟವಾಗಿ ಹೇಳಿದೆ. ನ್ಯಾಯಾಲಯವು ಕಂಪನಿಯ ಖಾತೆಗಳ ವಿಧಿವಿಜ್ಞಾನ ಲೆಕ್ಕಪರಿಶೋಧನೆ ಮಾಡಬೇಕು ಎಂದು ಹೇಳಿದೆ, ಆದರೆ ರಾಜ್ಯ ಸರ್ಕಾರವೇ ಯೋಜನೆಯ ಪ್ರತಿಪಾದಕರಿಗೆ ತನ್ನ ಆಸ್ತಿಗಳನ್ನು ಬಂಡವಾಳೀಕರಣ ಮಾಡುವ ಮೂಲಕ ಅಕ್ರಮವಾಗಿ ಭಾರಿ ಲಾಭ ಗಳಿಸಲು ಅವಕಾಶ ನೀಡುವಲ್ಲಿ ಸಹಕಾರ ನೀಡುತ್ತಿದೆ ನ್ಯಾಯಾಲಯ ಅನುಮಾನ ವ್ಯಕ್ತಪಡಿಸಿದೆ ಎಂಬ ಅಂಶವನ್ನು ದೇವೇಗೌಡರು ಮುಖ್ಯಮಂತ್ರಿ ಗಮನಕ್ಕೆ ತಂದಿದ್ದಾರೆ.

ನೈಸ್ ಕಂಪನಿ ನಡೆಸಿರುವ ಅಕ್ರಮಗಳ ಬಗ್ಗೆ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರಾದ ಟಿಬಿ ಜಯಚಂದ್ರ ಅವರ ನೇತೃತ್ವದಲ್ಲಿ ಜಂಟಿ ಸದನ ಸಮಿತಿ ರಚನೆ ಮಾಡಲಾಗಿತ್ತು. ಈ ಸಮಿತಿ ಈ ಸಮಿತಿ ನೀಡಿದ ವರದಿ ಬಗ್ಗೆ ಈ ಸರ್ಕಾರ ಯಾಕೆ ಚರ್ಚೆ ಮಾಡುತ್ತಿಲ್ಲ? ಸಮಿತಿಯು ಏನೇನು ಶಿಫಾರಸುಗಳನ್ನು ಮಾಡಿದೆ ಎಂದು ಬಗ್ಗೆ ಈ ಸರ್ಕಾರವು ಏಕೆ ಮೌನ ಮುರಿಯುತ್ತಿಲ್ಲ ಎಂದು ದೇವೇಗೌಡರು ತೀಕ್ಷ್ಣವಾಗಿ ಪ್ರಶ್ನಿಸಿದರು.

ಈಗಷ್ಟೇ ನಾನು ಮುಖ್ಯಮಂತ್ರಿಗೆ ಪತ್ರ ಬರೆದಿದ್ದೇನೆ. ಅವರು ನನಗೆ ಉತ್ತರ ನೀಡಲಿ. ಆಮೇಲೆ ಮತ್ತೊಮ್ಮೆ ಈ ವಿಷಯದ ಬಗ್ಗೆ ಸುದೀರ್ಘವಾಗಿ ಮಾತಾಡುತ್ತೇನೆ ಎಂದ ದೇವೇಗೌಡರು; ನೈಸ್ ಕಂಪನಿ ನಡೆಸಿರುವ ಅಕ್ರಮಗಳ ಬಗ್ಗೆ ಹೈಕೋರ್ಟ್ ಏನೇನು ಅಭಿಪ್ರಾಯಗಳನ್ನು ದಾಖಲಿಸಿದೆ ಎಂಬುದು ಈ ಸರಕಾರಕ್ಕೆ ಗೊತ್ತಿಲ್ಲವೇ? ಗೊತ್ತಿದ್ದರೂ ಕೂಡ ಟೋಲ್ ಸಂಗ್ರಹಕ್ಕೆ ಇವರು ಹೇಗೆ ಅನುಮತಿ ನೀಡುತ್ತಾರೆ? ಹೈಕೋರ್ಟ್ ಮಾತ್ರವಲ್ಲದೆ ಟಿಬಿ ಜಯಚಂದ್ರ ಅವರ ನೇತೃತ್ವದ ಸದನ ಸಮಿತಿ ವರದಿ ಕೂಡ ಸಂಗ್ರಹ ಅಕ್ರಮ ಎಂದು ಸಾರಿ ಸಾರಿ ಹೇಳಿದೆ. ಹೀಗೆದರೂ ಕೂಡ ಸಾವಿರಾರು ಕೋಟಿ, ಟೋಲ್ ಸಂಗ್ರಹ ನಡೆಯುತ್ತಿದೆ ಎಂದು ದೂರಿದರು.

ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿದ್ದರು. ಕಾಗುಡು ತಿಮ್ಮಪ್ಪ ಸ್ಪೀಕರ್ ಆಗಿದ್ದರು. ಆ ಸಂದರ್ಭದಲ್ಲಿ ಸದನದಲ್ಲಿ ನೈಸ್ ಅಕ್ರಮಗಳ ಬಗ್ಗೆ ಚರ್ಚೆ ನಡೆದು ಅದೊಂದು ದೊಡ್ಡ ಫ್ರಾಡ್ ಕಂಪನಿ ಎಂದು ಅಭಿಪ್ರಾಯ ವ್ಯಕ್ತವಾಗಿತ್ತು. ಹೀಗಿದ್ದರೂ ಕೂಡ ನೈಸ್ ಕಂಪನಿ ರಾಜಾರೋಷವಾಗಿ ತನ್ನ ಅಕ್ರಮಗಳನ್ನು ಮುಂದುವರಿಸಿದೆ, ಅದು ಹೇಗೆ? ಎಂದು ಮಾಜಿ ಪ್ರಧಾನಿಗಳು ತೀವ್ರ ಆಶ್ಚರ್ಯ ವ್ಯಕ್ತಪಡಿಸಿದರು.

ನೈಸ್ ವಿಚಾರದಲ್ಲಿ ರಾಜಿ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟ ಮಾತುಗಳಲ್ಲಿ ಇಳಿದ ದೇವೇಗೌಡರು; ಇದರ ವಿರುದ್ಧ ನಾವು ಹೋರಾಟ ಮಾಡುತ್ತೇವೆ. ಭೂಮಿ ಕಳೆದುಕೊಂಡ ರೈತರಿಗೆ ಅನ್ಯಾಯ ಆಗಲು ಬಿಡುವುದಿಲ್ಲ. ಈ ವಿಷಯದ ಬಗ್ಗೆ ಶೀಘ್ರದಲ್ಲಿ ಕೇಂದ್ರ ಸಚಿವರಾದ ಹೆಚ್.ಡಿ.ಕುಮಾರಸ್ವಾಮಿ ಅವರು ಮಾತನಾಡಲಿದ್ದಾರೆ ಎಂದರು ಮಾಜಿಪ್ರಧಾನಿಗಳು.

ಕುಮಾರಸ್ವಾಮಿ ಅವರು ದಾಖಲೆಯಿಲ್ಲದೆ ಮಾತನಾಡುವುದಿಲ್ಲ:

ಹಾಲಿ ಮುಖ್ಯಮಂತ್ರಿ ನೈಸ್ ಯೋಜನೆ ಟೇಕ್ ಓವರ್ ಮಾಡಲು ಮುಂದಾಗಿದ್ದಾರೆ ಎಂದು ಕುಮಾರಸ್ವಾಮಿ ಅವರು ನೇರ ಆರೋಪ ಮಾಡಿದ್ದಾರಲ್ಲ ಎನ್ನುವ ಪ್ರಶ್ನೆಗೆ ಸೂಚ್ಯವಾಗಿ ಉತ್ತರಿಸಿದ ಮಾಜಿ ಪ್ರಧಾನಿಗಳು; ಕುಮಾರಸ್ವಾಮಿ ಅವರು ಆಧಾರ ಇಲ್ಲದೆ ಮಾತನಾಡುವುದಿಲ್ಲ. ಅವರು ದಾಖಲಾತಿ ಇಟ್ಟುಕೊಂಡು ಮಾತನಾಡುತ್ತಾರೆ. ನನ್ನ ಬಳಿ ಕೂಡ ಅನೇಕ ದಾಖಲಾತಿಗಳು ಇವೆ. ಯಾರ ಯಾರು ಯಾರ ಹತ್ತಿರ ಜಮೀನು ಬರೆಸಿಕೊಂಡಿದ್ದಾರೆ ಎಂಬ ಬಗ್ಗೆ ನನ್ನ ಬಳಿ ದಾಖಲಾತಿಗಳು ಇವೆ. ನೈಸ್ ಬಿಗೆಸ್ಟ್ ಫ್ರಾಡ್ ಇದು ಎಂದು ಆಕ್ರೋಶ ವ್ಯಕ್ತಪಡಿಸಿದರು.

ನೈಸ್‌ ಯೋಜನೆಯ ನಿವೇಶನಗಳ ಹಂಚಿಕೆ ತೀರ್ಮಾನಕ್ಕೆ ಮಾಜಿ ಪ್ರಧಾನಿ ದೇವೇಗೌಡರ ವಿರೋಧ; ಸಿಎಂ ಡಿಕೆಶಿಗೆ ಪತ್ರ

ಮಾಧ್ಯಮಗೋಷ್ಠಿಯಲ್ಲಿ ಜೆಡಿಎಸ್ ರಾಜ್ಯ ಕೋರ್ ಕಮಿಟಿ ಅಧ್ಯಕ್ಷ ಎಂ.ಕೃಷ್ಣಾರೆಡ್ಡಿ, ವಿಧಾನ ಪರಿಷತ್ ಸದಸ್ಯ ಟಿ.ಎನ್. ಜವರಾಯಿಗೌಡ, ಮಾಜಿ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ, ಮಾಜಿ ಎಂಎಲ್‌ಸಿ ಈ. ಕೃಷ್ಣಪ್ಪ, ಜೆಡಿಎಸ್ ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ರಶ್ಮಿ ರಾಮೇಗೌಡ, ರಾಜ್ಯ ಕಾನೂನು ಘಟಕದ ಅಧ್ಯಕ್ಷ ಎ.ಪಿ.ರಂಗನಾಥ್, ನಗರ ಜೆಡಿಎಸ್ ಅಧ್ಯಕ್ಷ ಶೈಲಜಾ ರಾವ್, ರಾಜ್ಯ ವಕ್ತಾರರಾದ ದೇವರಾಜ್ ಮತ್ತು ಪ್ರದೀಪ್ ಕುಮಾರ್ ಮುಂತಾದವರು ಉಪಸ್ಥಿತರಿದ್ದರು.