Delhi Building Collapse: ಪಿಜಿ ಮಾಫಿಯಾ ತನಿಖೆ, ಮೃತರ ಕುಟುಂಬಕ್ಕೆ ಸೂಕ್ತ ಪರಿಹಾರ; ಸರ್ಕಾರದ ಮುಂದೆ 7 ಬೇಡಿಕೆ ಮುಂದಿಟ್ಟ ಸಿಜೆಪಿ
Cockroach Janta Party: ದೆಹಲಿಯ ಪಿಜಿ ಕಟ್ಟಡ ಕುಸಿದು ಏಳು ಮಂದಿ ಮೃತಪಟ್ಟ ಘಟನೆ ಬೆನ್ನಲ್ಲೇ ಕಾಕ್ರೋಚ್ ಜನತಾ ಪಾರ್ಟಿ ಸರ್ಕಾರದ ಮುಂದೆ ಏಳು ಬೇಡಿಕೆಗಳನ್ನು ಮಂಡಿಸಿದೆ. ಕಟ್ಟಡ ಮಾಲಕನ ವಿರುದ್ಧ ಮಾತ್ರವಲ್ಲದೆ ರಾಜಕಾರಣಿಗಳು ಹಾಗೂ ಇತರರೊಂದಿಗಿನ ಸಂಪರ್ಕ ಒಳಗೊಂಡ ದೊಡ್ಡ ಪಿಜಿ ಮಾಫಿಯಾ ಕುರಿತು ಸ್ವತಂತ್ರ ಕ್ರಿಮಿನಲ್ ತನಿಖೆ ನಡೆಸಬೇಕು ಎಂದು ಆಗ್ರಹಿಸಿದೆ. ವಿದ್ಯಾರ್ಥಿಗಳ ವಸತಿ ಕಟ್ಟಡಗಳ ಸುರಕ್ಷತಾ ಪರಿಶೀಲನೆ, ಅಕ್ರಮ ನಿರ್ಮಾಣಗಳ ವಿರುದ್ಧ ಕ್ರಮ, ಸರ್ಕಾರಿ ಹಾಸ್ಟೆಲ್‌ಗಳ ನಿರ್ಮಾಣ ಹಾಗೂ ಮೃತರ ಕುಟುಂಬಗಳಿಗೆ ₹1 ಕೋಟಿ ಮತ್ತು ಗಾಯಾಳುಗಳಿಗೆ ₹20 ಲಕ್ಷ ಪರಿಹಾರ ನೀಡುವಂತೆ ಒತ್ತಾಯಿಸಿದೆ.
CJP ವಕ್ತಾರ ಸೌರವ್ ದಾಸ್ (ಸಂಗ್ರಹ ಚಿತ್ರ) -
ನವದೆಹಲಿ, ಸೆ. 7: ಸತ್ಯ ನಿಕೇತನದಲ್ಲಿ (Satya Niketan) ಬಾಲಕರ ಪಿಜಿ ಕಟ್ಟಡ ಕುಸಿದು ಕನಿಷ್ಠ ಏಳು ಮಂದಿ ಮೃತಪಟ್ಟಿರುವ ಘಟನೆ ಬೆನ್ನಲ್ಲೇ ಕಾಕ್ರೋಚ್ ಜನತಾ ಪಾರ್ಟಿ (CJP) ಸೋಮವಾರ ಸರ್ಕಾರದ ಮುಂದೆ ಏಳು ಪ್ರಮುಖ ಬೇಡಿಕೆಗಳನ್ನು ಮಂಡಿಸಿದೆ. ಮೃತರ ಕುಟುಂಬಗಳಿಗೆ ಪರಿಹಾರ ನೀಡುವುದು, ವಿದ್ಯಾರ್ಥಿಗಳಿಗಾಗಿ ಹೆಚ್ಚಿನ ಸರ್ಕಾರಿ ಹಾಸ್ಟೆಲ್‌ಗಳನ್ನು ನಿರ್ಮಿಸುವುದು ಹಾಗೂ ಕಟ್ಟಡ ಕುಸಿತದ ಹಿಂದೆ ಇರುವ ‘ದೊಡ್ಡ ಪಿಜಿ ಮಾಫಿಯಾ’ ಕುರಿತು ತನಿಖೆ ನಡೆಸುವುದು ಸೇರಿದಂತೆ ಹಲವು ಬೇಡಿಕೆಗಳನ್ನು ಮುಂದಿಟ್ಟಿದೆ.
ದಕ್ಷಿಣ-ಪಶ್ಚಿಮ ದೆಹಲಿಯ ಸತ್ಯ ನಿಕೇತನದಲ್ಲಿ ಬಹುಮಹಡಿ ಪಿಜಿ ಕಟ್ಟಡ ಕುಸಿದು ಕನಿಷ್ಠ ಏಳು ಮಂದಿ ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ. ಮೃತಪಟ್ಟವರಲ್ಲಿ ಹೆಚ್ಚಿನವರು ದೆಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಎನ್ನಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಪಿಜಿ ಮಾಲಕ, ಅವರ ಪತ್ನಿ ಹಾಗೂ ಪುತ್ರನನ್ನು ಸೋಮವಾರ ಬಂಧಿಸಲಾಗಿದೆ.
ಸಿಜೆಪಿಯ ಬೇಡಿಕೆಯ ಪಟ್ಟಿ:
🚨COCKROACH JANTA PARTY’S SEVEN DEMANDS🚨
— Saurav Das (@SauravDassss) September 7, 2026
WRT Satya Niketan tragedy:
1. An independent criminal investigation of not just the owner, but the nexus between the owner, politicians, and other persons. The larger PG Mafia needs to be investigated.
2. The government to immediately…
CJP ವಕ್ತಾರ ಸೌರವ್ ದಾಸ್ ಎಕ್ಸ್‌ನಲ್ಲಿ ಪೋಸ್ಟ್ ಮಾಡಿ, ಮೃತರ ಕುಟುಂಬಗಳಿಗೆ ಸರ್ಕಾರ ಪರಿಹಾರ ನೀಡಬೇಕು ಹಾಗೂ ಈ ದುರಂತಕ್ಕೆ ಸಂಬಂಧಿಸಿದಂತೆ ಸಚಿವ ಮಟ್ಟದ ಹೊಣೆಗಾರಿಕೆ ನಿಗದಿಪಡಿಸಬೇಕು ಎಂದು ಒತ್ತಾಯಿಸಿದ್ದಾರೆ.
ಸಿಜೆಪಿ ಪ್ರತಿಭಟನಾಕಾರರ ಮೇಲೆ ಹಲ್ಲೆ ಪ್ರಕರಣ: ಇನ್‌ಫ್ಲುಯೆನ್ಸರ್ ಸ್ವತಂತ್ರ ಭಾರದ್ವಾಜ್ ಬಂಧನ
CJPಯ ಏಳು ಪ್ರಮುಖ ಬೇಡಿಕೆಗಳು
- ಸ್ವತಂತ್ರ ಕ್ರಿಮಿನಲ್ ತನಿಖೆ: ಪಿಜಿ ಮಾಲಕನ ವಿರುದ್ಧ ಮಾತ್ರವಲ್ಲದೆ, ಮಾಲಕ ರಾಜಕಾರಣಿಗಳು ಹಾಗೂ ಇತರ ವ್ಯಕ್ತಿಗಳ ನಡುವಿನ ಸಂಬಂಧದ ಬಗ್ಗೆಯೂ ಸ್ವತಂತ್ರ ತನಿಖೆ ನಡೆಸಬೇಕು. ದೊಡ್ಡ ಮಟ್ಟದ ‘ಪಿಜಿ ಮಾಫಿಯಾ’ವನ್ನು ತನಿಖೆಗೆ ಒಳಪಡಿಸಬೇಕು.
- ಕಟ್ಟಡಗಳ ಸುರಕ್ಷತಾ ಪರಿಶೀಲನೆ: ಶಾಲೆ, ಕಾಲೇಜು ಹಾಗೂ ವಿದ್ಯಾರ್ಥಿಗಳ ವಸತಿ ಕಟ್ಟಡಗಳು ಸೇರಿದಂತೆ ಎಲ್ಲ ಕಟ್ಟಡಗಳ ಇಂಜಿನಿಯರಿಂಗ್ ಮಟ್ಟದ ರಚನಾತ್ಮಕ ಸುರಕ್ಷತಾ ಪರಿಶೀಲನೆಯನ್ನು ಕಾಲಮಿತಿಯಲ್ಲಿ ನಡೆಸಬೇಕು. ಅಕ್ರಮ ನಿರ್ಮಾಣಗಳನ್ನು ಸೀಲ್ ಮಾಡಿ, ನಿಯಮ ಉಲ್ಲಂಘಿಸಿದ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳಬೇಕು.
- ಸಾರ್ವಜನಿಕ ಸುರಕ್ಷತಾ ಡೇಟಾಬೇಸ್: ಪ್ರತಿಯೊಂದು ವಿದ್ಯಾರ್ಥಿ ವಸತಿ ಕೇಂದ್ರಕ್ಕೆ ಅನುಮತಿ ಇದೆಯೇ ಮತ್ತು ಅದು ಸುರಕ್ಷಿತವಾಗಿದೆಯೇ ಎಂಬುದನ್ನು ಸಾರ್ವಜನಿಕರು ಪರಿಶೀಲಿಸಬಹುದಾದ ಆನ್‌ಲೈನ್ ಡೇಟಾಬೇಸ್ ನಿರ್ಮಿಸಬೇಕು.
- ಸರ್ಕಾರಿ ಹಾಸ್ಟೆಲ್‌ಗಳ ನಿರ್ಮಾಣ: ದೆಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಸೇರಿ ಇತರ ವಿದ್ಯಾರ್ಥಿಗಳಿಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಸರ್ಕಾರಿ ಹಾಸ್ಟೆಲ್‌ಗಳನ್ನು ನಿರ್ಮಿಸಬೇಕು.
- ಪರಿಹಾರ ಮೊತ್ತ: ಮೃತರ ಕುಟುಂಬಗಳಿಗೆ ಗರಿಷ್ಠ ₹1 ಕೋಟಿ ಹಾಗೂ ಗಾಯಗೊಂಡವರಿಗೆ ₹20 ಲಕ್ಷ ಪರಿಹಾರ ನೀಡಬೇಕು.
- 13 ಜಿಲ್ಲಾ ಸಮಿತಿಗಳ ವರದಿ ಬಹಿರಂಗ: ಜೂನ್ 3ರ ಮಾಳವೀಯ ನಗರ ಹೋಟೆಲ್ ಅಗ್ನಿ ಅವಘಡದ ಬಳಿಕ ರಚಿಸಲಾಗಿದ್ದ 13 ಜಿಲ್ಲಾ ಸಮಿತಿಗಳ ಪರಿಶೀಲನೆ, ಜಾರಿ ಹಾಗೂ ಸೀಲಿಂಗ್ ಕ್ರಮಗಳಿಗೆ ಸಂಬಂಧಿಸಿದ ದಾಖಲೆಗಳನ್ನು, ಸತ್ಯ ನಿಕೇತನದ ಸಮೀಕ್ಷಾ ವರದಿಗಳನ್ನೂ ಒಳಗೊಂಡಂತೆ, 48 ಗಂಟೆಗಳೊಳಗೆ ಬಹಿರಂಗಪಡಿಸಬೇಕು.
- ಸಚಿವರ ಹೊಣೆಗಾರಿಕೆ: ದೆಹಲಿ ನಗರಾಭಿವೃದ್ಧಿ, ಯೋಜನೆ ಮತ್ತು ಶಿಕ್ಷಣ ಸಚಿವ ಆಶಿಷ್ ಸೂದ್ ಅವರ ಹೊಣೆಗಾರಿಕೆಯನ್ನು ನಿಗದಿಪಡಿಸಬೇಕು. 13 ಜಿಲ್ಲಾ ಸಮಿತಿಗಳ ಕಾರ್ಯಾಚರಣೆ ಏಕೆ ಸ್ಥಗಿತಗೊಂಡಿತು ಎಂಬುದಕ್ಕೂ ಉತ್ತರ ನೀಡಬೇಕು ಎಂದು ಸೌರವ್ ದಾಸ್ ಆಗ್ರಹಿಸಿದ್ದಾರೆ.
ದೆಹಲಿ ಹೈಕೋರ್ಟ್‌ನಿಂದ ಉನ್ನತ ಮಟ್ಟದ ತನಿಖೆಗೆ ಆದೇಶ
ಇದೇ ವೇಳೆ, ಸತ್ಯ ನಿಕೇತನ ಪಿಜಿ ಕಟ್ಟಡ ಕುಸಿತ ಪ್ರಕರಣದ ಕುರಿತು ದೆಹಲಿ ಹೈಕೋರ್ಟ್ ಸೋಮವಾರ ಎಂಸಿಡಿ (MCD)ಯ ಉನ್ನತ ಕಾರ್ಯನಿರ್ವಾಹಕ ಮಟ್ಟದಲ್ಲಿ ತನಿಖೆ ನಡೆಸುವಂತೆ ನಿರ್ದೇಶಿಸಿದೆ.
ಮುಖ್ಯ ನ್ಯಾಯಮೂರ್ತಿ ಡಿ.ಕೆ. ಉಪಾಧ್ಯಾಯ ಮತ್ತು ನ್ಯಾಯಮೂರ್ತಿ ತೇಜಸ್ ಕಾರಿಯಾ ಅವರ ಪೀಠವು ಘಟನೆ ಅತ್ಯಂತ ದುರದೃಷ್ಟಕರ ಎಂದು ಹೇಳಿದ್ದು, ಇಂತಹ ಅವಘಡಗಳ ಹೊಣೆಗಾರಿಕೆ ಪಿಜಿ ಮಾಲಕರಿಗೆ ಮಾತ್ರ ಸೀಮಿತವಾಗುವುದಿಲ್ಲ. ವಿಶ್ವವಿದ್ಯಾಲಯದ ಅಧಿಕಾರಿಗಳು ಹಾಗೂ ಎಂಸಿಡಿಯ ಪಾತ್ರವನ್ನೂ ಪರಿಶೀಲಿಸಬೇಕಾಗುತ್ತದೆ ಎಂದು ಅಭಿಪ್ರಾಯಪಟ್ಟಿದೆ.
ಕುಸಿದ ಕಟ್ಟಡವನ್ನು ಅಗತ್ಯ ಮತ್ತು ಮಾನ್ಯ ಅನುಮತಿಗಳೊಂದಿಗೆ ನಿರ್ಮಿಸಲಾಗಿತ್ತೇ, ಅಧಿಕಾರಿಗಳ ಕಡೆಯಿಂದ ಯಾವುದೇ ಲೋಪವಾಗಿದೆಯೇ, ಲೋಪಕ್ಕೆ ಕಾರಣರಾದ ಅಧಿಕಾರಿಗಳು ಯಾರು ಹಾಗೂ ಅವರ ವಿರುದ್ಧ ಯಾವ ಕ್ರಮ ಕೈಗೊಳ್ಳಲಾಗಿದೆ ಅಥವಾ ಕೈಗೊಳ್ಳಲು ಉದ್ದೇಶಿಸಲಾಗಿದೆ ಎಂಬುದನ್ನು ತನಿಖೆಯಲ್ಲಿ ನಿರ್ದಿಷ್ಟವಾಗಿ ಪರಿಶೀಲಿಸುವಂತೆ ಹೈಕೋರ್ಟ್ ಸೂಚಿಸಿದೆ.