Vishwavani Editorial: ಹುಲಿಯ ಚರ್ಮ ಹೊದ್ದ ನರಿ!
ಉತ್ಪ್ರೇಕ್ಷೆಗೂ ಒಂದು ಮಿತಿ ಬೇಡವೇ?! ಪಾಕಿಸ್ತಾನವು ದಶಕಗಳಿಂದ ಉಗ್ರರಿಗೆ ತರಬೇತಿ ಮತ್ತು ಹಣಕಾಸು ನೆರವು ನೀಡುವ ಕೊಳಕು ಕೆಲಸ ಮಾಡುತ್ತಿದೆ ಎಂದು ಪಾಕಿಸ್ತಾನದ ರಕ್ಷಣಾ ಸಚಿವರೇ ಒಪ್ಪಿಕೊಂಡಿರುವಾಗ, ತಾನು ಶಾಂತಿಪ್ರಿಯ ಎಂದು ಹೇಳಿಕೊಳ್ಳುತ್ತಿದೆ ಪಾಕಿಸ್ತಾನ. ಛೀ... ನಾಚಿಕೆ ಗೇಡು!


ಪಾಕಿಸ್ತಾನ ಬೆಂಬಲಿತ ಉಗ್ರರು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆಸಿದ ಪೈಶಾಚಿಕ ಕೃತ್ಯಕ್ಕೆ ತಕ್ಕ ಶಾಸ್ತಿ ಮಾಡುವ ಯತ್ನದ ಭಾಗವಾಗಿ ಭಾರತವು ಈಗ ಸಿಂಧೂ ನದಿ ನೀರಿನ ಹಂಚಿಕೆಯ ಒಪ್ಪಂದವನ್ನು ರದ್ದುಗೊಳಿಸಿದೆ. ಈ ಕ್ರಮದಿಂದ ಕೆರಳಿರುವ ಪಾಕಿಸ್ತಾನ, ‘ಸಿಂಧೂ ನೀರು ಸ್ಥಗಿತಗೊಳಿಸಿದರೆ ಸುಮ್ಮನಿರುವುದಿಲ್ಲ; ನಾವು ಶಾಂತಿಪ್ರಿಯರು, ಆದರೆ ಅದು ನಮ್ಮ ದೌರ್ಬಲ್ಯವಲ್ಲ’ ಎಂದೆಲ್ಲಾ ಬಡಬಡಿಸಿದೆ. ಭಾರತದ ರಾಜತಾಂತ್ರಿಕ ಚಾಟಿಯೇಟಿಗೆ ಏನು ಮಾಡಬೇಕೆಂದು ಗೊತ್ತಾಗದ ಪಾಕಿಸ್ತಾನ ಹೀಗೆಲ್ಲಾ ಪಟಾಕಿ ಹಾರಿಸುತ್ತಿರುವುದು ಸಹಜವೇ. ಆದರೆ ‘ನಾವು ಶಾಂತಿಪ್ರಿಯರು’ ಎಂಬ ಪಾಕಿಸ್ತಾನದ ಮಾತಿದೆಯಲ್ಲಾ, ಅದನ್ನು ಬಹಳಷ್ಟು ಪಾಕಿಸ್ತಾನೀಯರೇ ಒಪ್ಪುವುದಿಲ್ಲ ಎಂಬುದು ಹದಿನಾರಾಣೆ ಸತ್ಯ!
ಇದೊಂಥರಾ ‘ಹುಲಿಯ ಚರ್ಮವನ್ನು ಹೊದ್ದ ನರಿ’ಯು ಹುಲಿಯಂತೆಯೇ ಗರ್ಜಿಸಲು ಹೋಗಿ ಮುಖಭಂಗಕ್ಕೆ ಮತ್ತು ಫಜೀತಿಗೆ ಒಳಗಾದ ಕಥಾಪ್ರಸಂಗವನ್ನು ನೆನಪಿಸುವ ಪಾಕಿಸ್ತಾನದ ಬಯಲಾಟ ಎನ್ನಲಡ್ಡಿಯಿಲ್ಲ. ಸ್ವಸಮರ್ಥನೆಗೂ ಒಂದು ಮಿತಿಯುದೆ, ರೀತಿಯಿದೆ. ಆದರೆ ಈ ಪರಿಯ ಮುಟ್ಠಾಳತನವೇ?! ‘ಶಾಂತಿ’ ಮತ್ತು ‘ಶಾಂತಿಪ್ರಿಯ’ ಎಂಬ ಶಬ್ದಗಳನ್ನು ಉಚ್ಚರಿಸಲೂ ಯೋಗ್ಯತೆಯಿಲ್ಲದವರು ಅಂಥ ಮಾತುಗಳನ್ನಾಡಿದರೆ ಅದು ಅವರ ‘ನರಿಬುದ್ಧಿ’ಯ ಅನಾ ವರಣವೇ ಹೊರತು ‘ಗಿರಿಸದೃಶ’ ವಿಶ್ವಾಸಾರ್ಹತೆಯ ದ್ಯೋತಕವಾಗುವುದಿಲ್ಲ.
ಇದನ್ನೂ ಓದಿ: Vishwavani Editorial: ತಕ್ಕ ಶಾಸ್ತಿ ಮಾಡಲು ಇದು ಸಕಾಲ
ಭಾರತದಂಥ ಶಾಂತಿಪ್ರಿಯ ರಾಷ್ಟ್ರದಲ್ಲಿ ಮುಂಬೈ ಬಾಂಬ್ ಸ್ಫೋಟ ಪ್ರಕರಣ ಸೇರಿದಂತೆ ನೂರಾರು ವಿಧ್ವಂಸಕ ಕೃತ್ಯಗಳನ್ನು ನಡೆಸಿದ್ದು ಪಾಕಿಸ್ತಾನವೇ ಎಂಬುದು ಜಗಜ್ಜಾಹೀರು ವಿಷಯ. ಇಂಥ ಅಂಗೈ ಹುಣ್ಣುಗಳಿಗೆ ಕನ್ನಡಿ ಯಂತೂ ಬೇಕಿಲ್ಲ. ಇಷ್ಟಾಗಿಯೂ ಪಾಕಿಸ್ತಾನ ತನ್ನತನದ ಮರುವ್ಯಾಖ್ಯಾನಕ್ಕೆ ಇಳಿದಿರುವುದು ವಿಶ್ವದ ಎಷ್ಟನೇ ಅದ್ಭುತವೋ?! ತನ್ನ ನಾಗರಿಕರಿಗೆ ಗೋಧಿ ಹಿಟ್ಟು ಮುಂತಾದ ಪಡಿತರವನ್ನೇ ವಿತರಿಸಲಾಗದೆ ಪತರಗುಟ್ಟುತ್ತಿರುವ ಪಾಕಿಸ್ತಾನವು ಭಾರತದ ಮೇಲೆ ಬಾಂಬ್ ದಾಳಿ ಮಾಡುವುದಾಗಿ ಅಬ್ಬರಿಸಿದೆ.
ಉತ್ಪ್ರೇಕ್ಷೆಗೂ ಒಂದು ಮಿತಿ ಬೇಡವೇ?! ಪಾಕಿಸ್ತಾನವು ದಶಕಗಳಿಂದ ಉಗ್ರರಿಗೆ ತರಬೇತಿ ಮತ್ತು ಹಣಕಾಸು ನೆರವು ನೀಡುವ ಕೊಳಕು ಕೆಲಸ ಮಾಡುತ್ತಿದೆ ಎಂದು ಪಾಕಿಸ್ತಾನದ ರಕ್ಷಣಾ ಸಚಿವರೇ ಒಪ್ಪಿಕೊಂಡಿರುವಾಗ, ತಾನು ಶಾಂತಿಪ್ರಿಯ ಎಂದು ಹೇಳಿಕೊಳ್ಳುತ್ತಿದೆ ಪಾಕಿಸ್ತಾನ. ಛೀ... ನಾಚಿಕೆ ಗೇಡು!