ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Vishwavani Editorial: ಹೀನಸುಳಿ ಬೋಳಿಸಿದರೆ ಹೋದೀತೇ?!

ಭಾರತವು ಒಂದೊಂದೇ ಉಗ್ರರ ನೆಲೆಗಳ ಮೇಲೆ ಬರೆ ಹಾಕಲು ಶುರು ಮಾಡುತ್ತಿದ್ದಂತೆ, ಪಾಕ್ ಕೈ ಕೈ ಹಿಸುಕಿ ಕೊಳ್ಳಬೇಕಾಯಿತು ಎಂಬುದನ್ನು ಮರೆಯಲಾಗದು. ಇಂಥ ಇಬ್ಬಂದಿತನ ಮೆರೆದ ಪಾಕ್, ಈಗ ಕದನ ವಿರಾಮವನ್ನು ಉಲ್ಲಂಘಿಸಿದೆ. ‘ಹೀನಸುಳಿ ಬೋಳಿಸಿದರೆ ಹೋದೀತೇ?!’ ಅಂತ ನಮ್ಮ ಪೂರ್ವ ಜರು ಅಷ್ಟಿಲ್ಲದೇ ಹೇಳಿದ್ದಾರಾ...

ಹೀನಸುಳಿ ಬೋಳಿಸಿದರೆ ಹೋದೀತೇ?!

Profile Ashok Nayak May 12, 2025 6:00 AM

ವಿಶ್ವಾಸಘಾತುಕತೆ, ನಯವಂಚಕತೆ, ಅವಕಾಶವಾದಿತ್ವ, ಬೆನ್ನಿಗಿರಿಯುವಿಕೆ, ವಿಧ್ವಂಸಕ ಚಿತ್ತಸ್ಥಿತಿ ಮುಂತಾದ ಪರಿಭಾಷೆಗಳಿಗೆ ಪರ್ಯಾಯವಾಗಿರುವ ಶಬ್ದವೆಂದರೆ- ‘ಪಾಕಿಸ್ತಾನ’. ಈ ಮಾತನ್ನು ಇಷ್ಟು ದಿನ ಭಾರತ ಸೇರಿದಂತೆ ಒಂದಷ್ಟು ರಾಷ್ಟ್ರಗಳು ಹೇಳುತ್ತಿದ್ದುದುಂಟು. ಮೊನ್ನಿನ ಬೆಳವಣಿಗೆ ಯಲ್ಲಿ ಅದಕ್ಕೆ ಆಸ್ಪದವನ್ನೇ ನೀಡದಂತೆ ನಮ್ಮ ಈ ನೆರೆ ರಾಷ್ಟ್ರವು ಮೇಲಿನ ಅಷ್ಟೂ ನಕಾರಾತ್ಮಕ ಪರಿಭಾಷೆಗಳಿಗೆ ತಾನೇ ಏಕಮಾತ್ರ ಪರ್ಯಾಯ ಶಬ್ದ ಎಂಬುದನ್ನು ಜಗತ್ತಿನೆದುರು ತೋರಿಸಿ ಕೊಂಡು ಬಿಟ್ಟಿತು.

ಹೌದು, ಪಹಲ್ಗಾಮ್ ಪೈಶಾಚಿಕ ಕೃತ್ಯಕ್ಕೆ ಪ್ರತೀಕಾರವಾಗಿ ಭಾರತವು ಉಗ್ರರ ಮೇಲೆ ಸಾರಿದ್ದ ‘ಆಪರೇ ಷನ್ ಸಿಂದೂರ್’ ಕಾರ್ಯಾಚರಣೆಯ ವೇಳೆ ತತ್ತರಿಸಿದ ಪಾಕಿಸ್ತಾನ, ಯಾವ್ಯಾವ ದೇಶಗಳನ್ನೋ ಮಧ್ಯವರ್ತಿಗಳನ್ನಾಗಿಸಿ ‘ಅನ್ಯಥಾ ಶರಣಂ ನಾಸ್ತಿ’ ಎಂದು ಹೇಳಿಕೊಂಡು ಭಾರತದ ಮುಂದೆ ಮಂಡಿಯೂರಿ ಕೂರುವಂಥ ದುಸ್ಥಿತಿಯನ್ನು ತಾನೇ ತಂದುಕೊಂಡು ಬಿಟ್ಟಿತು.

ಇದನ್ನೂ ಓದಿ: Vishwavani Editorial: ಸರಣಿ ಸಂಕಷ್ಟದಲ್ಲಿ ಪಾಕಿಸ್ತಾನ

ಈ ಅಘೋಷಿತ ಯುದ್ಧಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರ ಮಧ್ಯಸ್ಥಿಕೆಯಲ್ಲಿ ಕದನವಿ ರಾಮದ ಘೋಷಣೆಯೂ ಆಗಿತ್ತು. ಆಗ ಭಾರತವು ಮೆರೆದ ರಾಜತಾಂತ್ರಿಕ ಪ್ರಬುದ್ಧತೆಯನ್ನು ‘ದೌರ್ಬಲ್ಯ’ ಎಂದೇ ಪರಿಗಣಿಸಿದ ಪಾಕಿಸ್ತಾನ ಮತ್ತೆ ಕಿತಾಪತಿಗೆ ಮುಂದಾಗಿ ‘ಹುಟ್ಟುಗುಣ ಸುಟ್ಟರೂ ಹೋಗದು’ ಎಂಬ ಮಾತಿಗೆ ಪುರಾವೆಯೆಂಬಂತೆ ತನ್ನ ಹಳೇಚಾಳಿಗೆ ಮತ್ತೆ ಮೊರೆ ಹೋಯಿತು.

ಕದನ ವಿರಾಮ ಘೋಷಣೆಯಾಗಿ ಮೂರು ಗಂಟೆ ಕಳೆಯುವ ಮೊದಲೇ ಅದನ್ನು ಉಲ್ಲಂಘಿಸಿ ಭಾರತದ ಗಡಿಗುಂಟ ಡ್ರೋನ್ ದಾಳಿ ನಡೆಸುವಂಥ ಧಾರ್ಷ್ಟ್ಯವನ್ನೂ ತೋರಿಬಿಟ್ಟಿತು. ಇದನ್ನು ಕಂಡ ಭಾರತೀಯರನೇಕರು, ‘ಅಪಾತ್ರರಿಗೆ ಅಯ್ಯೋ ಎಂದು ಮರುಗಬಾರದು’ ಎಂದು ಗೊಣಗಿ ಕೊಂಡಿದ್ದುಂಟು.

ಹಾಗೆ ನೋಡಿದರೆ, ಆರ್ಥಿಕ, ಸಾಮಾಜಿಕ, ರಾಜಕೀಯ ನೆಲೆಗಳಲ್ಲಿ ಅದಾಗಲೇ ಕುಸಿದಿದ್ದ ಪಾಕಿಸ್ತಾನ, ಭಾರತದ ‘ಸಿಂದೂರ’ ಕಾರ್ಯಾಚರಣೆಗೂ ಮೊದಲು, ತನ್ನಲ್ಲಿಲ್ಲದ ಸೇನಾ ಸಾಮರ್ಥ್ಯದ ಕುರಿತು ಬೊಗಳೆ ಬಿಟ್ಟು ಭಾರತೀಯರನ್ನು ಬೆದರಿಸುವ ‘ಮೈಂಡ್ ಗೇಮ್’ ಆಡಿದ್ದುಂಟು. ಆದರೆ, ಭಾರತವು ಒಂದೊಂದೇ ಉಗ್ರರ ನೆಲೆಗಳ ಮೇಲೆ ಬರೆ ಹಾಕಲು ಶುರು ಮಾಡುತ್ತಿದ್ದಂತೆ, ಪಾಕ್ ಕೈ ಕೈ ಹಿಸುಕಿ ಕೊಳ್ಳಬೇಕಾಯಿತು ಎಂಬುದನ್ನು ಮರೆಯಲಾಗದು. ಇಂಥ ಇಬ್ಬಂದಿತನ ಮೆರೆದ ಪಾಕ್, ಈಗ ಕದನ ವಿರಾಮವನ್ನು ಉಲ್ಲಂಘಿಸಿದೆ. ‘ಹೀನಸುಳಿ ಬೋಳಿಸಿದರೆ ಹೋದೀತೇ?!’ ಅಂತ ನಮ್ಮ ಪೂರ್ವಜರು ಅಷ್ಟಿಲ್ಲದೇ ಹೇಳಿದ್ದಾರಾ...