ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಪಾರದರ್ಶಕ ರಾಜಕಾರಣಕ್ಕೆ ಪೂರಕ

ಹೊಸ ನಿಯಮದಂತೆ, ಅಭ್ಯರ್ಥಿಗಳು ಕೇವಲ ತಮ್ಮ ವಿವರಗಳನ್ನಷ್ಟೇ ಅಲ್ಲದೆ, ತಮ್ಮ ಸಂಗಾತಿ (ಪತಿ ಅಥವಾ ಪತ್ನಿ) ಮತ್ತು ಅವಲಂಬಿತರ ಆರ್ಥಿಕ ಸ್ಥಿತಿಗತಿಗಳನ್ನು ಬಹಿರಂಗಪಡಿಸುವುದು ಕಡ್ಡಾಯ ವಾಗಿದೆ. ಆದಾಯ ತೆರಿಗೆ ಪಾವತಿಯ ವಿವರಗಳು ಮತ್ತು ಪಾನ್ ಸಂಖ್ಯೆಯನ್ನು ಒದಗಿಸ ಬೇಕಿರುವುದು ಆರ್ಥಿಕ ಶಿಸ್ತನ್ನು ಅಪೇಕ್ಷಿಸುತ್ತದೆ. ಈ ಹಿಂದೆ ಆರ್ಥಿಕ ವಿವರಗಳನ್ನು ಅರೆಬರೆಯಾಗಿ ನೀಡುವ ಅಥವಾ ಮರೆಮಾಚುವ ಪ್ರವೃತ್ತಿ ಇತ್ತು.

ಪಾರದರ್ಶಕ ರಾಜಕಾರಣಕ್ಕೆ ಪೂರಕ

-

Profile
Ashok Nayak Apr 25, 2026 10:35 PM

ರಾಜ್ಯ ಚುನಾವಣಾ ಆಯೋಗವು ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳಿಗೆ ನಾಮಪತ್ರದೊಂದಿಗೆ ಕಡ್ಡಾಯ ಪ್ರಮಾಣ ಪತ್ರ ಸಲ್ಲಿಸಬೇಕೆಂಬ ನಿಯಮವನ್ನು ಜಾರಿಗೊಳಿಸುವ ಮೂಲಕ ಪಾರದರ್ಶಕತೆಯ ನಿಟ್ಟಿನಲ್ಲಿ ಒಂದು ಮಹತ್ವದ ಹೆಜ್ಜೆಯನ್ನಿಟ್ಟಿದೆ.

ಪ್ರಜಾಪ್ರಭುತ್ವದ ತಳಮಟ್ಟದ ವ್ಯವಸ್ಥೆಯಾದ ಪಂಚಾಯತ್ ರಾಜ್ ಮತ್ತು ನಗರ ಸ್ಥಳೀಯ ಸಂಸ್ಥೆಗಳಲ್ಲಿ ಶುದ್ಧ ಹಸ್ತದ ನಾಯಕತ್ವವನ್ನು ತರುವುದು ಈ ಬಿಗಿಯಾದ ಮಾರ್ಗಸೂಚಿಗಳ ಮುಖ್ಯ ಉದ್ದೇಶವಾಗಿದೆ.

ಹೊಸ ನಿಯಮದಂತೆ, ಅಭ್ಯರ್ಥಿಗಳು ಕೇವಲ ತಮ್ಮ ವಿವರಗಳನ್ನಷ್ಟೇ ಅಲ್ಲದೆ, ತಮ್ಮ ಸಂಗಾತಿ (ಪತಿ ಅಥವಾ ಪತ್ನಿ) ಮತ್ತು ಅವಲಂಬಿತರ ಆರ್ಥಿಕ ಸ್ಥಿತಿಗತಿಗಳನ್ನು ಬಹಿರಂಗಪಡಿಸುವುದು ಕಡ್ಡಾಯವಾಗಿದೆ. ಆದಾಯ ತೆರಿಗೆ ಪಾವತಿಯ ವಿವರಗಳು ಮತ್ತು ಪಾನ್ ಸಂಖ್ಯೆಯನ್ನು ಒದಗಿಸ ಬೇಕಿರುವುದು ಆರ್ಥಿಕ ಶಿಸ್ತನ್ನು ಅಪೇಕ್ಷಿಸುತ್ತದೆ. ಈ ಹಿಂದೆ ಆರ್ಥಿಕ ವಿವರಗಳನ್ನು ಅರೆಬರೆಯಾಗಿ ನೀಡುವ ಅಥವಾ ಮರೆಮಾಚುವ ಪ್ರವೃತ್ತಿ ಇತ್ತು.

ಇದನ್ನೂ ಓದಿ: Vishwavani Editorial: ಗುಣಮಟ್ಟಕ್ಕೆ ಕುತ್ತು ತರದಿರಲಿ ಫಲಿತಾಂಶ

ಆದರೆ ಇನ್ಮುಂದೆ ಜಾರಿ ಯಾಗುವ ಕಟ್ಟುನಿಟ್ಟಾದ ಕ್ರಮಗಳು ಅಭ್ಯರ್ಥಿಯ ನೈಜ ಆರ್ಥಿಕ ಹಿನ್ನೆಲೆ ಯನ್ನು ಮತದಾರರ ಮುಂದೆ ತೆರೆದಿಡಲಿವೆ. ಅಲ್ಲದೇ, ಅಭ್ಯರ್ಥಿಯು ಯಾವುದೇ ಶಾಸನಬದ್ಧ ಪ್ರಾಧಿಕಾರ ಅಥವಾ ಸ್ಥಳೀಯ ಪ್ರಾಧಿಕಾರದಿಂದ ಅನರ್ಹಗೊಂಡಿಲ್ಲ ಎಂಬ ಪ್ರಮಾಣ ಪತ್ರವು ಚುನಾವಣಾ ಕಣವನ್ನು ಸ್ಪಲ್ಪ ಮಟ್ಟಿಗಾದರೂ ಸ್ವಚ್ಛವಾಗಿಡಲಿದೆ.

ಅಭ್ಯರ್ಥಿಯ ಆಸ್ತಿ ಮತ್ತು ಆದಾಯದ ವಿವರಗಳು ಸಾರ್ವಜನಿಕರಿಗೆ ಲಭ್ಯವಾಗುವುದರಿಂದ ಅಧಿಕಾರಾವಧಿಯಲ್ಲಿ ಅವರು ಗಳಿಸುವ ಅಕ್ರಮ ಆಸ್ತಿಯ ಮೇಲೆ ನಿಗಾ ಇಡಲು ಮತದಾರರಿಗೆ ಮತ್ತು ನಾಗರಿಕ ಸಮಾಜಕ್ಕೆ ಸುಲಭವಾಗುತ್ತದೆ. ಅಭ್ಯರ್ಥಿಗಳು ನೀಡುವ ಅಫಿಡವಿಟ್ ಅಥವಾ ಪ್ರಮಾಣ ಪತ್ರಗಳಲ್ಲಿನ ಮಾಹಿತಿ ಸುಳ್ಳಾಗಿದ್ದರೆ, ಅವರ ಮೇಲೆ ತಕ್ಷಣದ ಕಾನೂನು ಕ್ರಮ ಜರುಗಿಸುವ ವ್ಯವಸ್ಥೆ ಇನ್ನಷ್ಟು ಬಲಗೊಳ್ಳಬೇಕಿದೆ.

ಮತದಾರರು ಕೂಡ ಕೇವಲ ಜಾತಿ, ಧರ್ಮ ಅಥವಾ ಹಣದ ಆಮಿಷಕ್ಕೆ ಒಳಗಾಗದೆ, ಅಭ್ಯರ್ಥಿಗಳು ಸಲ್ಲಿಸಿದ ಆರ್ಥಿಕ ಮತ್ತು ಶೈಕ್ಷಣಿಕ ವಿವರಗಳನ್ನು ಕೂಲಂಕಷವಾಗಿ ಪರಿಶೀಲಿಸಿ ಮತ ಚಲಾಯಿ ಸುವ ಪ್ರಬುದ್ಧತೆ ಯನ್ನು ಮೆರೆಯಬೇಕಿದೆ. ಅಂದಾಗ ಮಾತ್ರ ಈ ಹೊಸ ನಿಯಮಗಳು ಅರ್ಥ ಪೂರ್ಣವಾಗುತ್ತವೆ. ಸದೃಢ ಪ್ರಜಾಪ್ರಭುತ್ವ ನಿರ್ಮಾಣವಾಗುತ್ತದೆ.