ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಗೃಹಲಕ್ಷ್ಮಿ ಲೋಪ ಸರಿಪಡಿಸಿ

ಒಟ್ಟಾರೆ ಹೀಗೆ ರಾಜ್ಯದ ಖಜಾನೆಗೆ ನಷ್ಟವಾದ ಹಣ ಹಲವು ಕೋಟಿಗಳಷ್ಟು. ಇದು ಯೋಜನೆ ಯ ಅನುಷ್ಠಾನದ ಹಂತದಲ್ಲಿ ನಡೆದ ಬೃಹತ್ ಪ್ರಮಾದ. ಇದೀಗ ಅನರ್ಹರನ್ನು ಪತ್ತೆ ಹಚ್ಚುವ ಕಾರ್ಯ ನಡೆಯುತ್ತಿದ್ದು, ಅನರ್ಹರ ಹೆಸರನ್ನು ಪಟ್ಟಿಯಿಂದ ಡಿಲೀಟ್ ಮಾಡಲಾಗುತ್ತಿದೆ.

ಗೃಹಲಕ್ಷ್ಮಿ ಲೋಪ ಸರಿಪಡಿಸಿ

-

Profile
Ashok Nayak Jun 12, 2026 12:49 PM

ರಾಜ್ಯ ಸರಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆ ಯಲ್ಲಿ ದೊಡ್ಡದೊಂದು ಪ್ರಮಾದ ವರದಿಯಾಗಿದೆ. ಸುಮಾರು 1.12 ಲಕ್ಷದಷ್ಟು ಮಂದಿ ಅನರ್ಹರಿಗೆ ಹಲವು ತಿಂಗಳುಗಳಿಂದ ಮಾಸಿಕ 2000 ರೂ.ಗಳಷ್ಟು ಗೃಹಲಕ್ಷ್ಮಿ ಹಣ ಸಂದಾಯ ಆಗುತ್ತಿದೆ. ಇವರಲ್ಲಿ ಹಲವರು ತೆರಿಗೆ ಪಾವತಿದಾರರು, ಅಂದರೆ ಈ ಯೋಜನೆ ಯ ಫಲಾನುಭವಿಗಳಾಗಲು ಅನರ್ಹರು ಮತ್ತು ಹಲವರು ಮೃತರು.

ಒಟ್ಟಾರೆ ಹೀಗೆ ರಾಜ್ಯದ ಖಜಾನೆಗೆ ನಷ್ಟವಾದ ಹಣ ಹಲವು ಕೋಟಿಗಳಷ್ಟು. ಇದು ಯೋಜನೆಯ ಅನುಷ್ಠಾನದ ಹಂತದಲ್ಲಿ ನಡೆದ ಬೃಹತ್ ಪ್ರಮಾದ. ಇದೀಗ ಅನರ್ಹರನ್ನು ಪತ್ತೆ ಹಚ್ಚುವ ಕಾರ್ಯ ನಡೆಯುತ್ತಿದ್ದು, ಅನರ್ಹರ ಹೆಸರನ್ನು ಪಟ್ಟಿಯಿಂದ ಡಿಲೀಟ್ ಮಾಡಲಾಗುತ್ತಿದೆ.

ಅರ್ಹರನ್ನು ಗುರುತಿಸುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಿದ್ದರೆ ತೆರಿಗೆ ಪಾವತಿದಾರ ರನ್ನು ಸೇರಿಸಿಕೊಳ್ಳುವ ಪ್ರಮಾದ ಆಗುತ್ತಿರಲಿಲ್ಲ. ಇನ್ನು ಮೃತರ ವಿಷಯ. ಇಂದು ಜನನ ಹಾಗೂ ಮರಣಗಳು ಆ ಕ್ಷಣವೇ ನೋಂದಣಿ ಆಗುತ್ತಿವೆ. ಇವನ್ನೆಲ್ಲ ಡಿಜಿಟಲೀಕರಣ ಮಾಡಿ ಬಹಳ ಕಾಲವಾಯಿತು. ಈ ಡಾಟಾಗಳನ್ನು ಈ ಯೋಜನೆಗೆ ಜೋಡಿಸುವುದು ಕಷ್ಟದ ಕೆಲಸವೇನಲ್ಲ.

ಇದನ್ನೂ ಓದಿ: Vishwavani Editorial: ಗೌಡರ ನಿರ್ಗಮನ, ಖರ್ಗೆ ಆಗಮನ

ಮೃತರ ಹೆಸರನ್ನು ಡಿಲೀಟ್ ಮಾಡುವುದು ಒಂದು ಕ್ಲಿಕ್‌ನಲ್ಲಿ ಆಗುವಂಥ ಕೆಲಸ. ಇಷ್ಟನ್ನೂ ಸಮರ್ಥವಾಗಿ ಮಾಡಲು ಸಾಧ್ಯವಿಲ್ಲ ಎಂದರೇನರ್ಥ. ಗೃಹಲಕ್ಷ್ಮಿ ಯೋಜನೆ ಯಲ್ಲಿ ನಡೆದ ಹಗರಣ, ಇನ್ನಿತರ ಗ್ಯಾರಂಟಿ ಯೋಜನೆಗಳಲ್ಲೂ ನಡೆದಿಲ್ಲ ಎಂಬ ಖಾತ್ರಿಯೇನೂ ಇಲ್ಲ.

ಈಗಾಗಲೇ ಶಕ್ತಿ ಯೋಜನೆಯಲ್ಲಿ ಸಿಬ್ಬಂದಿಯಿಂದಲೂ ಹಲವು ಜನಸಾಮಾನ್ಯರಿಂದಲೂ ದುರ್ಬಳಕೆ ನಡೆದ ವರದಿಗಳಿವೆ. ಆದರೆ ಇವು ದೊಡ್ಡ ಪ್ರಮಾಣದಲ್ಲಿ ನಡೆದಿವೆಯೇ ಎಂಬುದನ್ನು ತನಿಖೆಯಿಂದ ಪತ್ತೆ ಹಚ್ಚಬೇಕಷ್ಟೆ. ಗೃಹಜ್ಯೋತಿ ಯೋಜನೆಯ ಮಾನ ದಂಡದ ಬಗ್ಗೆಯೇ ಕಟು ವಿಮರ್ಶೆಗಳಿವೆ. ಇದರಲ್ಲಿ ಯುನಿಟ್‌ಗಳನ್ನು ಹೇಗೆ ನಿಗದಿಪಡಿಸ ಲಾಗುತ್ತಿದೆ ಎಂಬುದು ಸಾಮಾನ್ಯ ಬಳಕೆದಾರನಿಗೆ ಗೊತ್ತೇ ಆಗುತ್ತಿಲ್ಲ.

ಮಾಸಿಕ ಸರಾಸರಿ ವಿದ್ಯುತ್ ಬಳಕೆಯ ಮೇಲೆ, 200 ಯುನಿಟ್‌ಗಳ ವಿದ್ಯುತ್ ಬಳಕೆ ಉಚಿತ ಹಾಗೂ ಮಿಕ್ಕಿದ್ದಕ್ಕೆ ಶುಲ್ಕ ಎಂದು ಲೆಕ್ಕ. ಹೊಸ ಬಾಡಿಗೆದಾರರಿಗೆ, ಮನೆ ಕಟ್ಟಿದವರಿಗೆ ಇದರ ಲಾಭ ಲಭಿಸುತ್ತಿಲ್ಲ. ಹಲವೊಮ್ಮೆ ನಿಗೂಢ ರೀತಿಯಲ್ಲಿ ಶುಲ್ಕ ಜಡಿಯಲಾಗುತ್ತಿದೆ. ಯೋಜನೆಗಳನ್ನು ಆರಂಭಿಸುವುದು ಸುಲಭ. ಆದರೆ ಅವುಗಳನ್ನು ಲೋಪವಿಲ್ಲದೆ ದಡ ಸೇರಿಸಲು ಕಾರ್ಯಾಂಗವೂ ಪೂರಕವಾಗಿ, ಪ್ರಾಮಾಣಿಕವಾಗಿ ಹಾಗೂ ಚುರುಕಾಗಿ ದುಡಿಯ ಬೇಕಾಗುತ್ತದೆ. ಇಲ್ಲವಾದರೆ ಗೃಹಲಕ್ಷ್ಮಿಯಂಥ ಪ್ರಮಾದಗಳು ಘಟಿಸುತ್ತವೆ.