ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಕೊಟ್ಟ ಕುದುರೆಯ ಏರಬೇಕು

ನೂತನ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಸಂಪುಟದಲ್ಲಿ ಮೊದಲ ದಿನವೇ ಬಂಡಾಯ ಕಾಣಿಸಿಕೊಂಡಿದೆ. ರಾಮಲಿಂಗಾರೆಡ್ಡಿ ಅವರು ತಮಗೆ ನೀಡಲಾದ ಖಾತೆ ಜಲಸಂಪನ್ಮೂಲ ಖಾತೆಯನ್ನು ತಿರಸ್ಕರಿಸಿ, ಬೆಂಗಳೂರು ನಗರಾಭಿವೃದ್ಧಿ ಖಾತೆ ಸಿಗದಿದ್ದುದಕ್ಕೆ ಅತೃಪ್ತಿ ವ್ಯಕ್ತಪಡಿಸಿ ರಾಜಿನಾಮೆ ನೀಡಿದ್ದಾರೆ. ರೆಡ್ಡಿ ಅವರ ಜೊತೆ ಮಾತನಾಡುತ್ತೇನೆ ಎಂದು ಸಿಎಂ ಹೇಳಿದ್ದಾರಾದರೂ, ರಾಜಿನಾಮೆ ಅಂಗೀಕೃತವಾಗಿದೆ.

ಕೊಟ್ಟ ಕುದುರೆಯ ಏರಬೇಕು

-

Profile
Ashok Nayak Jun 6, 2026 5:03 PM

ನೂತನ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಸಂಪುಟದಲ್ಲಿ ಮೊದಲ ದಿನವೇ ಬಂಡಾಯ ಕಾಣಿಸಿಕೊಂಡಿದೆ. ರಾಮಲಿಂಗಾರೆಡ್ಡಿ ಅವರು ತಮಗೆ ನೀಡಲಾದ ಖಾತೆ ಜಲಸಂಪನ್ಮೂಲ ಖಾತೆಯನ್ನು ತಿರಸ್ಕರಿಸಿ, ಬೆಂಗಳೂರು ನಗರಾಭಿವೃದ್ಧಿ ಖಾತೆ ಸಿಗದಿದ್ದುದಕ್ಕೆ ಅತೃಪ್ತಿ ವ್ಯಕ್ತಪಡಿಸಿ ರಾಜಿನಾಮೆ ನೀಡಿದ್ದಾರೆ. ರೆಡ್ಡಿ ಅವರ ಜೊತೆ ಮಾತನಾಡುತ್ತೇನೆ ಎಂದು ಸಿಎಂ ಹೇಳಿದ್ದಾರಾದರೂ, ರಾಜಿನಾಮೆ ಅಂಗೀಕೃತವಾಗಿದೆ.

ಆಹಾರ ಖಾತೆ ಬದಲು ಕೃಷಿ ಅಥವಾ ಸಮಾಜ ಕಲ್ಯಾಣ ಖಾತೆ ನೀಡುವಂತೆ ಮುನಿಯಪ್ಪ ಬೇಡಿಕೆ ಮಂಡಿಸಿದ್ದು, ಸದ್ಯಕ್ಕೆ ಅವರ ಮುನಿಸು ಶಮನ ಮಾಡಲಾಗಿದೆ. ಇನ್ನೂ ಒಂದಿಬ್ಬರು ಹಿರಿಯ ಶಾಸಕರು, ತಮಗೆ ದೊರೆತ ಖಾತೆಗಳ ಬಗ್ಗೆ ತೃಪ್ತಿ ಹೊಂದಿಲ್ಲ.

‘ಹಿರಿತನ ಆಧರಿಸಿ ಖಾತೆ ಹಂಚಿಕೆ ಆಗಬೇಕು’ ಎಂದು ಮುನಿಯಪ್ಪ ಹೇಳಿದ್ದಾರೆ. ಆದರೆ ರಾಜ್ಯದ ಜನತೆಯ ಹಿತದೃಷ್ಟಿಯಿಂದ, ಹಿರಿತನ ಆಧರಿಸಿದರೆ ಸಾಲದು. ಹೆಚ್ಚಿನ ಕಾಂಗ್ರೆಸ್ ಶಾಸಕರು ಹಿರಿಯರೇ. ಯಾರು ಹಿರಿಯರಲ್ಲ? ಚುರುಕಾಗಿ ಓಡಾಡುವ, ರಾಜ್ಯಾದ್ಯಂತ ಪ್ರವಾಸ ಮಾಡಬಲ್ಲ, ಪಟ್ಟು ಹಿಡಿದು ಕೆಲಸ ಮಾಡಿಸಿಕೊಳ್ಳಬಲ್ಲ ಛಾತಿ ಸಚಿವರಿಗೆ ಇರಬೇಕು.

ಇದನ್ನೂ ಓದಿ: Ramalinga Reddy: ರಾಮಲಿಂಗಾರೆಡ್ಡಿ ಮನವೊಲಿಕೆಗೆ ಸಿಎಂ ಡಿಕೆಶಿ ಯತ್ನ; ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಭೇಟಿಯಾಗಿ ಚರ್ಚೆ

ಕಳೆದ ಬಾರಿ ಕಂದಾಯ ಸಚಿವರಾಗಿ ಕೃಷ್ಣಬೈರೇಗೌಡ ಉತ್ತಮವಾಗಿ ಕಾರ್ಯ ನಿರ್ವಹಿಸಿದ್ದರು. ಎಂಬಿ ಪಾಟೀಲ್ ನೀರಾವರಿ ವಿಚಾರದಲ್ಲಿ ಅನುಭವಿ. ಹೀಗೆ ಪ್ರತಿಯೊಬ್ಬರ ಸಾಮರ್ಥ್ಯ, ಅನುಭವ, ಕ್ರಿಯಾಶೀಲತೆ ಗಮನಿಸಿ ಖಾತೆ ನೀಡಿದರೆ ಆಡಳಿತ ಸುಗಮ. ಪ್ರತಿಯೊಬ್ಬರೂ ಲಾಭದಾಯಕ ಖಾತೆಗಳನ್ನೇ ಅಪೇಕ್ಷಿಸಿದರೆ ನೀಡಲು ಸಾಧ್ಯವಿಲ್ಲ.

ಕನ್ನಡ ಮತ್ತು ಸಂಸ್ಕೃತಿ ಖಾತೆಯಂತಹ, ಹೆಚ್ಚೇನೂ ಲಾಭವಿಲ್ಲದ, ಆದರೆ ನಾಡು ನುಡಿಯ ದೃಷ್ಟಿ ಯಿಂದ ಮಹತ್ವದ ಖಾತೆಗಳಿವೆ. ‘ಕೊಟ್ಟ ಕುದುರೆಯ ಏರಲರಿಯದವನು ವೀರನೂ ಅಲ್ಲ ಧೀರನೂ ಅಲ್ಲ’ ಎಂಬ ಮಾತು ನೆನಪಾಗುತ್ತದೆ. ದೊರೆತ ಖಾತೆಯನ್ನು ಜನ ಮೆಚ್ಚುವಂತೆ ನಿರ್ವಹಿಸಿ ತೋರಿಸ ಬೇಕಾದುದು ಜನಪ್ರತಿನಿಧಿಯ ಕರ್ತವ್ಯ.

ಬೇಡಿಕೆ ಇಲ್ಲದಿದ್ದ ಪಂಚಾಯತ್‌ರಾಜ್ ಖಾತೆಯಲ್ಲಿ ಜಗವೇ ಮೆಚ್ಚುವಂತೆ ಕೆಲಸ ಮಾಡಿದ ನಜೀರ್ ಸಾಬ್ ನಮಗಿಲ್ಲಿ ನೆನಪಾಗಬೇಕು. ಉತ್ತಮ ರೀತಿಯಲ್ಲಿ ಖಾತೆ ನಿರ್ವಹಿಸಿದರೆ ಅದನ್ನು ರಾಜ್ಯದ ಜನ ಗುರುತಿಸಿಯೇ ಗುರುತಿಸುತ್ತಾರೆ. ಹೈಕಮಾಂಡ್ ಕೂಡ ಗುರುತಿಸುತ್ತದೆ.