ʻಕರ್ನಾಟಕದ ಆ ನನ್ನ ಗ್ರಾಮದ ದೇವಸ್ಥಾನಕ್ಕೆ ಇಂದಿಗೂ ನಮಗೆ ಪ್ರವೇಶವಿಲ್ಲʼ; ಜಾತಿ ತಾರತಮ್ಯದ ಬಗ್ಗೆ 'ಪಂಚಾಯತ್' ನಟ ವಿನೋದ್ ಸೂರ್ಯವಂಶಿ ಬೇಸರ
ಪ್ರಸಿದ್ಧ 'ಪಂಚಾಯತ್' ವೆಬ್ ಸರಣಿಯ ನಟ ವಿನೋದ್ ಸೂರ್ಯವಂಶಿ ಅವರು ಇತ್ತೀಚಿನ ಸಂದರ್ಶನದಲ್ಲಿ ಕರ್ನಾಟಕದಲ್ಲಿ ತಾವು ಅನುಭವಿಸಿದ ಭೀಕರ ಜಾತಿ ತಾರತಮ್ಯದ ಬಗ್ಗೆ ಮಾತನಾಡಿದ್ದಾರೆ. ಹೋಟೆಲ್‌ನಲ್ಲಿ ಊಟ ಮಾಡಿದ ಬಳಿಕ ತಟ್ಟೆ ತೊಳೆಯುವ ಅನಿವಾರ್ಯತೆ ಇತ್ತು ಎಂದಿರುವ ಅವರು ದೇವಸ್ಥಾನಕ್ಕೆ ಪ್ರವೇಶ ನಿರಾಕರಣೆಯಂತಹ ಕಹಿ ಸತ್ಯಗಳನ್ನು ಬಿಚ್ಚಿಟ್ಟಿದ್ದಾರೆ.
-
ಜನಪ್ರಿಯ 'ಪಂಚಾಯತ್' ವೆಬ್ ಸರಣಿಯಲ್ಲಿ ಸಣ್ಣ ಪಾತ್ರದ ಮೂಲಕ ಗಮನ ಸೆಳೆದ ನಟ ವಿನೋದ್ ಸೂರ್ಯವಂಶಿ, ಇತ್ತೀಚೆಗೆ ನೀಡಿದ ಸಂದರ್ಶನವೊಂದರಲ್ಲಿ ಕರ್ನಾಟಕದಲ್ಲಿ ತಾವು ಅನುಭವಿಸಿದ ಜಾತಿ ಪದ್ಧತಿಯ ಭೀಕರತೆಯನ್ನು ನೆನಪು ಮಾಡಿಕೊಂಡಿದ್ದಾರೆ. ಸೆಕ್ಯೂರಿಟಿ ಗಾರ್ಡ್ ಮಾಡುತ್ತಾ ನಂತರ ಜೂನಿಯರ್ ಆರ್ಟಿಸ್ಟ್ ಆಗಿ ಚಿತ್ರರಂಗಕ್ಕೆ ಬಂದು, ನಂತರ ದೊಡ್ಡ ದೊಡ್ಡ ಪ್ರಾಜೆಕ್ಟ್‌ಗಳಲ್ಲಿ ಅವಕಾಶ ಪಡೆಯುವವರೆಗಿನ ವಿನೋದ್ ಅವರ ಪಯಣ ಸುಲಭದ್ದಾಗಿರಲಿಲ್ಲ.
ಕರ್ನಾಟಕದಲ್ಲಿ ಎದುರಿಸಿದ ತಾರತಮ್ಯ
"ಕರ್ನಾಟಕದಲ್ಲಿರುವ ನನ್ನ ಗ್ರಾಮದಲ್ಲಿ ಇಂದಿಗೂ ಜಾತಿ ತಾರತಮ್ಯ ಚಾಲ್ತಿಯಲ್ಲಿದೆ. ಹಳ್ಳಿಯಲ್ಲಿ ಎರಡು ಭಾಗಗಳಿವೆ - ಒಂದು ಮೇಲ್ವರ್ಗದವರಿಗಾಗಿ ಮತ್ತು ಇನ್ನೊಂದು ಕೆಳವರ್ಗದವರಿಗಾಗಿ. ದಲಿತರು ವಾಸಿಸುವ ಪ್ರದೇಶವು ಹಳ್ಳಿಯಿಂದ ಪ್ರತ್ಯೇಕವಾಗಿದೆ. ಒಮ್ಮೆ ನಾನು ನನ್ನ ತಂದೆಯೊಂದಿಗೆ ಗ್ರಾಮಕ್ಕೆ ಹೋದಾಗ ನನಗೆ 12 ವರ್ಷ. ಹೋಟೆಲ್ ಒಂದರಲ್ಲಿ ಊಟ ಮಾಡಿದ ಮೇಲೆ, ನಾವು ಹಣವನ್ನೂ ನೀಡಿ, ನಾವು ತಿಂಡಿ ತಿಂದ ಪ್ಲೇಟ್‌ಗಳನ್ನು ನಾವೇ ತೊಳೆಯಬೇಕಾಯಿತು. ನನ್ನ ಹಳ್ಳಿಯಲ್ಲಿರುವ ದೇವಸ್ಥಾನಕ್ಕೆ ಇಂದಿಗೂ ನಮಗೆ ಪ್ರವೇಶವಿಲ್ಲ" ಎಂದು ವಿನೋದ್ ಸೂರ್ಯವಂಶಿ ಹೇಳಿಕೊಂಡಿದ್ದಾರೆ. ಆದರೆ, ಕರ್ನಾಟಕದಲ್ಲಿರುವ ಅವರ ಆ ಗ್ರಾಮ ಯಾವುದು ಎಂಬುದು ತಿಳಿದುಬಂದಿಲ್ಲ.
ಪ್ರೀತಿಗೆ ಸಾವಿಲ್ಲ; ಜಾತಿಯ ಕಾರಣಕ್ಕೆ ಕೊಲೆಗೀಡಾದ ಪ್ರಿಯಕರನನ್ನೇ ವರಿಸಿದ ಯುವತಿ: ಮನ ಕಲುಕುವ ಲವ್ ಸ್ಟೋರಿ ಇಲ್ಲಿದೆ
ಬಣ್ಣದ ಕಾರಣಕ್ಕೆ ಹಲವು ಬಾರಿ ತಿರಸ್ಕಾರ
ವಿನೋದ್ ಅವರ ಮೈಬಣ್ಣ ಕಪ್ಪಾಗಿರುವ ಕಾರಣಕ್ಕೆ ಸಾಕಷ್ಟು ಅವಮಾನಗಳನ್ನು ಅನುಭವಿಸಿದ್ದಾರಂತೆ. "ನನ್ನ ಲುಕ್ಸ್ ಕಾರಣಕ್ಕಾಗಿ ನಾನು ಹಲವು ಬಾರಿ ತಿರಸ್ಕೃತಗೊಂಡಿದ್ದೇನೆ. ಟಿವಿಗೆ ಆಡಿಶನ್ ನೀಡಿದಾಗಲೆಲ್ಲಾ ಅವರು 'ರಿಚ್ ಲುಕ್' (ಶ್ರೀಮಂತ ನೋಟ) ಬಯಸುತ್ತಿದ್ದರು. ಒಬ್ಬ ಭಿಕ್ಷುಕನ ಪಾತ್ರಕ್ಕೂ ಅವರಿಗೆ ರಿಚ್ ಲುಕ್ ಇರುವವರೇ ಬೇಕಿತ್ತು! ಒಮ್ಮೆ ನಾನು ಮನೆ ಕೆಲಸದವನ ಪಾತ್ರಕ್ಕೆ ಆಯ್ಕೆಯಾಗಿದ್ದೆ. ಕಾಸ್ಟಿಂಗ್ ತಂಡ ನನ್ನನ್ನು ಫೈನಲ್ ಮಾಡಿತ್ತು ಮತ್ತು ನಾನು ಶೂಟಿಂಗ್‌ಗೆ ಸರಿಯಾದ ಸಮಯಕ್ಕೆ ತಲುಪಿದ್ದೆ. ಆದರೆ ಕ್ರಿಯೇಟಿವ್ ಡೈರೆಕ್ಟರ್ ಬಂದು ನನ್ನನ್ನು ನೋಡಿ, 'ಇವನು ಬೇಡ, ನಮಗೆ ಬೆಳ್ಳಗಿರುವವರು ಬೇಕು. ಇವನು ಕಪ್ಪಗಿದ್ದಾನೆ, ಇವನನ್ನು ಕಳುಹಿಸಿಬಿಡಿ' ಅಂತ ಹೇಳಿ ನನ್ನನ್ನು ಸೆಟ್‌ನಿಂದ ವಾಪಸ್ ಕಳುಹಿಸಿದ್ದರು" ಎಂದು ಹಳೆಯ ಘಟನೆಯನ್ನು ವಿನೋದ್ ನೆನಪು ಮಾಡಿಕೊಂಡಿದ್ದಾರೆ.
ಬಾಲ್ಯದ ತುಂಬೆಲ್ಲಾ ಬರೀ ಕಹಿ ಘಟನೆಗಳು
ತೀರಾ ಬಡತನದ ಹಿನ್ನೆಲೆಯಿಂದ ಬಂದಿದ್ದ ವಿನೋದ್‌ಗೆ ಬಾಲ್ಯದ ದಿನಗಳು ಅಷ್ಟೇನೂ ಖುಷಿ ನೀಡಿರಲಿಲ್ಲ. "ನನ್ನ ತಾಯಿ ಮನೆಗೆಲಸ ಮಾಡುತ್ತಿದ್ದರು ಮತ್ತು ತಂದೆ ಮೇಸ್ತ್ರಿ ಕೆಲಸ ಮಾಡುತ್ತಿದ್ದರು. ನನ್ನ ತಂದೆಗೆ ಎಲ್ಲಾ ದಿನ ಕೆಲಸ ಇರುತ್ತಿರಲಿಲ್ಲ. ಕೆಲಸವಿಲ್ಲದಿದ್ದಾಗ ಕುಡ್ಕೊಂಡು ಮನೆಗೆ ಬರುತ್ತಿದ್ದರು. ಆಗೆಲ್ಲಾ ಅಮ್ಮನಿಗೆ ಜೋರಾಗಿ ಬೈಯುತ್ತಾ, ಹೊಡೆಯುತ್ತಿದ್ದರು. ಇದನ್ನೆಲ್ಲಾ ನೋಡುತ್ತಾ ಬೆಳೆದ ನನಗೆ ಹಬ್ಬಗಳೆಂದರೆ ಇಷ್ಟವಿರಲಿಲ್ಲ. ಏಕೆಂದರೆ, ಅಲ್ಲಿ ಸಂಭ್ರಮಿಸಲು ಯಾವುದೇ ಕಾರಣವಿರಲಿಲ್ಲ" ಎಂದು ವಿನೋದ್ ಹೇಳಿಕೊಂಡಿದ್ದಾರೆ.
ಜಿತೇಂದ್ರ ಕುಮಾರ್, ನೀನಾ ಗುಪ್ತಾ ಮತ್ತು ರಘುಬೀರ್ ಯಾದವ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದ 'ಪಂಚಾಯತ್' ವೆಬ್ ಸರಣಿಯು ಒಟಿಟಿ ಲೋಕದಲ್ಲಿ ದೊಡ್ಡ ಗೆಲುವು ಕಂಡಿತ್ತು. ಈ ಸರಣಿಯಿಂದಲೇ ವಿನೋದ್ ಉತ್ತಮ ಹೆಸರು ಪಡೆದರು.