Vishwavani Editorial: ಇದು ನಮ್ಮವರಿಗೆ ಪಾಠವಾಗಬೇಕು
ಯಾವುದೇ ಒಂದು ರಾಷ್ಟ್ರದಲ್ಲಿ ಜನರ ಹಿತರಕ್ಷಣೆಯೇ ಆಳುಗರ ಆದ್ಯತಾ ವಿಷಯವಾಗಿದ್ದರೆ, ತಮ್ಮದು ಪ್ರಜಾಪ್ರಭುತ್ವ ವ್ಯವಸ್ಥೆಯೋ ಅಥವಾ ರಾಜಪ್ರಭುತ್ವವೋ ಎಂಬು ದರ ಬಗ್ಗೆ ಜನರು ತಲೆ ಕೆಡಿಸಿ ಕೊಳ್ಳಲು ಹೋಗುವುದಿಲ್ಲ; ಆದರೆ ಆಳುಗರಿಗೆ ಜನಕಲ್ಯಾಣ ವೆಂಬುದು ಆದ್ಯತೆಯ ಪಟ್ಟಿಯಲ್ಲಿನ ಕೊನೆಯ ಬಾಬತ್ತಾಗಿಬಿಟ್ಟರೆ, ಜನರು ಅಂಥ ವ್ಯವಸ್ಥೆಯ ವಿರುದ್ಧ ಸಿಡಿದೇಳುತ್ತಾರೆ ಮತ್ತು ಬದಲಾವಣೆಗೆ ಆಗ್ರಹಿಸುತ್ತಾರೆ


ನೇಪಾಳದಲ್ಲಿ ಕಂಡುಬಂದಿರುವ ಬೆಳವಣಿಗೆಯು ಭಾರತದ ಒಂದಷ್ಟು ರಾಜಕಾರಣಿಗಳಿಗೆ ಪಾಠ ವಾಗಬೇಕು. ಅಲ್ಲಿನ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ತೊಡಗಿಸಿಕೊಂಡು ‘ಆಳುಗರು’ ಎಂಬ ಹಣೆ ಪಟ್ಟಿ ಧರಿಸಿದ್ದ ರಾಜಕಾರಣಿಗಳು ಸಮಾಜದ ಪುನರುತ್ಥಾನದ ಬಗ್ಗೆ ಹಾಗೂ ಜನಕಲ್ಯಾಣದ ವಿಷಯದಲ್ಲಿ ಹೆಚ್ಚೇನೂ ಆಸಕ್ತಿ ತೋರದ ಕಾರಣದಿಂದಾಗಿ ನೇಪಾಳಿಗರು ಭುಗಿಲೆದ್ದಿದ್ದಾರೆ. ‘ನಮಗೆ ಮೊದಲಿನಂತೆ ರಾಜಪ್ರಭುತ್ವ ಬೇಕು, ನೇಪಾಳವನ್ನು ಹಿಂದೂ ರಾಷ್ಟ್ರವೆಂದು ಘೋಷಿಸಬೇಕು’ ಎಂದು ಆಗ್ರಹಿಸಿರುವುದರ ಜತೆಗೆ, ‘ಪ್ರಜಾಪ್ರಭುತ್ವ ವ್ಯವಸ್ಥೆಗೆ ಧಿಕ್ಕಾರ, ಭ್ರಷ್ಟ ಸರಕಾರಕ್ಕೆ ಧಿಕ್ಕಾರ’ ಎಂಬ ಘೋಷಣೆಯನ್ನೂ ಅವರು ಹೊಮ್ಮಿಸಿದ್ದಾರೆ. ನೇಪಾಳಿಗರು ತಮ್ಮಲ್ಲಿನ ಆಳುಗ ವ್ಯವಸ್ಥೆಯ ಕುರಿತು ಅದೆಷ್ಟು ಕ್ರೋಧಿತರಾಗಿದ್ದಾರೆ ಎನ್ನುವುದಕ್ಕೆ ಇದೊಂದು ಬೆಳವಣಿಗೆಯೇ ಸಾಕು.
ಹಾಗೆ ನೋಡಿದರೆ, ಯಾವುದೇ ಒಂದು ರಾಷ್ಟ್ರದಲ್ಲಿ ಜನರ ಹಿತರಕ್ಷಣೆಯೇ ಆಳುಗರ ಆದ್ಯತಾ ವಿಷಯವಾಗಿದ್ದರೆ, ತಮ್ಮದು ಪ್ರಜಾಪ್ರಭುತ್ವ ವ್ಯವಸ್ಥೆಯೋ ಅಥವಾ ರಾಜಪ್ರಭುತ್ವವೋ ಎಂಬು ದರ ಬಗ್ಗೆ ಜನರು ತಲೆ ಕೆಡಿಸಿಕೊಳ್ಳಲು ಹೋಗುವುದಿಲ್ಲ; ಆದರೆ ಆಳುಗರಿಗೆ ಜನಕಲ್ಯಾಣ ವೆಂಬುದು ಆದ್ಯತೆಯ ಪಟ್ಟಿಯಲ್ಲಿನ ಕೊನೆಯ ಬಾಬತ್ತಾಗಿಬಿಟ್ಟರೆ, ಜನರು ಅಂಥ ವ್ಯವಸ್ಥೆಯ ವಿರುದ್ಧ ಸಿಡಿದೇಳುತ್ತಾರೆ ಮತ್ತು ಬದಲಾವಣೆಗೆ ಆಗ್ರಹಿಸುತ್ತಾರೆ.
ಇದನ್ನೂ ಓದಿ: Vishwavani Editorial: ಇದು ಸೊಕ್ಕಿನ ಪರಮಾವಧಿಯಷ್ಟೇ!
ಪ್ರಸ್ತುತ ನೇಪಾಳದಲ್ಲಿ ಕಾಣಬರುತ್ತಿರುವುದೂ ಇಂಥದೇ ಬೆಳವಣಿಗೆ. ತಮ್ಮ ನಾಡು ಪ್ರಗತಿಯತ್ತ ದಾಪುಗಾಲಿಕ್ಕಿಬಿಡುತ್ತದೆ ಎಂಬ ಎಣಿಕೆಯಲ್ಲಿ ರಾಜಪ್ರಭುತ್ವದಿಂದ ಈಗಿನ ಪ್ರಜಾಪ್ರಭುತ್ವಕ್ಕೆ ವ್ಯವಸ್ಥೆಯು ಸ್ಥಿತ್ಯಂತರಗೊಳ್ಳುವುದಕ್ಕೆ ಒಪ್ಪಿಕೊಂಡಿದ್ದ ನೇಪಾಳಿಗರಿಗೆ ಅದರಿಂದ ತಮಗೆ ನಿರೀಕ್ಷಿತ ಫಲ ದಕ್ಕಿಲ್ಲ ಎಂಬುದು ಮನವರಿಕೆಯಾಗಿದೆ. ಹೀಗಾಗಿ ಹೋರಾಟಕ್ಕೆಂದು ಬೀದಿಗಿಳಿದಿದ್ದಾರೆ ಎನ್ನುತ್ತಾರೆ ಬಲ್ಲವರು.
ನಮ್ಮದೂ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಅಪ್ಪಿರುವ-ಒಪ್ಪಿರುವ ದೇಶವೇ. ಕೆಲವೇ ನಿದರ್ಶನ ಗಳನ್ನು ಹೊರತುಪಡಿಸಿದರೆ, ನಮ್ಮಲ್ಲೂ ಆಳುಗರ ಕಾರ್ಯವೈಖರಿಯಿಂದಾಗಿ ಜನರು ಅಸಮಾ ಧಾನ ಗೊಂಡಿದ್ದಾರೆ ಎಂಬುದನ್ನು ಬಿಡಿಸಿ ಹೇಳಬೇಕಿಲ್ಲ. ದಿನನಿತ್ಯದ ರಾಜಕೀಯ ವಿದ್ಯಮಾನ ಗಳಿಗೆ ಮತ್ತು ಜನನಾಯಕರೆನಿಸಿಕೊಂಡವರ ‘ನವರಂಗಿ ನಾಟಕ’ಗಳಿಗೆ ಜನರಿಂದ ಹೊಮ್ಮುತ್ತಿರುವ ತಿರಸ್ಕಾರವೇ ಈ ಭಾವವನ್ನು ಧ್ವನಿಸುತ್ತದೆ.
ತಥಾಕಥಿತ ಜನನಾಯಕರು ಇದನ್ನು ಆದಷ್ಟು ಬೇಗ ಗ್ರಹಿಸಿ ತಮ್ಮನ್ನು ತಾವು ತಿದ್ದಿಕೊಳ್ಳದಿದ್ದಲ್ಲಿ ಮತ್ತು ತಮ್ಮನ್ನು ಚುನಾಯಿಸಿದ ಜನರ ಹಿತರಕ್ಷಣೆಯನ್ನೇ ಆದ್ಯತೆಯಾಗಿಸಿಕೊಳ್ಳದಿದ್ದಲ್ಲಿ ಮುಂದೊಂದು ದಿನ ಪಶ್ಚಾತ್ತಾಪ ಪಡಬೇಕಾದೀತು!