ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Vishwavani Editorial: ಮತದಾರರ ಜಾಗೃತಿ ಅಗತ್ಯ

ಹೊಸ ಮತದಾರರ ನೋಂದಣಿ, ವಿವರಗಳ ತಿದ್ದುಪಡಿ, ವಿಳಾಸ ಬದಲಾವಣೆ ಇತ್ಯಾದಿಗಳಿಗೆ ಅನುಗುಣ ವಾದ ಫಾರಂ ನಂಬರ್‌ಗಳಲ್ಲಿ ಅರ್ಜಿ ಸ್ವೀಕರಿಸಲಾಗುತ್ತಿದೆ ಹಾಗೂ ಪ್ರಕ್ರಿಯೆ ನಡೆಯುತ್ತಿದೆ. ಇದೊಂದು ಬೃಹತ್ ಪ್ರಕ್ರಿಯೆ ಆಗಿರುವುದರಿಂದ ಸಣ್ಣಪುಟ್ಟ ಲೋಪದೋಷಗಳು ಸಹಜ. ಇದರ ಉದ್ದೇಶ, ಪ್ರಜಾಪ್ರಭುತ್ವದ ಹಬ್ಬ ಎನಿಸಿರುವ ಚುನಾವಣೆ ಪಾರದರ್ಶಕವಾಗಿ ನಡೆಯಬೇಕು ಎಂಬುದು.

Vishwavani Editorial: ಮತದಾರರ ಜಾಗೃತಿ ಅಗತ್ಯ

-

Profile
Ashok Nayak Oct 28, 2026 6:01 AM

ಕರ್ನಾಟಕದಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ಪ್ರಕ್ರಿಯೆ ಪೂರ್ಣಗೊಂಡಿದೆ. ಅಂತಿಮ ಮತದಾರರ ಪಟ್ಟಿಯಂತೆ ರಾಜ್ಯದಲ್ಲಿ 4.55 ಕೋಟಿ ಮತದಾರರಿದ್ದಾರೆ. ಪರಿಷ್ಕರಣೆಗೆ ಮುನ್ನ ರಾಜ್ಯದಲ್ಲಿ 5.54 ಕೋಟಿ ಮತದಾರರಿದ್ದು, ಇದೀಗ ಈ ಸಂಖ್ಯೆ 4.55 ಕೋಟಿಗೆ ಇಳಿಕೆ ಯಾಗಿದೆ. ಒಟ್ಟು 1,07,96,339 ಮತದಾರರ ಹೆಸರು ನಾನಾ ಕಾರಣಗಳಿಗಾಗಿ ಪಟ್ಟಿಯಿಂದ ಕೈಬಿಡಲಾಗಿದೆ.

ಜೂನ್ 30ರಿಂದ ಎಸ್‌ಐಆರ್ ಪ್ರಕ್ರಿಯೆ ಆರಂಭವಾಗಿ, ಆ.24ರಂದು ಕರಡು ಮತದಾರರ ಪಟ್ಟಿ ಪ್ರಕಟಿಸಲಾಗಿತ್ತು. ಗಣತಿ ನಮೂನೆ ಸಲ್ಲಿಸಿದವರ ಪೈಕಿ 43.82 ಲಕ್ಷ ಮತದಾರರಿಗೆ ದಾಖಲೆಗಳಲ್ಲಿನ ವ್ಯತ್ಯಾಸ ಹಾಗೂ 2002ರ ಮತದಾರರ ಪಟ್ಟಿಯಲ್ಲಿನ ವಿವರಗಳ ಹೊಂದಾಣಿಕೆ ಸಮಸ್ಯೆ ಸೇರಿದಂತೆ ವಿವಿಧ ಕಾರಣಗಳಿಗೆ ನೋಟಿಸ್ ನೀಡಲಾಗಿತ್ತು. ಕರಡು ಪಟ್ಟಿ ಪ್ರಕಟವಾದ ಬಳಿಕ ಹೊಸದಾಗಿ ಹೆಸರು ಸೇರ್ಪಡೆ ಸೇರಿದಂತೆ ಒಟ್ಟು 8.19ಲಕ್ಷ ಹೆಸರು ಸೇರಿಸಲಾಗಿದೆ. ಅಂದರೆ, ಚುನಾವಣಾ ಆಯೋಗ ಸಾಕಷ್ಟು ಪ್ರಾಮಾಣಿಕವಾಗಿಯೇ ಎಸ್‌ಐಆರ್ ಪ್ರಕ್ರಿಯೆಯನ್ನು ನಡೆಸಿದೆ.

ಇದನ್ನೂ ಓದಿ: SIR in Karnataka: ಹುಬ್ಬಳ್ಳಿಯ ತಮ್ಮ ನಿವಾಸದಲ್ಲೇ SIRನಲ್ಲಿ ಭಾಗಿಯಾಗಿ ಪ್ರೇರಣೆಯಾದ ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ

ಬಿಟ್ಟು ಹೋದ 1.07 ಕೋಟಿ ಎಂಬುದು ದೊಡ್ಡ ಸಂಖ್ಯೆಯೇ. ಆದರೆ ಈ ಸಂಖ್ಯೆಯನ್ನು ನೋಡಿ ಗಾಬರಿಯಾಗುವ, ಗೋಲ್‌ಮಾಲ್ ನಡೆದಿದೆ ಎಂದು ಕೂಗಾಡುವ ಅಗತ್ಯವಿಲ್ಲ. ಯಾವ ಕಾರಣ ಗಳಿಂದಾಗಿ ಇಷ್ಟು ಹೆಸರುಗಳು ಬಿಟ್ಟುಹೋಗಿವೆ ಎಂಬುದನ್ನು ಪ್ರಾಂಜಲವಾಗಿ ಪರಿಶೀಲಿಸುವ ಅಗತ್ಯವಿದೆ. ಪರಿಶೀಲನೆ ವೇಳೆ ಗೈರು ಹಾಜರಾದವರು, ಸ್ಥಳಾಂತರಗೊಂಡವರು, ಮೃತಪಟ್ಟವರು, ನಕಲಿ ನೋಂದಣಿ ಹೊಂದಿರುವವರು, ಒಂದಕ್ಕಿಂತ ಹೆಚ್ಚು ಕಡೆ ಹೆಸರು ಇರುವವರು, ವಿವರ ಒದಗಿಸಲು ಔದಾಸೀನ್ಯ ಮಾಡಿದವರು, ಹೀಗೆ ಹತ್ತಾರು ಕಾರಣಗಳಿರಲು ಸಾಧ್ಯ.

ಹೊಸ ಮತದಾರರ ನೋಂದಣಿ, ವಿವರಗಳ ತಿದ್ದುಪಡಿ, ವಿಳಾಸ ಬದಲಾವಣೆ ಇತ್ಯಾದಿಗಳಿಗೆ ಅನುಗುಣವಾದ ಫಾರಂ ನಂಬರ್‌ಗಳಲ್ಲಿ ಅರ್ಜಿ ಸ್ವೀಕರಿಸಲಾಗುತ್ತಿದೆ ಹಾಗೂ ಪ್ರಕ್ರಿಯೆ ನಡೆಯುತ್ತಿದೆ. ಇದೊಂದು ಬೃಹತ್ ಪ್ರಕ್ರಿಯೆ ಆಗಿರುವುದರಿಂದ ಸಣ್ಣಪುಟ್ಟ ಲೋಪದೋಷಗಳು ಸಹಜ. ಇದರ ಉದ್ದೇಶ, ಪ್ರಜಾಪ್ರಭುತ್ವದ ಹಬ್ಬ ಎನಿಸಿರುವ ಚುನಾವಣೆ ಪಾರದರ್ಶಕವಾಗಿ ನಡೆಯಬೇಕು ಎಂಬುದು. ಆಯೋಗ ನಿರಂತರ ನವೀಕರಣ ವ್ಯವಸ್ಥೆ ಜಾರಿಗೆ ತಂದಿದೆ. ನಿಮ್ಮ ಹೆಸರು ಅಂತಿಮ ಪಟ್ಟಿಯಲ್ಲಿ ಇಲ್ಲದಿದ್ದರೆ, ಸೇರಿಸಲು ಅರ್ಜಿ ಸಲ್ಲಿಸಬಹುದು. ಈ ಪ್ರಕ್ರಿಯೆಗೆ ಯಾವುದೇ ಡೆಡ್‌ಲೈನ್ ಇಲ್ಲ. ಹೀಗಾಗಿ ಯಾರೂ ಕಳವಳಪಡುವ ಅಗತ್ಯವಿಲ್ಲ. ಬಿಟ್ಟುಹೋದವರ ಹೆಸರು ಸೇರ್ಪಡೆಯ ಕುರಿತು ಜನತೆಯಲ್ಲಿ ಜಾಗೃತಿ ಮೂಡಿಸುವುದು ಎಲ್ಲ ಪಕ್ಷಗಳವರು, ಸಂಘಸಂಸ್ಥೆಗಳು, ಪ್ರಜ್ಞಾವಂತರ ಜವಾಬುದಾರಿ.