ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Vishwavani Editorial: ನಶೆಯ ವಿರುದ್ಧ ಸಮರ

ಯುವಜನತೆ ಮಾದಕ ದ್ರವ್ಯ ವ್ಯಸನಿಗಳಾಗದಂತೆ ತಡೆಯುವುದು ಮತ್ತು ಸಾಮಾಜಿಕ ಬದಲಾವಣೆ ಯ ರಾಯಭಾರಿಗಳಾಗುವಂತೆ ಪ್ರೇರೇಪಿಸುವುದು ಈ ಅಭಿಯಾನದ ಉದ್ದೇಶ. ಈ ಕಾಲಕ್ಕೆ ಇಂಥದೊಂದು ಅಭಿಯಾನ ಅಗತ್ಯವಿತ್ತು. ಈಗಾಗಲೇ ವ್ಯಸನಿಗಳಾಗಿರುವ ವಯಸ್ಕರನ್ನು ತಿದ್ದುವುದು ಕಷ್ಟ. ಆದರೆ ಯುವಜನತೆಯನ್ನು ಇದರ ಕಪಿಮುಷ್ಟಿಯಿಂದ ಬಿಡಿಸುವುದು ನಮ್ಮ ಆದ್ಯತೆಯಾಗಬೇಕು

Vishwavani Editorial: ನಶೆಯ ವಿರುದ್ಧ ಸಮರ

-

Profile
Ashok Nayak Aug 3, 2026 8:11 AM

ಯುವಜನತೆಯಲ್ಲಿ ಮಾದಕ ವಸ್ತುಗಳ ವ್ಯಸನ ನಿರ್ಮೂಲನೆ ಮಾಡುವ ಉದ್ದೇಶದಿಂದ ಹಮ್ಮಿ ಕೊಳ್ಳಲಾಗಿರುವ ’ವಿಕಸಿತ ಭಾರತ ಸಂಕಲ್ಪ ಅಭಿಯಾನಕ್ಕಾಗಿ ನಶಾ ಮುಕ್ತ ಯುವ’ ಕಾರ್ಯಕ್ರಮ ಕ್ಕೆ ಪ್ರಧಾನ ಮಂತ್ರಿ ನರೇಂzದ್ರ ಮೋದಿ ಚಾಲನೆ ನೀಡಿದ್ದಾರೆ. ಈ ಅಭಿಯಾನದಡಿಯಲ್ಲಿ ನೂರು ವಾರಗಳ ಕಾಲ ಯುವಜನ ಜಾಗೃತಿ, ಮಾದಕ ವಸ್ತುಗಳ ವಿರುದ್ಧದ ಸಾಮಾಜಿಕ ಹಾಗೂ ಕಾನೂನಾತ್ಮಕ ಕಾರ್ಯಕ್ರಮಗಳು ನಡೆಯಲಿವೆ.

ಯುವಜನತೆ ಮಾದಕ ದ್ರವ್ಯ ವ್ಯಸನಿಗಳಾಗದಂತೆ ತಡೆಯುವುದು ಮತ್ತು ಸಾಮಾಜಿಕ ಬದಲಾವಣೆ ಯ ರಾಯಭಾರಿಗಳಾಗುವಂತೆ ಪ್ರೇರೇಪಿಸುವುದು ಈ ಅಭಿಯಾನದ ಉದ್ದೇಶ. ಈ ಕಾಲಕ್ಕೆ ಇಂಥದೊಂದು ಅಭಿಯಾನ ಅಗತ್ಯವಿತ್ತು. ಈಗಾಗಲೇ ವ್ಯಸನಿಗಳಾಗಿರುವ ವಯಸ್ಕರನ್ನು ತಿದ್ದುವುದು ಕಷ್ಟ. ಆದರೆ ಯುವಜನತೆಯನ್ನು ಇದರ ಕಪಿಮುಷ್ಟಿಯಿಂದ ಬಿಡಿಸುವುದು ನಮ್ಮ ಆದ್ಯತೆಯಾಗಬೇಕು. ಇಲ್ಲದಿದ್ದರೆ ಇಡೀ ದೇಶದ ಭವಿಷ್ಯವೇ ಕರಾಳ ಆಗಿಬಿಡುತ್ತದೆ.

ಇತ್ತೀಚಿನ ಅಂಕಿ ಅಂಶಗಳು ಲಭ್ಯವಿಲ್ಲವಾದರೂ, 2019ರಲ್ಲಿ ಸಾಮಾಜಿಕ ನ್ಯಾಯ ಮತ್ತು ಸಬಲೀ ಕರಣ ಸಚಿವಾಲಯಕ್ಕಾಗಿ ಏಮ್ಸ್ ಹಾಗೂ ಎನ್‌ಡಿಡಿಟಿಸಿ ನಡೆಸಿದ ‘ಮಾದಕ ವಸ್ತುಗಳ ಬಳಕೆಯ ವ್ಯಾಪ್ತಿ ಮತ್ತು ಸ್ವರೂಪದ ಕುರಿತಾದ ರಾಷ್ಟ್ರೀಯ ಸಮೀಕ್ಷೆ’ಯಲ್ಲಿ ತಿಳಿದುಬಂದ ಅಂಕಿ ಅಂಶಗಳು ಬೆಚ್ಚಿ ಬೀಳಿಸುವಂತಿವೆ. ಅದರಲ್ಲಿ, 10ರಿಂದ 75 ವರ್ಷ ವಯಸ್ಸಿನ 5 ಕೋಟಿಗೂ ಅಧಿಕ ಮಂದಿ ಮಾದಕ ವಸ್ತುಗಳ ಬಳಕೆ ಮಾಡುತ್ತಿದ್ದರು. ಈಗಿನ ಸಂಖ್ಯೆ ಅದರ ದುಪ್ಪಟ್ಟಾಗಿರಬಹುದು.

ಇದನ್ನೂ ಓದಿ: Vishwavani Editorial: ಸಚಿವರಿಲ್ಲದೆ ಆಡಳಿತ ಸ್ಥಗಿತ

ತಂಬಾಕು, ಮದ್ಯ, ಗಾಂಜಾ, ಅಫೀಮು, ಚರಸ್, ಹೆರಾಯಿನ್ ಮೊದಲಾದ ವಸ್ತುಗಳು ಯುವಜನಮತೆಗೆ ಸುಲಭವಾಗಿ ಸಿಗುತ್ತಿವೆ. ಪೇಂಟ್ ಥಿನ್ನರ್‌ಗಳಂತಹ ಸುಲಭವಾಗಿ ಸಿಗುವ ರಾಸಾಯನಿಕಗಳನ್ನು ಬೀದಿ ಮಕ್ಕಳು ಬಳಸಿಕೊಂಡರೆ, ನಗರದ ಪಾರ್ಟಿ ಸಂಸ್ಕೃತಿ ಮತ್ತು ಕೆಲವು ಯುವಜನರ ಗುಂಪುಗಳಲ್ಲಿ ಸಿಂಥೆಟಿಕ್ ಮತ್ತು ಪಾರ್ಟಿ ಡ್ರಗ್ಸ್ ಹೆಚ್ಚಾಗಿವೆ. ಇವುಗಳ ಬಳಕೆಯಿಂದ ಪಂಜಾಬಿನ ಯುವಜನತೆ ಸರ್ವನಾಶವಾಗಿದೆ.

ಪಂಜಾಬ್ ಹಾಗೂ ನಮ್ಮ ಪಕ್ಕದ ಕೇರಳಗಳು ಡ್ರಗ್ಸ್ ಬಳಕೆಯಲ್ಲಿ ಮೊದಲೆರಡು ಸ್ಥಾನಗಳಲ್ಲಿವೆ. ನಾವೂ ಅಪಾಯದ ಸನಿಹದಲ್ಲಿದ್ದೇವೆ. ಸ್ನೇಹಿತರ ಒತ್ತಾಯ, ಪರೀಕ್ಷೆ ಇತ್ಯಾದಿ ಮಾನಸಿಕ ಒತ್ತಡ ಗಳು, ಸುಲಭ ಲಭ್ಯತೆ, ಬಡತನ ನಿರುದ್ಯೋಗದಂಥ ಸಾಮಾಜಿಕ ಪರಿಸ್ಥಿತಿಗಳು ಅಮಲು ಸೇವನೆಗೆ ಕಾರಣವಾಗಬಹುದು. ಇದನ್ನು ನಿವಾರಿಸಲು ನಾವೆಲ್ಲ ಅಭಿಯಾನಕ್ಕೆ ಕೈ ಜೋಡಿಸಬೇಕಿದೆ.

ಈ ಕುರಿತು ಮನೆಗಳಲ್ಲಿ ಮುಕ್ತವಾಗಿ ಸಂಭಾಷಿಸಬೇಕು. ಶಾಲೆ ಮತ್ತು ಕಾಲೇಜುಗಳಲ್ಲಿ ವೈಜ್ಞಾನಿಕ ಅರಿವು ಮೂಡಿಸಬೇಕು. ಆರೋಗ್ಯ ವ್ಯವಸ್ಥೆಯಲ್ಲಿ ಕೌನ್ಸೆಲಿಂಗ್ ಮತ್ತು ಚಿಕಿತ್ಸೆ ಸುಲಭವಾಗಿ ಸಿಗಬೇಕು. ಡ್ರಗ್ ಜಾಲವನ್ನು ಪತ್ತೆಹಚ್ಚಲು ಕಾನೂನು ಜಾರಿ ವ್ಯವಸ್ಥೆ ಬಲವಾಗಬೇಕು. ಸಾಮಾಜಿಕ ಮಾಧ್ಯಮ ಮತ್ತು ಡಾರ್ಕ್‌ನೆಟ್ ಮೂಲಕ ನಡೆಯುವ ವಹಿವಾಟಿನ ಮೇಲೆ ನಿಗಾ ಹೆಚ್ಚಬೇಕು.