Shishir Hegde Column: ನಮ್ಮಷ್ಟಕ್ಕೆ ನಾವೇ ಮಾತನಾಡುವುದು ಹುಚ್ಚೇ ?
ಕೆಲವು ರಿಕ್ಷಾ, ಟೆಂಪೋ ಡ್ರೈವರುಗಳಿಗೆ ಅವರ ಹೆಸರೂ ಗೊತ್ತಿತ್ತು. ಆ ಹುಚ್ಚರೂ ಊರಿನ ಒಂದು ಭಾಗವೇ ಆಗಿದ್ದರು. ಹಾಗಂತ ಅವರಿಂದ ಯಾರಿಗೂ ಅಂಥದ್ದೇನೂ ಅಪಾಯ ವಾಗಿದ್ದೇ ನಿಲ್ಲ. ಆದರೆ ಆಗೀಗ ಅವರನ್ನು ಯಾರೋ ಪುಂಡು ಪೋಕರಿಗಳು ವಿನಾಕಾರಣ ಓಡಿಸಿಕೊಂಡು ಹೋಗುತ್ತಿದ್ದರು. ಇವರೋ ಕಾರಣವೇ ತಿಳಿಯದೆ, ಹೆದರಿ ದಿಕ್ಕಾಪಾಲಾಗಿ ಓಡುತ್ತಿದ್ದರು. ಇದು ಆ ರಸ್ತೆಯಲ್ಲಿ ಓಡಾಡುತ್ತಿದ್ದ ಕಾಲೇಜು ಹೆಣ್ಣುಮಕ್ಕಳನ್ನು ಗಾಬರಿ ಗೊಳಿಸುತ್ತಿತ್ತು
Source : Vishwavani Daily News Paper
ಶಿಶಿರಕಾಲ
ಶಿಶಿರ್ ಹೆಗಡೆ
ಆ ದಿನಗಳಲ್ಲಿ ಕುಮಟಾದ ರೈಲ್ವೆ ಸ್ಟೇಷನ್ ರಸ್ತೆಯಲ್ಲಿ ಆರೇಳು ಹುಚ್ಚರು ವಾಸವಾಗಿದ್ದರು. ಅವರನ್ನು ಕೊಂಕಣ ರೈಲ್ವೆ ಬೋಗಿಗಳೇ ಯಾವತ್ತೋ ನಮ್ಮೂರಿಗೆ ತಂದು ಬಿಟ್ಟಿದ್ದಿರ ಬೇಕು. ಅವರೆಲ್ಲ ವರ್ಷಾನುಗಟ್ಟಲೆ ಆ ರಸ್ತೆಯ ಆಜುಬಾಜು ಪಾಳುಬಿದ್ದ ಕಟ್ಟಡದ ಅವಶೇಷಗಳಲ್ಲಿ ವಾಸವಾಗಿದ್ದರಿಂದ ಎಲ್ಲರಿಗೂ ಅವರ ಮುಖಪರಿಚಯವಿತ್ತು.
ಕೆಲವು ರಿಕ್ಷಾ, ಟೆಂಪೋ ಡ್ರೈವರುಗಳಿಗೆ ಅವರ ಹೆಸರೂ ಗೊತ್ತಿತ್ತು. ಆ ಹುಚ್ಚರೂ ಊರಿನ ಒಂದು ಭಾಗವೇ ಆಗಿದ್ದರು. ಹಾಗಂತ ಅವರಿಂದ ಯಾರಿಗೂ ಅಂಥದ್ದೇನೂ ಅಪಾಯ ವಾಗಿದ್ದೇನಿಲ್ಲ. ಆದರೆ ಆಗೀಗ ಅವರನ್ನು ಯಾರೋ ಪುಂಡು ಪೋಕರಿಗಳು ವಿನಾಕಾರಣ ಓಡಿಸಿಕೊಂಡು ಹೋಗುತ್ತಿದ್ದರು. ಇವರೋ ಕಾರಣವೇ ತಿಳಿಯದೆ, ಹೆದರಿ ದಿಕ್ಕಾಪಾಲಾಗಿ ಓಡುತ್ತಿದ್ದರು. ಇದು ಆ ರಸ್ತೆಯಲ್ಲಿ ಓಡಾಡುತ್ತಿದ್ದ ಕಾಲೇಜು ಹೆಣ್ಣುಮಕ್ಕಳನ್ನು ಗಾಬರಿ ಗೊಳಿಸುತ್ತಿತ್ತು.
ನಮ್ಮೂರಿನ ಫಟಿಂಗರು ಹೀಗೆ ಮಾಡುತ್ತಿದ್ದುದು ವಿಕೃತ ವಿನೋದಕ್ಕಾಗಿಯೇ ಇತ್ತು. ಇದು ಕೆಲವರಿಗೆ ಹುಚ್ಚರ ಉಪಟಳವೆನ್ನಿಸುತ್ತಿತ್ತು. ಕೆಲವರು ಆ ಹುಚ್ಚರನ್ನು ಹಿಡಿದು ಎರಡು ಏಟು ಹಾಕುತ್ತಿದ್ದರು, ಗುದ್ದುತ್ತಿದ್ದರು. ಸಭ್ಯ ಸಮಾಜಕ್ಕೆ ಅದು ಹಿಂಸೆಯೆನಿಸುತ್ತಿರಲಿಲ್ಲ. ಅವರಿಂದ ಸಮಾಜಕ್ಕೆ ಏನೆಂದರೆ ಏನೂ ಸಮಸ್ಯೆಯೇ ಇರಲಿಲ್ಲ.
ಅವರು ಜನರಿಂದ ಶೋಷಿತರಾಗಿದ್ದೇ ಜಾಸ್ತಿ. ಇವರೆಲ್ಲರೂ ಹುಚ್ಚರೆಂದು ಹೇಳುವುದಕ್ಕೆ ಎರಡೇ ಗುಣ ಕಾರಣ ಗಳಿದ್ದವು. ಮೊದಲನೆಯದು ಸಮಾಜ ಮಾಡಿಕೊಂಡ ಕಟ್ಟುಪಾಡು, ನಿಯಮ, ರಿವಾಜು ಇವ್ಯಾವುದರ ಅರಿವಿಲ್ಲದ ಅವರ ಬದುಕು. ಎರಡನೆಯದೆಂದರೆ ಅವರ ಸ್ವಗತ- ಅವರು ತಮ್ಮಷ್ಟಕ್ಕೆ ತಾವೇ ಮಾತನಾಡಿಕೊಳ್ಳುತ್ತಿದ್ದರು. ಕೆಲವರು ಮಾತನಾಡಿದ್ದು ಏನೋ ಗಿಬ್ರಿಶ್ ಅನಿಸುತ್ತಿತ್ತು. ಇನ್ನು ಕೆಲವರದು ಸ್ಪಷ್ಟ, ಯಕ್ಷಗಾನದಷ್ಟು ಶುದ್ಧ ಕನ್ನಡ.
ಅವರೇನಾದರೂ ಸ್ವಚ್ಛ ಬಟ್ಟೆ ಧರಿಸಿ- ತಮ್ಮಷ್ಟಕ್ಕೆ ತಾವೇ ಮಾತನಾಡುವುದನ್ನು ನಿಲ್ಲಿಸಿ ದ್ದರೆ ಯಾರೂ ಅವರನ್ನು ಹುಚ್ಚರೆಂದೆನ್ನುತ್ತಿರಲಿಲ್ಲವೇನೋ. ಹೆಚ್ಚೆಂದರೆ ಅವರಿಗೆ ನಿರ್ಗತಿಕ ಎಂಬ ಪಟ್ಟ, ಸಾಂತ್ವನ ಸಿಗುತ್ತಿತ್ತು. ಆದರೆ ಈ ಸ್ವಗತ ಮಾತಿನ ಏಕೈಕ ಕಾರಣ ಕ್ಕಾಗಿ ಅವರು ಸಮಾಜದ ಎಲ್ಲ ಕರುಣಾರಸಗಳಿಂದ ವಂಚಿತರಾಗಿದ್ದರು.
ನಾವು ಮಕ್ಕಳಂತೂ ಅದೆಷ್ಟೋ ಕಾಲ- ಹುಚ್ಚರೆಂದರೆ ತಮ್ಮಷ್ಟಕ್ಕೆ ತಾವೇ ಮಾತನಾಡಿ ಕೊಳ್ಳುವವರು, ಅದುವೇ ಹುಚ್ಚರ ಪ್ರಥಮ ಮತ್ತು ಪರಮ ಲಕ್ಷಣ ಎಂದೇ ಅಂದು
ಕೊಂಡಿದ್ದೆವು. ಅಂದು ವೈಚಾರಿಕ ಸಮಸ್ಯೆಯಿತ್ತು. ನಾವು ಮಕ್ಕಳೂ ನಮ್ಮಷ್ಟಕ್ಕೆ ನಾವೇ ಮಾತಾಡಿಕೊಳ್ಳುತ್ತಿದ್ದೆವು. ಮಕ್ಕಳ ಪ್ರಪಂಚದಲ್ಲಿ ಅದೊಂದು ಸಹಜ ವಿಷಯವಾಗಿತ್ತು. ಊರಲ್ಲಿ ಪ್ರಾಜ್ಞರೆನಿಸಿದವರೂ ತಮ್ಮಷ್ಟಕ್ಕೆ ತಾವೇ ಮಾತನಾಡಿಕೊಳ್ಳುವುದು ಅಲ್ಲಲ್ಲಿ ಅನುಭವಕ್ಕೆ ಬರುತ್ತಿತ್ತು. ಒಂದೇ ವ್ಯತ್ಯಾಸವೆಂದರೆ ನಮ್ಮೆಲ್ಲರ ಸ್ವಗತ ಬಹಿರಂಗ ವಾಗಿರುತ್ತಿರಲಿಲ್ಲ.
ನಮ್ಮೆಲ್ಲರ ಸ್ವಗತ ಯಾರ ಕಿವಿಗೂ ಕೇಳಿಸುತ್ತಿರಲಿಲ್ಲ. ಅಂದು ನಾವು ನೋಡುತ್ತಿದ್ದ ನಾಟಕ, ಯಕ್ಷಗಾನಗಳಲ್ಲಿ ಪಾತ್ರವಾಗಿ ಬರುತ್ತಿದ್ದ ರಾಮ, ರಾವಣ, ಶೂರ್ಪನಖಿಯಾದಿಯಾಗಿ ಎಲ್ಲ ಪಾತ್ರಗಳೂ ಒಂದಿಷ್ಟು ಸ್ವಗತ ಮಾತನಾಡುತ್ತಿದ್ದವು. ಹಾಗಾಗಿ ಹುಚ್ಚು ಎಂಬ ವಿಷಯ ದಲ್ಲಿ ಒಂದಿಷ್ಟು ಗೊಂದಲಗಳು ನಮ್ಮಲ್ಲಿದ್ದವು. ಸ್ವಗತ ಮಾತನಾಡುವುದೇ ಹುಚ್ಚೋ ಅಥವಾ ಅದು ಬೇರೆಯವರಿಗೆ ಕೇಳುವಂತೆ ಮಾತನಾಡುವುದು ಮಾತ್ರ ಹುಚ್ಚೋ? ಇತ್ಯಾದಿ ಪ್ರಶ್ನೆಗಳು ಹುಚ್ಚಿನ ಸ್ಪಷ್ಟನೆಯನ್ನು ಬಯಸಿದ್ದವು.
ಸುಮ್ಮನೆ ಒಂಚಣ ಗ್ರಹಿಸಿ ನೋಡಿ. ಬೆಳಗಿನ ಅಲಾರಾಂ ಗದ್ದಲದ ಮರುಕ್ಷಣವೇ ನಮ್ಮೆಲ್ಲರ ಸ್ವಗತ ಮಾತು ಕೂಡ ಆರಂಭವಾಗಿಬಿಡುತ್ತದೆ. “ನನಗೆ ನಿದ್ರೆ ಸಾಕಾಯ್ತೋ ಇಲ್ಲವೋ? ಇನ್ನೊಂದು ಸ್ವಲ್ಪ ಹೊತ್ತು ಮಲಗೋಣ. ಅಂದ ಹಾಗೆ ನಿನ್ನೆ ಎಷ್ಟು ಗಂಟೆಗೆ ಮಲಗಿದ್ದೆ? ಅಯ್ಯೋ ನಿದ್ರೆ ಕಥೆ ಹಾಳಾಯ್ತು, ಇವತ್ತು ಎಷ್ಟೆ ಕೆಲಸವಿದೆ. ಇಲ್ಲಿಗೆ ಹೋಗಬೇಕು, ಅಲ್ಲಿಗೆ ಬರಬೇಕು. ಅದನ್ನು ತರಬೇಕು, ಈ ಕೆಲಸ ಮುಗಿಸಬೇಕು!" ಹೀಗೆ ಹಾಸಿಗೆಯ ನಮ್ಮ ಮಾತುಶುರುವಾಗಿಬಿಡುತ್ತದೆ. ಇದು ಅಷ್ಟಕ್ಕೇ ನಿಲ್ಲುವುದಿಲ್ಲ.
ಹಲ್ಲುಜ್ಜಲು ಕನ್ನಡಿಯ ಮುಂದೆ ನಿಂತರೆ “ಇವತ್ತು ಗಡ್ಡ ಮಾಡಬೇಕೋ ಬೇಡವೋ, ತಲೆ ಕೂದಲು ಕಟಿಂಗ್ ಈ ವಾರ ಮಾಡಿಸಿ ಬಿಡಬೇಕು.." ಹೀಗೆ ಮಾತು ಮುಂದುವರಿಯುತ್ತದೆ. ರಾತ್ರಿ ಮಲಗುವವರೆಗೂ ಎಲ್ಲಿಯೇ ಒಂದಿಷ್ಟು ಏಕಾಂತ ಸಿಕ್ಕಿಬಿಟ್ಟರೆ, ಇಲ್ಲವೇ ಎಲ್ಲ ವ್ಯವಹಾರಗಳ ನಡುವೆಯೇ ನಮ್ಮೆಲ್ಲರ ಸ್ವಗತ ಶುರುವಾಗಿಬಿಟ್ಟಿರುತ್ತದೆ.
ಅಷ್ಟೇ ಅಲ್ಲ, ಮಲಗಿದ ಮೇಲೆಯೂ ಈ ಮಾತು ನಿದ್ರೆಯ ಹಲವು ಹಂತಗಳಲ್ಲಿಯೂ ಮುಂದುವರಿಯುತ್ತದೆ. ಪ್ರತಿಯೊಬ್ಬರೂ ಅವಕಾಶ ಸಿಕ್ಕಾಗಲೆಲ್ಲ ತಮ್ಮೊಂದಿಗೇ ಮಾತಿ ಗಿಳಿಯುತ್ತಾರೆ. ನನ್ನ ಪರಿಚಯದವರೊಬ್ಬರು ಏಕಾಂತ ನಡೆಯುವಾಗಲೆಲ್ಲ ಎಲ್ಲರಿಗೂ ಕೇಳುವಷ್ಟೇ ದೊಡ್ಡ ಸ್ವರದಲ್ಲಿ ತಮ್ಮಷ್ಟಕ್ಕೆ ತಾವೇ ಮಾತನಾಡಿಕೊಳ್ಳುತ್ತಿದ್ದರು. ಅವರು ನಮ್ಮೂರಿನ ತೋಟ ಗದ್ದೆಯ ಹಾದಿಯಲ್ಲಿ ಒಬ್ಬರೇ ಹೋಗುತ್ತಿದ್ದರೆ ಯಾರೋ ಇಬ್ಬರು ಹೋಗುತ್ತಿದ್ದಾರೆ ಎಂದೇ ಗ್ರಹಿಕೆಯಾಗುತ್ತಿತ್ತು.
ಅವರ ಬಾಕಿ ಎಲ್ಲಾ ವ್ಯವಹಾರಗಳು ಸಹಜವಾಗಿದ್ದವು. ಆದರೆ ಅವರ ಸ್ವಗತ ಮಾತ್ರ ದೊಡ್ಡ ಸ್ವರದಲ್ಲಿಯೇ ಬಂದುಬಿಡುತ್ತಿತ್ತು. ಕೈ ಹಾವಭಾವಗಳೂ ಅದಕ್ಕೆ ಜತೆಯಾಗು ತ್ತಿದ್ದವು. ಅದು ಅವರಿಗೆ ತಿಳಿದಿತ್ತೋ ಇಲ್ಲವೋ. ಆದರೆ ಊರಿನ ಬಹುಪಾಲು ಜನರಲ್ಲಿ ‘ಅವರಿಗೆ ಸ್ವಲ್ಪ ಮಂಡೆ ಪೆಟ್ಟು’ ಎಂದೇ ಗಟ್ಟಿ ನಂಬಿಕೆ ಇತ್ತು. ಅವರು ಎಲ್ಲಾ ರೀತಿಯಲ್ಲೂ ಸಮಾಜ ಒಪ್ಪುವ ಸರಿಯೇ ಇದ್ದರು. ಸ್ವಗತ ಮಾತ್ರ ಧ್ವನಿರೂಪ ಪಡೆಯುತ್ತಿತ್ತು.
ಅದೇಕೋ ಸ್ವಗತದ ಬಗ್ಗೆ ಸಮಾಜದಲ್ಲಿ ಒಂದು ವಿಚಿತ್ರ ಭಾವನೆ ಇದೆ. ಅವರನ್ನು ಹುಚ್ಚ ರೆಂದೇ ಎಲ್ಲರೂ ನಂಬುವುದು. ಸ್ವಗತಕ್ಕೊಂದಿಷ್ಟು ಅಲಿಖಿತ ನೀತಿ ನಿಯಮವಿದೆ. ಅಷ್ಟಕ್ಕೂ ನಾವೇಕೆ ನಮ್ಮಷ್ಟಕ್ಕೇ ಮಾತನಾಡಿಕೊಳ್ಳುತ್ತೇವೆ? ಇದು ಆರೋಗ್ಯಕರವೋ ಅಥವಾ ಮಾನಸಿಕ ರೋಗವೋ? ಮನೆಯಲ್ಲಿ ಚಿಕ್ಕ ಮಕ್ಕಳು ತಮ್ಮಷ್ಟಕ್ಕೇ ಆಟವಾಡು ವಾಗ ಇದನ್ನು ಗ್ರಹಿಸಿರುತ್ತೀರಿ. ಆಗ ತಾನೆ ಮಾತು ಕಲಿತ ಮಕ್ಕಳ ಎಲ್ಲಾ ವಿಚಾರಗಳೂ ಸಸ್ವರ ಮಾತಿನಲ್ಲಿಯೇ ಇರುತ್ತವೆ.
ಅವರೇನು ವಿಚಾರ ಮಾಡುತ್ತಾರೆಯೋ ಅದುವೇ ಫಿಲ್ಟರ್ ಇಲ್ಲದೆ ಧ್ವನಿಯಾಗಿ ಬರುತ್ತದೆ. ಅಸಲಿಗೆ ಈ ಸ್ವಗತ ಅದಕ್ಕಿಂತಲೂ ಮೊದಲೇ ಆರಂಭವಾಗಿರುತ್ತದೆ. ಮಗುವು ಶಬ್ದದ ಉಚ್ಚಾರ ಕಲಿಯುವುದಕ್ಕಿಂತ ಮೊದಲೇ ಬೊಚ್ಚು ಬಾಯಿಯಲ್ಲಿ ಗೊಜ್ಜು ಬೀಸಿದಂತೆ ಏನೇನೋ ಮಾತನಾಡುವುದನ್ನು ನೋಡಿರಬಹುದು. ಅದು ನಮ್ಮ ವಿಚಾರಗಳನ್ನು ವರ್ಗೀಕರಿಸಿ, ಶ್ರೇಣೀಕರಿಸುವ ಕ್ರಿಯೆ.
ಇದು ಆರೋಗ್ಯಕರ ಮಗುವಿನ ಒಂದು ಲಕ್ಷಣ ಕೂಡ. ಮಗು ಯಾರ ಜತೆ ತಾನು ಹೇಗೆ ಮಾತನಾಡಬೇಕು, ಇಂಥ ಸ್ಥಿತಿಯಲ್ಲಿ ಯಾವಯಾವ ಶಬ್ದಗಳ ಉಚ್ಚಾರ ಹೇಗೆ ಮಾಡಬೇಕು ಇವೆಲ್ಲವನ್ನೂ ಮನದಟ್ಟು ಮಾಡಿಕೊಳ್ಳುವುದು ಈ ಸ್ವಗತ ಸಂಭಾಷಣೆಯಿಂದಲೇ. ವ್ಯಕ್ತಿತ್ವ ರೂಪುಗೊಳ್ಳುವುದು ಹತ್ತು ವರ್ಷದೊಳಗೆ ಎಂದಾದರೆ ಆ ರೂಪಿಸಿಕೊಳ್ಳುವ ಪ್ರಕ್ರಿಯೆ ಮುಖ್ಯ ಭಾಗವೇ ಸ್ವಗತ ಮಾತು.
ಆ ಸಂದರ್ಭದಲ್ಲಿ ಮಕ್ಕಳು ತಂದೆ, ತಾಯಿ, ಮನೆಯವರ ವ್ಯವಹಾರವನ್ನು ಎಲ್ಲಿಲ್ಲದ ಸೂಕ್ಷ್ಮತೆಯಿಂದ ಗ್ರಹಿಸುತ್ತವೆ. ಮನೆಯು ಮೊದಲ ಪಾಠಶಾಲೆ, ಮನೆಯವರೆಲ್ಲರೂ ಗುರುಗಳಾಗುವುದು ಹಾಗೆ. ಪಾಲಕರು ಮಗ್ಗಿ, ‘ಎಬಿಸಿಡಿ’ ಕಲಿಸುವುದಕ್ಕಿಂತ ಮೊದಲು ಅವ್ಯಕ್ತವಾಗಿ ರೂಪಿಸುವುದು ಮಕ್ಕಳ ವ್ಯಕ್ತಿತ್ವವನ್ನು. ಅಂಥ ಸಮಯದಲ್ಲಿ ಪ್ರಶಂಸೆ ಅಥವಾ ತೆಗಳುವಿಕೆ ಅಥವಾ ಯಾವುದೇ ಭಾವನೆ ಪಾಲಕರಲ್ಲಿ ತೀವ್ರವಾಗಿದ್ದರೆ ಅದು ಯಥಾವತ್ತು ಮಕ್ಕಳ ವ್ಯಕ್ತಿತ್ವದ ಭಾಗವಾಗುತ್ತದೆ.
ಏಕೆಂದರೆ ಅದೆಲ್ಲವೂ ಅವರ ಸ್ವಗತದ ಸರಕಾಗಿರುತ್ತದೆ. ಕ್ರಮೇಣ, ದೊಡ್ಡವರಾದಂತೆ, ವ್ಯಕ್ತಿತ್ವ ರೂಪುಗೊಳ್ಳುತ್ತಿದ್ದಂತೆ ಈ ಮಾತು ಆಂತರ್ಯವನ್ನು ಸೇರುತ್ತಾ ಹೋಗುತ್ತದೆ. ಸ್ವಗತವನ್ನು ಆಧುನಿಕ ಮನಃಶಾಸದಲ್ಲಿ ಸ್ಥೂಲವಾಗಿ ಮೂರ್ನಾಲ್ಕು ವಿಭಾಗವಾಗಿ ವಿಂಗಡಿಸಿ ನೋಡುವ ಪದ್ಧತಿ ಇದೆ. ಸಕಾರಾತ್ಮಕ, ನಕಾರಾತ್ಮಕ ಮತ್ತು ಸಹಜ ಮಾತು ಹೀಗೊಂದು ವರ್ಗೀಕರಣ ಇದೆ.
ಉದಾಹರಣೆಗೆ ‘ನಾನು ಇದನ್ನು ಮಾಡಬಲ್ಲೆ’ ಎಂದು ಕೆಲಸಕ್ಕೆ ಮೊದಲೇ ಹೇಳಿ ಕೊಳ್ಳುವುದು ಸಕಾರಾತ್ಮಕ. ‘ಅಯ್ಯೋ ಇದು ನನ್ನ ಹತ್ತಿರಸಾಧ್ಯವೇ ಇಲ್ಲ, ನಾನು ಉಪಯೋಗಕ್ಕೆ ಬಾರದವನು’ ಇತ್ಯಾದಿ ನಕಾರಾತ್ಮಕ. ‘ಕೆಲಸದಿಂದ ಮರಳುವಾಗ ಇವತ್ತು ಕೊತ್ತಂಬರಿ ಸೊಪ್ಪು ತರಬೇಕು’ ಇದು ನಿರ್ಲಿಪ್ತ. ನಮಗೆ ನಾವೇ ಮಾತನಾಡಿಕೊಳ್ಳುವಾಗ ನೇರವಾಗಿ ನಮ್ಮನ್ನೇ ಉದ್ದೇಶಿಸಿ ಮಾತನಾಡುವುದು ಒಂದು ಬಗೆ. ನಮ್ಮನ್ನೇ ನಾವು ಎರಡನೇ ವ್ಯಕ್ತಿಯಂತೆ ಕರೆದು ಮಾತನಾಡುವುದು ಎರಡನೇ ಬಗೆ.
ವಿರಾಟ್ ಕೊಹ್ಲಿಯು ‘ಈ ಬಾಲ್‌ಗೆ ಸಿಕ್ಸ್ ಹೊಡೆಯುತ್ತೇನೆ’ ಎಂದು ಹೇಳಿಕೊಳ್ಳುವುದು ಮೊದಲನೆಯ ರೀತಿ. ಕೊಹ್ಲಿ ತನಗೆ ತಾನೇ ‘ವಿರಾಟ್, ನೀನು ಈ ಬಾಲ್‌ಗೆ ಸಿಕ್ಸರ್ ಹೊಡೆಯ ಬೇಕು’ ಎಂದು ತನ್ನಿಂದ ಪ್ರತ್ಯೇಕಿಸಿ ಹೇಳುವುದು ಎರಡನೇ ರೀತಿ. ಈ ಎರಡನೇ ರೀತಿ ಹೆಚ್ಚು ಪರಿಣಾಮಕಾರಿ.
ವ್ಯಕ್ತಿತ್ವ ವಿಕಸನದ ಲೇಖನಗಳಲ್ಲಿ, ಸೋಷಿಯಲ್ ಮೀಡಿಯಾದಲ್ಲಿ, ಪುಸ್ತಕಗಳಲ್ಲಿ ಎಲ್ಲರೂ ಹೇಳುವುದು ‘ಸಕಾರಾತ್ಮಕವಾಗಿ ಯೋಚಿಸಿ’ ಅಂತ. ಅವರೆಲ್ಲರದೂ ಒಂದೇ
ಸಿದ್ಧಸೂತ್ರ- ‘ಬಿ ಪಾಸಿಟಿವ್’. ಅದೇನೋ ಒಂದು ರಕ್ತಪ್ರಕಾರ ದಂತೆ, ಅದನ್ನು ಮಾಡಿ ಬಿಟ್ಟರೆ ಎಲ್ಲವು ಸಲೀಸಾಗುತ್ತದೆ, ಯಶಸ್ಸು ತಾನಾಗಿಯೇ ಬರುತ್ತದೆ ಇತ್ಯಾದಿ. ವ್ಯಕ್ತಿತ್ವ ವಿಕಸನ ಸಂಬಂಧಿತ ಯಾವ ಭಾಷಣವನ್ನೇ ಕೇಳಿ- ಅವರದ್ದೆಲ್ಲ ಇದೇ- ಆಛಿ Pಟoಜಿಠಿಜಿqಛಿ! ಅಂಥ ಭಾಷಣಕಾರರೆಲ್ಲ ‘ಸಕಾರಾತ್ಮಕವಾಗಿ ಯೋಚಿಸಿ’ ಎಂದಷ್ಟೇ ಹೇಳುವುದು. ಯಾವತ್ತೂ ಕೇವಲ ಸಕಾರಾತ್ಮಕವಾಗಿ ಮಾತ್ರ ಯೋಚಿಸುವುದು ಹೇಗೆ ಎಂಬ ಪ್ರಶ್ನೆಯನ್ನು ಅವರೆಂದೂ ಪರಿಗಣಿಸುವುದೇ ಇಲ್ಲ.
ಏಕೆಂದರೆ ಅದಕ್ಕೆ ಉತ್ತರ ಸುಲಭದ್ದಲ್ಲ. ಏನೇ ಇರಲಿ, ಅಂಥ ಭಾಷಣ ಕೇಳಿದಾಕ್ಷಣ ನಮಗೂ ಆಛಿಜ್ಞಿಜ Pಟoಜಿಠಿಜಿqಛಿ ಎಲ್ಲವಕ್ಕೂ ಪರಿಹಾರ ಎಂದೆನಿಸಿಬಿಡುತ್ತದೆ. ಆದರೆ ನಿರಂತರ ಸಕಾರಾತ್ಮಕ ವಾಗಿಯೇ ಯೋಚಿಸುವುದು, ಸ್ವಗತ ಮಾತನಾಡಿಕೊಳ್ಳುವುದು ಕಾರ್ಯತಃ ಯಾರಲ್ಲಿಯೂ ಸಾಧ್ಯವೇ ಇಲ್ಲ. ಅದು ನಮ್ಮ ಮನಸ್ಸಿನ ಮೂಲ ಸ್ವರೂಪಕ್ಕೆ ವಿರುದ್ಧವಾದದ್ದು. ಅದು ಪ್ರವಾಹಕ್ಕೆ ವಿರುದ್ಧವಾಗಿ ಈಜಿದಂತೆ. ಇದು ಏಞZ ಐoಠಿಜ್ಞ್ಚಿಠಿಗೆ ಸಂಬಂಧಿಸಿದ ವಿಷಯ.
ನಾವು ಸಕಾರಾತ್ಮಕವಾಗಿ ಸ್ವಗತ ಮಾತನಾಡಿಕೊಳ್ಳುವುದು ಎಷ್ಟು ಮುಖ್ಯವೋ ಅಷ್ಟೇ
ಮುಖ್ಯ ನಕಾರಾತ್ಮಕ ಯೋಚನೆಗಳು. ನಕಾರಾತ್ಮಕ ವಿಚಾರಗಳು ಕಷ್ಟ ಕಾಲಕ್ಕೆ ಆಗಿ ಬರುವ ತಾಲೀಮುಗಳು. ಸಕಾರಾ ತ್ಮಕವೋ, ನಕಾರಾತ್ಮಕವೋ, ಅಲಿಪ್ತವೋ ಎಲ್ಲವೂ ಸಮಪಾಲಿನಲ್ಲಿದ್ದರೆ ಮಾತ್ರ ಅಂದು ಸಮತೋಲನ ಮೂಡಲು ಸಾಧ್ಯ. ಅತಿಯಾದ ಸಕಾರಾತ್ಮಕತೆಯು ಅತಿಯಾದ ನಕಾರಾತ್ಮಕತೆಯಷ್ಟೇ ಕೆಟ್ಟದ್ದು. ಹಾಗಾದರೆ ಯಾವುದೇ ಒಂದು ಲೆಕ್ಕ ಮೀರಿದರೆ, ಹದ ತಪ್ಪಿದರೆ ಗುರುತಿಸುವುದು ಹೇಗೆ? ಸಮತೋಲನದ ಸೈಕಲ್ಲಿನ ಸವಾರಿ ಹೇಗೆ ಸಾಧ್ಯ? ನಮ್ಮ ಮಿದುಳು ಸ್ವಭಾವತಃ ಅತ್ಯಂತ ಆಲಸ್ಯದ್ದು.
ಅದು ಯಾವುದೇ ಪುನರಾವರ್ತನೆಯನ್ನು ಗ್ರಹಿಸುತ್ತಿದ್ದಂತೆಯೇ ತನ್ನ ಕೆಲಸವನ್ನು ನಿಲ್ಲಿಸಿ ಬಿಡುತ್ತದೆ. ತನಗೆ ತಾನೇ ಜಾಡ್ಯವನ್ನು ಆರೋಪಿಸಿಕೊಂಡುಬಿಡುತ್ತದೆ. ಈ ಮೊದಲು ಚಿಕ್ಕಮಕ್ಕಳ ಯೋಚನೆ ಶಬ್ದರೂಪವನ್ನು ಪಡೆಯುವುದರ ಬಗ್ಗೆ ಹೇಳಿದೆನಲ್ಲ. ಅದು ಅಂತರ್ಮುಖಿಯಾಗುವುದು ಮನುಷ್ಯಾವಸ್ಥೆಯ ಮುಂದಿನ ಹಂತ. ಅದರಾಚೆಯ ಹಂತವೇ ಜಾಡ್ಯ. ಕ್ರಮೇಣ ನಮ್ಮ ಅಂತರ್ಮುಖಿ ಮಾತುಗಳನ್ನು ನಮ್ಮದೇ ಮನಸ್ಸು ತಾತ್ಸಾರ ಮಾಡಲಿಕ್ಕೆ ಆರಂಭಿಸಿಬಿಡುತ್ತದೆ. ಕ್ರಮೇಣ ನಾವು ನಮ್ಮದೇ ಮಾತನ್ನು ಕೇಳಿಸಿ ಕೊಳ್ಳುವುದನ್ನೇ ನಿಲ್ಲಿಸಿಬಿಡುತ್ತೇವೆ.
ಹೇಳಿದ್ದನ್ನೇ ಹೇಳುವವರ ಮಾತನ್ನು ಕಿವಿ ತೆರೆದೇ ಕೇಳಿಸಿಕೊಳ್ಳದಿರುವಂತೆ, ನಮ್ಮದೇ ಮಾತು ಕ್ರಮೇಣ ನಮಗೆ ಕೇಳಿಸದಾಗುತ್ತದೆ. ಅದುವೇ ಅಸಲಿ ಸಮಸ್ಯೆ. ನಾವು ನಮ್ಮ ಮಾತನ್ನು ಅಲಕ್ಷಿಸಿದಷ್ಟೂ ಅವು ಚಿತ್ರವಿಚಿತ್ರ ಭಾವನೆಗಳಾಗಿ ಅನ್ಯರೂಪವನ್ನು ಪಡೆಯುತ್ತವೆ.
ಮೊದಲು ನಮ್ಮ ಮಾತನ್ನು ಸಮಾಧಾನವಾಗಿ ಕೂತು ಕೇಳಿಸಿಕೊಳ್ಳಬೇಕು. ಕೇಳಿಸಿ ಕೊಳ್ಳುವುದೆಂದರೆ ಪ್ರeಪೂರ್ವಕವಾಗಿ. ಯಾವುದೇ ವಿಚಾರವೇ ಇರಲಿ, ಅದನ್ನು ಪೂರ್ಣ ಪ್ರeಯಿಂದ ಗ್ರಹಿಸುವುದು ಇದೆಲ್ಲದರ ಮೊದಲನೇ ಹಂತ. ನಾವು ನಮ್ಮಷ್ಟಕ್ಕೇ ಮಾತನಾಡಿ ದರಷ್ಟೇ ಮುಗಿಯಲಿಲ್ಲ. ಅಥವಾ ಮಾತನಾಡುವುದನ್ನೇ ಸಂಪೂರ್ಣ ನಿಲ್ಲಿಸಿಬಿಡುವುದೂ
ಪರಿಹಾರವಲ್ಲ. ನಾವು ಮಾತನಾಡಿದ್ದನ್ನು ನಾವೇ ಕೇಳಿಸಿ ಕೊಳ್ಳುವುದು. ಆಗ ಮಾತ್ರ ನಾವು ನಮಗೆ ಅರ್ಥವಾಗುತ್ತೇವೆ.
ನಮ್ಮ ಯೋಚನೆಗಳ ರೀತಿ ನೀತಿ- ‘ಅಂತ್ ಪಾರ್’ ಹತ್ತುವುದೇ ನಮ್ಮ ಮಾತನ್ನು ನಾವು ಕಿವಿಕೊಟ್ಟು ಕೇಳಿದಾಗ. ನೀವು ಯಾರದೋ ಜತೆಯಲ್ಲಿ ಮಾತನಾಡುತ್ತಿದ್ದೀರಿ ಎಂದಿಟ್ಟು ಕೊಳ್ಳಿ. ಮಾತನಾಡುವಾಗ ಅವರು ತಮ್ಮ ಮೊಬೈಲ್ ನೋಡುತ್ತಿದ್ದರೆ ಅಥವಾ ಇನ್ನೊಂದು ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರೆ ನಮ್ಮಲ್ಲಿ ಅಸಹನೆ ಹುಟ್ಟುತ್ತದೆ ಅಲ್ಲವೇ? ಅದು ಸ್ವಗತದ ಮಾತಿಗೂ ಲಾಗುವಾಗುವ ವಿಷಯ.
ಸ್ವಗತವೆಂದರೆ ನಮಗೆ ನಾವೇ ಮಾತನಾಡಿಕೊಳ್ಳುವುದರಿಂದ ಕೇಳುವುದು ಕೂಡ ನಾವೇ ಆಗಬೇಕಾದದ್ದು ಅನಿವಾರ್ಯ. ನಮ್ಮನ್ನು ನಾವು ಲಕ್ಷ್ಯ ಕೊಟ್ಟು ಕೇಳಿಸಿಕೊಂಡಾಗ ಮಾತ್ರ ನಮಗೆ ನಾವು ಕೈಗೆಟಕುವುದು. ನಮ್ಮ ಸಮಸ್ಯೆಗಳಿಗೆ, ಮನಸ್ಸಿನ ನಕಾರಾತ್ಮಕ ವಿಚಾರಗಳಿಗೆ ಉತ್ತರಿಸಿಕೊಳ್ಳುವುದು, ಪರಿಹಾರ ಸೂಚಿಸಿ ಕೊಳ್ಳುವುದು ಇವೆಲ್ಲ ಆಮೇಲಿನ ಮಾತು. ಮೊದಲು ಪೂರ್ಣ ಲಕ್ಷ್ಯದಿಂದ ಕೇಳಿಸಿಕೊಳ್ಳುವುದು. ನಮ್ಮದೇ ಮಾತನ್ನು ಕೇಳುವುದು ಸುಲಭದ ಪ್ರಕ್ರಿಯೆಯಲ್ಲ. ಸುಮ್ಮನೆ ಕೂತು ಒಂದು ಕ್ಷಣ ಏನು ನಡೆಯುತ್ತಿದೆ ಎಂದು ಯೋಚಿಸುವುದು ಕಷ್ಟವಷ್ಟೇ ಅಲ್ಲ, ಅದೊಂದು ತ್ರಾಸಿನ ವಿಷಯ.
ಯಾವುದೊ ಒಂದು ವಿಚಾರ ಬಹಳ ರಗಳೆಯೆನಿಸುತ್ತಿದ್ದರೆ ಅದರ ಬಗ್ಗೆ ಯೋಚಿಸುವುದೇ ಹಿಂಸೆಯೆನಿಸುತ್ತದೆ. ಆದರೆ ನಮ್ಮ ಒಳಮಾತನ್ನು ನಿತ್ಯ ಒಂದಿಷ್ಟು ಹೊತ್ತು ಸಮಾಧಾನ ದಿಂದ ಎದುರಿಸಲೇಬೇಕು. ಒಳಮಾತನ್ನು ಬಹುಕಾಲದಿಂದ ಅಲಕ್ಷಿಸಿದಲ್ಲಿ ಒಮ್ಮೆಲೇ ಎದುರಿಸುವುದು ಸುಲಭವಲ್ಲವೇ ಅಲ್ಲ. ಸುಮ್ಮನೆ ಕೂತು ಅಂತರ್ಮುಖಿಯಾದರೆ ನಕಾರಾತ್ಮಕ ವಿಚಾರಗಳೇ ತಾಂಡವವಾಡುತ್ತವೆ.
ಅದು ಸಹಜ ಮತ್ತು ಪ್ರಾಕೃತಿಕ. ಅಂಥ ವಿಚಾರಗಳ ಮೂಲಕ್ಕೆ ಹೋಗಿ, ಯೋಚಿಸಿ, ಸ್ವಗತ ಚರ್ಚಿಸಿದಲ್ಲಿ ಮಾತ್ರ ಅವು ಶಾಂತವಾಗಬಲ್ಲವು. ಅದನ್ನು ಬಿಟ್ಟು- ‘ಇನ್ನು ಮೇಲೆ ನಾನು ಎಲ್ಲವನ್ನೂ ಪಾಸಿಟಿವ್ ಆಗಿಯೇ ವಿಚಾರಮಾಡುವುದು’ ಎಂದು ನಮ್ಮೊಳಗಿನ ನೆಗೆಟಿವ್ಮಾ ತುಗಳನ್ನು ಅಲಕ್ಷಿಸುವುದು ತಾತ್ಕಾಲಿಕ ಅನಸ್ತೇಶಿಯಾ (ಅರಿವಳಿಕೆ) ಕೊಟ್ಟುಕೊಂಡಂತೆ. ಇಂದಲ್ಲ ನಾಳೆ ಆ ನೋವಿನ ಅನುಭವವಾಗಿಯೇ ಆಗುತ್ತದೆ.
ಕೇಳಿಸಿಕೊಳ್ಳುವುದೆಂದರೆ ನಾವು ಮಾಡಿಕೊಂಡು ಬಂದ ವಿಚಾರ ಪಲಾಯನವನ್ನು ನಿಲ್ಲಿಸುವುದು. ನಮ್ಮದೇ ಯೋಚನೆ, ವಿಚಾರಗಳು ಹಿತವಾಗಿಲ್ಲ ಎಂಬ ಕಾರಣಕ್ಕೆ ತಪ್ಪಿಸಿ
ಕೊಂಡು ಓಡಾಡುವುದನ್ನು ಖೈದು ಮಾಡುವುದು. ಸ್ವಗತ ಮಾತೆಂದರೆ ಅದು ಅಂತರ್ಮುಖಿ ವಕಾಲತ್ತು. ಅಲ್ಲಿ ಡಿಫೆಂಡೆಂಟ್, ಪಬ್ಲಿಕ್ ಪ್ರಾಸಿಕ್ಯೂಟರ್, ನ್ಯಾಯಾಧೀಶ
ಎಲ್ಲರೂ ಖುದ್ದು ನಾವೇ. ಒಳ್ಳೆಯ ನ್ಯಾಯಾಧೀಶನೆಂದರೆ ಮೊದಲು ಪರ-ವಿರೋಧವನ್ನು ಸಮಚಿತ್ತದಿಂದ ಕೇಳಿಸಿ ಕೊಳ್ಳಬೇಕು. ಆಗ ಮಾತ್ರವೇ ಸರಿಯಾದ ತೀರ್ಪು ಸಾಧ್ಯ.
ಅಂತರ್ಮುಖಿ ವಾದ-ಪ್ರತಿವಾದದಲ್ಲಿ ಪರಿಹಾರ ಕೊನೆಯಲ್ಲಿ. ಪರಿಹಾರವೇ ಉದ್ದೇಶವಾಗ ಬೇಕೆಂದೂ ಇಲ್ಲ. ಸರಿಯಾಗಿ ಕೇಳಿಸಿಕೊಂಡರೆ ಹೆಚ್ಚಿನವು ಹಾಗೆಯೇ ಪರಿಹಾರವಾಗಿ ಬಿಡುತ್ತವೆ. ಅದಾಗಿಯೂ ಉಳಿದುಕೊಂಡರೆ- ಆ ಯೋಚನೆ ನಮ್ಮಲ್ಲಿ ಹುಟ್ಟುಹಾಕುವ ಭಾವಗಳನ್ನು ಗ್ರಹಿಸುವುದು ಮುಂದಿನ ಹಂತ. ಸಿಟ್ಟು, ನಿಸ್ಸಹಾಯಕತೆ, ಬೇಸರ, ಅಸೂಯೆ ಇಂಥದ್ದೆಲ್ಲವನ್ನೂ ಒಬ್ಬ ನ್ಯಾಯಾಧೀಶನಂತೆ, ಮೂರನೇ ವ್ಯಕ್ತಿಯಂತೆ ನೋಡುವುದು. ಇದು ಜಾಗೃತ ಅಭ್ಯಾಸದಿಂದ ಸುಲಭ ಸಾಧ್ಯ. ಸಿಟ್ಟಾಗಲಿ, ದ್ವೇಷವಾಗಲಿ- ಯಾವುದೇ ಭಾವವನ್ನು ಹತ್ತಿಕ್ಕುವುದು ಪರಿಹಾರವಲ್ಲ.
ಏಕೆಂದರೆ ಅಂಥ ಕೆಲಸಕ್ಕೆ ಮುಂದಾದರೆ ಅದು ಕೃತ್ರಿಮವಾಗುತ್ತದೆ. ಯಾವುದೇ ಕೃತ್ರಿಮ ವನ್ನು ನಿರಂತರ ಮಾಡಲಿಕ್ಕಾಗುವುದಿಲ್ಲ. ಬದಲಿಗೆ ನಮ್ಮ ಕೇಳುವಿಕೆಯನ್ನು ಇನ್ನಷ್ಟು
ಆಳಕ್ಕೆ ಒಯ್ಯುತ್ತಿದ್ದಂತೆ ಪರಿಹಾರ, ಸಮಸ್ಯೆಗೊಂದು ಶಾಶ್ವತ ಅಂತ್ಯ ಸಾಧ್ಯವಾಗುತ್ತದೆ. ನಮ್ಮ ಸ್ವಗತ ಮಾತು ಸಕಾರಾತ್ಮಕವೋ, ನಕಾರಾತ್ಮಕವೋ, ಅದು ಹುಟ್ಟಿರುವುದು ನಮ್ಮಲ್ಲಿಯೇ.
ಅದನ್ನು ಕೇಳಿಸಿ ಕೊಳ್ಳಬೇಕಾದವರೂ ನಾವೇ. ಸರಿಯಾಗಿ ಕೇಳಿಸಿಕೊಳ್ಳದೇ ‘ನಾನು ಯಾವತ್ತೂ ಪಾಸಿಟಿವ್’ ಎಂದು ಅದುಮಿಟ್ಟು ಕೊಂಡಷ್ಟು ಅದೊಂದು ಹುಣ್ಣಿನಂತೆ ಕಾಡುತ್ತದೆ. ಬದಲಿಗೆ ‘ಏನು ವಿಷಯ?’ ಎಂದು ಪ್ರಶ್ನಿಸಿಕೊಂಡರೆ, ನಕಾರಾತ್ಮಕ ವಿಚಾರ ಗಳಿಗೆ ಕೊಡಬೇಕಾದ ಮರ್ಯಾದೆ ಕೊಟ್ಟು ಸಮಾಧಾನ ಮಾಡಿದರೆ ಕೊನೆಯಲ್ಲಿ ಅನಿ ವಾರ್ಯವಾಗಿ ಸಕಾರಾತ್ಮಕ ಮಾತು, ವಿಚಾರಗಳಷ್ಟೇ ಉಳಿದುಕೊಳ್ಳುತ್ತವೆ. ಧ್ಯಾನ ಇದಕ್ಕೆ ಪೂರಕ.
ಇದನ್ನೂ ಓದಿ: Shishir Hegde Column: ಸಮತೋಲನದ ಸಮಾಜಕ್ಕೆ ವೇಶ್ಯಾವಾಟಿಕೆ