ಪ್ರಧಾನಿ ಮೋದಿ ಭೇಟಿಯಾದ ಟಿ20 ವಿಶ್ವಕಪ್ ಗೆದ್ದ ಮಹಿಳಾ ಅಂಧರ ಕ್ರಿಕೆಟ್ ತಂಡ
PM Modi: ‘ಚೊಚ್ಚಲ ಅಂಧ ಮಹಿಳಾ ಟಿ20 ವಿಶ್ವಕಪ್ ಗೆಲ್ಲುವ ಮೂಲಕ ಇತಿಹಾಸ ಸೃಷ್ಟಿಸಿದ ಭಾರತೀಯ ಅಂಧ ಮಹಿಳಾ ಕ್ರಿಕೆಟ್ ತಂಡಕ್ಕೆ ಅಭಿನಂದನೆಗಳು! ಸರಣಿಯಲ್ಲಿ ಅವರು ಅಜೇಯರಾಗಿ ಉಳಿದಿರುವುದು ಶ್ಲಾಘನೀಯ’ ಎಂದು ಪ್ರಧಾನಿ ಮೋದಿ ಎಕ್ಸ್‌ನಲ್ಲಿ ಬರೆದಿದ್ದಾರೆ.
ಭಾರತದ ಅಂಧ ಮಹಿಳಾ ಆಟಗಾರ್ತಿಯರಿಗೆ ಸಿಹಿ ತಿನ್ನಿಸಿದ ಮೋದಿ -
ನವದೆಹಲಿ, ನ.27: ಇತ್ತೀಚೆಗಷ್ಟೇ ಕೊಲಂಬೊದಲ್ಲಿ ನಡೆದ ಚೊಚ್ಚಲ ಚೊಚ್ಚಲ ಅಂಧರ ಟಿ20 ವಿಶ್ವಕಪ್ ಗೆದ್ದ ಭಾರತದ ಅಂಧ ಮಹಿಳೆಯರ ಕ್ರಿಕೆಟ್ ತಂಡ(Indian blind women's cricket team)ವನ್ನು ಪ್ರಧಾನಿ ನರೇಂದ್ರ ಮೋದಿ(PM Modi) ಗುರುವಾರ ಭೇಟಿಯಾದರು. ಆಟಗಾರ್ತಿಯರಿಗೆ ತಾವೇ ಸ್ವತಃ ಸಿಹಿ ತಿನಿಸಿ ಅವರ ಸಾಧನೆಯನ್ನು ಕೊಂಡಾಡಿದರು. ತಂಡದ ಸದಸ್ಯರು ಮೋದಿ ಅವರಿಗೆ ಹಸ್ತಾಕ್ಷರವಿರುವ ಬ್ಯಾಟ್ ಅನ್ನು ಉಡುಗೊರೆಯಾಗಿ ನೀಡಿದರು.
‘ಇದು ನಿಜಕ್ಕೂ ಐತಿಹಾಸಿಕ ಕ್ರೀಡಾ ಸಾಧನೆ, ಕಠಿಣ ಪರಿಶ್ರಮ, ತಂಡದ ಕೆಲಸ ಮತ್ತು ದೃಢಸಂಕಲ್ಪದ ಉಜ್ವಲ ಉದಾಹರಣೆ. ಪ್ರತಿಯೊಬ್ಬ ಆಟಗಾರ್ತಿಯೂ ಚಾಂಪಿಯನ್! ತಂಡದ ಭವಿಷ್ಯದ ಪ್ರಯತ್ನಗಳಿಗೆ ನನ್ನ ಶುಭಾಶಯಗಳು. ಈ ಸಾಧನೆಯು ಮುಂದಿನ ಪೀಳಿಗೆಗೆ ಸ್ಫೂರ್ತಿ ನೀಡುತ್ತದೆ’ಎಂದು ಮೋದಿ ಹೇಳಿದರು
‘ಚೊಚ್ಚಲ ಅಂಧ ಮಹಿಳಾ ಟಿ20 ವಿಶ್ವಕಪ್ ಗೆಲ್ಲುವ ಮೂಲಕ ಇತಿಹಾಸ ಸೃಷ್ಟಿಸಿದ ಭಾರತೀಯ ಅಂಧ ಮಹಿಳಾ ಕ್ರಿಕೆಟ್ ತಂಡಕ್ಕೆ ಅಭಿನಂದನೆಗಳು! ಸರಣಿಯಲ್ಲಿ ಅವರು ಅಜೇಯರಾಗಿ ಉಳಿದಿರುವುದು ಶ್ಲಾಘನೀಯ’ ಎಂದು ಪ್ರಧಾನಿ ಮೋದಿ ಎಕ್ಸ್‌ನಲ್ಲಿ ಬರೆದಿದ್ದಾರೆ.
It was a delight to host the Indian Blind Women’s Cricket Team that won the Blind Women’s T20 World Cup! They shared their experiences, which were very inspiring indeed. pic.twitter.com/ar6SuQWHC9
— Narendra Modi (@narendramodi) November 27, 2025
ಕೆಲ ದಿನಗಳ ಹಿಂದಷ್ಟೇ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಹಿಳಾ ತಂಡವನ್ನು ಸನ್ಮಾನಿಸಿದ್ದರು. ಜತೆಗೆ ತಂಡದ ನಾಯಕಿ, ತುಮಕೂರಿನ ಶಿರಾ ಮೂಲದ ದೀಪಿಕಾ ಅವರ ನಾಯಕತ್ವ ಮತ್ತು ಅದ್ಭುತ ಆಟ ಈ ಪಂದ್ಯಾವಳಿಯ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿತ್ತು ಎಂಬುದನ್ನು ಇದೇ ವೇಳೆ ಸ್ಮರಿಸಿ, ಶ್ಲಾಘಿಸಿದ್ದರು.
ಕರ್ನಾಟಕದ ಕ್ರಿಕೆಟ್ ಆಟಗಾರ್ತಿಯರಿಗೆ ತಲಾ ₹10 ಲಕ್ಷ ನಗದು ಬಹುಮಾನದ ಜೊತೆಗೆ ಸರ್ಕಾರಿ ಉದ್ಯೋಗ, ಹಾಗೆಯೇ ಭಾರತ ತಂಡದ ಇತರೆ ರಾಜ್ಯಗಳನ್ನು ಪ್ರತಿನಿಧಿಸುವ ತಂಡದ ಆಟಗಾರರಿಗೆ ತಲಾ ₹2 ಲಕ್ಷ ನಗದು ಬಹುಮಾನ ನೀಡಲಾಗುತ್ತದೆ. ಇದರಿಂದ ತಂಡದಲ್ಲಿದ್ದ ಇತರೆ ರಾಜ್ಯಗಳ 13 ಆಟಗಾರ್ತಿಯರಿಗೂ ತಲಾ ₹2 ಲಕ್ಷ ನಗದು ಬಹುಮಾನ ಘೋಷಿಸಿದ್ದರು.
ಇದನ್ನೂ ಓದಿ WPL 2026: ಡಬ್ಲ್ಯುಪಿಎಲ್ ಮೆಗಾ ಹರಾಜಿನ ಬಳಿಕ ತಂಡಗಳ ಪಟ್ಟಿ ಹೀಗಿದೆ
ಕೊಲಂಬೊದಲ್ಲಿ ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ ಭಾರತ ಏಳು ವಿಕೆಟ್‌ಗಳಿಂದ ನೇಪಾಳ ತಂಡವನ್ನು ಮಣಿಸಿ ಚಾರಿತ್ರಿಕ ಸಾಧನೆ ಮೆರೆದಿತ್ತು. 16 ಆಟಗಾರ್ತಿಯರ ತಂಡದಲ್ಲಿ ಕರ್ನಾಟಕದ ಮೂವರು ಸ್ಥಾನ ಪಡೆದಿದ್ದರು. ತುಮಕೂರಿನ ದೀಪಿಕಾ ಟಿ.ಸಿ. (ನಾಯಕಿ), ಕಾವ್ಯ ಎನ್.ಆರ್, ಶಿವಮೊಗ್ಗದ ರಿಪ್ಪನ್‌ಪೇಟೆಯ ಕಾವ್ಯ ವಿ. ಅವರು ತಂಡದಲ್ಲಿದ್ದರು.