'ಪಂದ್ಯಕ್ಕೂ ಮುನ್ನ ಅಮ್ಮನಿಗೆ ಫೋನ್ ಮಾಡಿ ಅತ್ತಿದ್ದೆ: ಜೆಮಿಮಾ ರೊಡ್ರಿಗಸ್!
ಮುಂಬೈನ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ನಡೆದಿದ್ದ ಮಹಿಳಾ ವಿಶ್ವಕಪ್ ಸೆಮಿಫೈನಲ್ ಪಂದ್ಯದಲ್ಲಿ ಭಾರತ ತಂಡ, ಆಸ್ಟ್ರೇಲಿಯಾ ವಿರುದ್ಧ ಗೆದ್ದು ಫೈನಲ್‌ಗೆ ಅರ್ಹತೆ ಪಡೆದುಕೊಂಡಿತು. ಭಾರತದ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದ ಜೆಮಿಮಾ ರೊಡ್ರಿಗಸ್, ತಮ್ಮ ತಾಯಿಗೆ ಕರೆ ಮಾಡಿದ್ದ ಪ್ರಸಂಗವನ್ನು ನೆನಪು ಮಾಡಿಕೊಂಡಿದ್ದಾರೆ.
ತಾವು ಎದುರಿಸಿದ ಮಾನಸಿಕ ಸವಾಲುಗಳನ್ನು ಬಹಿರಂಗಪಡಿಸಿದ ಜೆಮಿಮಾ ರೊಡ್ರಿಗಸ್. -
ಮುಂಬೈ: ಆಸ್ಟ್ರೇಲಿಯಾ ವಿರುದ್ಧದ ಮಹಿಳಾ ಏಕದಿನ ವಿಶ್ವಕಪ್ (Women world Cup 2025) ಸೆಮಿಫೈನಲ್ ಪಂದ್ಯದಲ್ಲಿ ಜೆಮಿಮಾ ರೊಡ್ರಿಗಸ್ (Jemimah Rodrigue) ಅವರ ಅಜೇಯ ಶತಕದ ನೆರವಿನಿಂದ ಭಾರತ (India) ತಂಡ, 5 ವಿಕೆಟ್ ಗೆಲುವು ಸಾಧಿಸಿತು. ಆ ಮೂಲಕ ಫೈನಲ್‌ಗೆ ಪ್ರವೇಶ ಮಾಡಿತು. 239 ರನ್‌ಗಳ ಗುರಿಯನ್ನು ಹಿಂಬಾಲಿಸಿದ ಭಾರತ ತಂಡದ ಪರ ಜೆಮಿಮಾ ಅಜೇಯ 127 ರನ್‌ಗಳನ್ನು ಕಲೆ ಹಾಕಿ ಭಾರತವನ್ನು ಗೆಲ್ಲಿಸಿದ್ದರು ಹಾಗೂ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಪಂದ್ಯದ ಬಳಿಕ ಮಾತನಾಡಿದ ರೋಡ್ರಿಗಸ್, ತಮ್ಮ ಮಾನಸಿಕ ಹೋರಾಟವನ್ನು ಬಹಿರಂಗಪಡಿಸಿದ್ದಾರೆ. ಪಂದ್ಯಕ್ಕೂ ಮುನ್ನ ನನ್ನಲ್ಲಿ ಆತಂಕವಿತ್ತು. ಕೆಲವೊಮ್ಮೆ ನನ್ನ ತಾಯಿಗೆ ಕರೆ ಮಾಡಿ ಅತ್ತಿದ್ದೆನೆಂದು ಅವರು ಹೇಳಿಕೊಂಡಿದ್ದಾರೆ.
ಪಂದ್ಯ ಮುಗಿದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಜೆಮಿಮಾ ರೊಡ್ರಿಗಸ್, "ಈ ವಿಷಯವನ್ನು ಬಹಿರಂಗವಾಗಿ ಹೇಳುವುದರಿಂದ ಇತರರು ಸಹ ಇದೇ ರೀತಿಯ ಸಂಕಷ್ಟವನ್ನು ಎದುರಿಸುತ್ತಿದ್ದರೆ, ಅವರಿಗೆ ಪ್ರೇರಣೆ ಸಿಗಬಹುದು ಎಂದು ಆಶಿಸುತ್ತೇನೆ. ಟೂರ್ನಿಯ ಆರಂಭದಲ್ಲಿ ನಾನು ಆತಂಕದಿಂದ ತುಂಬಾ ಹೆದರಿದ್ದೆ. ಕೆಲವೊಮ್ಮೆ ಪಂದ್ಯಕ್ಕೂ ಮುನ್ನ ತಾಯಿಗೆ ಕರೆ ಮಾಡಿ ಅತ್ತಿದ್ದೆ. ಏನು ಮಾಡಬೇಕೆಂದು ಗೊತ್ತಾಗದೇ ಕೆಲವೊಮ್ಮೆ ಗೊಂದಲಕ್ಕಿಡಾಗಿದ್ದೆ. ಈ ಸಮಯದಲ್ಲಿ ನನ್ನ ತಾಯಿ, ತಂದೆ ಮತ್ತು ಅರುಂಧತಿ ಅವರು ನನಗೆ ಧೈರ್ಯ ತುಂಬಿದರು," ಎಂದು ಹೇಳಿದರು.
"ಸ್ಮೃತಿ ಮಂಧಾನಾ, ರಾಧಾ ಯಾದವ್ ಅವರಂತಹ ಸ್ನೇಹಿತರು ನನ್ನೊಡನೆ ಇದ್ದರು. ಕೆಲವೊಮ್ಮೆ ಸ್ಮೃತಿ ಕೇವಲ ನನ್ನ ಹತ್ತಿರ ನಿಂತಿದ್ದರೂ ನನಗೆ ಆ ಧೈರ್ಯ ಸಿಕ್ಕಿತು. ನನ್ನ ಗೆಳತಿಯರು ನನಗೆ ಕುಟುಂಬದವರಂತೆ ಇದ್ದರು. ಸಹಾಯ ಕೇಳುವುದರಲ್ಲಿ ತಪ್ಪಿಲ್ಲ," ಎಂದು ತಿಳಿಸಿದ್ದಾರೆ.
INDW vs AUSW: ಭಾರತ ತಂಡವನ್ನು ಗೆಲ್ಲಿಸಿ ಜೀಸಸ್‌ಗೆ ಥ್ಯಾಂಕ್ಸ್ ಹೇಳಿ ಕಣ್ಣೀರಿಟ್ಟ ಜೆಮಿಮಾ ರೊಡ್ರಿಗಸ್!
ಜೆಮಿಮಾ ರೊಡ್ರಿಗಸ್ ಟೂರ್ನಿಯ ಆರಂಭದಲ್ಲಿ ರನ್ ಬರ ಎದುರಿಸಿದರು. ಎರಡು ಪಂದ್ಯಗಳಲ್ಲಿ ಶೂನ್ಯಕ್ಕೆ ಔಟಾಗಿ ತೀರಾ ಸಂಕಷ್ಟ ಎದುರಿಸಿದರು. ಇದಾದ ಬಳಿಕ ಇಂಗ್ಲೆಂಡ್ ವಿರುದ್ಧದ ಪಂದ್ಯಕ್ಕೆ ಅವರನ್ನು ತಂಡದಿಂದ ಹೊರಗಿಟ್ಟರೂ, ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಅಜೇಯ 76 ರನ್ ಬಾರಿಸಿ ಫಾರ್ಮ್ ಗೆ ಮರಳಿದರು. ಸೆಮಿಫೈನಲ್‌ನಲ್ಲಿ ಅದೇ ಲಯವನ್ನು ಮುಂದುವರಿಸಿ ಕಾಂಗರೂ ಮಹಿಳಾ ಪಡೆಯ ವಿರುದ್ಧ ಅಜೇಯ ಶತಕ ಬಾರಿಸಿ ಟೀಮ್ ಇಂಡಿಯಾ ಸೆಮಿ ಫೈನಲ್ ತಲುಪಲು ನಿರ್ಣಾಯಕ ಪಾತ್ರ ವಹಿಸಿದರು.
ನವಿ ಮುಂಬೈನ ಡಿವೈ ಪಾಟೀಲ್ ಕ್ರಿಕೆಟ್ ಮೈದಾನದಲ್ಲಿ ನಡೆದಿದ್ದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ್ದ ಆಸ್ಟ್ರೇಲಿಯಾ, ಭಾರತಕ್ಕೆ 339 ರನ್‌ಗಳ ಬೃಹತ್ ಸವಾಲಿನ ಗುರಿ ನೀಡಿತು. ದೊಡ್ಡ ಮೊತ್ತದ ಗುರಿ ಬೆನ್ನತ್ತಿದ ಭಾರತ ತಂಡದ ಆಟಗಾರ್ತಿಯರು ಆಸೀಸ್ ವಿರುದ್ಧ ಸ್ಮರಣೀಯ ಪ್ರದರ್ಶನ ನೀಡಿದರು. ಈ ಮೂಲಕ ಪಂದ್ಯದಲ್ಲಿ ಗೆಲುವು ಸಾಧಿಸಿ ಗುಂಪು ಹಂತದ ಪಂದ್ಯದಲ್ಲಿನ ಸೋಲಿಗೆ ಸೇಡು ತೀರಿಸಿಕೊಂಡಿದ್ದು, ಫೈನಲ್‌ನಲ್ಲಿ ವಿಶ್ವಕಪ್ ಟ್ರೋಫಿಗಾಗಿ ಭಾರತ ತಂಡ ದಕ್ಷಿಣ ಆಫ್ರಿಕಾವನ್ನು ಎದುರಿಸಲಿದೆ.
Jemimah Rodrigues ವಿಶ್ವಕಪ್ ಸೆಮಿಯಲ್ಲಿ ಭಾರತ ಗೆಲುವಿಗೆ ಕಾರಣವಾದ ಜೆಮಿಮಾ ಮಂಗಳೂರು ಮೂಲದ ಹುಡುಗಿ!
ಗಂಭೀರ್ ದಾಖಲೆ ಮುರಿದ ಜೆಮಿಮಾ
ಆಸೀಸ್ ವಿರುದ್ಧದ ನಿರ್ಣಾಯಕ ಸೆಮಿಫೈನಲ್ ಪಂದ್ಯದಲ್ಲಿ ಜೆಮಿಮಾ ರೋಡ್ರಿಗಸ್ ಅವರ ಅಜೇಯ 127 ಶತಕದಿಂದಾಗಿ, ವಿಶ್ವಕಪ್ ನಾಕೌಟ್ ಪಂದ್ಯದಲ್ಲಿ ಭಾರತದ ಪರ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟರ್ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇಲ್ಲಿಯವರೆಗೆ, ಟೀಮ್ ಇಂಡಿಯಾ ಹೆಡ್ ಕೋಚ್ ಗೌತಮ್ ಗಂಭೀರ್ ಅವರ ಹೆಸರಿನಲ್ಲಿ ಈ ದಾಖಲೆ ಇತ್ತು. ಅವರು 2011 ರ ಶ್ರೀಲಂಕಾ ವಿರುದ್ಧದ ಏಕದಿನ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಗಂಭೀರ್ 97 ರನ್ ಬಾರಿಸಿದ್ದರು. ಈಗ ಜೆಮಿಮಾ ಭರ್ಜರಿ ಶತಕ ಬಾರಿಸಿ ಗಂಭೀರ್ ಅವರ ದಾಖಲೆಯನ್ನು ಮುರಿದಿದ್ದಾರೆ.