K V Chandramouli Column: ನೈಜ ಮತದಾರರನ್ನು ಕಳೆದುಕೊಳ್ಳಬಾರದು
ಲೇಖಕರ ಅಭಿಪ್ರಾಯದಲ್ಲಿ ಎಸ್ ಐಆರ್‌ನ ಅನುಷ್ಠಾನದಲ್ಲಿನ ದೋಷಗಳನ್ನು ಪ್ರಶ್ನಿಸುವುದು ಮುಖ್ಯವಾಗಿದೆ. ಆ ದೃಷ್ಟಿಯಿಂದ ಲೇಖನದಲ್ಲಿ ವ್ಯಕ್ತವಾಗಿರುವ ಬಹುತೇಕ ಆತಂಕಗಳು ಸಂಪೂರ್ಣ ಸಮರ್ಥನೀಯವಾಗಿವೆ. ನನ್ನ ಅನುಭವವೇ ಲೇಖಕರ ಆತಂಕಕ್ಕೆ ಸಾಕ್ಷಿ. ಲೇಖಕರು ಹಿರಿಯ ನಾಗರಿಕರು ಹಾಗೂ ನೈಜ ಮತದಾರರು ಎಸ್‌ಐಆರ್ ಪ್ರಕ್ರಿಯೆಯಲ್ಲಿ ಅನುಭವಿಸುತ್ತಿರುವ ತೊಂದರೆಗಳನ್ನು ವಿವರಿಸಿರು ವುದು ನನ್ನ ಸ್ವಂತ ಅನುಭವವನ್ನು ನೆನಪಿಸುತ್ತದೆ.
-
ಪ್ರತಿಕ್ರಿಯೆ
ಕೆ.ವಿ.ಚಂದ್ರಮೌಳಿ
ಲೋಕೇಶ್ ಕಾಯರ್ಗ ಅವರು ‘ಲೋಕಮತ’ ಅಂಕಣದಲ್ಲಿ ಬರೆದ ‘ಮತ ವಂಚಿತರೇ ದೇಶ ಬಿಟ್ಟು ತೆರಳಲು ಸಜ್ಜಾಗಿ!’ ಎಂಬ ಲೇಖನ ಓದಿದೆ. ಎಸ್‌ಐಆರ್ ಪ್ರಕ್ರಿಯೆಯಲ್ಲಿ ನೈಜ ಮತದಾರರು ಎದುರಿಸುತ್ತಿರುವ ಗಂಭೀರ ಸಮಸ್ಯೆಗಳನ್ನು ಲೇಖಕರು ಪರಿಣಾಮಕಾರಿಯಾಗಿ ಎತ್ತಿ ತೋರಿಸಿದ್ದಾರೆ.
ಲೇಖಕರ ಅಭಿಪ್ರಾಯದಲ್ಲಿ ಎಸ್ ಐಆರ್‌ನ ಅನುಷ್ಠಾನದಲ್ಲಿನ ದೋಷಗಳನ್ನು ಪ್ರಶ್ನಿಸುವುದು ಮುಖ್ಯವಾಗಿದೆ. ಆ ದೃಷ್ಟಿಯಿಂದ ಲೇಖನದಲ್ಲಿ ವ್ಯಕ್ತವಾಗಿರುವ ಬಹುತೇಕ ಆತಂಕಗಳು ಸಂಪೂರ್ಣ ಸಮರ್ಥನೀಯವಾಗಿವೆ. ನನ್ನ ಅನುಭವವೇ ಲೇಖಕರ ಆತಂಕಕ್ಕೆ ಸಾಕ್ಷಿ. ಲೇಖಕರು ಹಿರಿಯ ನಾಗರಿಕರು ಹಾಗೂ ನೈಜ ಮತದಾರರು ಎಸ್‌ಐಆರ್ ಪ್ರಕ್ರಿಯೆಯಲ್ಲಿ ಅನುಭವಿಸುತ್ತಿರುವ ತೊಂದರೆಗಳನ್ನು ವಿವರಿಸಿರು ವುದು ನನ್ನ ಸ್ವಂತ ಅನುಭವವನ್ನು ನೆನಪಿಸುತ್ತದೆ.
ನನ್ನ ಪತ್ನಿಯ ಹಾಗೂ ನನ್ನ ಹೆಸರು ಚಾಮುಂ ಡೇಶ್ವರಿ ವಿಧಾನಸಭಾ ಕ್ಷೇತ್ರದ ಮತದಾರರ ಪಟ್ಟಿಯಲ್ಲಿ ಇವೆ. ಆದರೆ ನನ್ನ ಪತ್ನಿಯ ಹೆಸರಿನ ಇನಿಷಿಯಲ್‌ಗೆ ಸಂಬಂಧಿಸಿ ನೋಟಿಸ್ ಜಾರಿ ಗೊಳಿಸಿ, ಶಾರದಾದೇವಿನಗರ ಕಾರ್ಪೊರೇ ಷನ್ ಕಚೇರಿಯಲ್ಲಿ ಮಧ್ಯಾಹ್ನ 12 ಗಂಟೆಯೊಳಗೆ ಖುzಗಿ ಹಾಜರಾಗುವಂತೆ ಸೂಚಿಸಲಾಗಿತ್ತು. ನನಗೆ 70 ವರ್ಷ ವಯಸ್ಸಾಗಿದೆ.
ಇದನ್ನೂ ಓದಿ: K V Chandramouli Column: ಕಾವೇರಿ: 2033ರ ಮರು ಪರಿಶೀಲನೆಗೆ ಕರ್ನಾಟಕ ಈಗಲೇ ಸಜ್ಜಾಗಬೇಕಿದೆ
ನನ್ನ ಪತ್ನಿ ಎರಡು ವರ್ಷಗಳಿಂದ ಬೆಂಗಳೂರಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೂ ಚುನಾವಣಾ ಪ್ರಾಧಿಕಾರದ ಸೂಚನೆಯನ್ನು ಗೌರವಿಸಿ, ಬಾಡಿಗೆಗೆ ಕಾರು ಮಾಡಿ ನಾವು ಬೆಳಿಗ್ಗೆ 10.30ಕ್ಕೆ ನಿಗದಿತ ಸ್ಥಳಕ್ಕೆ ಹಾಜರಾಗಿದ್ದೆವು. ಆದರೆ ಸಂಬಂಧಪಟ್ಟ ಅಧಿಕಾರಿ ಮಧ್ಯಾಹ್ನ 12.45ಕ್ಕೆ ಆಗಮಿಸಿದರು. ಈ ಸಂಪೂರ್ಣ ಅನನುಕೂಲತೆಯನ್ನು ಒಂದು ಸರಳ ವೀಡಿಯೊ ಕಾಲ್ ಮೂಲಕವೇ ತಪ್ಪಿಸಬಹುದಾಗಿತ್ತು. ನಾವು ಅಧಿಕಾರಿಗಳೊಂದಿಗೆ ಸಂಪೂರ್ಣವಾಗಿ ಸಹಕರಿಸಲು ಸಿದ್ಧರಾಗಿದ್ದೆವು.
ಅಗತ್ಯ ಮಾಹಿತಿ ನೀಡಲು ಅಥವಾ ದಾಖಲೆಗಳನ್ನು ತೋರಿಸಲು ಯಾವುದೇ ಹಿಂಜರಿಕೆಯಿರಲಿಲ್ಲ. ಆದರೂ ವಯಸ್ಸಾದ ನಾವು ಪ್ರಯಾಣಿಸಿ, ನನ್ನ ಪತ್ನಿಯ ಚಿಕಿತ್ಸೆಯ ನಡುವೆಯೂ ಕಚೇರಿಗೆ ತೆರಳಿ, ಎರಡು ಗಂಟೆ ಕಾಲ ಕಾಯಬೇಕಾಯಿತು. ಒಂದು ಹಂತದಲ್ಲಿ, ಇಂತಹ ಅನಗತ್ಯ ತೊಂದರೆಗೆ ಒಳಗಾಗುವುದಕ್ಕಿಂತ ನನ್ನ ಪತ್ನಿಯ ಮತದಾನದ ಹಕ್ಕನ್ನೇ ಬಿಟ್ಟುಕೊಡೋಣ ಎಂಬ ಆಲೋಚನೆ ಯೂ ಬಂದಿತ್ತು. ಆದರೆ ಮತದಾನದ ಹಕ್ಕು ಆಕೆಯ ಪ್ರಜಾಸತ್ತಾತ್ಮಕ ಹಕ್ಕು ಎಂಬ ಕಾರಣದಿಂದಲೂ, ಪ್ರಾಧಿಕಾರದ ಸೂಚನೆಯನ್ನು ಗೌರವಿಸಬೇಕೆಂಬ ಕಾರಣದಿಂದಲೂ, ಎಲ್ಲ ತೊಂದರೆ ಸಹಿಸಿಕೊಂಡೆವು.
ನಮ್ಮಂತಹ ವಯಸ್ಸಾದ ದಂಪತಿಗಳೇ ಇಂತಹ ತೊಂದರೆ ಅನುಭವಿಸಬೇಕಾದರೆ, ವಯೋ ವೃದ್ಧರು, ಚಿಕಿತ್ಸೆ ಪಡೆಯುತ್ತಿರುವವರು, ತಮ್ಮ ಕ್ಷೇತ್ರದಿಂದ ದೂರ ವಾಸಿಸುವವರು ಹಾಗೂ ದೈಹಿಕವಾಗಿ ಪ್ರಯಾಣಿ ಸಲು ಕಷ್ಟಪಡುವ ಲಕ್ಷಾಂತರ ಮತದಾರರ ಪರಿಸ್ಥಿತಿ ಹೇಗಿರಬಹುದು? ಮೃತರು, ಶಾಶ್ವತವಾಗಿ ಸ್ಥಳಾಂತರ ಗೊಂಡವರು, ನಕಲಿ ಹೆಸರುಗಳು ಮತ್ತು ದ್ವಂದ್ವ ನೋಂದಣಿ ಗಳನ್ನು ತೆಗೆದುಹಾಕುವುದು ಮುಕ್ತ ಹಾಗೂ ವಿಶ್ವಾಸಾರ್ಹ ಚುನಾವಣೆಗೆ ಅಗತ್ಯ. ಆದರೆ ಪಟ್ಟಿಯನ್ನು ಶುದ್ಧೀಕರಿಸುವುದು ಅಂದರೆ ಅರ್ಹ ಮತದಾರರನ್ನು ಹೊರಗಿಡುವುದಲ್ಲ.
ಎಸ್ ಐಆರ್‌ನ ಉದ್ದೇಶ ಒಳ್ಳೆಯದಾಗಿದ್ದರೂ, ಅದರ ಅನುಷ್ಠಾನದಿಂದ ಒಬ್ಬ ನೈಜ ಮತದಾರನ ಹಕ್ಕು ಕಳೆದುಹೋದರೆ, ಆ ಪ್ರಕ್ರಿಯೆಯ ಬಗ್ಗೆ ಪ್ರಶ್ನೆ ಎತ್ತುವುದು ಸಹಜ ಮತ್ತು ಅಗತ್ಯ. ಮತದಾರನು ತನ್ನ ವಿವರಗಳನ್ನು ಸರಿಯಾಗಿ ನೀಡಿದ್ದರೂ ಅವುಗಳನ್ನು ಅಧಿಕಾರಿಗಳು ತಪ್ಪಾಗಿ ದಾಖಲಿಸಿದರೆ, ಸಂಬಂಧಗಳನ್ನು ತಪ್ಪಾಗಿ ಜೋಡಿಸಿ ದರೆ ಅಥವಾ ದಾಖಲೆಗಳನ್ನು ಡಿಜಿಟಲ್ ವ್ಯವಸ್ಥೆಯಲ್ಲಿ ಸರಿಯಾಗಿ ಹೊಂದಾಣಿಕೆ ಮಾಡದಿದ್ದರೆ, ಅದರ ಸಂಪೂರ್ಣ ಹೊಣೆಗಾರಿಕೆಯನ್ನು ನಾಗರಿಕ ಹೊರಬೇಕಿರುವುದು ಸರಿಯಲ್ಲ.
ಆಡಳಿತದ ದಾಖಲೆಗಳಲ್ಲಿ ದೋಷವಿದ್ದರೆ, ಅದನ್ನು ಸರಿಪಡಿಸುವ ಜವಾಬ್ದಾರಿಯೂ ಆಡಳಿತದ್ದೇ. ಮತದಾರರ ಹೆಸರನ್ನು ತೆಗೆದುಹಾಕುವ ಮೊದಲು ಸ್ಪಷ್ಟ ಕಾರಣ, ಸಮರ್ಪಕ ನೋಟಿಸ್, ನೋಟಿಸ್ ನಿಜವಾಗಿಯೂ ಸಂಬಂಧಪಟ್ಟ ವ್ಯಕ್ತಿಗೆ ತಲುಪಿದೆಯೆಂಬ ದೃಢೀಕರಣ, ಕಾಲಾವಕಾಶ ಹಾಗೂ ಸುಲಭವಾದ ಮೇಲ್ಮನವಿ ಅಥವಾ ಪುನರ್‌ಪರಿಶೀಲನಾ ವ್ಯವಸ್ಥೆ ಇರಬೇಕು.
ಕೇವಲ ನೋಟಿಸ್ ಸಿದ್ಧಪಡಿಸಿ, ಅದನ್ನು ಸಂಬಂಧಪಟ್ಟ ವ್ಯಕ್ತಿಗೆ ತಲುಪಿಸದೆ, ನಂತರ ಅವರಿಗೆ ಅವಕಾಶ ನೀಡಲಾಗಿತ್ತು ಎಂದು ಹೇಳುವುದು ದುರ್ಬಲ ನಿಲುವಾಗಿದೆ. ನೋಟಿಸ್ ನೀಡುವುದಷ್ಟೇ ಸಾಕಾಗುವುದಿಲ್ಲ; ಅದು ಪರಿಣಾಮಕಾರಿಯಾಗಿ ತಲುಪಬೇಕು, ಅದರಲ್ಲಿರುವ ಕಾರಣ ಮತದಾ ರನಿಗೆ ಅರ್ಥವಾಗಬೇಕು ಮತ್ತು ಉತ್ತರಿಸಲು ಅರ್ಥಪೂರ್ಣ ಅವಕಾಶ ದೊರೆಯಬೇಕು.
ಲೇಖನದಲ್ಲಿ ನೀಡಿರುವ ಎರಡು ಬೂತ್‌ಗಳ ಉದಾಹರಣೆ ಗಮನಾರ್ಹ. ಒಂದೇ ರೀತಿಯ ಪರಿಸ್ಥಿತಿ ಯಲ್ಲಿರುವ ಮತಗಟ್ಟೆಯಲ್ಲಿ ಒಬ್ಬ ಬಿಎಲ್ಒ ತನ್ನ ವ್ಯಾಪ್ತಿಯ ಮತದಾರರ ವಿವರಗಳನ್ನು ಸಮರ್ಪಕವಾಗಿ ಪರಿಶೀಲಿಸಿದರೆ, ಮತ್ತೊಬ್ಬ ಬಿಎಲ್ಒ ವ್ಯಾಪ್ತಿಯಲ್ಲಿ ನೂರಾರು ಮಂದಿಗೆ ನೋಟಿಸ್‌ಗಳು ಬಂದಿದ್ದರೆ, ಅಲ್ಲಿ ಕಾರ್ಯವಿಧಾನದ ಗುಣಮಟ್ಟವನ್ನು ಪರಿಶೀಲಿಸುವ ಅಗತ್ಯವಿದೆ. ಆದರೆ ಒಂದೆರಡು ಉದಾಹರಣೆಗಳ ಆಧಾರದ ಮೇಲೆ ಎಲ್ಲ ಬಿಎಲ್ಒಗಳನ್ನೂ ತಪ್ಪಿತಸ್ಥರೆಂದು ನಿರ್ಣಯಿಸುವುದೂ ಸರಿಯಲ್ಲ.
ಅಗತ್ಯವಿರುವುದು ವ್ಯವಸ್ಥಿತ ಗುಣಮಟ್ಟದ ಪರಿಶೀಲನೆ. ಹಿರಿಯ ನಾಗರಿಕರು ಹಳೆಯ ದಾಖಲೆ ಹುಡುಕುವುದು, ದೂರದಿಂದ ವಿಚಾರಣೆಗೆ ಬರುವುದು, ಮತ್ತೆ ಮತ್ತೆ ಕಚೇರಿಗಳಿಗೆ ಅಲೆದಾಡುವುದು- ಇವೆಲ್ಲ ದೊಡ್ಡ ಹೊರೆ. ನನ್ನ ಅನುಭವದಲ್ಲಿಯೇ, ವಯಸ್ಸಾದ ದಂಪತಿಗಳು ನಿಗದಿತ ಸಮಯಕ್ಕಿಂತ ಬಹಳ ಮುಂಚಿತವಾಗಿ ಹಾಜರಾದರೂ, ಸಂಬಂಧಪಟ್ಟ ಅಧಿಕಾರಿ ತಡವಾಗಿ ಬಂದರು. ಈ ರೀತಿಯ ಪರಿಸ್ಥಿತಿಯನ್ನು ವೀಡಿಯೊ ಕಾಲ್ ಅಥವಾ ಆನ್‌ಲೈನ್ ವಿಚಾರಣೆಯ ಮೂಲಕ ಸುಲಭವಾಗಿ ತಪ್ಪಿಸಬಹುದಾಗಿತ್ತು.
ವಿಶೇಷವಾಗಿ ಹಿರಿಯ ನಾಗರಿಕರು, ಚಿಕಿತ್ಸೆ ಪಡೆಯುತ್ತಿರುವವರು, ದೈಹಿಕವಾಗಿ ಪ್ರಯಾಣಿಸಲು ಕಷ್ಟಪಡುವವರಿಗೆ ಇಂತಹ ಪರ್ಯಾಯ ವ್ಯವಸ್ಥೆ ಒದಗಿಸಬೇಕು. ಲೇಖನದಲ್ಲಿ ಮತಪಟ್ಟಿಯಿಂದ ಹೊರಗುಳಿದ ವರಿಗೆ ಸರಕಾರಿ ಸೌಲಭ್ಯಗಳನ್ನು ನೀಡುವುದಿಲ್ಲ ಅಥವಾ ಅವರನ್ನು ದೇಶದಿಂದ ಹೊರಹಾಕಲಾಗುತ್ತದೆ ಎಂಬ ಆತಂಕಗಳನ್ನು ವ್ಯಕ್ತಪಡಿಸಲಾಗಿದೆ. ಇವು ಅತ್ಯಂತ ಗಂಭೀರವಾದ ಹೇಳಿಕೆಗಳಾ ಗಿರುವುದರಿಂದ, ಅವು ಯಾವ ಕಾನೂನು, ಅಧಿಸೂಚನೆ, ಸರ್ಕಾರಿ ಆದೇಶ ಅಥವಾ ಅಧಿಕೃತ ಹೇಳಿಕೆಯನ್ನು ಆಧರಿಸಿವೆ ಎಂಬುದನ್ನು ಸ್ಪಷ್ಟವಾಗಿ ಉಲ್ಲೇಖಿಸಿದರೆ ಲೇಖನದ ವಿಶ್ವಾಸಾರ್ಹತೆ ಇನ್ನಷ್ಟು ಹೆಚ್ಚುತ್ತದೆ.
ವಾಸ್ತವಾಂಶ, ದಾಖಲೆಗಳೊಂದಿಗೆ ಈ ಅಂಶಗಳನ್ನು ಮಂಡಿಸುವುದರಿಂದ ಲೇಖನದ ಪ್ರಭಾವ ಮತ್ತಷ್ಟು ಹೆಚ್ಚಬಹುದು. ಒಬ್ಬ ಅರ್ಹ ನಾಗರಿಕನ ಹೆಸರನ್ನು ತೆಗೆದು ಹಾಕುವುದೂ, ನಕಲಿ ಮತದಾರನ ಹೆಸರನ್ನು ಉಳಿಸುವುದೂ ಒಂದೇ ರೀತಿಯ ತಪ್ಪುಗಳಲ್ಲ. ಮೊದಲನೆಯದು ಒಬ್ಬ ನೈಜ ನಾಗರಿಕನ ಪ್ರಜಾ ಸತ್ತಾತ್ಮಕ ಹಕ್ಕನ್ನು ಕಸಿದುಕೊಳ್ಳುತ್ತದೆ. ಎಸ್‌ಐಆರ್ ನ ನಿಜವಾದ ಯಶಸ್ಸಿನ ಮಾನದಂಡ ಎಷ್ಟು ಹೆಸರುಗಳನ್ನು ತೆಗೆದುಹಾಕಲಾಗಿದೆ? ಎಂಬುದಾಗಿರಬಾರದು. ಬದಲಾಗಿ ಒಬ್ಬ ನೈಜ ಮತದಾರನೂ ಹೊರಗುಳಿಯದಂತೆ, ಮತದಾರರ ಪಟ್ಟಿಯನ್ನು ಎಷ್ಟು ನಿಖರವಾಗಿ ಪರಿಷ್ಕರಿಸಲಾಗಿದೆ? ಎಂಬುದಾಗಿರಬೇಕು.