ʻಭಾರತ ಟೆಸ್ಟ್ ತಂಡಕ್ಕೆ ಆಯ್ಕೆ ಮಾಡಬೇಡಿʼ: ವೈಭವ್ ಸೂರ್ಯವಂಶಿ ಬಗ್ಗೆ ಸೌರವ್ ಗಂಗೂಲಿ ಅಚ್ಚರಿ ಹೇಳಿಕೆ!
2026ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಅತ್ಯುತ್ತಮ ಪ್ರದರ್ಶನವನ್ನು ತೋರಿದ ಬಳಿಕ ವೈಭವ್ ಸೂರ್ಯವಂಶಿ ಅವರನ್ನು ಭಾರತ ತಂಡಕ್ಕೆ ಸೇರಿಸಿಕೊಳ್ಳುವ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಇದೀಗ ಭಾರತ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ 15ರ ವಯಸ್ಸಿನ ಹುಡುಗನ ಬಗ್ಗೆ ತಮ್ಮದೇ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ವೈಭವ್ ಸೂರ್ಯವಂಶಿ ಬಗ್ಗೆ ಸೌರವ್ ಗಂಗೂಲಿ ಅಚ್ಚರಿ ಹೇಳಿಕೆ. -
ನವದೆಹಲಿ: ವೈಭವ್ ಸೂರ್ಯವಂಶಿ (Vaibhav Sooryavanshi) ಪ್ರಸ್ತುತ ಭಾರತೀಯ ಕ್ರಿಕೆಟ್‌ನಲ್ಲಿ ಭಾರಿ ಸದ್ದು ಮಾಡುತ್ತಿರುವ ಹೆಸರು ಎಂದರೆ ತಪ್ಪಾಗಲಾರದು. ಈ 15ರ ವಯಸ್ಸಿನ ಆಟಗಾರ 2026ರ ಇಂಡಿಯನ್ ಪ್ರೀಮಿಯರ್ ಲೀಗ್ (IPL 2026) ಟೂರ್ನಿಯಲ್ಲಿ ಸಂಚಲನ ಮೂಡಿಸಿದ್ದು, ಹಲವು ದಾಖಲೆಗಳನ್ನು ಮುರಿದಿದ್ದಾರೆ. ರಾಜಸ್ಥಾನ್ ರಾಯಲ್ಸ್ ಅಪಾಯಕಾರಿ ಆರಂಭಿಕ ವೈಭವ್ ಸೂರ್ಯವಂಶಿ ಪ್ರತಿ ಪಂದ್ಯದಲ್ಲೂ ಗಮನಾರ್ಹ ಪ್ರದರ್ಶನವನ್ನು ತೋರುತ್ತಿದ್ದಾರೆ. ಅವರನ್ನು ಭಾರತ ತಂಡಕ್ಕೆ ಸೇರಿಸಬೇಕೆಂಬ ಬೇಡಿಕೆಗಳು ನಿರಂತರವಾಗಿ ಹೆಚ್ಚುತ್ತಿವೆ. ಇದೀಗ ಟೀಮ್ ಇಂಡಿಯಾದ ಮಾಜಿ ನಾಯಕ ಸೌರವ್ ಗಂಗೂಲಿ (Sourav Ganguly), ವೈಭವ್ ಸೂರ್ಯವಂಶಿ ಬಗ್ಗೆ ಪ್ರಮುಖ ಹೇಳಿಕೆಯೊಂದನ್ನು ನೀಡಿದ್ದಾರೆ.
ಟೈಮ್ಸ್ ಆಫ್ ಇಂಡಿಯಾಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಸೌರವ್ ಗಂಗೂಲಿ, ವೈಭವ್ ಸೂರ್ಯವಂಶಿಯನ್ನು ಗುಣಗಾನ ಮಾಡಿದರು. ದೇಶಿ ಮಟ್ಟದಲ್ಲಿ ಅಸಾಧಾರಣವಾಗಿ ಉತ್ತಮ ಪ್ರದರ್ಶನ ನೀಡಿದ ಇತರ ಆಟಗಾರರ ಆಯ್ಕೆಯ ಬಗ್ಗೆಯೂ ಗಂಗೂಲಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು. ಬಿಹಾರದ ಯುವ ಬ್ಯಾಟ್ಸ್‌ಮನ್ ವೈಭವ್ ಸೂರ್ಯವಂಶಿ ಬಗ್ಗೆ ನಿರ್ದಿಷ್ಟವಾಗಿ ಹೇಳುವುದಾದರೆ, ಗಂಗೂಲಿ ತಮ್ಮಲ್ಲಿ ಪ್ರತಿಭೆಗೆ ಯಾವುದೇ ಕೊರತೆಯಿಲ್ಲದಿದ್ದರೂ, ಟೆಸ್ಟ್ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡುವ ಮೊದಲು ಸ್ವಲ್ಪ ಸಮಯ ಕಾಯಬೇಕಾಗುತ್ತದೆ ಎಂದು ಸ್ಪಷ್ಟವಾಗಿ ಹೇಳಿದ್ದಾರೆ.
RR vs SRH: ಸನ್‌ರೈಸರ್ಸ್‌ಗೆ ವೈಭವ್ ಸೂರ್ಯವಂಶಿ ಭೀತಿ, ಎಲಿಮಿನೇಟರ್ ಗೆಲುವಿನ ಮೇಲೆ ರಾಜಸ್ಥಾನ್ ಕಣ್ಣು!
"ಅವರನ್ನು ತಕ್ಷಣ ಟಿ20 ತಂಡಕ್ಕೆ ಸೇರಿಸಿಕೊಳ್ಳಬೇಕು, ಆದರೆ ಟೆಸ್ಟ್ ಕ್ರಿಕೆಟ್‌ಗೆ ಅಲ್ಲ. ಟೆಸ್ಟ್‌ನಲ್ಲಿ ಸ್ಥಾನ ಪಡೆಯಲು, ಅವರು ಇನ್ನೂ ದೇಶಿಯ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಹೆಚ್ಚಿನ ರನ್ ಗಳಿಸಬೇಕಾಗಿದೆ. ಆದಾಗ್ಯೂ, ಈ ಕ್ಷಣದಲ್ಲಿ ಅವರು ಅಪಾರ ಪ್ರತಿಭಾನ್ವಿತರು. ವಿಶ್ವದ ಅತ್ಯುತ್ತಮ ಬೌಲರ್‌ಗಳ ವಿರುದ್ಧ 15 ವರ್ಷದ ಬಾಲಕ ಈ ರೀತಿ ಬ್ಯಾಟ್ ಮಾಡುವುದನ್ನು ನೋಡುವುದು ನಿಜಕ್ಕೂ ಅದ್ಭುತವಾಗಿದೆ. ಅವರು ಭಾರತೀಯ ಕ್ರಿಕೆಟ್‌ನ ಭವಿಷ್ಯ," ಎಂದರು.
ಆಕಿಬ್ ನಬಿ ನಗ್ಗೆ ದಾದಾ ಪ್ರತಿಕ್ರಿಯೆ
ಸಂದರ್ಶನದ ಸಮಯದಲ್ಲಿ ರಣಜಿ ಟ್ರೋಫಿ ಟೂರ್ನಿಯಲ್ಲಿ ಅದ್ಭುತ ಪ್ರದರ್ಶನ ನೀಡಿದ್ದ ಜಮ್ಮು ಮತ್ತು ಕಾಶ್ಮೀರ ತಂಡದ ವೇಗಿ ಆಕಿಬ್ ನಬಿ ಅವರನ್ನು ಕೈಬಿಟ್ಟ ಬಗ್ಗೆ ಮತ್ತು ನಂತರ ಪ್ರಿನ್ಸ್ ಯಾದವ್ ಅವರನ್ನು ತಂಡಕ್ಕೆ ಸೇರಿಸಿಕೊಂಡ ಬಗ್ಗೆ ಗಂಗೂಲಿಯನ್ನು ಕೇಳಿದಾಗ, ಅವರು ಇಬ್ಬರೂ ಆಟಗಾರರನ್ನು ಸಮರ್ಥಿಸಿಕೊಂಡರು ಹಾಗೂ ಆಯ್ಕೆದಾರರ ನಿರ್ಧಾರವನ್ನು ಬೆಂಬಲಿಸಿದರು.
"ಆಕಿಬ್ ನಬಿ ಖಂಡಿತವಾಗಿಯೂ ತಂಡದಲ್ಲಿ ಇರಬೇಕಿತ್ತು; ಅವರು ರಣಜಿ ಟ್ರೋಫಿಯಲ್ಲಿ ಅಸಾಧಾರಣವಾಗಿ ಬೌಲ್ ಮಾಡಿದ್ದಾರೆ. ಆದಾಗ್ಯೂ, ಪ್ರಿನ್ಸ್ ಯಾದವ್ ಕೂಡ ನಂಬಲಾಗದಷ್ಟು ಪ್ರತಿಭಾನ್ವಿತರು ಮತ್ತು ಅದ್ಭುತ ವೇಗವನ್ನು ಹೊಂದಿದ್ದಾರೆ. ಪ್ರಿನ್ಸ್‌ಗೆ ಅವಕಾಶ ನೀಡುವ ಮೂಲಕ ಆಯ್ಕೆದಾರರು ಅತ್ಯುತ್ತಮ ಕೆಲಸ ಮಾಡಿದ್ದಾರೆ ಎಂದು ನಾನು ನಂಬುತ್ತೇನೆ, ಏಕೆಂದರೆ ನೀವು ವೇಗವನ್ನು ಹೊಂದಿರುವಾಗ, ನೀವು ಅದನ್ನು ಕೇವಲ ಪ್ರಥಮ ದರ್ಜೆ ಕ್ರಿಕೆಟ್‌ಗೆ ಸೀಮಿತಗೊಳಿಸಲು ಬಯಸುವುದಿಲ್ಲ. ನನ್ನ ಅಭಿಪ್ರಾಯದಲ್ಲಿ, ಈ ಇಬ್ಬರೂ ಆಟಗಾರರನ್ನು ತಂಡಕ್ಕೆ ಆಯ್ಕೆ ಮಾಡಬೇಕಾಗಿತ್ತು," ಎಂದರು.