ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಭಾರತ ಟೆಸ್ಟ್‌ ತಂಡಕ್ಕೆ ಎದುರಾಗಿರುವ ದೊಡ್ಡ ಸವಾಲನ್ನು ಬಹಿರಂಗಪಡಿಸಿದ ಮರಳಿ ಕಾರ್ತಿಕ್‌!

ವಿರಾಟ್‌ ಕೊಹ್ಲಿ, ರೋಹಿತ್‌ ಶರ್ಮಾ ಹಾಗೂ ಅಜಿಂಕ್ಯ ರಹಾನೆ ಅವರಂತಹ ಕೀ ಆಟಗಾರರ ಅನುಪಸ್ಥಿತಿಯಲ್ಲಿ ಭಾರತ ತಂಡ, ಸದ್ಯ ಶ್ರೀಲಂಕಾ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ ಕಠಿಣ ಸವಾಲು ಎದುರಿಸಲಿದೆ ಎಂದು ಮಾಜಿ ಸ್ಪಿನ್ನರ್‌ ಹಾಗೂ ಕ್ರಿಕೆಟ್‌ ನಿರೂಪಕ ಮುರಳಿ ಕಾರ್ತಿಕ್‌ ಎಚ್ಚರಿಕೆ ನೀಡಿದ್ದಾರೆ. ಈ ಮೂವರು ಆಟಗಾರರು ಈಗಾಗಲೇ ಟೆಸ್ಟ್‌ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ.

ಭಾರತ ತಂಡಕ್ಕೆ ಎದುರಾಗಿರುವ ದೊಡ್ಡ ಸವಾಲನ್ನು ತಿಳಿಸಿದ ಕಾರ್ತಿಕ್‌!

ಭಾರತ ತಂಡಕ್ಕೆ ಎದುರಾಗಿರುವ ಸವಾಲನ್ನು ತಿಳಿಸಿದ ಮುರಳಿ ಕಾರ್ತಿಕ್‌. -

Profile
Ramesh Kote Aug 12, 2026 10:10 PM

ನವದೆಹಲಿ: ಭಾರತ ಹಾಗೂ ಶ್ರೀಲಂಕಾ ತಂಡಗಳ (IND vs SL) ನಡುವಣ ಎರಡು ಪಂದ್ಯಗಳ ಟೆಸ್ಟ್‌ ಸರಣಿಗೆ ಇನ್ನೂ ಕೇವಲ ನಾಲ್ಕು ದಿನಗಳು ಮಾತ್ರ ಬಾಕಿ ಇವೆ. ಶುಭಮನ್‌ ಗಿಲ್‌ ನಾಯಕತ್ವದ ಯುವ ತಂಡ, ಸಿಂಹಳೀಯರ ನಾಡಿನಲ್ಲಿ ಕಠಿಣ ಸವಾಲನ್ನು ಎದುರಿಸಲಿದೆ. ವಿರಾಟ್‌ ಕೊಹ್ಲಿ, ರೋಹಿತ್‌ ಶರ್ಮಾ, ಅಜಿಂಕ್ಯ ರಹಾನೆ ಅವರಂತ ಕೀ ಆಟಗಾರರು ಈಗಾಗಲೇ ಟೆಸ್ಟ್‌ ಕ್ರಿಕೆಟ್‌ಗೆ ವಿದಾಯ ಹೇಳಿದ್ದರಿಂದ, ಇದೀಗ ಯುವ ತಂಡಕ್ಕೆ ಕಠಿಣ ಪರೀಕ್ಷೆ ಎದುರಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ ಮಾಜಿ ಸ್ಪಿನ್ನರ್‌ ಮುರಳಿ ಕಾರ್ತಿಕ್‌ (Murali Karthik), ಹಿರಿಯ ಆಟಗಾರರ ನಿರ್ಗಮನದ ಬಳಿಕ ಇದೀಗ ಭಾರತ ತಂಡ ಪರಿವರ್ತನೆಯ ಹಾದಿಯಲ್ಲಿದೆ, ಹಾಗಾಗಿ ಆಟಗಾರರಿಗೆ ಟೀಮ್‌ ಮ್ಯಾನೇಜ್‌ಮೆಂಟ್‌ನಿಂದ ನಿರಂತರ ಬೆಂಬಲ ಅಗತ್ಯವೆಂದು ಸಲಹೆ ನೀಡಿದ್ದಾರೆ.

ಆಗಸ್ಟ್‌ 15 ರಂದು ಮೊದಲನೇ ಟೆಸ್ಟ್‌ ಆರಂಭವಾಗುವ ಗಾಲೆ ಇಂಟರ್‌ನ್ಯಾಷನಲ್‌ ಕ್ರೀಡಾಂಗಣದಲ್ಲಿನ ಕಂಡೀಷನ್ಸ್‌, ಬೌಲಿಂಗ್‌ ದಾಳಿ ಹಾಗೂ ಕೆಲವೊಂದು ನಿರ್ಣಾಯಕ ಆಯ್ಕೆಗಳ ನಿರ್ಧಾರ ಭಾರತ ತಂಡದ ಪಯಣದಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸಬಹುದು ಎಂದು ಮುರಳಿ ಕಾರ್ತಿಕ್‌ ಅಭಿಪ್ರಾಯ ಪಟ್ಟಿದ್ದಾರೆ.

ಟೆಸ್ಟ್‌ ಕ್ರಿಕೆಟ್‌ನಲ್ಲಿ ಭಾರತ ತಂಡದ ಇತ್ತೀಚಿನ ವೈಫಲ್ಯಕ್ಕೆ ಕಾರಣ ತಿಳಿಸಿದ ಕಪಿಲ್‌ ದೇವ್‌!

ಟೆಸ್ಟ್‌ ಕ್ರಿಕೆಟ್‌ನಲ್ಲಿ ಭಾರತಕ್ಕೆ ಎದುರಾಗಿರುವ ದೊಡ್ಡ ಸವಾಲು

ಭಾರತ ತಂಡ ರೆಡ್-ಬಾಲ್ ಕ್ರಿಕೆಟ್‌ನಲ್ಲಿ ಪರಿವರ್ತನೆಯ ಹಾದಿಯಲ್ಲಿರುವ ಈ ಸಂದರ್ಭದಲ್ಲಿ ಟೀಮ್‌ ಮ್ಯಾನೇಜ್‌ಮೆಂಟ್‌ ಆಟಗಾರರಿಗೆ ಸ್ಪಷ್ಟವಾಗಿ ಹಾಗೂ ನಿರಂತರವಾಗಿ ಬೆಂಬಲ ನೀಡುವುದು ಅಗತ್ಯ ಎಂದು ಮುರಳಿ ಕಾರ್ತಿಕ್ ಅಭಿಪ್ರಾಯಪಟ್ಟಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಭಾರತ ತಂಡ ಅಪಾರ ಪ್ರಮಾಣದ ಅನುಭವವನ್ನು ಕಳೆದುಕೊಂಡಿದೆ ಎಂದು ಅವರು ಹೇಳಿದ್ದಾರೆ. ಈ ಪರಿವರ್ತನೆಯ ಹಂತದಲ್ಲಿ ಹಲವು ಸವಾಲುಗಳು ಎದುರಾಗುವುದು ಸಹಜ. ಭಾರತ ತಂಡದ ಪ್ರಮುಖ ಆಟಗಾರರ ವಿದಾಯದಿಂದ ಉಂಟಾಗಿರುವ ಕೊರತೆ ಮತ್ತು ಭಾರತ ತಂಡ ಹಾಗೂ ಟೆಸ್ಟ್ ಕ್ರಿಕೆಟ್ ಮೇಲೆ ದೊಡ್ಡ ಪ್ರಭಾವ ಬೀರಿದ ಆಟಗಾರರಿಗೆ ಸೂಕ್ತ ಬದಲಿ ಆಟಗಾರರನ್ನು ಕಂಡುಕೊಳ್ಳುವ ಸವಾಲಿನ ಬಗ್ಗೆಯೂ ಕಾರ್ತಿಕ್ ಮಾತನಾಡಿದ್ದಾರೆ.

ICC Test Rankings: ಎರಡು ವರ್ಷಗಳ ಬಳಿಕ ಟಾಪ್‌ 10ರ ಒಳಗೆ ಪ್ರವೇಶಿಸಿದ ಬಾಬರ್‌ ಆಝಮ್‌!

“ಕಳೆದ ಎರಡು ವರ್ಷಗಳಲ್ಲಿ ಟೆಸ್ಟ್‌ ಕ್ರಿಕೆಟ್‌ನಲ್ಲಿ ನಮ್ಮ ಫಲಿತಾಂಶಗಳು ಸಾಕಷ್ಟು ಮಂದಗತಿಯಿಂದ ಕೂಡಿವೆ ಎಂದು ಹೇಳಬಹುದು. ಈಗ ಭಾರತ ತಂಡಕ್ಕೆ ಮುಂದಿನ ಯೋಜನೆಯನ್ನು ರೂಪಿಸುವಾಗ ಸ್ವಲ್ಪ ಸ್ಥಿರತೆ ಕಾಯ್ದುಕೊಳ್ಳುವುದು ಅಗತ್ಯವಾಗಿದೆ,” ಎಂದು ಮುರಳಿ ಕಾರ್ತಿಕ್ ಹೇಳಿದ್ದಾರೆ.

“ನಾವು ನಿರಂತರವಾಗಿ ತಂಡದ ಪರಿವರ್ತನೆಯ ಹಂತದ ಬಗ್ಗೆ ಮಾತನಾಡುತ್ತಿದ್ದೇವೆ. ನ್ಯೂಜಿಲೆಂಡ್ ವಿರುದ್ಧದ ಸರಣಿ ಸೋಲು ಇನ್ನೂ ನಮ್ಮನ್ನು ಕಾಡುತ್ತಿದೆ. ಆ ಸಂದರ್ಭದಲ್ಲಿ ನಮ್ಮ ಪ್ರಮುಖ ಆಟಗಾರರೆಲ್ಲರೂ ತಂಡದಲ್ಲಿದ್ದರು. ಈಗ ತಂಡಕ್ಕೆ ಎದುರಾಗಿರುವ ದೊಡ್ಡ ಕೊರತೆಯನ್ನು ನೋಡಿದರೆ ಪರಿಸ್ಥಿತಿ ಎಷ್ಟು ಕಠಿಣವಾಗಿದೆ ಎಂಬುದು ಅರ್ಥವಾಗುತ್ತದೆ,” ಎಂದು ಅವರು ತಿಳಿಸಿದ್ದಾರೆ.

“ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಚೇತೇಶ್ವರ ಪೂಜಾರಾ, ಅಜಿಂಕ್ಯ ರಹಾನೆ ಮತ್ತು ರವಿಚಂದ್ರನ್ ಅಶ್ವಿನ್ ಅವರಂತಹ ಆಟಗಾರರ ಸ್ಥಾನಗಳನ್ನು ತುಂಬಬೇಕಿದೆ. ಇದೀಗ ಜಸ್‌ಪ್ರೀತ್‌ ಬುಮ್ರಾ ಕೂಡ ತಂಡದಲ್ಲಿ ಇಲ್ಲ," ಎಂದು ಸೋನಿ ಸ್ಪೋರ್ಟ್ಸ್ ನೆಟ್‌ವರ್ಕ್ ಆಯೋಜಿಸಿದ್ದ ಸಂದರ್ಶನದಲ್ಲಿ ಟೈಮ್ಸ್ ನೌಗೆ ಮುರಳಿ ಕಾರ್ತಿಕ್‌ ಹೇಳಿದ್ದಾರೆ.